ಒಂದು ಕೈ ಇಲ್ಲದಿದ್ದರೂ ದೇಶಕ್ಕೆ ಕೀರ್ತಿ ತಂದ ದಿಲೀಪ್ – ಬಂಗಾರದ ಹುಡುಗನ ಹಿಂದಿದೆ ಮನಕಲಕುವ ಕಥೆ

ಒಂದು ಕೈ ಇಲ್ಲದಿದ್ದರೂ ದೇಶಕ್ಕೆ ಕೀರ್ತಿ ತಂದ ದಿಲೀಪ್ – ಬಂಗಾರದ ಹುಡುಗನ ಹಿಂದಿದೆ ಮನಕಲಕುವ ಕಥೆ

ದೇಹದಲ್ಲಿ ಎಲ್ಲಾ ಸರಿಯಿದ್ದರೂ ಸಾಧನೆ ಮಾಡುವ ಮನಸು ಇರಬೇಕು. ಇಲ್ಲ ಎಂಬ ಕೊರಗಿನಲ್ಲೇ ದಿನ ಕಳೆಯುವವರು ಅದೆಷ್ಟೋ ಮಂದಿ. ಆದರೆ, ಈ ಬಾರಿಯ ಕಾಮನ್‌ವೆಲ್ತ್ ಕ್ರೀಡಾಕೂಟದಲ್ಲಿ ನಮ್ಮ ಭಾರತದ ಹೆಮ್ಮೆಯ ಪ್ಯಾರಾ ಅಥ್ಲೀಟ್‌ಗಳು ಸಾಧನೆ ಅನ್ನೋದು ಏನು ಅನ್ನೋದನ್ನು ತೋರಿಸಿಕೊಟ್ಟಿದ್ದಾರೆ. ದೇಹದ ನ್ಯೂನ್ಯತೆಯನ್ನು ಮೀರಿ ಸಾಧಿಸುವ ಛಲ ಹೇಗಿರುತ್ತೆ ಅನ್ನೋದನ್ನು ತೋರಿಸಿಕೊಡುವ ಮೂಲಕ ದೇಶಕ್ಕೆ ಕೀರ್ತಿ ತಂದಿದ್ದಾರೆ. ಅವರಲ್ಲಿ ಒಬ್ಬರು ದಿಲೀಪ್ ಗಾವಿತ್.

ಇದನ್ನೂ ಓದಿ:ಕಾಮನ್ವೆಲ್ತ್ ಗೇಮ್ಸ್‌ನಲ್ಲಿ ಭಾರತಕ್ಕೆ 15 ಪದಕಗಳು – ಅಥ್ಲೆಟಿಕ್ಸ್ ನಲ್ಲಿ ಕ್ರೀಡಾಪಟುಗಳ ವಿಶೇಷ ಸಾಧನೆ

ಗ್ಲ್ಯಾಸ್ಗೋ ಕಾಮನ್‌ವೆಲ್ತ್ ಕ್ರೀಡಾಕೂಟದಲ್ಲಿ ಭಾರತದ ಪದಕಗಳ ಬೇಟೆ ಮುಂದುವರಿದಿದೆ. ಅದರಲ್ಲೂ ಬುಧವಾರ ನಡೆದ ಪ್ಯಾರಾ-ಅಥ್ಲೆಟಿಕ್ಸ್‌ನಲ್ಲಿ ಪುರುಷರ 100 ಮೀಟರ್ ಟಿ 47 ಸ್ಪರ್ಧೆಯಲ್ಲಿ ಚಿನ್ನ ಮತ್ತು ಬೆಳ್ಳಿ ಎರಡನ್ನೂ ಗೆದ್ದ ಇಂಡಿಯಾ ಇತಿಹಾಸ ಸೃಷ್ಟಿಸಿತು. ಯಾಕೆಂದರೆ, ಅಂದು ಚಿನ್ನ ಗೆದ್ದು ಇತಿಹಾಸ ಸೃಷ್ಟಿಸಿದ್ದರು ಭಾರತದ ಹೆಮ್ಮೆಯ ಕ್ರೀಡಾಪಟು ದಿಲೀಪ್ ಗಾವಿತ್. ಸುರಿಯುತ್ತಿರುವ ಮಳೆಯ ನಡುವೆಯೂ 10.71 ಸೆಕೆಂಡುಗಳಲ್ಲಿ ‘ಗೇಮ್ಸ್ ರೆಕಾರ್ಡ್’ ಬರೆದು ಚಿನ್ನ ಗೆದ್ದಿದ್ದರು ದಿಲೀಪ್. ಈ ಮೂಲಕ ಕಾಮನ್‌ವೆಲ್ತ್ ಕ್ರೀಡಾಕೂಟದ ಪ್ಯಾರಾ-ಅಥ್ಲೆಟಿಕ್ಸ್‌ನಲ್ಲಿ ಚಿನ್ನ ಗೆದ್ದ ಮೊದಲ ಭಾರತೀಯ ಪುರುಷ ಅಥ್ಲೀಟ್ ಎಂಬ ಹೆಗ್ಗಳಿಕೆಗೆ ಪಾತ್ರರಾದರು.

ಚಿನ್ನ ಗೆದ್ದ ಪ್ಯಾರಾ ಅಥ್ಲೀಟ್ ದಿಲೀಪ್ ಗಾವಿತ್ ಅವರ ಬದುಕಿನ ಕಥೆ ಅದೆಷ್ಟೋ ಕ್ರೀಡಾಪಟುಗಳಾಗಬೇಕು ಅನ್ನೋ ಯುವಕರಿಗೆ ಸ್ಫೂರ್ತಿದಾಯಕವೂ ಹೌದು. ಮಹಾರಾಷ್ಟ್ರದ ನಾಸಿಕ್ ಬಳಿಯ ತಾರನ್ ಡೋಂಗರಿಯ ಸಣ್ಣ ರೈತ ಕುಟುಂಬದಲ್ಲಿ ದಿಲೀಪ್ ಗಾವಿತ್ ಜನಿಸಿದರು. ತಮ್ಮ ನಾಲ್ಕನೇ ವಯಸ್ಸಿನಲ್ಲಿ ಮರದಿಂದ ಬಿದ್ದು ಕೈಗೆ ತೀವ್ರ ಗಾಯ ಮಾಡಿಕೊಂಡಿದ್ದರು. ಎಲ್ಲವೂ ವಿಧಿ ಲಿಖಿತವಷ್ಟೇ. ಯಾಕೆಂದರೆ, ಅಂದು ಸರಿಯಾದ ಚಿಕಿತ್ಸೆ ಸಿಕ್ಕಿದರೆ ದಿಲೀಪ್ ಕೈಯನ್ನೇ ಕಳೆದುಕೊಳ್ಳಬೇಕಾಗಿರಲಿಲ್ಲ. ಅಂದು ದಿಲೀಪ್ ಹೆತ್ತವರು ಮಗನನ್ನು ಆಯುರ್ವೇದ ಆಸ್ಪತ್ರೆಗೆ ಕರೆದೊಯ್ದು ಬ್ಯಾಂಡೇಜ್ ಹಾಕಿಸಿದ್ದರು. ಆದರೆ ಆ ಗಾಯವು ತೀವ್ರಗೊಂಡು  ಗ್ಯಾಂಗ್ರಿನ್ ಗೆ ತಿರುಗಿತು. ಅನಿವಾರ್ಯವಾಗಿ ಕೈ ಕತ್ತರಿಸಲೇ ಬೇಕಾಯಿತು. ಒಂದು ಕೈ ಇಲ್ಲದಿದ್ದರೂ ದಿಲೀಪ್ ಕುಗ್ಗಲಿಲ್ಲ. ತನ್ನೂರಿನ ರಸ್ತೆ ರಸ್ತೆಯಲ್ಲೂ ಓಡಿ ತಾನೆಷ್ಟು ಬಲಿಷ್ಠ ಅನ್ನೋದನ್ನು ತೋರಿಸಿಕೊಟ್ಟರು. ಸ್ಥಳೀಯ ಶಾಲಾ ಸ್ಪರ್ಧೆಯಲ್ಲಿ ಬಹುಮಾನ ಗೆದ್ದರು. ಆಧುನಿಕ ಸೌಲಭ್ಯಗಳಿಲ್ಲದೆ ಹಳ್ಳಿಯ ಸಾಮಾನ್ಯ ರಸ್ತೆಗಳಲ್ಲಿ ಪ್ರತಿದಿನ ಓಡಿ ಅಭ್ಯಾಸ ಮಾಡಿದರು. ಅಥ್ಲೆಟಿಕ್ಸ್ ಕೋಚ್ ವೈಜನಾಥ್ ಕಾಳೆ ಅವರ ಪ್ರತಿಭೆಯನ್ನು ಮೊದಲು ಗುರುತಿಸಿದರು. ಅವರು ಕುಟುಂಬವನ್ನು ಮನವೊಲಿಸಿ ದಿಲೀಪ್‌ಗೆ ಕ್ರೀಡೆ ಮುಂದುವರಿಸಲು ಅವಕಾಶ ಮಾಡಿಕೊಟ್ಟರು. ಆರಂಭದಲ್ಲಿ ತರಬೇತಿ, ವಸತಿ ಮತ್ತು ಇತರ ಖರ್ಚುಗಳನ್ನು ಸಹ ನೋಡಿಕೊಂಡರು. ದಿಲೀಪ್‌ನ ದೊಡ್ಡ ಶಕ್ತಿ ಅವರ ಮನಸ್ಸು. ಮೊದಲು ಅವರು ಪ್ಯಾರಾ-ಅಥ್ಲೀಟ್‌ಗಳಲ್ಲಿ ಭಾಗವಹಿಸಲು ಬಯಸುತ್ತಿರಲಿಲ್ಲ. ತಮ್ಮನ್ನು ಸಾಬೀತು ಮಾಡಬೇಕಾದರೆ ಮೊದಲು ಸಾಮಾನ್ಯ ಕ್ರೀಡಾಪಟುಗಳ ವಿರುದ್ಧ ಸ್ಪರ್ಧಿಸಬೇಕು ಎಂದು ನಂಬಿದ್ದರು. ಅವರು 18 ವರ್ಷದೊಳಗಿನವರ ರಾಷ್ಟ್ರೀಯ ಚಾಂಪಿಯನ್‌ಶಿಪ್‌ನ 200 ಮೀಟರ್ ಫೈನಲ್‌ಗೆ ತಲುಪಿದರು. ಖೇಲೋ ಇಂಡಿಯಾ ಯೂತ್ ಗೇಮ್ಸ್‌ನಲ್ಲಿ ಮಹಾರಾಷ್ಟ್ರದ 4×100 ಮೀಟರ್ ರಿಲೇ ತಂಡದೊಂದಿಗೆ ಪದಕ ಗೆದ್ದರು. ಒಂದೇ ಕೈಯಿಂದ ಬ್ಯಾಟನ್ ಬದಲಾಯಿಸುವುದು ಕಷ್ಟವಾದರೂ ದಿಲೀಪ್ ಅದನ್ನು ಜಯಿಸಿದರು. ನಂತರ ತಮ್ಮ ಕೋಚ್‌ನ ಸಲಹೆಯಂತೆ ಪ್ಯಾರಾ-ಅಥ್ಲೆಟಿಕ್ಸ್‌ಗೆ ಸೇರಿದರು.

