RCBಗೆ ಕೆಎಲ್ ತಪ್ಪಿಸಿದ್ದೇ DK? – ಇಶಾನ್ ಕಿಶನ್ ಗೆ ಪವರ್ ಇಲ್ವಾ?
ಕನ್ನಡಿಗರನ್ನು ಕಡೆಗಣಿಸಿದ್ರಾ ಕಾರ್ತಿಕ್?
ರಾಯಲ್ ಚಾಲೆಂಜರ್ಸ್ ಬೆಂಗಳೂರು ಫ್ರಾಂಚೈಸಿ ವಿರುದ್ಧದ ಮೇನ್ ಕಂಪ್ಲೇಂಟ್ ಅಂದ್ರೆ ಕನ್ನಡಿಗರನ್ನ ಕಡೆಗಣಿಸ್ತಾರೆ ಅನ್ನೋದು. 2025ರ ಐಪಿಎಲ್ ಮೆಗಾ ಹರಾಜಿನಲ್ಲೂ ಇದೇ ವಿಚಾರ ಚರ್ಚೆಯಾಗಿತ್ತು. ಕೆಎಲ್ ರಾಹುಲ್ರನ್ನ ಕೈ ಬಿಟ್ಟಿದ್ದಕ್ಕೆ ಹಾಗೇ ಹೆಚ್ಚೆಚ್ಚು ಕನ್ನಡಿಗರನ್ನ ಖರೀದಿ ಮಾಡದೆ ಇದ್ದಿದ್ದಕ್ಕೆ ಫ್ರಾಂಚೈಸಿ ವಿರುದ್ಧ ಕಿಡಿ ಕಾರಿದ್ರು. ಬಟ್ ಈಗ ಖರೀದಿ ವೇಳೆ ದಿನೇಶ್ ಕಾರ್ತಿಕ್ರಿಂದಲೇ ಕೆಎಲ್ ರಾಹುಲ್ರನ್ನ ಕೈಬಿಟ್ರಾ ಅನ್ನೋ ಡೌಟ್ ಶುರುವಾಗಿದೆ. ಯಾಕೆ ಅನ್ನೋ ಮಾಹಿತಿ ಇಲ್ಲಿದೆ.
ಇದನ್ನೂ ಓದಿ: ಮೂರನೇ ಟೆಸ್ಟ್‌ಗೆ ಟೀಮ್ ಇಂಡಿಯಾ ರೆಡಿ – ಹರ್ಷಿತ್ ರಾಣಾ ಬದಲಿಗೆ ಆಕಾಶ್ ದೀಪ್‌ಗೆ ಅವಕಾಶ
ಐಪಿಎಲ್ ಮೆಗಾ ಆಕ್ಷನ್ನಲ್ಲಿ ಟೀಂ ಇಂಡಿಯಾದ ಸ್ಟಾರ್ ಪ್ಲೇಯರ್ಗಳಿದ್ರೂ ಆರ್‌ಸಿಬಿ ಫ್ರಾಂಚೈಸಿ ವಿದೇಶಿ ಆಟಗಾರರ ಮೇಲೆಯೇ ಆಸಕ್ತಿ ತೋರಿಸಿತ್ತು. ಬೆಂಗಳೂರು ತಂಡಕ್ಕೆ ನಮ್ಮ ದೇಶೀ ಆಟಗಾರರಿಗಿಂತ ವಿದೇಶಿ ಆಟಗಾರರೇ ಟಾರ್ಗೆಟ್ ಆಗಿದ್ರು. ಅದ್ರಲ್ಲೂ ನಮ್ಮ ಕನ್ನಡಿಗರ ಮೇಲೆ ಕಣ್ಣೆತ್ತಿಯೂ ನೋಡ್ಲಿಲ್ಲ. ಮನೋಜ್ ಬಾಂಡಗೆಯನ್ನ ಮತ್ತೆ ಮೂಲ ಬೆಲೆಗೆ ಉಳಿಸಿಕೊಂಡಿದ್ದು ಹಾಗೇ ಅನ್ಸೋಲ್ಡ್ ಆಗಿದ್ದ ದೇವದತ್ ಪಡಿಕ್ಕಲ್ನ 2 ಕೋಟಿ ಮೂಲಬೆಲೆಗೆ ತಂಡಕ್ಕೆ ಸೇರಿಸಿಕೊಂಡಿದ್ದು ಬಿಟ್ರೆ ಉಳಿದವರ ಕಡೆ ಗಮನ ಕೊಡ್ಲೇ ಇಲ್ಲ. ಬಟ್ ಈಗ ಖರೀದಿ ವಿಚಾರದಲ್ಲಿ ದಿನೇಶ್ ಕಾರ್ತಿಕ್ ಮಾಡಿದ್ದ ಪ್ಲ್ಯಾನ್ ರಿವೀಲ್ ಆಗಿದೆ. ಕನ್ನಡಿಗರನ್ನ ಕಡೆಗಣಿಸಿದ್ದು, ವಿದೇಶಿಗರ ಮೇಲೆ ಒಲವು ತೋರಿಸಿದ್ದನ್ನ ಡಿಕೆಯೇ ಒಪ್ಪಿಕೊಂಡಿದ್ದಾರೆ.
