ಊಟಕ್ಕೆ ಮಟನ್ ಖಾಲಿಯಾಗಿದ್ದಕ್ಕೆ ತಾಳಿಕಟ್ಟಲ್ಲ ಅಂದ ವರ – ನಿನ್ನನ್ನು ಯಾವ ಕಾರಣಕ್ಕೂ ಮದುವೆಯಾಗಲ್ಲ ಅಂದಳು ಸಿಟ್ಟಿಗೆದ್ದ ವಧು
ಮದುವೆ ಮನೆಯೆಂದರೆ ಸಂಭ್ರಮ.. ಬಂಧು ಬಳಗದವರ ಓಡಾಟ. ಸ್ನೇಹಿತರ ತುಂಟಾಟ.. ವರ ವಧುವಿಗೆ ಸಂತಸ.. ಹೆತ್ತವರಿಗೆ ಸಾರ್ಥಕತೆಯ ಭಾವ.. ಇದೆಲ್ಲಾ ಸೇರಿ ವಿವಾಹ ಸಮಾರಂಭ ನೆರವೇರುತ್ತದೆ. ಆದರೆ, ಈಗಲೂ ಕೆಲವೊಂದು ಕಡೆ ವಧುವಿನ ಕಡೆಯವರ ಮೇಲೆ ಏನಾದರೊಂದು ನೆಪ ತೋರಿಸಿ ಕಿರಿಕ್ ಮಾಡುವವರೂ ಇದ್ದಾರೆ. ವರನ ಕಡೆಯವರು ನಾವು ಯಾವಾಗಲೂ ಒಂದ್‌ಕೈ ಮೇಲೆ ಅನ್ನೋ ಗತ್ತು ಈಗಲೂ ಇದೆ ಅನ್ನುವುದಕ್ಕೆ ಈ ಗಲಾಟೆ ಮದುವೆಯೇ ಸಾಕ್ಷಿ. ಸಣ್ಣಪುಟ್ಟ ವಿಚಾರಕ್ಕೆ ಮದುವೆಯೇ ಕ್ಯಾನ್ಸಲ್ ಆಗುವ ಈ ಜಮಾನಾದಲ್ಲಿ ಇಲ್ಲೂ ಹೀಗೆ ಆಗಿದೆ. ಒಡಿಶಾದ ಸಂಬಲ್ಪುರ ಜಿಲ್ಲೆಯ ಧಾಮಾ ಪ್ರದೇಶದಲ್ಲಿ ಊಟಕ್ಕೆ ಮಟನ್ ಬಡಿಸಿಲ್ಲ ಅನ್ನೋ ಕಾರಣಕ್ಕೆ ಮದುವೆಯೇ ಕ್ಯಾನ್ಸಲ್ ಆಗಿದೆ.
ಇದನ್ನೂ ಓದಿ: ಬರ್ತಡೇ ಮುಗಿಸಿ ಬರುವಾಗಲೇ ಕಾಡಿದ ವಿಧಿ – ಮದುವೆಯಾಗಿ 24 ದಿನಗಳಲ್ಲೇ ನವಜೋಡಿ ದುರಂತ ಅಂತ್ಯ
ಸಂಬಲ್ಪುರ ಜಿಲ್ಲೆಯ ಧಾಮಾ ಪ್ರದೇಶದಲ್ಲಿ ವಧುವಿನ ಮನೆಯಲ್ಲಿ ಊಟಕ್ಕೆ ಶುರುವಾದ ಗಲಾಟೆ ಮದುವೆ ಕ್ಯಾನ್ಸಲ್ ಆಗುವವರೆಗೂ ಮುಂದುವರೆದಿದೆ. ಸಂಬಲ್ಪುರದ ಹುಡುಗಿಗೆ, ಬ್ಯಾಂಕ್‌ನಲ್ಲಿ ಕೆಲಸ ಮಾಡುವ ಸುಂದರ್‌ಗಢದ ಯುವಕನೊಂದಿಗೆ ಮದುವೆ ನಿಶ್ವಯವಾಗಿತ್ತು. ವರ, ತನ್ನ ಮನೆಯವರೊಂದಿಗೆ ಮೆರವಣಿಗೆಯಲ್ಲಿ ಸಂಬಲ್ಪುರದ ಐಂತಪಾಲಿಯಲ್ಲಿರುವ ವಧುವಿನ ಮನೆಗೆ ಸಂಭ್ರಮದಲ್ಲಿಯೇ ಬಂದಿದ್ದ. ಎಲ್ಲಾ ಶಾಸ್ತ್ರಗಳು ಮುಗಿದು ವರನ ಕಡೆಯವರು ಊಟಕ್ಕೆ ಕೂತಿದ್ದಾರೆ. ಆಗ ವರನ ಕಡೆಯವರಿಗೆ ಮಟನ್ ಕರಿ ಸಿಕ್ಕಿಲ್ಲ ಅಂತ ಗಲಾಟೆ ಶುರುವಾಗಿದೆ. ವರ ಸಹ ಮಟನ್ ಊಟ ಸಿಕ್ಕದ ಕಾರಣ ಹುಡುಗಿಯನ್ನು ಮದ್ವೆಯಾಗಲ್ಲ ಎಂದು ಹಠ ಹಿಡಿದಿದ್ದಾನೆ. ಆಗಲೇ ತಡರಾತ್ರಿ ಆಗಿದ್ದರಿಂದ ವಧುವಿನ ಮನೆಯವರಿಗೆ ಮಟನ್ ವ್ಯವಸ್ಥೆ ಮಾಡಲು ಸಾಧ್ಯವಾಗಲಿಲ್ಲ. ಆದರೆ, ಹುಡುಗನ ಕಡೆಯವರಿಗೆ ಮಟನ್ ಕೊರತೆಯೇ ದೊಡ್ಡ ಸಮಸ್ಯೆಯಾಗಿ ಮಾರ್ಪಟ್ಟಿತು. ಕೂಡಲೇ ಮಟನ್ ಊಟ ತರಿಸುವಂತೆ ಒತ್ತಾಯಿಸಿದರು. ಆಗಲೇ ಸಿಟ್ಟಿಗೆದ್ದೇಬಿಟ್ಟಳು ವಧು. ವರನ ಕಡೆಯವರ ಭಂಡಾಟ ನೋಡಿ ವಧುವಿಗೆ ಬಂದಿರುವ ಸಿಟ್ಟು ಅಷ್ಟಿಷ್ಟಲ್ಲ. ನೀವೇನು ನನ್ನ ಮದುವೆ ಆಗಲ್ಲ ಅನ್ನುವುದು. ನಾನೇ ಈ ಮದುವೆಯನ್ನು ಕ್ಯಾನ್ಸಲ್ ಮಾಡಿಕೊಳ್ಳುತ್ತಿದ್ದೇನೆ. ನಾನೇ ನಿನ್ನ ಮದುವೆಯಾಗುವುದಿಲ್ಲ ಎಂದು ಸ್ವತಃ ವಧುವೇ ವರನಿಗೆ ಶಾಕ್ ನೀಡಿದ್ದಾಳೆ. ಆ ನಂತರ ಮಾತನಾಡಿದ ವಧು, ನನ್ನ ತಂದೆ ಅವರಿಗೆ ಅಡ್ಡ ಬಿದ್ದು ನಮಸ್ಕರಿಸಿ ವಿಚಾರವನ್ನು ಬಗೆಹರಿಸುವಂತೆ ಮನವಿ ಮಾಡಿದರು. ಆದರೆ ಅವರು ಮಾತ್ರ ಒಪ್ಪಲೇ ಇಲ್ಲ. ಇದರಿಂದ ನನಗೆ ಬೇಜಾರಾಗಿದ್ದು ನಾನು ಮದುವೆಯಾಗುವುದಿಲ್ಲ, ಎಂದು ಹೇಳಿದೆ’ ಎಂದಿದ್ದಾಳೆ. ವರನ ಕಡೆಯವರು ನನ್ನ ತಂದೆ ವ್ಯವಸ್ಥೆ ಸರಿಯಾಗಿ ಮಾಡಿಲ್ಲ ಎಂದು ಜಗಳಕ್ಕಿಳಿದರು. ನನ್ನ ಮನೆಯವರು ಊಟಕ್ಕೆ ಕೋಳಿ ಮತ್ತು ಮೀನು ಮಟನ್ ಕೂಡ ನೀಡಿದ್ದಾರೆ. ಆದರೆ, ಕೊನೆಯ ಆರು ಅಥವಾ ಏಳು ಜನರು ತಿನ್ನುವ ಮೊದಲು ಅದು ಮುಗಿದಿದೆ. ಅದು ಅನಿರೀಕ್ಷಿತವಾಗಿತ್ತು. ಆಗಲೇ ತಡರಾತ್ರಿ ಆಗಿದ್ದರಿಂದ ವ್ಯವಸ್ಥೆ ಮಾಡಲು ಸಾಧ್ಯವಾಗಲ್ಲಿಲ್ಲ. ಆದರೆ ಇಷ್ಟಕ್ಕೇ ಎಲ್ಲರೂ ಗಲಾಟೆ ಮಾಡಲು ಶುರು ಮಾಡಿದರು’ ಎಂದು ವಧು ಘಟನೆಯನ್ನು ವಿವರಿಸಿದ್ದಾಳೆ.
