ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದ ಅಂಕಿತಾಗೆ ಸನ್ಮಾನ – 5 ಲಕ್ಷ ಪ್ರೋತ್ಸಾಹ ಧನ ನೀಡಿದ ಡಿಸಿಎಂ ಡಿಕೆಶಿ

ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದ ಅಂಕಿತಾಗೆ ಸನ್ಮಾನ – 5 ಲಕ್ಷ ಪ್ರೋತ್ಸಾಹ ಧನ ನೀಡಿದ ಡಿಸಿಎಂ ಡಿಕೆಶಿ

SSLC ಪರೀಕ್ಷೆಯಲ್ಲಿ ಉತ್ತಮ ಅಂಕಗಳಿಸಿದ ವಿದ್ಯಾರ್ಥಿಗಳನ್ನು ಡಿಸಿಎಂ ಡಿಕೆ ಶಿವಕುಮಾರ್ ಸನ್ಮಾನಿಸಿ ಪ್ರೋತ್ಸಾಹ ಧನ ನೀಡಿದ್ದಾರೆ. ಸರ್ಕಾರಿ ಶಾಲೆಯಲ್ಲಿ ಓದಿ ಎಸೆಸೆಲ್ಸಿ ಪರೀಕ್ಷೆಯಲ್ಲಿ ಮೊದಲ ರ್ಯಾಂಕ್ ಪಡೆದ ಬಾಗಲಕೋಟೆ ಜಿಲ್ಲೆಯ ಮುಧೋಳದ ಅಂಕಿತಾಗೆ 5 ಲಕ್ಷ ಹಾಗೂ ಮೂರನೇ ಸ್ಥಾನ ಪಡೆದ ಮಂಡ್ಯದ ನವನೀತ್ ಗೆ 2 ಲಕ್ಷ ರೂ. ಪ್ರೋತ್ಸಾಹ ಧನವನ್ನು ನೀಡಿ ಸನ್ಮಾನಿಸಿದ್ದಾರೆ.

ಇದನ್ನೂ ಓದಿ: ನಾನು ಒಳ್ಳೆ ಮಗಳಲ್ಲ.. ತಾನು ಮಾಡಿದ ತಪ್ಪನ್ನು ನನ್ನ ಮಗಳು ಮಾಡುವುದಕ್ಕೆ ಬಿಡೋದಿಲ್ಲ ಎಂದು ಆಲಿಯಾ ಭಟ್‌!

