ಬೆಂಗಳೂರಿಗೂ ಕಾಲಿಟ್ಟಿತು ಡಿಜಿಟಲ್ ರುಪಿ – ಬಳಕೆ ಹೇಗೆ?
ಚಿಲ್ಲರೆ ವಹಿವಾಟಿಗೂ ಡಿಜಿಟಲ್ ಕರೆನ್ಸಿ -ನಾಲ್ಕು ನಗರಗಳಲ್ಲಿ ಪ್ರಾಯೋಗಿಕ ಪರೀಕ್ಷೆ
ನವದೆಹಲಿ: ಚಿಲ್ಲರೆ ವಹಿವಾಟುಗಳಿಗೆ ಸಂಬಂಧಿಸಿ ರಿಟೈಲ್ ಡಿಜಿಟಲ್ ರೂಪಾಯಿಯ ಪ್ರಾಯೋಗಿಕ ಬಳಕೆಗೆ ಡಿಸೆಂಬರ್ 1 ರಿಂದ ಜಾರಿಗೆ ತರಲಾಗುವುದು ಎಂದು ಆರ್ ಬಿಐ ತಿಳಿಸಿದೆ. ಇದರ ಭಾಗವಾಗಿ ರಿಟೈಲ್ ಡಿಜಿಟಲ್ ರೂಪಾಯಿಯನ್ನು ಪೈಲಟ್ ಪ್ರಾಜೆಕ್ಟ್ ರೂಪದಲ್ಲಿ ನಾಲ್ಕು ನಗರಗಳಲ್ಲಿ ಆರಂಭಿಸಲಿದೆ. ಈ ಪೈಕಿ ಬೆಂಗಳೂರು ಕೂಡ ಒಂದು.
ಬೆಂಗಳೂರು, ಮುಂಬೈ, ದೆಹಲಿ, ಭುವನೇಶ್ವರದಲ್ಲಿ ರಿಟೈಲ್ ಡಿಜಿಟಲ್ ರೂಪಾಯಿ ಪ್ರಯೋಗ ನಡೆಯಲಿದೆ. ಪ್ರಯೋಗದ ಭಾಗವಾಗಿ ಆಯ್ದ ನಗರಗಳಲ್ಲಿ ಬಳಕೆದಾರರು ಮತ್ತು ವ್ಯಾಪಾರಿಗಳ ನಡುವೆ ಡಿಜಿಟಲ್ ರೂಪಾಯಿ ಮೂಲಕ ವ್ಯವಹಾರ ನಡೆಯಲಿದೆ. ಸದ್ಯ ನೋಟು ಮತ್ತು ನಾಣ್ಯಗಳ ಮೌಲ್ಯದಲ್ಲೇ ಡಿಜಿಟಲ್ ರೂಪಾಯಿಯ ವ್ಯವಹಾರಗಳು ನಡೆಯಲಿವೆ ಎಂದು ಆರ್ ಬಿಐ ತಿಳಿಸಿದೆ.
ಇದನ್ನೂ ಓದಿ: ಪುರುಷರಲ್ಲೇ ಅತೀ ಹೆಚ್ಚು ಅಧಿಕ ರಕ್ತದೊತ್ತಡ
ಎಸ್‌ಬಿಐ, ಐಸಿಐಸಿಐ ಸೇರಿ ನಾಲ್ಕು ಬ್ಯಾಂಕ್‌ಗಳು ಡಿಜಿಟಲ್ ರೂಪಾಯಿಗಳನ್ನು ಬಿಡುಗಡೆ ಮಾಡಲಿದ್ದು, ಈ ಬ್ಯಾಂಕ್‌ಗಳು ಒದಗಿಸುವ ಡಿಜಿಟಲ್ ವ್ಯಾಲೆಟ್ ಸಹಾಯದೊಂದಿಗೆ ವ್ಯವಹಾರ ನಡೆಸಬಹುದು. ಈಗ ನಗದು ಮೇಲಿರುವ ನಂಬಿಕೆ, ಭದ್ರತೆ, ವಿಶ್ವಾಸಗಳನ್ನು ಡಿಜಿಟಲ್ ರೂಪಾಯಿಗೂ ತರಲಾಗುವುದು ಎಂದು ಆರ್‌ಬಿಐ ತಿಳಿಸಿದೆ.
ಡಿಜಿಟಲ್ ರೂಪಾಯಿ ಹೇಗೆ ಕೆಲಸ ಮಾಡುತ್ತದೆ?
