ಸಿಎಂ ಪಟ್ಟಕ್ಕಾಗಿ ದೇವಿ ಮೊರೆ ಹೋದ ಡಿಕೆಶಿ! – ಹಿಂಗಾರ ಪ್ರಸಾದ ಕರುಣಿಸುತ್ತಾಳಾ ಜಗದೀಶ್ವರಿ?

ಸಿಎಂ ಪಟ್ಟಕ್ಕಾಗಿ ದೇವಿ ಮೊರೆ ಹೋದ ಡಿಕೆಶಿ! – ಹಿಂಗಾರ ಪ್ರಸಾದ ಕರುಣಿಸುತ್ತಾಳಾ ಜಗದೀಶ್ವರಿ?

ರಾಜ್ಯದಲ್ಲಿ ಪವರ್‌ ಶೇರಿಂಗ್‌ ವಿಚಾರ ಮತ್ತೆ ಮುನ್ನಲೆಗೆ ಬಂದಿದೆ. ಸಿದ್ಧರಾಮಯ್ಯ ಈಗಲೂ ನಾನೇ ಸಿಎಂ, ನನಗೆ ಯಾವತ್ತೂ ರಾಜಕೀಯ ನಿಶ್ಶಕ್ತಿ ಇಲ್ಲ. 5 ವರ್ಷ ನಾನೇ ಸಿಎಂ ಎಂದು ಹೇಳುತ್ತಾ ಬಂದಿದ್ದಾರೆ. ಇವೆಲ್ಲದ್ರ ಮಧ್ಯೆ ಡಿಕೆ ಶಿವಕುಮಾರ್‌ ಟೆಂಪಲ್‌ ರನ್‌ ನಡೆಸುತ್ತಿದ್ದಾರೆ. ಇದೀಗ ಡಿಕೆಶಿ ಪವರ್‌ಫುಲ್‌ ದೇವಸ್ಥಾನಕ್ಕೆ ಭೇಟಿ ನೀಡಿದ್ದಾರೆ. ಆಂದ್ಲೆ ಜಗದೀಶ್ವರಿ ಸನ್ನಿಧಿಯಲ್ಲಿ ಹಿಂಗಾರ ಪ್ರಸಾದಕ್ಕೆ ಮೊರೆ ಹೋಗಿದ್ದಾರೆ.

ಇದನ್ನೂ ಓದಿ: ಉಸಿರಾಡೋದಿಕ್ಕೂ ಕಷ್ಟ ಆಗ್ತಿದೆ.. ನಮ್ಮ ಸಮಸ್ಯೆ ಯಾರಿಗೆ ಹೇಳೋದು? – ನಟಿ ಐಂದ್ರಿತಾ ರೇ ಹೀಗೆ ಹೇಳಿದ್ಯಾಕೆ?

ಡಿಕೆ ಶಿವಕುಮಾರ್‌ ಉತ್ತರ ಕನ್ನಡ ಜಿಲ್ಲೆಯ ಪ್ರಸಿದ್ಧ ದೇವಸ್ಥಾನಗಳಿಗೆ ಭೇಟಿ ನೀಡುತ್ತಿದ್ದಾರೆ. ಇಂದು ಗೋಕರ್ಣದ ಶ್ರೀ ಮಹಾಬಲೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಿದ್ದರು. ಗೋಕರ್ಣ ದೇಗುಲದಲ್ಲಿ ಆತ್ಮಲಿಂಗ ದರ್ಶನ ಪಡೆದರು. ಇದೇ ವೇಳೆ ದೇವರಿಗೆ ಬಿಲ್ವ ಪತ್ರೆ, ಪಂಚಾಮೃತ ಹಾಗೂ ನವಧಾನ್ಯ ಅಭಿಷೇಕ ಸೇರಿದಂತೆ ವಿಶೇಷ ಪೂಜೆ ನೆರವೇರಿಸಿದರು. ಬಳಿಕ ಮಹಾಗಣಪತಿ ದರ್ಶನ ಪಡೆದು ನೇರವಾಗಿ ಅಂಕೋಲಾದ ಆಂದ್ಲೆ ಕ್ಷೇತ್ರಕ್ಕೆ ಪ್ರಯಾಣ ಬೆಳೆಸಿದರು.

