ಉಳಿತಾಯದ ನೆಪವೊಡ್ಡಿ 7 ಸಾವಿರ ಸಿಬ್ಬಂದಿ ವಜಾಗೆ ನಿರ್ಧಾರ – ಟೆಕ್ ಸಂಸ್ಥೆಗಳಲ್ಲಿ ಇದೆಂಥಾ ಬೆಳವಣಿಗೆ..!?
ವಿಶ್ವದ ದೈತ್ಯ ಟೆಕ್ ಸಂಸ್ಥೆಗಳಲ್ಲಿ ಸಿಬ್ಬಂದಿಯನ್ನ ವಜಾಗೊಳಿಸುವ ಸರಣಿ ಮುಂದುವರಿದಿದೆ. ಇತ್ತೀಚೆಗಷ್ಟೇ ಗೂಗಲ್ ಸಂಸ್ಥೆ ಬರೋಬ್ಬರಿ 12 ಸಾವಿರ ಸಿಬ್ಬಂದಿಯನ್ನ ಏಕಕಾಲಕ್ಕೆ ವಜಾಗೊಳಿಸಿತ್ತು. ಇದೀಗ ಅಮೆರಿಕದ ದಿ ವಾಲ್ಟ್ ಡಿಸ್ನಿ ಕಂಪನಿ ವೆಚ್ಚದಲ್ಲಿ ಉಳಿತಾಯ ಮಾಡುವ ಸಲುವಾಗಿ ಏಕಾಏಕಿ 7 ಸಾವಿರ ಉದ್ಯೋಗಿಗಳನ್ನ ವಜಾಗೊಳಿಸಲು ಮುಂದಾಗಿದೆ. ಕಂಪನಿಗೆ ತಗಲುವ ವೆಚ್ಚ ಕಡಿಮೆ ಮಾಡಲು ಈ ನಿರ್ಧಾರ ಕೈಗೊಂಡಿರೋದಾಗಿ ತಿಳಿಸಿದೆ.
ಇದನ್ನೂ ಓದಿ : ಲ್ಯಾಂಡ್ ಡೀಲರ್ ವಿರುದ್ಧ ವರದಿ ಮಾಡಿದ್ದೇ ತಪ್ಪಾ..!? – ಪತ್ರಕರ್ತನ ಮೇಲೆ ಕಾರು ಹರಿಸಿ ಭೀಕರ ಕೊಲೆ..!
ವಿಶ್ವದ ದೈತ್ಯ ಟೆಕ್ ಸಂಸ್ಥೆಗಳಲ್ಲಿ ಸರಣಿಯಾಗಿ ಉದ್ಯೋಗಿಗಳನ್ನು ಕೆಲಸದಿಂದ ತೆಗೆಯುವ ಪ್ರಕ್ರಿಯೆ ಆರಂಭಗೊಳ್ಳುತ್ತಿದ್ದಂತೆ ಡಿಸ್ನಿ ಕೂಡಾ ಈ ನಿರ್ಧಾರ ಕೈಗೊಂಡಿದೆ. 2022ರ ನವೆಂಬರ್‌ನಲ್ಲಿ ಮಾಜಿ ಸಿಇಒ ಬಾಬ್ ಚಾಪೆಕ್ ಅವರಿಂದ ರಾಬರ್ಟ್ ಇಗರ್ ನೂತನ ಸಿಇಒ ಆಗಿ ಅಧಿಕಾರ ವಹಿಸಿಕೊಂಡಿದ್ದರು. ನಂತರ ಕಂಪನಿಯ ಆರ್ಥಿಕ ವೆಚ್ಚ ಕಡಿತಗೊಳಿಸಲು ನಿರ್ಧರಿಸಿದ್ದು, ಅದಕ್ಕಾಗಿ ಉದ್ಯೋಗಿಗಳನ್ನ ಕಡಿತಗೊಳಿಸಲು ಮುಂದಾಗಿದ್ದಾರೆ.
ಅಮೆರಿಕದ ಟೆಕ್ ಸಂಸ್ಥೆಗಳು ಕೊರೊನಾ ಬಳಿಕ ನಷ್ಟದ ನೆಪವೊಡ್ಡಿ ಸಿಬ್ಬಂದಿ ವಜಾಗೊಳಿಸುವ ಕ್ರಮ ಅನುಸರಿಸುತ್ತಿವೆ. ದಿ ವಾಲ್ಟ್ ಡಿಸ್ನಿಯ ನೂತನ ಸಿಇಒ ರಾಬರ್ಟ್ ಇಗರ್ ಕೂಡ ಇದೇ ನಿರ್ಧಾರ ಕೈಗೊಂಡಿದ್ದಾರೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ರಾಬರ್ಟ್ ‘ನಾನು ಈ ನಿರ್ಧಾರವನ್ನು ಲಘುವಾಗಿ ತೆಗೆದುಕೊಳ್ಳುವುದಿಲ್ಲ. ವಿಶ್ವಾದ್ಯಂತ ನಮ್ಮ ಉದ್ಯೋಗಿಗಳ ಪ್ರತಿಭೆ ಮತ್ತು ಸಮರ್ಪಣೆಗಾಗಿ ನನಗೆ ಅಪಾರ ಗೌರವ ಮತ್ತು ಮೆಚ್ಚುಗೆ ಇದೆ’ ಎಂದಿದ್ದಾರೆ.