ಲಂಡನ್ ನಲ್ಲೇ ಕೊಹ್ಲಿ ಫಿಟ್ ನೆಸ್ ಪರೀಕ್ಷೆ ಪಾಸ್ – ವಿರಾಟ್ ಗೆ ಮಾತ್ರವೇ ಯಾಕೆ ಬಿಸಿಸಿಐ ಸ್ಪೆಷಲ್  ಪರ್ಮಿಷನ್?

ಲಂಡನ್ ನಲ್ಲೇ ಕೊಹ್ಲಿ ಫಿಟ್ ನೆಸ್ ಪರೀಕ್ಷೆ ಪಾಸ್ – ವಿರಾಟ್ ಗೆ ಮಾತ್ರವೇ ಯಾಕೆ ಬಿಸಿಸಿಐ ಸ್ಪೆಷಲ್  ಪರ್ಮಿಷನ್?

ಏಷ್ಯಾಕಪ್​ಗೆ ರೆಡಿಯಾಗಿರೋ ಟೀಂ ಇಂಡಿಯಾ ಬಾಯ್ಸ್​ಗೆ ಹಾಗೇ ಆಸ್ಟ್ರೇಲಿಯಾ ವಿರುದ್ಧದ ಸರಣಿ ನಿರೀಕ್ಷೆಯಲ್ಲಿ ಇರೋರಿಗೆ ಫಿಟ್​ನೆಸ್ ಪರೀಕ್ಷೆ ಪಾಸಾದ್ರಷ್ಟೇ ಚಾನ್ಸ್ ಅಂತಾ ಬಿಸಿಸಿಐ ಕಟ್ಟಪ್ಪಣೆ ಹೊರಡಿಸಿತ್ತು. ಇಯರ್ ಎಂಡ್ ನಲ್ಲಿ ಇರೋದ್ರಿಂದ ಮುಂದಿನ ಪಂದ್ಯಗಳಿಗೆ ಇದು ಅನಿವಾರ್ಯ ಕೂಡ. ಹೀಗಾಗಿ ರೋಹಿತ್ ಶರ್ಮಾ, ಶುಭ್​ಮನ್ ಗಿತ್, ಜಸ್ಪ್ರೀತ್ ಬುಮ್ರಾ ಸೇರಿದಂತೆ ಸ್ಟಾರ್ ಆಟಗಾರರೆಲ್ಲಾ ಬೆಂಗಳೂರಿಗೆ ಓಡೋಡಿ ಬಂದಿದ್ರು. ಎಲ್ಲಾ ಆಟಗಾರರು ಬೆಂಗಳೂರಿನಲ್ಲಿರುವ ಬಿಸಿಸಿಐನ ಸೆಂಟರ್ ಆಫ್ ಎಕ್ಸಲೆನ್ಸ್ ನಲ್ಲಿ ಪರೀಕ್ಷೆಗೆ ಒಳಗಾಗಿದ್ರು. ಬಟ್ ಎಲ್ಲೂ ಕೂಡ ವಿರಾಟ್ ಕೊಹ್ಲಿ ಸುಳಿವೇ ಇರ್ಲಿಲ್ಲ. ಆದ್ರೀಗ ಕೊಹ್ಲಿ ಕೂಡ ಫಿಟ್​ನೆಸ್ ಪರೀಕ್ಷೆ ಪಾಸ್ ಆಗಿದ್ದಾರೆ. ಅರೆ ಲಂಡನ್​ನಲ್ಲೇ ಇರೋ ಕೊಹ್ಲಿ ಅದ್ಯಾವ ಸೈಕಲ್ ಗ್ಯಾಪಲ್ಲಿ ಪರೀಕ್ಷೆ ಪಾಸ್ ಮಾಡಿರಪ್ಪ ಅಂದ್ರೆ ಅಲ್ಲೇ ಇರೋದು ಟ್ವಿಸ್ಟ್.

ಇದನ್ನೂ ಓದಿ : INDಗೆ ಏಷ್ಯಾಕಪ್ ಅಡ್ವಾಂಟೇಜ್ – ಸಾಲಿಡ್ ಫಾರ್ಮ್.. T-20I ನಂ.1

ಲಂಡನ್ ನಲ್ಲೇ ಕೊಹ್ಲಿ ಫಿಟ್ ನೆಸ್ ಪರೀಕ್ಷೆಗೆ ಬಿಸಿಸಿಐ ಅನುಮತಿ!

ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ ಅಂದ್ರೆ ಬಿಸಿಸಿಐ ಇತ್ತೀಚೆಗೆ ಬೆಂಗಳೂರಿನಲ್ಲಿ ಫಿಟ್‌ನೆಸ್ ಕ್ಯಾಂಪ್ ಆಯೋಜನೆ ಮಾಡಿತ್ತು. ಇದರಲ್ಲಿ ರೋಹಿತ್ ಶರ್ಮಾ, ಜಸ್ಪ್ರೀತ್ ಬುಮ್ರಾ ಮತ್ತು ಶುಭಮನ್ ಗಿಲ್ ಸೇರಿದಂತೆ ಹಿರಿಯ ಆಟಗಾರರೆಲ್ಲಾ ಕಡ್ಡಾಯವಾಗಿ ಪರೀಕ್ಷೆಗಳಿಗೆ ಒಳಗಾಗಿದ್ದರು. ಆದ್ರೆ ವಿರಾಟ್ ಕೊಹ್ಲಿ ಮಾತ್ರ ಕಾಣಿಸಿಕೊಂಡಿರಲಿಲ್ಲ. ಅದೆಲ್ಲಕ್ಕಿಂತ ಹೆಚ್ಚಾಗಿ ಐಪಿಎಲ್ ಬಳಿಕ ಲಂಡನ್ ನಲ್ಲೇ ಉಳಿದಿರೋ ಕೊಹ್ಲಿ ಟೆಸ್ಟ್​ಗಾಗಿ ಭಾರತಕ್ಕೆ ಯಾವಾಗ ಬರ್ತಾರೆ ಅನ್ನುವಂತ ಪ್ರಶ್ನೆಗಳು ಮೂಡಿದ್ವು. ಆದ್ರೆ ಲಂಡನ್‌ನಲ್ಲೇ ಕೊಹ್ಲಿಯವರ ಮೌಲ್ಯಮಾಪ ಪರೀಕ್ಷೆಯನ್ನ ಪೂರ್ಣಗೊಳಿಸೋಕೆ ಬಿಸಿಸಿಐ ಅನುಮತಿ ಕೊಟ್ಟಿದೆ. ಇದೇ ಸ್ಪೆಷಲ್ ಪರ್ಮಿಷನ್ ಕೆಲವರ ಕಣ್ಣು ಕೆಂಪಾಗಿಸಿದೆ. ಸದ್ಯದ ರಿಪೋರ್ಟ್ಸ್ ಪ್ರಕಾರ ಭಾರತ ತಂಡದ ಮಾಜಿ ನಾಯಕ ಕೊಹ್ಲಿ ಲಂಡನ್‌ನಲ್ಲಿ ತಮ್ಮ ಫಿಟ್‌ನೆಸ್ ಪರೀಕ್ಷೆಗಳಲ್ಲಿ ಯಶಸ್ವಿಯಾಗಿ ಪಾಸ್ ಮಾಡಿದ್ದಾರೆ. ಭಾರತೀಯ ಕ್ರಿಕೆಟ್ ಇತಿಹಾಸದಲ್ಲಿ ಇದೇ ಮೊಟ್ಟ ಮೊದಲ ಬಾರಿಸಿ ಬಿಸಿಸಿಐ ಅನುಮೋದನೆಯೊಂದಿಗೆ ದೇಶದ ಹೊರಗೆ ಆಟಗಾರನನ್ನು ಪರೀಕ್ಷಿಸಿಸಲಾಗಿದೆ. ಮತ್ತೊಂದೆಡೆ ಏಕದಿನ ಕ್ರಿಕೆಟ್​ಗೆ ಕಮ್ ಬ್ಯಾಕ್ ಮಾಡೋಕೆ ಅಭ್ಯಾಸ ಕೂಡ ಶುರು ಮಾಡಿದ್ದಾರೆ. ಲಾರ್ಡ್ಸ್ ಬಳಿ ವಿರಾಟ್ ಕೊಹ್ಲಿ ಪ್ರಾಕ್ಟೀಸ್ ಮಾಡ್ತಿರೋ ಫೋಟೋಗಳು ವೈರಲ್ ಆಗಿರೋದೇ ಇದಕ್ಕೆ ಸಾಕ್ಷಿ.