ಗೋಕರ್ಣದಿಂದ ಡಿಕೆ ಶಿವಕುಮಾರ್‌ ಅವರು ಅಂಕೋಲಕ್ಕೆ ಭೇಟಿ ನೀಡಿದ್ದಾರೆ. ಅಂಕೋಲದ ಪ್ರಸಿದ್ಧ ಶಕ್ತಿ ಕೇಂದ್ರ ಆಂದ್ಲೆ ಶ್ರೀ ಜಗದೀಶ್ವರಿ ದೇವಸ್ಥಾನಕ್ಕೆ ಭೇಟಿ ನೀಡಿದರು. ಈ ಕ್ಷೇತ್ರವು ಹಿಂಗಾರ ಪ್ರಸಾದದ ಮೂಲಕ ಭವಿಷ್ಯ ನುಡಿಯಲು ಖ್ಯಾತಿ ಪಡೆದಿದೆ.  ಇದೀಗ ಈ ದೇವಸ್ಥಾನಲ್ಲಿ ಪೂಜೆ ನಡೆಯುವ ವೇಳೆ ಡಿಕೆ ಶಿವಕುಮಾರ್ ಅವರು ಅತ್ಯಂತ ಕಟ್ಟುನಿಟ್ಟಿನ ನಿಯಮ ಪಾಲಿಸಿದ್ದಾರೆ. ಗರ್ಭಗುಡಿಯೊಳಗೆ ಡಿಕೆಶಿ ಮತ್ತು ಅವರು ಸೂಚಿಸಿದ ಕೆಲವೇ ಕೆಲವು ಆಪ್ತರಿಗೆ ಮಾತ್ರ ಪ್ರವೇಶ ನೀಡಲಾಗಿದ್ದು, ಸ್ಥಳೀಯ ಸಚಿವ ಮಾಂಕಾಳು ವೈದ್ಯ ಹಾಗೂ ಶಾಸಕ ಸತೀಶ್ ಸೈಲ್ ಅವರಿಗೂ ಒಳಹೋಗಲು ಅನುಮತಿ ನಿರಾಕರಿಸಲಾಗಿದೆ. ದೇವಿಯ ಮುಂದೆ ಕೇಳುವ ಪ್ರಶ್ನೆಗಳು ಯಾರಿಗೂ ಕೇಳಿಸಬಾರದು ಎಂಬ ಕಾರಣಕ್ಕೆ ದೇವಸ್ಥಾನದ ಪ್ರಾಂಗಣದಲ್ಲಿ ಯಾರೂ ಇರದಂತೆ ಖಡಕ್ ಸೂಚನೆ ನೀಡಲಾಗಿದೆ.

ದೇವಿ ಮುಂದೆ ಡಿಕೆಶಿ ಸಿಎಂ ಗದ್ದುಗೆ ಏರುವ ಕನಸು ಮತ್ತು ಸದ್ಯ ಎದುರಿಸುತ್ತಿರುವ ವಿವಿಧ ರಾಜಕೀಯ ಸಮಸ್ಯೆಗಳ ಪರಿಹಾರಕ್ಕಾಗಿ ಐದು ರೀತಿಯ ಪ್ರಶ್ನೆಗಳನ್ನು ಕೇಳಿದ್ದಾರೆ. ದೇವಿಯ ತಲೆಯ ಬಲಭಾಗದಿಂದ ಹಿಂಗಾರ ಬಿದ್ದರೆ ಡಿಕೆಶಿ ಅಂದುಕೊಂಡ ಕೆಲಸ ಯಶಸ್ವಿಯಾಗಲಿದೆ ಎಂಬ ನಂಬಿಕೆ ಇಲ್ಲಿದೆ. ಇದೀಗ ತಾಯಿಯ ಅಪ್ಪಣೆಗಾಗಿ (ಪ್ರಸಾದ) ಡಿಕೆಶಿ ಕಾಯುತ್ತಿದ್ದಾರೆ.