ಆರ್‌ಬಿಐ ಬ್ಯಾಂಕ್ ಗಳ ಮೂಲಕ ಗ್ರಾಹಕರು ಮತ್ತು ವ್ಯಾಪಾರಿಗಳಿಗೆ ವಿತರಣೆ ಮಾಡುತ್ತದೆ. ನಂತರ ಬ್ಯಾಂಕ್ ಗಳು ನೀಡುವ ಡಿಜಿಟಲ್ ವ್ಯಾಲೆಟ್ ಮೂಲಕ ಬಳಕೆದಾರರು ಇ-ರೂಪಾಯಿಯನ್ನು ಬಳಸಲು ಸಾಧ್ಯವಾಗುತ್ತದೆ. ವ್ಯಕ್ತಿಯಿಂದ ವ್ಯಕ್ತಿಯ ನಡುವೆಯೂ ವಹಿವಾಟು ನಡೆಸಬಹುದು. ಆನ್‌ಲೈನ್ ವಹಿವಾಟಿನಂತೆ ವ್ಯಾಪಾರದ ಸ್ಥಳಗಳಲ್ಲಿ ಪ್ರದರ್ಶಿಸಲಾದ ಕ್ಯೂಆರ್ ಕೋಡ್ ಬಳಸಿ ರೂಪಾಯಿಗಳನ್ನು ಬಳಸಬಹುದಾಗಿದೆ ಎಂದು ಆರ್‌ಬಿಐ ಅಧಿಕೃತ ಪ್ರಕಟಣೆ ತಿಳಿಸಿದೆ.
ಯಾವ ಬ್ಯಾಂಕ್ ಗಳಲ್ಲಿ ಲಭ್ಯವಾಗಲಿದೆ?
ಮೊದಲ ಹಂತದಲ್ಲಿ ಎಸ್‌ಬಿಐ, ಬ್ಯಾಂಕ್ ಆಫ್ ಬರೋಡಾ, ಎಚ್‌ಡಿಎಫ್‌ಸಿ, ಐಸಿಐಸಿಐ, ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ, ಕೋಟಕ್ ಮಹೀಂದ್ರಾ ಬ್ಯಾಂಕ್, ಯಸ್ ಬ್ಯಾಂಕ್ ಐಡಿಎಫ್‌ಸಿ ಫಸ್ಟ್ ಬ್ಯಾಂಕ್ ಮತ್ತು ಎಚ್‌ಎಸ್‌ಬಿಸಿ ಸೇರಿದಂತೆ 9 ಬ್ಯಾಂಕ್‌ಗಳಿಗೆ ಡಿಜಿಟಲ್ ರುಪಿಯನ್ನು ಬಿಡುಗಡೆ ಮಾಡಲಾಗಿದೆ. ಸರ್ಕಾರಿ ಬಾಂಡ್‌ಗಳ ಖರೀದಿ ಮತ್ತು ಮಾರಾಟ ಮಾಡಲು ಇದನ್ನು ಬಳಸಲಾಗುತ್ತದೆ. ಸದ್ಯಕ್ಕೆ ಸರ್ಕಾರಿ ಸೆಕ್ಯುರಿಟಿಗಳ ವಹಿವಾಟಿಗೆ ಮಾತ್ರ ಡಿಜಿಟಲ್ ಕರೆನ್ಸಿ ಬಳಕೆಗೆ ಅನುಮತಿ ನೀಡಲಾಗಿದೆ.
ಡಿಜಿಟಲ್ ರುಪಿಯ ಲಾಭ ಏನು?
ಬಹಳ ಮುಖ್ಯವಾಗಿ ಬಿಟ್ ಕಾಯಿನ್ ಇತ್ಯಾದಿ ಕ್ರಿಪ್ಟೋ ಕರೆನ್ಸಿಗಳ ನಿಯಂತ್ರಣ ಯಾರ ಬಳಿಯೂ ಇರುವುದಿಲ್ಲ. ಕರೆನ್ಸಿ ಮೌಲ್ಯ ಆಗಾಗ ಏರಿಳಿತ ಸಂಭವಿಸುತ್ತಿರುತ್ತದೆ. ಆದರೆ ಡಿಜಿಟಲ್ ರುಪಿ ವ್ಯವಸ್ಥೆಯ ಮೇಲೆ ಆರ್‌ಬಿಐ ಸಂಪೂರ್ಣ ನಿಯಂತ್ರಣ ಹೊಂದಿರುತ್ತದೆ. ವಹಿವಾಟು ಶುಲ್ಕ ಇಳಿಕೆಯಾಗುವುದರಿಂದ ಎರಡು ಬ್ಯಾಂಕ್ ಗಳ ನಡುವಿನ ವ್ಯವಹಾರ ಮತ್ತಷ್ಟು ಸರಳವಾಗಲಿದೆ. ಮುದ್ರಣ ವೆಚ್ಚ ಇರುವುದಿಲ್ಲ ಮತ್ತು ಹಾಳಾಗುವುದಿಲ್ಲ. ಅಷ್ಟೇ ಅಲ್ಲದೇ ಸಾಗಾಟ ಮಾಡುವ ಅವಶ್ಯಕತೆ ಇಲ್ಲ. ಇವುಗಳನ್ನು ಕಳ್ಳತನ ಮಾಡಲು ಸಾಧ್ಯವಿಲ್ಲ. ನಕಲಿ ನೋಟುಗಳ ಹಾವಳಿ ಕಡಿಮೆಯಾಗಲಿದೆ.