‘ವಿಧಾನಸಭೆಗೆ ಟಿಕೆಟ್ ಸಿಗಲಿಲ್ಲ.. ಲೋಕಸಭೆಗಾದ್ರೂ ಕೊಡಿ’ – 2 ಕ್ಷೇತ್ರಗಳ ಮೇಲೆ ಕಣ್ಣಿಟ್ಟ ಭವಾನಿ ರೇವಣ್ಣ?

‘ವಿಧಾನಸಭೆಗೆ ಟಿಕೆಟ್ ಸಿಗಲಿಲ್ಲ.. ಲೋಕಸಭೆಗಾದ್ರೂ ಕೊಡಿ’ – 2 ಕ್ಷೇತ್ರಗಳ ಮೇಲೆ ಕಣ್ಣಿಟ್ಟ ಭವಾನಿ ರೇವಣ್ಣ?

ವಿಧಾನಸಭಾ ಚುನಾವಣೆಗೂ ಮುನ್ನ ಹಾಸನ ವಿಧಾನಸಭಾ ಕ್ಷೇತ್ರ ಭಾರೀ ಸದ್ದು ಮಾಡಿತ್ತು. ಜೆಡಿಎಸ್ ಟಿಕೆಟ್​ಗೆ ಪಟ್ಟು ಹಿಡಿದಿದ್ದ ಭವಾನಿ ರೇವಣ್ಣ ಕೊನೇ ಕ್ಷಣದವರೆಗೂ ಜಟಾಪಟಿ ನಡೆಸಿದ್ರು. ದೊಡ್ಡಗೌಡ್ರ ಮನೆಯಲ್ಲಿ ಟಿಕೆಟ್ ವಿಚಾರವಾಗಿ ಭಾರೀ ಪೈಪೋಟಿ ನಡೆದಿತ್ತು. ಸಾಲು ಸಾಲು ಸಭೆ, ಚರ್ಚೆ ಬಳಿಕ ಸ್ವರೂಪ್ ಪ್ರಕಾಶ್​ಗೆ ಜೆಡಿಎಸ್ ಟಿಕೆಟ್ ನೀಡಲಾಗಿತ್ತು. ಚುನಾವಣೆಯಲ್ಲಿ ಸ್ವರೂಪ್ ಗೆಲುವು ಸಾಧಿಸಿದ್ದರು. ಆದರೆ ವಿಧಾನಸಭಾ ಚುನಾವಣಾ ಟಿಕೆಟ್ ಮಿಸ್ ಆಗಿದ್ದಕ್ಕೆ ಈಗ ಭವಾನಿ ರೇವಣ್ಣ ಲೋಕಸಭೆ ಚುನಾವಣೆ ಮೇಲೆ ಕಣ್ಣಿಟ್ಟಿದ್ದಾರೆ ಎನ್ನಲಾಗಿದೆ.

ವಿಧಾನಸಭೆಗಂತೂ ಕೊಡ್ಲಿಲ್ಲ. ಲೋಕಸಭೆಗಾದ್ರೂ ಟಿಕೆಟ್ ಕೊಡಿ ಎಂದು ಭವಾನಿ ರೇವಣ್ಣ ಬೇಡಿಕೆ ಇಟ್ಟಿದ್ದಾರೆ ಎಂಬ ಮಾಹಿತಿ ಹರಿದಾಡುತ್ತಿದೆ. ಲೋಕಸಭಾ ಚುನಾವಣೆಗೆ ಇನ್ನೂ 9 ರಿಂದ 10 ತಿಂಗಳು ಬಾಕಿ ಇದೆ. ಆದ್ರೆ ಈಗಿನಿಂದಲೇ ಕಾಂಗ್ರೆಸ್, ಜೆಡಿಎಸ್ ಮತ್ತು ಬಿಜೆಪಿಯಲ್ಲಿ ಭರ್ಜರಿ ತಯಾರಿ ನಡೆದಿದೆ. ಅದರಲ್ಲೂ ವಿಧಾನಸಭಾ ಚುನಾವಣೆಯಲ್ಲಿ ಗೆಲುವು ಸಾಧಿಸಿರೋ ಕಾಂಗ್ರೆಸ್​ಗೆ ಲೋಕಸಭಾ ಚುನಾವಣೆ ಪ್ರತಿಷ್ಠೆಯ ಕಣವಾಗಿದ್ದು, ಹೀನಾಯವಾಗಿ ಸೋತಿರುವ ಬಿಜೆಪಿ ಮತ್ತು ಜೆಡಿಎಸ್​ಗೆ ಅಸ್ತಿತ್ವದ ಪ್ರಶ್ನೆಯಾಗಿದೆ.

