ಸೆಪ್ಟೆಂಬರ್​ನಲ್ಲಿ 10 ಕೆಜಿ ಅನ್ನಭಾಗ್ಯ ಅಕ್ಕಿ ವಿತರಣೆ – ಮನೆಯಲ್ಲಿ ಕಾರು ಇದ್ದರೆ ಬಿಪಿಎಲ್‌ ಕಾರ್ಡ್‌ ರದ್ದು!

ಸೆಪ್ಟೆಂಬರ್​ನಲ್ಲಿ 10 ಕೆಜಿ ಅನ್ನಭಾಗ್ಯ ಅಕ್ಕಿ ವಿತರಣೆ – ಮನೆಯಲ್ಲಿ ಕಾರು ಇದ್ದರೆ ಬಿಪಿಎಲ್‌ ಕಾರ್ಡ್‌ ರದ್ದು!

ಬೆಂಗಳೂರು: ಕಾಂಗ್ರೆಸ್‌ನ ಮಹತ್ವಾಕಾಂಕ್ಷಿ ಯೋಜನೆಗಳಲ್ಲೊಂದಾದ ಅನ್ನಭಾಗ್ಯ ಯೋಜನೆ ರಾಜ್ಯದಲ್ಲಿ ಈಗಾಗಲೇ ಜಾರಿಯಾಗಿದೆ. ಬಿಪಿಎಲ್‌ ಪಡಿತರದಾರರಿಗೆ 5 ಕೆಜಿ ಅಕ್ಕಿ ಜೊತೆಗೆ ಉಳಿದ 5 ಕೆಜಿ ಅಕ್ಕಿ ಹಣವನ್ನು ಪಡಿತರದಾರರಿಗೆ ನೀಡಲಾಗುತ್ತಿದೆ. ಇದೀಗ ಬಿಪಿಎಲ್‌ ಪಡಿತರ ಸೆಪ್ಟೆಂಬರ್​ನಲ್ಲಿ 10 ಕೆಜಿ ಅನ್ನಭಾಗ್ಯ ವಿತರಣೆ ಮಾಡುವ ಸಾಧ್ಯತೆ ಇದ್ದು, ಈ ನಡುವೆ ಸ್ವತಃ ಕಾರು ಇರುವ ಕುಟುಂಬಕ್ಕೆ ಬಿಪಿಎಲ್​ ಕಾರ್ಡ್​ ರದ್ದು ಮಾಡುವ ಕುರಿತಂತೆ ಆಹಾರ ಸಚಿವ ಕೆ.ಹೆಚ್​​ ಮುನಿಯಪ್ಪ ಸುಳಿವು ನೀಡಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿರುವ ಕೆ.ಹೆಚ್‌ ಮುನಿಯಪ್ಪ ಅವರು, ಅನ್ನಭಾಗ್ಯ ಯೋಜನೆ ನಮ್ಮ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆ ಆಗಿದೆ. ಚುನಾವಣೆಯಲ್ಲಿ ಘೋಷಿಸಿದಂತೆ 5 ಗ್ಯಾರೆಂಟಿ ಯೋಜನೆಗಳನ್ನು ಜಾರಿಗೊಳಿಸುತ್ತಿದ್ದೇವೆ. ಜುಲೈ ತಿಂಗಳಲ್ಲಿ 1 ಕೋಟಿ 28 ಲಕ್ಷ ಕುಟುಂಬಗಳಿಗೆ ಹಣ ಸಂದಾಯವಾಗಿದೆ. 566 ಕೋಟಿ ಹಣ ರೂಪಾಯಿ ಸಂದಾಯವಾಗಿದೆ. 3 ಲಕ್ಷ 40,425 ಫಲಾನುಭವಿಗಳ ಬ್ಯಾಂಕ್ ಖಾತೆ ಚಾಲ್ತಿಯಲ್ಲಿ ಇಲ್ಲ. ಬ್ಯಾಂಕ್ ಖಾತೆಯೊಂದಿಗೆ ಆಧಾರ್ ಜೋಡಣೆಯಾಗದ ಹಾಗೂ ಅನರ್ಹ ಪಡಿತರ ಚೀಟಿಗಳ ಸಂಖ್ಯೆ 19,27,226 ಇದೆ ಎಂದು ಮುನಿಯಪ್ಪ ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ: ಕಲುಷಿತ ನೀರು ಸೇವನೆ ಪ್ರಕರಣ – ಸಾವಿನ ಸಂಖ್ಯೆ 6ಕ್ಕೆ ಏರಿಕೆ, 16 ಮಂದಿ ಸ್ಥಿತಿ ಚಿಂತಾಜನಕ

ಎಲ್ಲೊ ಬೋರ್ಡ್‌ ಇರೋರಿಗೆ ಕಾರ್ಡ್ ರದ್ದು ಆಗಿದ್ದರೆ ಅದನ್ನು ಪರಿಶೀಲಿಸಿ ವಾಪಸ್ ಪಡೆಯೋ ಬಗ್ಗೆ ನಿರ್ಧಾರ ಮಾಡ್ತೀವಿ. ಎಲ್ಲೋ ಬೋರ್ಡ್ ಅವರು ಜೀವನಕ್ಕಾಗಿ ದುಡಿಯಲು ಕಾರು ತೆಗೆದು ಕೊಂಡಿರುತ್ತಾರೆ. ಹೀಗಾಗಿ ಅವರ ಕಾರ್ಡ್ ರದ್ದು ಮಾಡೋದಿಲ್ಲ. ವೈಟ್ ಬೋರ್ಡ್ ಕಾರು ಇರೋರ ಕಾರ್ಡ್ ರದ್ದು ವಾಪಸ್ ಪಡೆಯೋದಿಲ್ಲ ಎಂದು ಸಚಿವ ಮುನಿಯಪ್ಪ ತಿಳಿಸಿದ್ದಾರೆ.

