ನಟ, ನಿರ್ಮಾಪಕ ದಿಲೀಪ್ ರಾಜ್ ಇನ್ನಿಲ್ಲ – ಕನ್ನಡ ಕಿರುತೆರೆಗೆ ದೊಡ್ಡ ಆಘಾತ

ನಟ, ನಿರ್ಮಾಪಕ ದಿಲೀಪ್ ರಾಜ್ ಇನ್ನಿಲ್ಲ – ಕನ್ನಡ ಕಿರುತೆರೆಗೆ ದೊಡ್ಡ ಆಘಾತ

ನಟ ನಿರ್ಮಾಪಕ ದಿಲೀಪ್ ರಾಜ್ ನಿಧನರಾಗಿದ್ದಾರೆ. ಕನ್ನಡ ಚಿತ್ರರಂಗಕ್ಕೆ, ಅದರಲ್ಲೂ ಕನ್ನಡ ಕಿರುತೆರೆಗೆ ದಿಲೀಪ್ ರಾಜ್ ಅಗಲಿಕೆಯಿಂದ ದೊಡ್ಡ ಆಘಾತವಾಗಿದೆ. ಬುಧವಾರ ಬೆಳಗಿನ ಜಾವ ದಿಲೀಪ್ ರಾಜ್ ಅವರಿಗೆ ಹೃದಯಾಘಾತ ಸಂಭವಿಸಿದ್ದು, ತಕ್ಷಣ ಆಸ್ಪತ್ರೆಗೆ ದಾಖಲಿಸಿದರೂ, ಚಿಕಿತ್ಸೆ ಫಲಿಸದೇ ದಿಲೀಪ್ ರಾಜ್ ವಿಧಿವಶರಾಗಿದ್ದಾರೆ.

ಕನ್ನಡ ಚಿತ್ರರಂಗದ ಬಹುಮುಖ ಪ್ರತಿಭೆಯ ನಟ, ನಿರ್ಮಾಪಕ ದಿಲೀಪ್ ರಾಜ್ ನಿಧನರಾಗಿದ್ದಾರೆ. ಕುಮಾರಸ್ವಾಮಿ ಲೇಔಟ್​ನ ಅಪೋಲೊ ಆಸ್ಪತ್ರೆಯಲ್ಲಿ ನಟ, ನಿರ್ಮಾಪಕ ದಿಲೀಪ್ ರಾಜ್​ ಅವರು ಹೃದಯಾಘಾತದಿಂದ ಕೊನೆಯುಸಿರೆಳೆದಿದ್ದಾರೆ. ದಿಲೀಪ್ ರಾಜ್​ ಸಾವಿನ ಸುದ್ದಿ, ಕಿರುತೆರೆ ಹಾಗೂ ಚಿತ್ರರಂಗಕ್ಕೆ ದೊಡ್ಡ ಆಘಾತ ನೀಡಿದೆ. ದಿಲೀಪ್ ರಾಜ್ ಅಭಿನಯದ ಹಿಟ್ಲರ್ ಕಲ್ಯಾಣ ದೊಡ್ಡಮಟ್ಟದಲ್ಲಿ ಖ್ಯಾತಿ ಪಡೆದಿತ್ತು.