ವಿದೇಶಿ ಆಟಗಾರರೇ ನಮ್ಮ ಟಾರ್ಗೆಟ್ ಆಗಿದ್ರು ಎಂದ ಡಿಕೆ!
ಆರ್‌ಸಿಬಿ ಫ್ರಾಂಚೈಸಿ ತನ್ನ ಸೋಶಿಯಲ್ ಮೀಡಿಯ ಖಾತೆಯಲ್ಲಿ ವಿಡಿಯೋ ಒಂದನ್ನು ರಿಲೀಸ್ ಮಾಡಿದೆ. ಈ ವಿಡಿಯೋದಲ್ಲಿ ದಿನೇಶ್ ಕಾರ್ತಿಕ್ ಮಾತನಾಡಿದ್ದಾರೆ. ಬ್ಯಾಟಿಂಗ್ ಕೋಚ್ ಆಗಿರೋ ಕಾರ್ತಿಕ್ ಯಾರನ್ನ ಖರೀದಿ ಮಾಡಿದ್ರೆ ಬೆಸ್ಟ್ ಅನ್ನೋದನ್ನ ಕ್ಯಾಲ್ಕುಲೇಟ್ ಮಾಡ್ತಿದ್ದಾರೆ. ಆರ್‌ಸಿಬಿ ವಿದೇಶಿ ಆರಂಭಿಕ ಆಟಗಾರನ ಹುಡುಕಾಟ ನಡೆಸಿತ್ತು. ಈ ವೇಳೆ ಸ್ಟ್ರೈಕ್ ರೇಟ್ ನೋಡಿಕೊಂಡು ದೊಡ್ಡ ಇನಿಂಗ್ಸ್ ಕಟ್ಟುವ ಸ್ಟಾರ್ ಆಟಗಾರರ ಅವಶ್ಯಕತೆ ಇತ್ತು. ಈ ರೀತಿಯ ಸ್ಫೋಟಕ ಇನಿಂಗ್ಸ್‌ಗಳನ್ನು ಜೋಸ್ ಬಟ್ಲರ್ ಹಾಗೂ ಫಿಲ್ ಸಾಲ್ಟ್ ಕಟ್ಟಿದ್ದಾರೆ. ಹೀಗಾಗಿ ವಿದೇಶಿ ಆಟಗಾರರ ಮೇಲೆಯೇ ಹೆಚ್ಚು ಇಂಟ್ರೆಸ್ಟ್ ತೋರಿದ್ವಿ ಎಂದಿದ್ದಾರೆ ದಿನೇಶ್ ಕಾರ್ತಿಕ್.
ಇಶಾನ್ ಕಿಶನ್ ವಿಚಾರದಲ್ಲಿ ನಾಲಗೆ ಹರಿಬಿಟ್ಟ ದಿನೇಶ್!
