ಕಾಂತಾರ ಚಿತ್ರದ ಬಗ್ಗೆ ದೈವ ಅಭಯ ನುಡಿ ನೀಡಿಲ್ವಾ? –  ವಿವಾದದ ಬೆನ್ನಲ್ಲೇ ಬಲವಾಂಡಿ-ಪಿಲಿಚಂಡಿ ದೈವಸ್ಥಾನ ಆಡಳಿತ ಮಂಡಳಿ ಹೇಳಿದ್ದೇನು?

ಕಾಂತಾರ ಚಿತ್ರದ ಬಗ್ಗೆ ದೈವ ಅಭಯ ನುಡಿ ನೀಡಿಲ್ವಾ? –  ವಿವಾದದ ಬೆನ್ನಲ್ಲೇ ಬಲವಾಂಡಿ-ಪಿಲಿಚಂಡಿ ದೈವಸ್ಥಾನ ಆಡಳಿತ ಮಂಡಳಿ ಹೇಳಿದ್ದೇನು?

ಕಾಂತಾರ ಚಾಪ್ಟರ್‌ 1 ವಿಶ್ವದಾದ್ಯಂತ ರಿಲೀಸ್‌ ಆಗಿದ್ದು, ಗಲ್ಲಾಪೆಟ್ಟಿಗೆಯಲ್ಲಿ ಕೋಟಿ ಕೋಟಿ ಕಲೆಕ್ಷನ್‌ ಮಾಡಿದೆ. ಆದ್ರೆ ಸಿನಿಮಾ ರಿಲೀಸ್‌ ಆಗ್ತಿದ್ದಂತೆ ಕೆಲ ಅಭಿಮಾನಿಗಳ ಅತಿರೇಕದ ವರ್ತನೆ ತೋರಿದ್ದು, ಇದು ತುಳುನಾಡಿನ ಜನರ ಕೆಂಗಣ್ಣಿಗೆ ಗುರಿಯಾಗಿತ್ತು. ಹೀಗಾಗಿ ದೈವರಾಧಕರು ದೈವದ ಮೊರೆ ಹೋಗಿದ್ದು, ಹುಚ್ಚು ಕಟ್ಟಿದವರನ್ನ ಹುಚ್ಚು ಕಟ್ಟಿಸುತ್ತೇನೆ ಎಂದು ದೈವ ಅಭಯ ನೀಡಿದೆ ಎಂದು ಹೇಳಲಾಗಿತ್ತು. ಇದೀಗ ಈ ಬಗ್ಗೆ ಧಾರ್ಮಿಕ ದತ್ತಿ ಇಲಾಖೆಯ ಅಧೀನದಲ್ಲಿರುವ ಪೆರಾರ ಶ್ರೀ ಬ್ರಹ್ಮ ದೇವರು ಬಲವಾಂಡಿ-ಪಿಲಿಚಂಡಿ ದೈವಸ್ಥಾನ ಸ್ಪಷ್ಟನೆ ನೀಡಿದೆ. ಕಾಂತಾರ ಚಿತ್ರದ  ಬಗ್ಗೆ ದೈವ ಯಾವುದೇ ಅಭಯ ನುಡಿ ನೀಡಿಲ್ಲ ಎಂದು ಹೇಳಿದೆ.