ಅನ್ನಭಾಗ್ಯ ಯೋಜನೆಗೆ ಅಕ್ಕಿ ಕೊಡಲು ಆಂಧ್ರ ಪ್ರದೇಶ ಹಾಗೂ ತಮಿಳು ನಾಡು ಸರ್ಕಾರ ಮುಂದೆ ಬಂದಿದೆ. ದರ ಜಾಸ್ತಿ ಆದರೆ ಖರೀದಿ ಮಾಡಲು ಆಗಲ್ಲ, ಸೆಪ್ಟೆಂಬರ್ ತಿಂಗಳಿಂದ ಅಕ್ಕಿ ಕೊಡಬೇಕು ಅಂದು ಕೊಂಡಿದ್ದೇವೆ. ನಮ್ಮ ದರಕ್ಕೆ ಅಕ್ಕಿ ಸಿಗದಿದ್ದರೆ 2 ರಿಂದ 3 ತಿಂಗಳು ವಿಳಂಬ ಆಗಲಿದೆ ಎಂದು ಹೇಳಿದ್ದಾರೆ.

ಹೊಸ ಪಡಿತರ ಚೀಟಿ ವಿತರಣೆಗೆ ಅಗತ್ಯ ಕ್ರಮ ವಹಿಸಲಾಗುತ್ತದೆ. ರೇಷನ್ ಕಾರ್ಡ್ ತಿದ್ದುಪಡಿ, ರದ್ದತಿ, ಸೇರ್ಪಡೆಗೆ ಅವಕಾಶ ನೀಡುತ್ತೇವೆ. ಈ ಹಿನ್ನೆಲೆಯಲ್ಲಿ ಜುಲೈ ಅಂತ್ಯಕ್ಕೆ ಬಾಕಿ ಇರುವ 2,95,986 ಪಡಿತರ ಚೀಟಿ ವಿಲೇವಾರಿಗೆ ಕ್ರಮ ಕೈಗೊಳ್ಳುತ್ತೇವೆ ಎಂದಿದ್ದಾರೆ.

1.28 ಕೋಟಿ‌ ಬಿಪಿಎಲ್ ಪಡಿತರ ಚೀಟಿಗಳಲ್ಲಿ 1.06 ಕೋಟಿ ಕಾರ್ಡ್ ಆಕ್ಟಿವ್, 22 ಲಕ್ಷ ಕಾರ್ಡ್​ ಇನ್​ ಆಕ್ಟಿವ್ ಆಗಿವೆ. ಮೂರು ತಿಂಗಳಿಂದ 5.37 ಲಕ್ಷ ಹಾಗೂ ಒಂದು ತಿಂಗಳಿನಿಂದ 10.2 ಲಕ್ಷ ಕಾರ್ಡ್​ದಾರರು ಅಕ್ಕಿ ಪಡೆದುಕೊಂಡಿಲ್ಲ. ಅಕ್ಕಿ ಖರೀದಿ ಬರ್ಗೆ ಚರ್ಚೆ ನಡೆಯುತ್ತಿದೆ, FCI ನಿಗದಿ ಮಾಡಿರುವ ಕೆಜಿಗೆ 34 ರೂಪಾಯಿ ಮೇಲೆ ಕೊಡಲು ಸಾಧ್ಯವಿಲ್ಲ. ಸೆಪ್ಟೆಂಬರ್ ವೇಳೆಗೆ ಅಕ್ಕಿ ‌ಕೊಡಬೇಕು ಅಂದು ಕೊಂಡಿದ್ದೇವೆ. ಅಕ್ಕಿ ಸಿಕ್ಕಿಲ್ಲ ಅಂದರೆ ದುಡ್ಡು ಹಾಕ್ತೀವಿ ಎಂದು ತಿಳಿಸಿದರು.

ರಾಜ್ಯದಲ್ಲಿ 1.28 ಕೋಟಿ ರೂಪಾಯಿ ಪಡಿತರ ಚೀಟಿ ಕುಟುಂಬಗಳಲ್ಲಿ 4.42 ಕೋಟಿ ಫಲಾನುಭವಿಗಳಿದ್ದಾರೆ. ಇಲ್ಲಿವರೆಗೆ 1 ಕೋಟಿ ಕುಟುಂಬಗಳಿಗೆ 566 ಕೋಟಿ ಹಣವನ್ನು ಕುಟುಂಬದ ಮುಖ್ಯಸ್ಥರ ಖಾತೆಗೆ ವರ್ಗಾವಣೆ ಮಾಡಲಾಗಿದೆ. ಇದರಿಂದ 3.50 ಕೋಟಿ ಫಲಾನುಭವಿಗಳಿಗೆ ಅನುಕೂಲವಾಗಿದೆ. ಯೋಜನೆಗೆ ಚಾಲನೆ ದೊರೆತು 25 ದಿನಗಳ ಅವಧಿಯಲ್ಲಿ 1 ಕೋಟಿ ಕುಟುಂಬಗಳಿಗೆ ನೇರ ನಗದು ವರ್ಗಾವಣೆ ಮಾಡಲಾಗಿದೆ ಎಂದು ತಿಳಿಸಿದ್ದಾರೆ.

suddiyaana