ಪಾಕಿಸ್ತಾನದಲ್ಲಿ ಸಂಸತ್ ವಿಸರ್ಜನೆ – ಚುನಾವಣೆ ಮುಂದೂಡಿಕೆಯಾದರೆ ಮಿಲಿಟರಿ ಆಡಳಿತದ ಭೀತಿ

ಪಾಕಿಸ್ತಾನದಲ್ಲಿ ಸಂಸತ್ ವಿಸರ್ಜನೆ – ಚುನಾವಣೆ ಮುಂದೂಡಿಕೆಯಾದರೆ ಮಿಲಿಟರಿ ಆಡಳಿತದ ಭೀತಿ

ಪಾಕಿಸ್ತಾನದಲ್ಲಿ ದಿನಕ್ಕೊಂದು ರಾಜಕೀಯ ಡ್ರಾಮಾ ನಡೆಯುತ್ತಿದೆ. ಇದೀಗ ಆರ್ಥಿಕ ಬಿಕ್ಕಟ್ಟಿನ ನಡುವೆಯೂ ಪಾಕಿಸ್ತಾನದಲ್ಲಿ ಪ್ರಧಾನಿ ಶೆಹಬಾಜ್ ಷರೀಫ್ ಶಿಫಾರಸಿನ ಮೇರೆಗೆ ಸಂಸತ್ತನ್ನು ಬುಧವಾರ ತಡರಾತ್ರಿ ವಿಸರ್ಜಿಸಲಾಗಿದೆ. ಇದೀಗ ಸಾರ್ವತ್ರಿಕ ಚುನಾವಣೆಗೆ ವೇದಿಕೆ ಸಜ್ಜಾಗಿದೆ. ಪಾಕ್ ಸಂಸತ್ತಿನ 5 ವರ್ಷಗಳ ಅವಧಿ ಪೂರ್ಣಗೊಳ್ಳಲು 3 ದಿನಗಳ ಮುಂಚಿತವಾಗಿ ವಿಸರ್ಜಿಸಲಾಗಿದೆ.

ಇದನ್ನೂ ಓದಿ: ಹಗಲಲ್ಲಿ ಸೊಳ್ಳೆ, ರಾತ್ರಿಯಲ್ಲಿ ತಿಗಣೆ ಕಾಟ – ಜೈಲಿಂದ ಹೊರಗೆ ಕರೆದುಕೊಂಡು ಬನ್ನಿ ಎಂದು ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಗೋಳಾಟ

ಆರ್ಥಿಕ ಸಂಕಷ್ಟದ ನಡುವೆ ರಾಜಕೀಯ ಅಸ್ಥಿರತೆಯಿಂದಲೂ ಬಳಲುತ್ತಿರುವ ಪಾಕಿಸ್ತಾನದಲ್ಲಿ ಸಂಸತ್ ವಿಸರ್ಜನೆ ಮಾಡಲಾಗಿದೆ. ಶೀಘ್ರದಲ್ಲೇ ಸಾರ್ವತ್ರಿಕ ಚುನಾವಣೆ ನಡೆಯಲಿದ್ದು, ಈ ನಡುವೆ, ಭ್ರಷ್ಟಾಚಾರ ಪ್ರಕರಣದಲ್ಲಿ ಜೈಲು ಪಾಲಾಗಿರುವ ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಮುಂಬರುವ ಚುನಾವಣೆಯಲ್ಲಿ ಸ್ಪರ್ಧಿಸೋದು ಕಷ್ಟ ಸಾಧ್ಯವಾಗಿದೆ. ಸದ್ಯ ಜೈಲಿನಲ್ಲಿರುವ ಇಮ್ರಾನ್ ಖಾನ್ ಪರವಾಗಿ ಅವರ ತೆಹ್ರಿಕ್ – ಇ – ಇನ್ಸಾಫ್ ಪಕ್ಷದ ಸದಸ್ಯರು ಚುನಾವಣೆಯಲ್ಲಿ ಸ್ಪರ್ಧಿಸಲಿದ್ದಾರೆ. ಆಗಸ್ಟ್ 12ರಂದು ಸಂಸತ್ತಿನ ಅವಧಿ ಮುಕ್ತಾಯಗೊಳ್ಳುವ ದಿನವಾಗಿತ್ತು. ಪಾಕಿಸ್ತಾನದ ಸಂವಿಧಾನದ ಪ್ರಕಾರ ಸರ್ಕಾರದ ಅವಧಿ ಪೂರೈಸಿದ 60 ದಿನಗಳಲ್ಲಿ ಚುನಾವಣೆ ನಡೆಯಬೇಕು. ಅವಧಿಗೂ ಮುನ್ನ ವಿಸರ್ಜನೆ ಮಾಡಿದರೆ 90 ದಿನಗಳ ಕಾಲಾವಕಾಶ ಇರಲಿದೆ. ಇದೀಗ ಸಂಸತ್ತನ್ನು ಅವಧಿ ಪೂರ್ಣಗೊಳ್ಳುವ ಮೊದಲೇ ವಿಸರ್ಜನೆ ಮಾಡಿರುವುದರಿಂದ ಹೊಸ ಚುನಾವಣೆ ನಡೆಸಲು 90 ದಿನಗಳ ಕಾಲಾವಕಾಶ ಸಿಗಲಿದೆ.  ವರದಿಗಳ ಪ್ರಕಾರ, ಪಾಕಿಸ್ತಾನ ಸರ್ಕಾರವು ಚುನಾವಣೆಯನ್ನು ಮುಂದೂಡಲು ಯೋಚಿಸುತ್ತಿದೆ. ಏಕೆಂದರೆ ಅದು ಈಗಾಗಲೇ ನಗದು ಕೊರತೆಯಿರುವ ದೇಶವನ್ನು ಅಸ್ಥಿರಗೊಳಿಸುವ ಬೆದರಿಕೆಯನ್ನುಂಟುಮಾಡುವ ಭದ್ರತೆ ಮತ್ತು ರಾಜಕೀಯ ಸವಾಲುಗಳನ್ನು ತಡೆಯಲು ಹೆಣಗಾಡುತ್ತಿದೆ. ಹಂಗಾಮಿ ಸರ್ಕಾರವು ಚುನಾವಣೆಯನ್ನ ಮುಂದಿನ ವರ್ಷದವರೆಗೆ ಮುಂದೂಡುವ ಸಾಧ್ಯತೆಯಿರುವುದರಿಂದ ಪಾಕಿಸ್ತಾನ ದೇಶದಲ್ಲಿ ಮತ್ತೊಮ್ಮೆ ಮಿಲಿಟರಿ ಆಡಳಿತದ ಭೀತಿಯೂ ಎದುರಾಗಿದೆ.

suddiyaana