ದಿಲೀಪ್ ರಾಜ್ 1978ರ ಸೆಪ್ಟಂಬರ್ 2ರಂದು ಬೆಂಗಳೂರಿನಲ್ಲಿ ಜನಿಸಿದರು. ಕಾಲೇಜು ದಿನಗಳಲ್ಲಿಯೇ ನೃತ್ಯ ನಿರ್ದೇಶನದಲ್ಲಿ ಆಸಕ್ತಿ ಹೊಂದಿದ್ದ ದಿಲೀಪ್ ರಾಜ್​ ಅವರು ನಾಟಕ ತಂಡ ಸೇರಿಕೊಂಡರು. ಬಳಿಕ ಸಿನಿಮಾಗಳತ್ತ ಮುಖ ಮಾಡಿದ್ರು. ಕಿರುತೆರೆ ಮೂಲಕ ಬಣ್ಣದ ಲೋಕಕ್ಕೆ ಎಂಟ್ರಿ ಮೊದಲು ಕಿರುತೆರೆಗೆ ಕಾಲಿಟ್ಟ ದಿಲೀಪ್ ರಾಜ್​  ‘ಕಂಬದ ಮನೆ’ ಧಾರಾವಾಹಿ ನಟಿಸಿದ್ರು, ನಂತರ ಜನನಿ, ಅರ್ಧ ಸತ್ಯ, ರಂಗೋಲಿ, ಕುಂಕುಮ ಭಾಗ್ಯ, ಮಾಂಗಲ್ಯ, ಪ್ರೀತಿಗಾಗಿ ಮುಂತಾದ ಸೀರಿಯಲ್‌ಗಳಲ್ಲಿ ಅಭಿನಯಿಸಿದ್ದಾರೆ. ಹಲವು ಸಿನಿಮಾಗಳಲ್ಲಿ ಮಿಂಚಿದ ದಿಲೀಪ್​ ನಟ ದಿಲೀಪ್ ರಾಜ್‌ 2005ರಲ್ಲಿ ತೆರೆಕಂಡ ‘ಭಾಯ್ ಫ್ರೆಂಡ್’ ಚಿತ್ರದ ಮೂಲಕ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದಾರೆ. ಬಳಿಕ 2007ರಲ್ಲಿ ‘ಮಿಲನ’ ಚಿತ್ರದ ಖಳನಾಯಕನ ಪಾತ್ರದಲ್ಲಿ ಮಿಂಚಿದ್ರು. ನಂತರ 7 ಓ ಕ್ಲಾಕ್, ಕ್ಷಣ ಕ್ಷಣ ಚಿತ್ರ ಹಾಗೂ ಇತ್ತೀಚಿಗೆ ಲವ್ ಮಾಕ್ಟೇಲ್ 3 ಸಿನಿಮಾದಲ್ಲಿ ನಟಿಸಿದ್ದರು.

‘ರಥಸಪ್ತಮಿ’ ಧಾರಾವಾಹಿಯ ಮೂಲಕ ಮತ್ತೆ ಕಿರುತೆರೆಗೆ ಮರಳಿದ ದಿಲೀಪ್, ಕೆಲ ಕಿರುತೆರೆ ರಿಯಾಲಿಟಿ ಶೋಗಳ ನಿರೂಪಕರಾಗಿಯೂ ಕೆಲಸ ಮಾಡಿದ್ರು. ದಿಲೀಪ್ ರಾಜ್  ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಹಿಟ್ಲರ್ ಕಲ್ಯಾಣ ಧಾರಾವಾಹಿಯಲ್ಲಿ ನಟಿಸಿ, ಆ ಧಾರಾವಾಹಿಯನ್ನ ಅವರೇ ನಿರ್ಮಾಣ ಮಾಡಿದ್ರು. ಹಿಟ್ಲರ್ ಕಲ್ಯಾಣ ಸೀರಿಯಲ್ ಮೂಲಕ ಕಿರುತೆರೆಗೆ ಕಂಬ್ಯಾಕ್ ಮಾಡಿದ್ದರು. ಆ ಪಾತ್ರಕ್ಕೆ ವೀಕ್ಷಕರಿಂದ ಉತ್ತಮ ಪ್ರತಿಕ್ರಿಯೆ ಸಿಕ್ಕಿತ್ತು. ಸದ್ಯ ಜೀ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಜನಪ್ರಿಯ ಧಾರಾವಾಹಿ “ಕೃಷ್ಣ ರುಕ್ಕು” ನಿರ್ಮಾಪಕರು ಕೂಡ ಇವರೇ. ಇಂಥಾ ಪ್ರತಿಭಾವಂತ ನಟ, ನಿರ್ಮಾಪಕ ದಿಲೀಪ್ ರಾಜ್ ಅಸ್ತಂಗತರಾಗಿದ್ದು, ನಿಜಕ್ಕೂ ಕನ್ನಡ ಕಿರುತೆರೆಗೆ ಆಘಾತವಾಗಿದೆ.

Sulekha

Leave a Reply

Your email address will not be published. Required fields are marked *