ಆರಂಭದಲ್ಲಿ ಆರ್‌ಸಿಬಿ ಓಪನಿಂಗ್ ಸ್ಲಾಟ್ಗೆ ಟೀಮ್ ಇಂಡಿಯಾದ ಸ್ಟಾರ್ ವಿಕೆಟ್ ಕೀಪರ್ ಬ್ಯಾಟರ್ ಇಶಾನ್ ಕಿಶನ್ಗೆ ಕನ್ಸಿಡರ್ ಮಾಡಿದ್ರು. ಆದರೆ, ಕಿಶನ್ರನ್ನು ಆರ್‌ಸಿಬಿ ಖರೀದಿ ಮಾಡಲು ಮುಂದಾಗಲಿಲ್ಲ. ಇದರ ಮಧ್ಯೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಬ್ಯಾಟಿಂಗ್ ಕೋಚ್ ದಿನೇಶ್ ಕಾರ್ತಿಕ್ ಇಶಾನ್ ಕಿಶನ್ಗೆ ಅವಮಾನ ಮಾಡಿದ್ದಾರೆ. ಆರ್‌ಸಿಬಿ ವಿದೇಶಿ ಆರಂಭಿಕ ಆಟಗಾರನ ಹುಡುಕಾಟ ನಡೆಸಿತ್ತು. ನಮಗೆ ಉತ್ತಮ ಸ್ಟ್ರೈಕ್ ರೇಟ್ನೊಂದಿಗೆ ದೊಡ್ಡ ಇನಿಂಗ್ಸ್ ಕಟ್ಟುವ ಸ್ಟಾರ್ ಆಟಗಾರ ಬೇಕಿತ್ತು. ಈ ರೀತಿಯ ಸ್ಫೋಟಕ ಇನಿಂಗ್ಸ್ಗೆ ಹೆಸರು ವಾಸಿ ಫಿಲ್ ಸಾಲ್ಟ್. ಭಾರತದ ಪರ ಇಶಾನ್ ಕಿಶನ್ ಬಿಗ್ ಸ್ಕೋರ್ ಕಲೆ ಹಾಕಬಲ್ಲ ಪ್ಲೇಯರ್. ಆದರೆ, ಇಶಾನ್ ಕಿಶನ್ ಅವರನ್ನು ಖರೀದಿ ಮಾಡಲು ಇರೋ ಸಮಸ್ಯೆ ಏನಂದ್ರೆ ಅವರಲ್ಲಿ ಪವರ್ ಇಲ್ಲ. ಪವರ್ ಹಿಟ್ಟಿಂಗ್ ಇಲ್ಲ ಎಂದಮೇಲೆ ಯಾಕೆ ಖರೀದಿ ಮಾಡಬೇಕು. ನಮ್ಮ ತಂಡ ಆರಂಭಿಕರಾಗಿ ವಿದೇಶಿ ಆಟಗಾರರನ್ನು ಮನಸ್ಸಿನಲ್ಲಿ ಇಟ್ಟುಕೊಂಡಿತ್ತು. ಹಾಗಾಗಿ ಸಾಲ್ಟ್ರನ್ನೇ ಖರೀದಿ ಮಾಡಿದೆವು ಎಂದಿದ್ದಾರೆ. ಅಲ್ದೇ ಈ ಸ್ಲಾಟ್ಗೆ ಇಶಾನ್ ಕಿಶನ್ ಹೆಸರು ಕೇಳಿ ಬಂದಿತ್ತಾದ್ರೂ ದಿನೇಶ್ ಕಾರ್ತಿಕ್ ಇವರ ಖರೀದಿಗೆ ಬೇಡ ಎಂದು ವಾದಿಸಿದ್ದಾರೆ. ಆರ್‌ಸಿಬಿ ರಿಲೀಸ್ ಮಾಡಿದ ವಿಡಿಯೋದಲ್ಲಿ ಕಂಪ್ಲೀಟ್ ಪ್ಲಾನಿಂಗ್ ರೆಕಾರ್ಡ್ ಆಗಿದ್ದು, ನೀವು ನೋಡಬಹುದಾಗಿದೆ.
ಓವರ್ ಟು ಓವರ್ ರನ್ ಲೆಕ್ಕಾಚಾರ ಮಾಡಿ ಸಾಲ್ಟ್ ಗೆ ಮಣೆ!
