DK ಕೂಗು.. ಕಣ್ಣಂಚಲ್ಲಿ ನೀರು – IPLಗೆ ದಿನೇಶ್ ಕಾರ್ತಿಕ್ ವಿದಾಯ
ಕೊಹ್ಲಿಯನ್ನ ತಬ್ಬಿ ಡಿಕೆ ಹೇಳಿದ್ದೇನು?
ರಾಜಸ್ತಾನ ವಿರುದ್ಧದ ಎಲಿಮಿನೇಟರ್ ಪಂದ್ಯದಲ್ಲಿ ಸೋಲುವ ಮೂಲಕ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಟೂರ್ನಿಯಿಂದ ಹೊರಬಿದ್ದಿದೆ. ಸತತ 6 ಪಂದ್ಯಗಳನ್ನ ಗೆದ್ದ ತಂಡ ಪ್ಲೇ ಆಫ್ನ ಮೊದಲ ಪಂದ್ಯದಲ್ಲೇ ಮುಗ್ಗರಿಸಿದೆ. ಅಭಿಮಾನಿಗಳಿಗೆ ಆರ್‌ಸಿಬಿ ಸೋಲಿನ ನೋವು ಒಂದ್ಕಡೆಯಾದ್ರೆ ಮತ್ತೊಂದೆಡೆ ಡಿಕೆ ಬಾಸ್ ಐಪಿಎಲ್ಗೆ ವಿದಾಯ ಹೇಳಿದ್ದಾರೆ. ಬೆಂಗಳೂರು ತಂಡ ಡೇಂಜರ್ ಝೋನ್ನಲ್ಲಿದ್ದಾಗಲೆಲ್ಲಾ ಆಪತ್ ಬಾಂಧವನಾಗುತ್ತಿದ್ದ ದಿನೇಶ್ ಕಾರ್ತಿಕ್ ಮುಂದಿನ ಸೀಸನ್ದಿಂದ ಮೈದಾನಕ್ಕೆ ಇಳಿಯೋದಿಲ್ಲ. ಅಷ್ಟಕ್ಕೂ ದಿನೇಶ್ ಕಾರ್ತಿಕ್ ನಿವೃತ್ತಿಗೆ ಬೆಂಗಳೂರು ಆಟಗಾರರು ಕೊಟ್ಟ ಉಡುಗೊರೆ ಏನು? ಡಿಕೆ ಐಪಿಎಲ್ ಜರ್ನಿ ಹೇಗಿತ್ತು ಅನ್ನೋ ಮಾಹಿತಿ ಇಲ್ಲಿದೆ.
ಇದನ್ನೂ ಓದಿ: ಸೇಡು ತೀರಿಸಿಕೊಳ್ಳುತ್ತಾ RR? – SRHಗೆ ಚೆನ್ನೈ ಬೆಂಬಲ ಸಿಗುತ್ತಾ?
ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಮ್ಯಾಚ್ ಫಿನಿಶರ್ ದಿನೇಶ್ ಕಾರ್ತಿಕ್ ಅವರು ಐಪಿಎಲ್ 2024ರ ಆರಂಭಕ್ಕೂ ಮುನ್ನವೇ ಇಂದು ನನ್ನ ವೃತ್ತಿಜೀವನದ ಕೊನೆಯ ಸೀಸನ್ ಎಂದು ಘೋಷಿಸಿದ್ದರು. ಹೀಗಾಗಿ ಈ ಸೀಸನ್ ಆರಂಭವಾದಾಗಿನಿಂದಲೂ ಆರ್‌ಸಿಬಿ ಫ್ಯಾನ್ಸ್ಗೆ ಡಿಕೆ ಮೇಲೆ ಅದೇನೋ ವಿಶೇಷ ಗೌರವವಿತ್ತು. ಜೊತೆಗೆ ದಿನೇಶ್ ಕಾರ್ತಿಕ್ ಆಟದ ವೈಖರಿ ನೋಡಿ ಅವ್ರಿಗೋಸ್ಕರವಾದರೂ ಆರ್‌ಸಿಬಿ ಫೈನಲ್ ತಲುಪಿ ಕಪ್ ಗೆದ್ದು ಅವರಿಗೆ ಸಾರ್ಥಕ ವಿದಾಯವನ್ನು ಹೇಳಬೇಕು ಎಂದು ಬಯಸಿದ್ದರು. ಆದರೆ ಅದು ಈ ಬಾರಿಯೂ ಕನಸಾಗಿಯೇ ಉಳಿಯಿತು. ರಾಜಸ್ಥಾನ ವಿರುದ್ಧದ ಸೋಲಿನ ನಂತರ ಆರ್‌ಸಿಬಿ ತಂಡ ಕ್ರೀಡಾಂಗಣದಿಂದ ಮರಳುತ್ತಿದ್ದಾಗ ದಿನೇಶ್ ಕಾರ್ತಿಕ್ ಅವರು ಮುಂಚೂಣಿಯಲ್ಲಿದ್ದರು. ಅವರು ತಮ್ಮ ವಿಕೆಟ್ ಕೀಪಿಂಗ್ ಗ್ಲೌಸ್‌ಗಳನ್ನು ಮೇಲಕ್ಕೆತ್ತಿ ಪ್ರೇಕ್ಷಕರತ್ತ ತೋರಿಸಿ ಡ್ರೆಸ್ಸಿಂಗ್ ರೂಂನತ್ತ ತೆರಳಿದಾಗ ಅವರ ಬಾಡಿ ಲಾಂಗ್ವೇಜ್ ಮತ್ತು ಬಿಹೇವಿಯರ್ ಇದು ಅವರ ವೃತ್ತಿಜೀವನದ ಕೊನೆಯ ಪಂದ್ಯ ಎಂದು ಸ್ಪಷ್ಟವಾಗಿ ಸೂಚಿಸುತ್ತಿತ್ತು. ಮೊದ್ಲೇ ಸೋಲಿನ ನೋವಲ್ಲಿದ್ದ ಡಿಕೆ ತಮ್ಮ ವಿಕೆಟ್ ಕೀಪಿಂಗ್ ಗ್ಲೌಸ್‌ಗಳನ್ನು ಮೇಲಕ್ಕೆತ್ತಿ ಪ್ರೇಕ್ಷಕರತ್ತ ತೋರಿಸಿದಾಗ ಆರ್‌ಸಿಬಿ ಅಭಿಮಾನಿಗಳ ಕಣ್ಣಂಚಲ್ಲಿ ನೀರು ಜಾರಿತ್ತು. ಅಯ್ಯೋ ನಿಮಗೋಸ್ಕರವಾದರೂ ಪಂದ್ಯ ಗೆಲ್ಲಬೇಕಿತ್ತು ಎಂದು ಆರ್‌ಸಿಬಿ ಫ್ಯಾನ್ಸ್ ಮನದಾಳ ಹೇಳುವಂತಿತ್ತು. ಡಿಕೆ ತೆರಳುತ್ತಿದ್ದಾಗ ಇಡೀ ಮೈದಾನವೇ ಸೈಲೆಂಟ್ ಆಗಿ ಎದ್ದು ನಿಂತು ಅವರಿಗೆ ವಿದಾಯ ಹೇಳಿತು.
ಈ ವೇಳೆ ದಿನೇಶ್ ಕಾರ್ತಿಕ್ ಅವರನ್ನು ತಬ್ಬಿಕೊಂಡ ವಿರಾಟ್ ಕೊಹ್ಲಿ ಸಂತೈಸಿದರು. ನಿಜಕ್ಕೂ ಈ ಕ್ಷಣವಂತೂ ವಿಶೇಷವಾಗಿ ಆರ್‌ಸಿಬಿ ಬೆಂಗಳೂರು ಅಭಿಮಾನಿಗಳ ಮನ ಕದಡುವಂತಿತ್ತು.
