ಶೆಟ್ಟರ್ ಭೇಟಿಯಾಗಿ ಪರಮೇಶ್ವರ್, ದಿನೇಶ್ ಧನ್ಯವಾದ ಸಲ್ಲಿಕೆ – ಪಕ್ಷ & ಸರ್ಕಾರದ ಮಟ್ಟದಲ್ಲಿ ಉನ್ನತ ಸ್ಥಾನದ ಭರವಸೆ!

ಶೆಟ್ಟರ್ ಭೇಟಿಯಾಗಿ ಪರಮೇಶ್ವರ್, ದಿನೇಶ್ ಧನ್ಯವಾದ ಸಲ್ಲಿಕೆ – ಪಕ್ಷ & ಸರ್ಕಾರದ ಮಟ್ಟದಲ್ಲಿ ಉನ್ನತ ಸ್ಥಾನದ ಭರವಸೆ!

ವಿಧಾನಸಭಾ ಚುನಾವಣೆ ಹೊತ್ತಲ್ಲಿ ಟಿಕೆಟ್ ಸಿಗದೆ ಸಾಕಷ್ಟು ನಾಯಕರು ಪಕ್ಷಾಂತರ ಮಾಡಿದ್ರು. ಅದರಲ್ಲಿ ಮಾಜಿ ಸಿಎಂ ಹಾಗೂ ಹಿರಿಯ ರಾಜಕಾರಣಿ ಜಗದೀಶ್ ಶೆಟ್ಟರ್ ಕೂಡ ಒಬ್ಬರು. ಹುಬ್ಬಳ್ಳಿ ಧಾರವಾಡ ಕೇಂದ್ರ ಕ್ಷೇತ್ರದಲ್ಲಿ ಸತತ 6 ಬಾರಿ ಗೆದ್ದು ಈ ಬಾರಿ ಬಿಜೆಪಿ ಟಿಕೆಟ್ ಸಿಗದೆ ಕಾಂಗ್ರೆಸ್ ಪಕ್ಷ ಸೇರಿದ್ರು. ಕಾಂಗ್ರೆಸ್ ಅಭ್ಯರ್ಥಿಯಾಗಿ ಕಣಕ್ಕಿಳಿದರೂ ಕೂಡ ಚುನಾವಣೆಯಲ್ಲಿ ಸೋಲನುಭವಿಸಬೇಕಾಯ್ತು. ಆದರೆ ಶೆಟ್ಟರ್ ಸೇರ್ಪಡೆಯಿಂದ ಪಕ್ಷಕ್ಕೆ ಲಾಭವಾಗಿದೆ ಎಂದು ಕಾಂಗ್ರೆಸ್ ನಾಯಕರು ಅಭಿನಂದನೆ ಸಲ್ಲಿಸಿದ್ದಾರೆ.

ಇದನ್ನೂ ಓದಿ : ಸೋಲಿನ ಆಘಾತದಿಂದ ಹೊರ ಬಾರದ ರೇಣುಕಾಚಾರ್ಯ – ತಾವು ಆರಂಭಿಸಿದ್ದ ಕಾಮಗಾರಿ ಸ್ಥಳಗಳಲ್ಲಿ ಸುತ್ತಾಟ!