ಬಿಸಿಸಿಐ ಅನುಮತಿ ನೀಡಿದ್ದಕ್ಕೆ ಪರ-ವಿರೋಧ!

ಇನ್ನು ವಿದೇಶದಲ್ಲೇ ವಿರಾಟ್ ಕೊಹ್ಲಿಯವರ ಫಿಟ್​ನೆಸ್ ಪರೀಕ್ಷೆಗೆ ಅನುಮತಿ ಕೊಟ್ಟಿರೋದಕ್ಕೆ ಪರ ವಿರೋಧ ವ್ಯಕ್ತವಾಗ್ತಿದೆ. ವಿರಾಟ್ ಕೊಹ್ಲಿಯವರು ವಿದೇಶಿ ಮೌಲ್ಯಮಾಪನದೊಂದಿಗೆ ಮುಂದಿನ ಪಂದ್ಯಗಳಿಗೆ ಸಿದ್ಧತೆ ನಡೆಸೋದಾಗಿ ಮೊದಲೇ ಪೂರ್ವಾನುಮತಿ ಪಡೆದಿದ್ದಾರೆ ಎನ್ನಲಾಗಿದೆ. ಇದೇ ಕಾರಣಕ್ಕೆ ಬಿಸಿಸಿಐ ಅನುಮತಿ ನೀಡಿದೆ. ಹೀಗಿದ್ರೂ ಕ್ರಿಕೆಟ್ ವಲಯದಲ್ಲಿ ವಿರೋಧವೂ ವ್ಯಕ್ತವಾಗಿದೆ. ಒಬ್ಬ ಆಟಗಾರನಿಗೆ ವಿದೇಶದಲ್ಲಿ ಪರೀಕ್ಷೆಗೆ ಅವಕಾಶ ನೀಡಿದ್ರೆ ಭಾರತದ ಹೊರಗೆ ಚಿಕಿತ್ಸೆಗೋ ಅಥವಾ  ವೈಯಕ್ತಿಕ ಕಾರಣಗಳಿಂದಲೋ ಇತರ ಆಟಗಾರರು ಸಹ ಭವಿಷ್ಯದಲ್ಲಿ ಇದೇ ರೀತಿಯ ಅವಕಾಶ ಕೇಳಬಹುದು ಎಂದು ಒಂದಷ್ಟು ಜನ ಕಿಡಿ ಕಾರುತ್ತಿದ್ದಾರೆ.

ಅಕ್ಟೋಬರ್ ನಲ್ಲಿ ಆಸೀಸ್ ಸರಣಿಯಲ್ಲಿ ಕೊಹ್ಲಿ ಭಾಗಿ!