ಐಪಿಎಲ್ ಗೆ ಡಿಕೆ ಗುಡ್ ಬೈ!
2008ರಿಂದ 11ರವರೆಗೆ ಡೆಲ್ಲಿ ಡೆಲ್ಲಿ ಡೇರ್ ಡೆವಿಲ್ಸ್ ಅಂದ್ರೆ ಈಗಿನ ಡೆಲ್ಲಿ ಕ್ಯಾಪಿಟಲ್ಸ್ ತಂಡದಲ್ಲಿ ಆಡಿದ್ದರು. 2011ರಲ್ಲಿ ಕಿಂಗ್ಸ್ ಇಲೆವೆನ್ ಪಂಜಾಬ್ ಅಂದ್ರೆ ಈಗಿನ ಪಂಜಾಬ್ ಕಿಂಗ್ಸ್ ಪರ ಮೈದಾನಕ್ಕೆ ಇಳಿದಿದ್ದರು. 2012ರಲ್ಲಿ ಮುಂಬೈ ಇಂಡಿಯನ್ಸ್, 2014ರಲ್ಲಿ ಮತ್ತೆ ಡೆಲ್ಲಿ ತಂಡ ಸೇರಿದ್ರು. ಇನ್ನು 2015ರಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಪರ ಆಡಿದ್ದ ಡಿಕೆ 2016, 17ರಲ್ಲಿ ಗುಜರಾತ್ ಲಯನ್ಸ್ ಸೇರಿಕೊಂಡಿದ್ರು. 2018 ರಿಂದ 2021ರವೆರೆಗೆ ಕೆಕೆಆರ್ ನಲ್ಲಿದ್ದ ದಿನೇಶ್ ಕಾರ್ತಿಕ್ 2022ರಿಂದ2024ರವರೆಗೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಪರ ಕಣಕ್ಕಿಳಿದಿದ್ದರು. ದಿನೇಶ್ ಕಾರ್ತಿಕ್ ಈವರೆಗೆ ಐಪಿಎಲ್‌ನಲ್ಲಿ ಒಟ್ಟು 257 ಪಂದ್ಯಗಳನ್ನು ಆಡಿದ್ದಾರೆ. ಈ ಸಮಯದಲ್ಲಿ ಅವರು 26.32ರ ಸರಾಸರಿಯಲ್ಲಿ 135.36 ಸ್ಟ್ರೈಕ್ ರೇಟ್‌ನಲ್ಲಿ 4842 ರನ್ ಗಳಿಸಿದ್ದಾರೆ. ಇದರಲ್ಲಿ 22 ಅರ್ಧ ಶತಕಗಳು ಸೇರಿವೆ. ದಿನೇಶ್ ಕಾರ್ತಿಕ್ ಅವರ ಅತ್ಯುತ್ತಮ ಪ್ರದರ್ಶನವೆಂದರೆ ಔಟಾಗದೆ 97 ರನ್ ಗಳಿಸಿರುವುದು. ಇನ್ನೊಂದು ವಿಶೇಷವೆಂದರೆ ಭಾರತೀಯ ತಂಡಕ್ಕಾಗಿ ಮೊದಲ ಟಿ20 ಪಂದ್ಯವನ್ನು ಆಡಿದ ಕೆಲವೇ ಕೆಲವು ಭಾರತೀಯ ಆಟಗಾರರಲ್ಲಿ ದಿನೇಶ್ ಕಾರ್ತಿಕ್ ಕೂಡ ಒಬ್ಬರು. ಈವರೆಗೆ ಅವರು ಒಟ್ಟು 17 ಐಪಿಎಲ್ ಸೀಸನ್‌ಗಳಲ್ಲಿ ಒಟ್ಟು 6 ತಂಡಗಳಲ್ಲಿ ಆಡಿದ್ದಾರೆ. ಆದರೆ ಅವರು ಆರ್‌ಸಿಬಿ ತನ್ನ ಫೇವರಿಟ್ ತಂಡ, ಆರ್‌ಸಿಬಿ ಫ್ಯಾನ್ಸ್ ನಿಜಕ್ಕೂ ಅತ್ಯಮೋಘ ಎಂದು ಇತ್ತೀಚೆಗೆ ಹೇಳಿದ್ದರು. ದಿನೇಶ್ ಕಾರ್ತಿಕ್ ಅವರು ಈವರೆಗೆ ಐಪಿಎಲ್‌ನಲ್ಲಿ ಒಟ್ಟು 145 ಕ್ಯಾಚ್ ಮತ್ತು 37 ಸ್ಟಂಪಿಂಗ್ ಮಾಡಿದ್ದಾರೆ. ಇದಲ್ಲದೆ ಧೋನಿ ಬಳಿಕ ಅತೀ ಹೆಚ್ಚು ಪಂದ್ಯವಾಡಿದ ವಿಕೆಟ್ ಕೀಪರ್ ಎಂಬ ದಾಖಲೆ ಕೂಡ ದಿನೇಶ್ ಕಾರ್ತಿಕ್ ಹೆಸರಿನಲ್ಲಿದೆ. ಈ ಎಲ್ಲಾ ದಾಖಲೆಗಳೊಂದಿಗೆ ಇದೀಗ ಡಿಕೆ ಐಪಿಎಲ್ಗೆ ವಿದಾಯ ಹೇಳಿದ್ದಾರೆ. ದೆಹಲಿ ತಂಡದೊಂದಿಗೆ ಆರಂಭಗೊಂಡ ದಿನೇಶ್ ಕಾರ್ತಿಕ್ ಅವರ ಐಪಿಎಲ್ ವೃತ್ತಿಜೀವನ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದೊಂದಿಗೆ ಕೊನೆಗೊಂಡಿದೆ. ಇದು ಆರ್‌ಸಿಬಿ ಫ್ಯಾನ್ಸ್‌ಗಳಿಗೆ ನಿಜಕ್ಕೂ ಭಾವುಕ ಕ್ಷಣ.
ಈ ಸೀಸನ್ನ ಐಪಿಎಲ್ನಲ್ಲೂ ದಿನೇಶ್ ಕಾರ್ತಿಕ್ ಬೊಂಬಾಟ್ ಆಟವಾಡಿದ್ರು. ಬ್ಯಾಟ್ ಹಿಡಿದು ಘರ್ಜಿಸಿದ್ದ ಡಿಕೆ ಬಾಸ್, ಬೌಲರ್ಗಳ ಮೇಲೆ ಸವಾರಿ ಮಾಡಿದ್ರು. ಬೌಂಡರಿ, ಸಿಕ್ಸರ್ಗಳನ್ನ ಚಚ್ಚಿ ಫ್ಯಾನ್ಸ್ಗೆ ಭರ್ಜರಿ ಎಂಟರ್ಟೈನ್ಮೆಂಟ್ ನೀಡಿದ್ರು. ಒತ್ತಡದ ನಡುವೆ ಡಿಕೆಯ ಸಾಲಿಡ್ ಆಟವನ್ನ ಕ್ರಿಕೆಟ್ ಲೋಕವೇ ಕೊಂಡಾಡಿತ್ತು. ಎಸ್ಆರ್ಹೆಚ್ ವಿರುದ್ಧ ಹೈಯೆಸ್ಟ್ ರನ್ ಚೇಸ್ ಮಾಡೋ ವೇಳೆ ಡಿಕೆ ಮಾಡಿದ ಬ್ಯಾಟಿಂಗ್ ಅಂತೂ ಅತ್ಯದ್ಭುತವಾಗಿತ್ತು. ರಾಜಸ್ತಾನ ವಿರುದ್ಧದ ಪಂದ್ಯದ ಬಳಿಕ ಭಾವುಕರಾಗುವ ಮೂಲಕ ತಮ್ಮ ವಿದಾಯದ ಸುಳಿವು ನೀಡಿದ್ದಾರೆ. ಆದ್ರೆ ಅಧಿಕೃತವಾಗಿ ಘೋಷಣೆ ಮಾಡುವುದೊಂದೇ ಬಾಕಿ ಇದೆ. ಐಪಿಎಲ್ ನಿವೃತ್ತಿ ಬಳಿಕ ಡಿಕೆ ಮತ್ತೆ ಕಾಮೆಂಟ್ರಿಗೆ ಸೇರಿಕೊಳ್ಳೋ ಸಾಧ್ಯತೆ ಇದೆ. ಈ ಹಿಂದೆಯೇ ದಿನೇಶ್ ಕಾರ್ತಿಕ್ ಕಾಮೆಂಟೇಟರ್ ಆಗಿ ಹೊಸ ಇನಿಂಗ್ಸ್ ಆರಂಭಿಸಿದ್ದರು. ಇದೀಗ ಸಂಪೂರ್ಣವಾಗಿ ಕ್ರಿಕೆಟ್ನಿಂದ ಹೊರಗುಳಿದಿರುವ ಕಾರಣ ಅವರು ಮುಂಬರುವ ದಿನಗಳಲ್ಲಿ ಸ್ಟಾರ್ ಸ್ಪೋರ್ಟ್ಸ್ ಜೊತೆ ಕೈ ಜೋಡಿಸುವ ಸಾಧ್ಯತೆಯಿದೆ. ಏಕೆಂದರೆ ಜೂನ್ 2 ರಿಂದ ಟಿ20 ವಿಶ್ವಕಪ್ ಶುರುವಾಗಲಿದ್ದು, ಈ ವೇಳೆ ಅವರು ಕಾಮೆಂಟರಿ ಪ್ಯಾನೆಲ್ನಲ್ಲಿ ಕಾಣಿಸಿಕೊಳ್ಳಬಹುದು. ಒಟ್ನಲ್ಲಿ ಆರ್‌ಸಿಬಿ ಪಡೆಯ ಅಪ್ರತಿಮ ಹೋರಾಟಗಾರ, ಅಭಿಮಾನಿಗಳ ನೆಚ್ಚಿನ ಡಿಕೆ ಬಾಸ್ ಕರಿಯರ್ ಕೂಡ ಅಂತ್ಯ ಕಂಡಿದೆ. ಎಬಿಡಿ ಅಲಭ್ಯತೆಯ ಕೊರತೆ ಕಾಡದಂತೆ ತಮ್ಮ ರೋಲ್ನ ಸ್ಪಷ್ಟವಾಗಿ ನಿಭಾಯಿಸಿದ ಡಿಕೆ ಇದೀಗ ಮೈದಾನದಿಂದ ಹೊರ ನಡೆದಿದ್ದಾರೆ. ಆರ್‌ಸಿಬಿ ಕಪ್ ಗೆಲ್ಲದಿದ್ರೂ ದಿನೇಶ್ ಕಾರ್ತಿಕ್ ಅಭಿಮಾನಿಗಳ ಹೃದಯ ಗೆದ್ದಿದ್ದಾರೆ. ಪ್ರತೀ ಪಂದ್ಯದಲ್ಲೂ ತನ್ನ ಆಟದ ಮೂಲಕ ಆರ್‌ಸಿಬಿ ಫ್ಯಾನ್ಸ್‌ಗಳಲ್ಲಿ ಒಂದು ಭರವಸೆಯ ಕಿಚ್ಚನ್ನು ಹಚ್ಚಿದ್ದರು. ಮುಂದಿನ ಸೀಸನ್ನಲ್ಲಿ ಡಿಕೆಯ ಆಬ್ಸೆನ್ಸ್ ಆರ್ಸಿಬಿಯನ್ನ ಕಾಡೋದಂತೂ ನಿಜ.