ಡಿಕೆ ಶಿವಕುಮಾರ್‌ ಅವರು ಸದಾಶಿವನಗರ ನಿವಾಸಕ್ಕೆ ವಿದ್ಯಾರ್ಥಿಗಳನ್ನು ಹಾಗೂ ಪೋಷಕರನ್ನು ಆಹ್ವಾನಿಸಿದ್ದರು. ಅವರ ನಿವಾಸದಲ್ಲಿ ಇಬ್ಬರೂ ವಿದ್ಯಾರ್ಥಿಗಳಿಗೆ ಸನ್ಮಾನಿಸಿ, ಅಂಕಿತಾ ಅವರಿಗೆ 5 ಲಕ್ಷ ರೂ. ಚೆಕ್ ನೀಡಿದರು. ನವನೀತ್ ಗೆ 2 ಲಕ್ಷ ರೂ. ಉಡುಗೊರೆ ಪ್ರಕಟಿಸಿ ಚೆಕ್ ನೀಡುವಂತೆ ಕಚೇರಿ ಸಿಬ್ಬಂದಿಗೆ ಸೂಚಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಡಿಸಿಎಂ ಡಿ ಕೆ ಶಿವಕುಮಾರ್, ಮೊನ್ನೆ 10 ನೇ ತರಗತಿ ಫಲಿತಾಂಶ ನೋಡಿದಾಗ, ಬಾಗಲಕೋಟೆಯ ಬಸವರಾಜು ಅವರ ಪುತ್ರಿ ಅಂಕಿತಾ 625 ಕ್ಕೆ 625 ಅಂಕಗಳನ್ನು ಪಡೆದಿರುವುದನ್ನು ಕಂಡು ಸಂತೋಷವಾಯಿತು, ಬಹಳ ಹೆಮ್ಮೆ ಎನಿಸಿತು. ನಮ್ಮ ಸರ್ಕಾರಿ ಶಾಲೆ ಮಕ್ಕಳು ಹಾಗೂ ಅಲ್ಲಿನ ಶಿಕ್ಷಕರು ಬಹಳ ಸಮರ್ಥರಿದ್ದಾರೆ. ಅಂಕಿತಾ ಜತೆ ನಾನು ದೂರವಾಣಿ ಕರೆ ಮೂಲಕ ಮಾತನಾಡಿ ಬೆಂಗಳೂರಿಗೆ ಬಂದಾಗ ನನ್ನ ಮನೆಗೆ ಬರುವಂತೆ ಆಹ್ವಾನಿಸಿದ್ದೆ. ಅವರು ಇಂದು ಆಗಮಿಸಿದ್ದಾರೆ. ಸರ್ಕಾರದ ಪರವಾಗಿ ನಾನು ಈ ಹೆಣ್ಣು ಮಗಳು ಹಾಗೂ ಆಕೆಯ ಪೋಷಕರನ್ನು ಅಭಿನಂದಿಸುತ್ತೇನೆ. ಈಕೆಯ ಮುಂದಿನ ವಿದ್ಯಾಭ್ಯಾಸಕ್ಕೆ 5 ಲಕ್ಷ ರೂ. ಹಣವನ್ನು ಉಡುಗೊರೆಯಾಗಿ ನೀಡುತ್ತಿದ್ದೇನೆ  ಎಂದರು.

ನನ್ನ ಆಸಕ್ತಿ ರಾಜಕಾರಣವಾದರೂ ನನ್ನ ಆಯ್ಕೆ ಶಿಕ್ಷಣ ಕ್ಷೇತ್ರ ಎಂದು ಯಾವಾಗಲೂ ಹೇಳುತ್ತಲೇ ಇರುತ್ತೇನೆ. ಗ್ರಾಮೀಣ ಭಾಗದ ಪಂಚಾಯ್ತಿ ಮಟ್ಟದಲ್ಲಿ ಸರ್ಕಾರಿ ಶಾಲೆಗಳನ್ನು ವಿಶ್ವ ಗುಣಮಟ್ಟದ ಕರ್ನಾಟಕ ಪಬ್ಲಿಕ್ ಶಾಲೆಗಳಾಗಿ ಮಾಡುವುದು ನನ್ನ ಗುರಿ ಎಂದರು.

ಸರ್ಕಾರದ ಹಣ ಬಳಸದೇ, ಸಿಎಸ್ಆರ್ ನಿಧಿ ಮೂಲಕ ಈ ಶಾಲೆಗಳನ್ನು ನಿರ್ಮಾಣ ಮಾಡಲು ಯೋಜನೆ ರೂಪಿಸಿದ್ದು, ಚುನಾವಣೆ ನೀತಿ ಸಂಹಿತೆ ಮುಗಿದ ನಂತರ ಇವುಗಳ ನಿರ್ಮಾಣದ ಸಭೆ ಕರೆಯುತ್ತೇನೆ. ರಾಮನಗರ ಜಿಲ್ಲೆಯಲ್ಲಿ ಈಗಾಗಲೇ 20 ಶಾಲೆಗಳ ನಿರ್ಮಾಣ ಕಾರ್ಯ ಆರಂಭವಾಗಿದೆ. ಈ ಶಾಲೆಗಳ ಮೂಲಕ ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಅಂತಾರಾಷ್ಟ್ರೀಯ ಗುಣಮಟ್ಟದ ಶಿಕ್ಷಣ ಕೊಡಿಸಬೇಕು ಎಂಬ ಉದ್ದೇಶ ನಮ್ಮದಾಗಿದೆ  ಎಂದು ಡಿಸಿಎಂ ಡಿ ಕೆ ಶಿವಕುಮಾರ್ ತಿಳಿಸಿದರು.

Shwetha M