ಮತ್ತೊಂದ್ಕಡೆ ಜ್ಯೋತಿಷಿಗಳ ಸಲಹೆಯ ಮೇರೆಗೆ ಡಿಕೆ ಶಿವಕುಮಾರ್ ಅವರು ಸುಗಂಧ ರಾಜ ಹೂವಿನಿಂದ ದೂರ ಉಳಿದಿದ್ದಾರೆ. ದೇವಸ್ಥಾನದ ಆವರಣದೊಳಗೆ ಯಾರೂ ಸುಗಂಧ ರಾಜ ಹೂವು ತರದಂತೆ ಅವರು ಮೊದಲೇ ಸೂಚನೆ ನೀಡಿದ್ದರು. ಹೀಗಾಗಿ ಪೊಲೀಸರು ದೇವಸ್ಥಾನದ ಗೇಟ್ ಬಳಿಯೇ ಕಾರ್ಯಕರ್ತರು ತಂದಿದ್ದ ಸುಗಂಧ ರಾಜ ಹೂವುಗಳನ್ನು ತಡೆಯುತ್ತಿರುವುದು ಕಂಡುಬಂದಿದೆ. ಕಾಲರಾತ್ರಿ ಎಳ್ಳು ಅಮವಾಸ್ಯೆಯ ಹಿನ್ನೆಲೆಯಲ್ಲಿ ವಿಶೇಷ ಮಾಲೆ ಪೂಜೆಯನ್ನೂ ಅವರು ನೆರವೇರಿಸಲಿದ್ದಾರೆ.

ಅಂದ್ಹಾಗೆ ಡಿಕೆಶಿ ಈ ಹಿಂದೆಯೂ ಶ್ರೀ ಜಗದೀಶ್ವರಿ ದೇವಸ್ಥಾನಕ್ಕೆ ಭೇಟಿ ನೀಡಿದ್ದರು. 2019ರಲ್ಲಿ ಡಿಕೆಶಿ ಇದೇ ಕ್ಷೇತ್ರಕ್ಕೆ ಭೇಟಿ ನೀಡಿ ಸುಮಾರು 3 ಗಂಟೆಗಳ ಕಾಲ ದೇವಿಯ ಮುಂದೆ ನಿಂತು ಪ್ರಾರ್ಥಿಸಿದ್ದರು. ಅಂದು ಸ್ವಲ್ಪ ತಡವಾದರೂ ತಾಯಿ ಬಲಭಾಗದಿಂದ ಹಿಂಗಾರ ಪ್ರಸಾದ ನೀಡಿ ಅನುಗ್ರಹಿಸಿದ್ದಳು. ಆ ಭೇಟಿಯ ನಂತರವೇ ಡಿಕೆ ಶಿವಕುಮಾರ್ ಅವರಿಗೆ ಕೆಪಿಸಿಸಿ ಅಧ್ಯಕ್ಷ ಪಟ್ಟ ಒಲಿದು ಬಂದಿತ್ತು ಮತ್ತು ಹಲವು ಕಾನೂನು ಸಂಕಷ್ಟಗಳಿಂದ ಅವರು ಮುಕ್ತಿ ಪಡೆದಿದ್ದರು. ಅದೇ ನಂಬಿಕೆಯಿಂದ ಈಗ ಮುಖ್ಯಮಂತ್ರಿ ಹುದ್ದೆಗಾಗಿ ಮತ್ತೆ ದೇವಿಯ ಮೊರೆ ಹೋಗಿದ್ದಾರೆ.

Shwetha M