ಮಾಜಿ ಮುಖ್ಯಮಂತ್ರಿ ಜಗದೀಶ್​ ಶೆಟ್ಟರ್​​ (Jagadish Shettar) ಅವರ ಸದಾಶಿವನಗರ ನಿವಾಸಕ್ಕೆ ಮಂಗಳವಾರ ಹೈಕಮಾಂಡ್​​​ ಸೂಚನೆ ಮೇರೆಗೆ ಮಾಜಿ ಉಪಮುಖ್ಯಮಂತ್ರಿ ಡಾ.ಜಿ ಪರಮೇಶ್ವರ್ (G Parmeshwara), ಕಾಂಗ್ರೆಸ್​ ನಾಯಕ ದಿನೇಶ್ ಗುಂಡೂರಾವ್ (Dinesh Gundurao) ಭೇಟಿ ನೀಡಿ ಧನ್ಯವಾದ ಸಮರ್ಪಿಸಿದ್ದಾರೆ. ಈ ವೇಳೆ ಮಾತನಾಡಿದ ಜಗದೀಶ್ ಶೆಟ್ಟರ್, ಬಿಜೆಪಿ ಲಿಂಗಾಯತರನ್ನು (Lingayat) ಅವಮಾನಿಸಿದ್ದಕ್ಕೆ ಅಧಿಕಾರ ಕಳೆದುಕೊಂಡಿದೆ. ಬಿಎಸ್​ ಯಡಿಯೂರಪ್ಪ ಅವರನ್ನು ಯಾಕೆ ಮುಖ್ಯಮಂತ್ರಿ ಸ್ಥಾನದಿಂದ ಇಳಿಸಿದರು ಅಂತಾ ಹೇಳಬೇಕಲ್ವಾ? ಬಿಎಸ್​ ಯಡಿಯೂರಪ್ಪ ಕಣ್ಣೀರು ಹಾಕಿದರು. ನನಗೆ ಟಿಕೆಟ್ ಕೊಡದೆ ಅವಮಾನಿಸಿದ್ದರು. ಇದೆಲ್ಲವೂ ಬಿಜೆಪಿ ಹೀನಾಯವಾಗಿ ಸೋಲಲು ಕಾರಣವಾಯಿತು ಎಂದು ಬಿಜೆಪಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಬಿ.ಎಲ್​ ಸಂತೋಷ್ ಪಕ್ಷವನ್ನು ತಮ್ಮ ಹತೋಟಿಗೆ ತೆಗೆದುಕೊಳ್ಳಲು ಪ್ರಯತ್ನ ಮಾಡುತ್ತಿದ್ದಾರೆ. ಅಲ್ಲದೇ ನನ್ನನ್ನು ಟಾರ್ಗೆಟ್ ಮಾಡಿ ಸೋಲಿಸಿದರು. ಬಿಜೆಪಿಯ ಇವತ್ತಿನ ಪರಿಸ್ಥಿತಿಗೆ ಕೆಲವರ ದುರಹಂಕಾರವೇ ಕಾರಣ. ಅನೇಕರಿಗೆ ದುರಹಂಕಾರ ಬಂದಿದೆ, ಹೀಗಾಗಿ ಪಕ್ಷಕ್ಕೆ ಈ ಗತಿ ಬಂದಿದೆ ಎಂದು ಬಿ.ಎಲ್​ ಸಂತೋಷ್​ ವಿರುದ್ಧ ವಾಗ್ದಾಳಿ ಮಾಡಿದರು. ಲಿಂಗಾಯತರು ಕಾಂಗ್ರೆಸ್ ಕಡೆ ಬಂದಿದ್ದಾರೆ. ಇನ್ಮುಂದೆಯೂ ಕಾಂಗ್ರೆಸ್​ ಪಕ್ಷಕ್ಕೆ ಬೆಂಬಲ ಮುಂದುವರಿಯುತ್ತೆ. ಪ್ರಧಾನಿ ನರೇಂದ್ರ ಮೋದಿ ಅವರ ವಿರುದ್ಧ ಪರ್ಯಾಯ ಶಕ್ತಿ ರಚನೆ ಆಗುತ್ತಿದೆ. ಅದರ ಮುಂದಾಳತ್ವ ಕಾಂಗ್ರೆಸ್ ಪಕ್ಷ ತೆಗೆದುಕೊಳ್ಳುತ್ತಿದೆ ಎಂದು ತಿಳಿಸಿದರು.

ಇನ್ನು ದಿನೇಶ್​ ಗುಂಡೂರಾವ್​ ಮತ್ತು ಡಾ. ಜಿ ಪರಮೇಶ್ವರ್ ಭೇಟಿ ವೇಳೆ ಮಹತ್ವದ ಮಾತುಕತೆ ನಡೆದಿದೆ ಎನ್ನಲಾಗುತ್ತಿದೆ. ಕಾಂಗ್ರೆಸ್​ಗೆ ಬಂದ ಮೇಲೆ ಸಕ್ರಿಯರಾಗಿ ಕೆಲಸ ಮಾಡಿದ್ದೀರಿ. 136 ಸ್ಥಾನ ಬರುವಲ್ಲಿ ನಿಮ್ಮ ಪಾತ್ರವೂ ಇದೆ. ಮುಂದಿನ ಲೋಕಸಭಾ ಎಲೆಕ್ಷನ್ ಹಿನ್ನೆಲೆ ಸಹಕಾರ ಮುಂದುವರೆಯಲಿ. ನಿಮಗೆ ಪಕ್ಷ ಹಾಗೂ ಸರ್ಕಾರದ ಮಟ್ಟದಲ್ಲಿ ಉನ್ನತ ಸ್ಥಾನ ನೀಡುವ ಇಚ್ಛೆ ಹೈಕಮಾಂಡ್​​ಗೆ ಇದೆ. ಇನ್ಮುಂದೆ ಕಾಂಗ್ರೆಸ್ ಗುರಿ ಲೋಕಸಭಾ ಚುನಾವಣೆ. ಎಲ್ಲರೂ ಒಟ್ಟಾಗಿ ಕೆಲಸ ಮಾಡೋಣ ಎಂದು ಇಬ್ಬರು ನಾಯಕರು ಶೆಟ್ಟರ್​ಗೆ ಭರವಸೆ ನೀಡಿದ್ದಾರೆ ಎಂದು ಹೇಳಲಾಗುತ್ತಿದೆ.

suddiyaana