ಪ್ಯಾರಾ-ಅಥ್ಲೆಟಿಕ್ಸ್‌ಗೆ ಸೇರಿದ ಮೇಲೆ ನಿಜವಾದ ಕ್ರೀಡಾ ವೃತ್ತಿ ಪ್ರಾರಂಭವಾಯಿತು. 2023ರ ವಿಶ್ವ ಪ್ಯಾರಾ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್‌ನಲ್ಲಿ ದಿಲೀಪ್ ಕಾಮನ್‌ವೆಲ್ತ್ ಚಿನ್ನ ಗೆದ್ದಿದ್ದರು. ಅಲ್ಲಿ 400 ಮೀಟರ್ ಟಿ47 ಸ್ಪರ್ಧೆಯಲ್ಲಿ ನಾಲ್ಕನೇ ಸ್ಥಾನ ಪಡೆದರು. ಇದರಿಂದ ಪ್ಯಾರಿಸ್ ಪ್ಯಾರಾಲಿಂಪಿಕ್ಸ್ ಮತ್ತು ಏಷ್ಯನ್ ಪ್ಯಾರಾ ಕ್ರೀಡಾಕೂಟಕ್ಕೆ ಅರ್ಹತೆ ಸಿಕ್ಕಿತು. ಹ್ಯಾಂಗ್‌ಝೌ ಏಷ್ಯನ್ ಪ್ಯಾರಾ ಕ್ರೀಡಾಕೂಟದಲ್ಲಿ 400 ಮೀಟರ್ ಟಿ47ರಲ್ಲಿ ಚಿನ್ನ ಗೆದ್ದು ಭಾರತಕ್ಕೆ 100ನೇ ಪದಕ ತಂದುಕೊಟ್ಟರು. ಪ್ಯಾರಿಸ್ ಪ್ಯಾರಾಲಿಂಪಿಕ್ಸ್‌ನಲ್ಲಿ ಫೈನಲ್‌ಗೆ ಹೋದರೂ ಪದಕ ಸಿಗಲಿಲ್ಲ. 2025ರ ವಿಶ್ವ ಚಾಂಪಿಯನ್‌ಶಿಪ್‌ನಲ್ಲೂ ನಾಲ್ಕನೇ ಸ್ಥಾನದಲ್ಲಿದ್ದರು. ಆದರೆ ಏಷ್ಯನ್ ದಾಖಲೆ ಮಾಡಿ ತಮ್ಮ ಸಾಮರ್ಥ್ಯವನ್ನು ತೋರಿಸಿದರು. ಹಳ್ಳಿಯ ಸಾಮಾನ್ಯ ರಸ್ತೆಯಿಂದ ಶುರುವಾದ ಒಂದು ಕೈ ಇಲ್ಲದ ಹುಡುಗನ ಪಯಣ, ಇದೀಗ ದೇಶಕ್ಕೆ ಕೀರ್ತಿ ತರುವ ತನಕ ಬಂದಿದೆ. ಈಗ ವಿಶ್ವದ ದೊಡ್ಡ ವೇದಿಕೆ ಕಾಮನ್‌ವೆಲ್ತ್‌ನಲ್ಲಿ ಚಿನ್ನ ಗೆಲ್ಲುವ ಮೂಲಕ ಅದೆಷ್ಟೋ ಯುವಕರಿಗೆ ಸ್ಪೂರ್ತಿಯಾಗಿದ್ದಾರೆ ದಿಲೀಪ್.

Sulekha

Leave a Reply

Your email address will not be published. Required fields are marked *