ಹರಾಜಿನಲ್ಲಿ ಇಂಗ್ಲೆಂಡ್ ತಂಡದ ಸ್ಫೋಟಕ ಬ್ಯಾಟರ್ ಫಿಲ್ ಸಾಲ್ಟ್ ಅವರನ್ನು ಖರೀದಿ ಮಾಡುವಲ್ಲಿ ಆರ್‌ಸಿಬಿ ಯಶಸ್ವಿಯಾಗಿದೆ. ಬರೋಬ್ಬರಿ 11.50 ಕೋಟಿ ನೀಡಿ ಆರ್‌ಸಿಬಿ ತಂಡಕ್ಕೆ ಸೇರಿಸಿಕೊಂಡಿದೆ. ಸಾಲ್ಟ್ ಖರೀದಿಗೆ ಕಾರಣ ಏನು ಅನ್ನೋದನ್ನ ಆರ್‌ಸಿಬಿ ಮೆಂಟರ್ ಮತ್ತು ಬ್ಯಾಟಿಂಗ್ ಕೋಚ್ ದಿನೇಶ್ ಕಾರ್ತಿಕ್ ಬಿಚ್ಚಿಟ್ಟಿದ್ದಾರೆ. 28 ವರ್ಷದ ಇಂಗ್ಲೆಂಡ್ ತಂಡದ ಸ್ಫೋಟಕ ಆಟಗಾರ ಫಿಲ್ ಸಾಲ್ಟ್ ತಮ್ಮ ಬಿರುಸಿನ ಬ್ಯಾಟಿಂಗ್‌ನಿಂದಲೇ ಹೆಸರು ವಾಸಿ. ಇವರು ಇಂಗ್ಲೆಂಡ್ ತಂಡದ ಪರ 38 ಟಿ20 ಪಂದ್ಯಗಳಲ್ಲಿ 165.32 ಸ್ಟ್ರೈಕ್ ರೇಟ್‌ನಲ್ಲಿ 1106 ರನ್ ಸಿಡಿಸಿದ್ದಾರೆ. ಅದರಲ್ಲೂ ಇವರ ಟ್ರ್ಯಾಕ್ ರೆಕಾರ್ಡ್ ನೋಡಿ ಆರ್‌ಸಿಬಿ ಖರೀದಿ ಮಾಡಿದೆ. ಸಾಲ್ಟ್ ತನ್ನ ಕರಿಯರ್ನಲ್ಲೇ ಶೇ. 28ರಷ್ಟು ಸಮಯ ಒಂದು ಓವರ್ನಲ್ಲಿ 6-8 ರನ್ ಗಳಿಸುತ್ತಾರೆ. ಶೇ. 30ರಷ್ಟು ಸಮಯ 1 ಓವರ್ನಲ್ಲಿ 12-15 ರನ್ ಕಲೆ ಹಾಕುತ್ತಾರೆ. 4 ಓವರ್ಗಳ ಪೈಕಿ 1ರಲ್ಲಿ 16ಕ್ಕೂ ಹೆಚ್ಚು ರನ್ ಸಿಡಿಸುತ್ತಾರೆ. ಆವರೇಜ್ 2 ಓವರ್ಗೆ ಒಮ್ಮೆ 12 ರನ್ ಬಾರಿಸೋ ಸಾಮರ್ಥ್ಯ ಇದೆ. ಇವರ ಟ್ರ್ಯಾಕ್ ರೆಕಾರ್ಡ್ ನೋಡಿಯೇ ಆರ್‌ಸಿಬಿ ಕಣ್ಣಿಟ್ಟಿತ್ತು. ಪ್ಲಾನ್ ಪ್ರಕಾರ ಇವರೇ ಆರ್‌ಸಿಬಿ ತಂಡದ ಓಪನಿಂಗ್ ಸ್ಲಾಟ್ಗೆ ಬೇಕು ಎಂದು ಖರೀದಿ ಮಾಡಲಾಗಿದೆ. ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ ಫಿಲ್ ಸಾಲ್ಟ್ ಆಡಿದ 21 ಪಂದ್ಯಗಳಲ್ಲಿ 653 ರನ್ ಸಿಡಿಸಿದ್ದಾರೆ. ಇದರಲ್ಲಿ ಆರು ಅರ್ಧಶತಕಗಳು ಸೇರಿವೆ.
ಒಟ್ನಲ್ಲಿ 2025ರ ಇಂಡಿಯನ್ ಪ್ರೀಮಿಯರ್ ಲೀಗ್ ಮೆಗಾ ಹರಾಜಿನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಸ್ಟಾರ್ ಆಟಗಾರರನ್ನೇ ಖರೀದಿ ಮಾಡುವ ಮೂಲಕ ಬಲಿಷ್ಠ ತಂಡವನ್ನು ಕಟ್ಟಿದೆ. ಬಟ್ ದೇಶೀಯ ಸ್ಟಾರ್ ಆಟಗಾರರು ಹಾಗೇ ಕನ್ನಡಿಗರಿಗೆ ಮಣೆ ಹಾಕಿಲ್ಲ ಅನ್ನೋ ಕಂಪ್ಲೇಂಟ್ ಅಂತೂ ಇದ್ದೇ ಇದೆ. ಫೈನಲ್ಲಾಗಿ ಟೀಂ ಫಾರ್ಮ್ ಆಗುವಲ್ಲಿ ದಿನೇಶ್ ಕಾರ್ತಿಕ್ ಮೇಲುಗೈ ಸಾಧಿಸಿದ್ದಾರೆ.