ಸೆಪ್ಟೆಂಬರ್ 9ರಿಂದ ಆರಂಭವಾಗಲಿರೋ ಏಷ್ಯಾಕಪ್​ನಲ್ಲಿ ಭಾಗಿಯಾಗಲಿರೋ ಭಾರತ ಆ ಬಳಿಕ ಅಕ್ಟೋಬರ್​ನಲ್ಲಿ ಆಸ್ಟ್ರೇಲಿಯಾ ವಿರುದ್ಧ ವೈಟ್ ಬಾಲ್ ಸರಣಿ ಆಡಲಿದೆ. ಈಗಾಗ್ಲೇ ಟೆಸ್ಟ್ ಮತ್ತು ಟಿ20 ಪಂದ್ಯಗಳಿಂದ ಹಿಂದೆ ಸರಿದಿರುವ ಕೊಹ್ಲಿ ಈಗ ಏಕದಿನ ಮಾದರಿಯಲ್ಲಿ ಮಾತ್ರ ಕಾಣಿಸಿಕೊಳ್ಳಲಿದ್ದಾರೆ. ಸೋ ಅಕ್ಟೋಬರ್ ನಲ್ಲಿ ಆಸ್ಟ್ರೇಲಿಯಾ ವಿರುದ್ಧದ ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ ಭಾಗಿಯಾಗ್ತಾರೆ. ಮೊದಲ ಏಕದಿನ ಪಂದ್ಯ ಅಕ್ಟೋಬರ್ 19 ರಂದು ಪರ್ತ್ ಕ್ರೀಡಾಂಗಣದಲ್ಲಿ ನಡೆದ್ರೆ 2ನೇ ಪಂದ್ಯ ಅಕ್ಬೋಬರ್ 23ಕ್ಕೆ ಅಡಿಲೇಡ್ ನ ಓವಲ್ ಕ್ರೀಡಾಂಗಣದಲ್ಲಿ ನಡೆಯಲಿದೆ. ಇನ್ನು ಮೂರನೇ ಮ್ಯಾಚ್ ಅಕ್ಬೋಬರ್ 25ಕ್ಕೆ ಸಿಡ್ನಿ ಕ್ರಿಕೆಟ್ ಮೈದಾನದಲ್ಲಿ ನಡೆಯಲಿದೆ. ವಿರಾಟ್ ಕೊನೆಯ ಬಾರಿಗೆ 2025ರ ಐಪಿಎಲ್‌ನಲ್ಲಿ ಕಾಣಿಸಿಕೊಂಡಿದ್ದರು.

ಬೆಂಗಳೂರಿನಲ್ಲಿ ಯೋ-ಯೋ & ಬ್ರಾಂಕೋ ಪರೀಕ್ಷೆ!

ಇನ್ನು ಇತ್ತೀಚೆಗಷ್ಟೇ ಬೆಂಗಳೂರಿನ ಶಿಬಿರದಲ್ಲಿ ಟೀಂ ಇಂಡಿಯಾ ಆಟಗಾರರು ಯೋ-ಯೋ ಮತ್ತು ಬ್ರಾಂಕೊ ಪರೀಕ್ಷೆಗಳಲ್ಲಿ ಭಾಗಿಯಾಗಿ ತಮ್ಮ ಫಿಟ್​ನೆಸ್ ಸಾಬೀತು ಪಡಿಸಿದ್ರು.  ರೋಹಿತ್ ಶರ್ಮಾ, ಬುಮ್ರಾ, ಗಿಲ್, ಮೊಹಮ್ಮದ್ ಸಿರಾಜ್, ಯಶಸ್ವಿ ಜೈಸ್ವಾಲ್, ಶಾರ್ದೂಲ್ ಠಾಕೂರ್, ವಾಷಿಂಗ್ಟನ್ ಸುಂದರ್, ಪ್ರಸಿದ್ಧ್ ಕೃಷ್ಣ ಮತ್ತು ಜಿತೇಶ್ ಶರ್ಮಾ ಸೇರಿದಂತೆ 30ಕ್ಕೂ ಹೆಚ್ಚು ಆಟಗಾರರು ಮೌಲ್ಯಮಾಪನದ ಭಾಗವಾಗಿದ್ದರು. ಇನ್ನುಳಿದಂತೆ ರವೀಂದ್ರ ಜಡೇಜಾ, ಕೆಎಲ್ ರಾಹುಲ್, ರಿಷಭ್ ಪಂತ್, ಆಕಾಶ್ ದೀಪ್ ಮತ್ತು ನಿತೀಶ್ ರೆಡ್ಡಿ ಅವರು ಸೆಪ್ಟೆಂಬರ್‌ನಲ್ಲಿ ಫಿಟ್‌ನೆಸ್ ಪರೀಕ್ಷೆಗೆ ಒಳಗಾಗಲಿದ್ದಾರೆ.

Shantha Kumari