ಇದನ್ನೂ ಓದಿ : ಗ್ಯಾರಂಟಿಗಳ ಬಳಿಕ ಜನರಿಗೆ ಬೆಲೆ ಏರಿಕೆ ಶಾಕ್‌ – ವಿದ್ಯುತ್ ಬಿಲ್ ಫಿಕ್ಸೆಡ್ ಚಾರ್ಜ್ ದಿಢೀರ್‌ ಹೆಚ್ಚಳ!

ಈಗಾಗಲೇ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಎರಡು ದಿನಗಳ ಹಿಂದೆಯಷ್ಟೇ ಲೋಕಸಭಾ ಚುನಾವಣೆಯ ತಯಾರಿ ಕುರಿತು ಪಕ್ಷದ ಮುಖಂಡರ ಜೊತೆ ಸಭೆ ನಡೆಸಿದ್ದಾರೆ. ಮತ್ತೊಂದೆಡೆ ಲೋಕಸಭಾ ಸಮರವನ್ನು ಜೊತೆಯಾಗಿ ಎದುರಿಸುವ ಕುರಿತು ಬಿಜೆಪಿ ಮತ್ತು ಜೆಡಿಎಸ್ ಚಿಂತನೆ ನಡೆಸುತ್ತಿವೆ. ಒಂದು ವೇಳೆ ಬಿಜೆಪಿ ಜೊತೆ ಚುನಾವಣಾ ಪೂರ್ವ ಮೈತ್ರಿ ಮಾಡಿಕೊಂಡ್ರೆ ಹಳೆ ಮೈಸೂರು ಭಾಗ ಸೇರಿದಂತೆ ಕನಿಷ್ಠ 5ರಿಂದ ಆರು ಕ್ಷೇತ್ರಗಳ ಮೇಲೆ ದಳಪತಿಗಳು ಕಣ್ಣಿಟ್ಟಿದ್ದಾರಂತೆ.

ಮಾಜಿ ಸಚಿವ ಹೆಚ್.ಡಿ ರೇವಣ್ಣ ಪತ್ನಿ ಭವಾನಿ ರೇವಣ್ಣ ಲೋಕಸಭಾ ಚುನಾವಣೆ ಮೇಲೆ ಕಣ್ಣಿಟ್ಟಿದ್ದಾರಂತೆ. ಅಸೆಂಬ್ಲಿ ಎಲೆಕ್ಷನ್​​ನಲ್ಲಿ ಟಿಕೆಟ್ ಕೊಡಲಿಲ್ಲ. ಈಗಲಾದ್ರೂ ಕೊಡಿ ಎಂದು ಕೇಳಿದ್ದಾರಂತೆ. ಹಾಸನ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸುವ ಇಂಗಿತವನ್ನು ಭವಾನಿ ರೇವಣ್ಣ ವ್ಯಕ್ತಪಡಿಸಿದ್ದರು. ಆದರೆ ಮಾಜಿ ಸಿಎಂ ಹೆಚ್ ಡಿ ಕಮಾರಸ್ವಾಮಿ ಹಾಸನದ ಟಿಕೆಟ್​ನ್ನು ಸ್ವರೂಪ್ ಅವರಿಗೆ ನೀಡಿದ್ದರು. ಟಿಕೆಟ್ ಪಡೆದುಕೊಂಡು ಸ್ವರೂಪ್​ ಚುನಾವಣೆಯಲ್ಲಿ ಗೆದ್ದಿದ್ದಾರೆ.

ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧೆ ಮಾಡುವ ಇಂಗಿತ ವ್ಯಕ್ತಪಡಿಸಿರುವ ಭವಾನಿ ರೇವಣ್ಣ ಎರಡು ಕ್ಷೇತ್ರಗಳ ಮೇಲೆ ಕಣ್ಣಿಟ್ಟಿದ್ದಾರೆ ಎನ್ನಲಾಗಿದೆ. ಎರಡರ ಪೈಕಿ ಯಾವ ಕ್ಷೇತ್ರದ ಟಿಕೆಟ್ ನೀಡಿದರೂ ಒಪ್ಪಿಗೆ ಎಂದಿದ್ದಾರಂತೆ. ಭವಾನಿ ರೇವಣ್ಣ ಮಂಡ್ಯ ಅಥವಾ ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದಿಂದ ಟಿಕೆಟ್ ನೀಡುವಂತೆ ಬೇಡಿಕೆ ಇಟ್ಟಿದ್ದಾರೆ ಎನ್ನಲಾಗಿದೆ. ಕಳೆದ ಬಾರಿ ಮಂಡ್ಯ ಕ್ಷೇತ್ರದಿಂದ ನಿಖಿಲ್ ಕುಮಾರಸ್ವಾಮಿ ಸ್ಪರ್ಧಿಸಿ ಸುಮಲತಾ ಅಂಬರೀಶ್ ವಿರುದ್ಧ ಸೋತಿದ್ದರು.

suddiyaana