ಮತ್ತೊಂದೆಡೆ, ವರನ ಕಡೆಯವರು, ವಧುವಿನ ಕಡೆಯವರು ಮಾಡಿರುವ ಆರೋಪ ಸುಳ್ಳು ಎಂದು ಹೇಳಿದ್ದಾರೆ. ಮದ್ವೆ ಮನೆಯಲ್ಲಿ 200 ಜನರಿಗೆ ವ್ಯವಸ್ಥೆ ಮಾಡಲಾಗಿದೆ ಎಂದು ವಧುವಿನ ಕಡೆಯವರು ತಿಳಿಸಿದ್ದರು. ಮೆರವಣಿಗೆಯಲ್ಲಿ ಸುಮಾರು 150 ಜನರಿದ್ದರು. ಆದರೆ ಅವರಲ್ಲಿ ಹಲವರಿಗೆ ಊಟ ಸಿಗಲಿಲ್ಲ. ಈ ವಿಷಯವನ್ನು ನನ್ನ ತಂದೆ, ವಧುವಿನ ಚಿಕ್ಕಪ್ಪನಿಗೆ ತಿಳಿಸಿದಾಗ ಅವರು ನಮ್ಮೊಂದಿಗೆ ಅನುಚಿತವಾಗಿ ವರ್ತಿಸಿದರು. ಮದುವೆಯ ರದ್ದತಿಗೆ ಮಟನ್ ಕಾರಣವಲ್ಲ’ ಎಂದು ವರ ಹೇಳಿಕೆ ನೀಡಿದ್ದಾನೆ. ರಾತ್ರಿ 12ರಿಂದ ಬೆಳಗಿನ ಜಾವ 4ರವರೆಗೆ ಮಾತುಕತೆ ನಡೆಸಲಾಗಿದ್ದು. ಮದುವೆಗೆ ಹಲವು ಬಾರಿ ಮನವಿ ಮಾಡಿದರೂ ಹುಡುಗಿ ಕಡೆಯವರು ಮದುವೆಗೆ ನಿರಾಕರಿಸಿದರು ಎಂದು ವರನ ತಂದೆ ತಿಳಿಸಿದ್ದಾರೆ.
ಅದೇನೇ ಇರಲಿ, ನಾವು ವರನ ಕಡೆಯವರು ಎಂದು ಬರೀ ಗತ್ತು ತೋರಿಸಿದರಷ್ಟೇ ಸಾಲದು. ಮದುವೆ ಅಂದ ಮೇಲೆ ಹೆಚ್ಚು ಕಡಿಮೆ ಆಗುವುದು ಸಹಜ. ಇದು ವರನಿಗೂ ಗೊತ್ತಿರಬೇಕಿತ್ತು. ಮದುವೆಗೆ ಮೊದಲೇ ಈ ರೀತಿ ರಂಪಾಟ ಮಾಡುವ ವರನನ್ನು ವಧು ತಿರಸ್ಕರಿಸುವ ಮೂಲಕ ಸರಿಯಾಗಿಯೇ ಪಾಠ ಕಲಿಸಿದ್ದಾಳೆ ಎಂದು ಅನೇಕರು ಹೇಳುತ್ತಿದ್ದಾರೆ.