ಇದನ್ನೂ ಓದಿ: ಭಾರತ ನಕ್ಸಲ್ ಮುಕ್ತ ದೇಶವಾಗುತ್ತೆ – ಪ್ರಧಾನಿ ನರೇಂದ್ರ ಮೋದಿ ಭರವಸೆ

ಕಾಂತಾರ ಚಾಪ್ಟರ್‌ 1 ರಿಲೀಸ್‌ ಆಗ್ತಿದ್ದಂತೆ ತುಳುನಾಡಿನಲ್ಲಿ ಕಾಂತಾರ v/s ದೈವರಾಧಕರು ಫೈಟ್ ವಿಚಾರ ಜೋರಾಗುತ್ತಿದೆ.  ದೈವಾರಾಧಕರು ದೈವದ ಮೊರೆ ಹೋಗುತ್ತಿದ್ದಂತೆ, ಹುಚ್ಚು ಕಟ್ಟಿದವರನ್ನ ಹುಚ್ಚು ಕಟ್ಟಿಸುತ್ತೇನೆ.. ಹಣವನ್ನ ಆಸ್ಪತ್ರೆಗೆ ಸುರಿಸುತ್ತೇನೆ ಎಂದು ದೈವ ನುಡಿದೆ ಎಂಬ ವಿಚಾರ ಸೋಶಿಯಲ್‌ ಮೀಡಿಯಾದಲ್ಲಿ ಭಾರಿ ಸದ್ದು ಮಾಡಿತ್ತು. ಈ ಬೆನ್ನಲ್ಲೇ ದೈವಸ್ಥಾನದ ಆಡಳಿತ ಮಂಡಳಿಯಿಂದಲೇ ಸ್ಪಷ್ಟನೆ ನೀಡಿ ವಿಷಯಕ್ಕೆ ಇತೀಶ್ರೀ ಹಾಡಲು ಮುಂದಾಗಿದೆ.

ದೇವಸ್ಥಾನ ನೀಡಿರುವ ಹೇಳಿಕೆಯಲ್ಲಿ ಏನಿದೆ?

ಮಂಗಳೂರು ತಾಲೂಕು ಶ್ರೀ ಬ್ರಹ್ಮ ದೇವರು -ಇಷ್ಟ ದೇವತಾ ಬಲವಾಂಡಿ ಪಿಲಿಚಾಂಡಿ ದೈವಸ್ಥಾನ -ಪಡುಪೆರಾರ ಕ್ಷೇತ್ರದಲ್ಲಿ ನಡೆದ ಬಲವಾಂಡಿ-ಪಿಲಿಚಾಂಡಿ ದೈವಗಳ ಪುದರ್ -ಮೆಚ್ಚಿ ಜಾತ್ರೆ ಸಮಯದ ದೈವಪಾತ್ರಿ ದರ್ಶನ -ದೈವದ ನಡೆ-ನುಡಿಗಳ ಬಗ್ಗೆ ಉಂಟಾದ ಗೊಂದಲ-ಭಿನ್ನಾಭಿಪ್ರಾಯ ವಿಚಾರದಲ್ಲಿ ಆಡಳಿತ ಮಂಡಳಿಯ ಸ್ಪಷ್ಟಿಕರಣ ನೀಡುತ್ತಿದೆ.

ಶ್ರೀ ಬ್ರಹ್ಮ ದೇವರು -ಇಷ್ಟ ದೇವತಾ ಬಲವಾಂಡಿ -ಪಿಲಿಚಾಂಡಿ ದೈವಸ್ಥಾನ, ಪಡುಪೆರಾರ-ಕ್ಷೇತ್ರದಲ್ಲಿ ಶತಮಾನದ ಕಾಲದ ಕಟ್ಟು ಕಟ್ಟುಳೆಯಂತೆ, ಗುತ್ತು ಬರ್ಕೆ ಮಹನೀಯರು ಹಾಗೂ ಗ್ರಾಮಸ್ಥರು, ಸಾರ್ವಜನಿಕರ ಕೂಡವಿಕೆಯಿಂದ ನಡೆಸಲ್ಪಡುವ ಪುರ್-ಮೆಚ್ಚಿ ಜಾತ್ರೆಯು ಇತ್ತೀಚಿಗೆ ಕ್ಷೇತ್ರದಲ್ಲಿ ನಡೆದಿರುತ್ತದೆ. ಈ ಸಂದರ್ಭದಲ್ಲಿ ದೈವದ ಪಾತ್ರಿ-ದೈವವು ನೀಡಿದ ಅಭಯ -ನಡೆ-ನುಡಿಗಳ ವಿಚಾರದಲ್ಲಿ ಗೊಂದಲ ಭಿನ್ನಾಭಿಪ್ರಾಯ ಏರ್ಪಟ್ಟಿರುವುದು ಕ್ಷೇತ್ರದ ಆಡಳಿತ ಮಂಡಳಿಯ ಗಮನಕ್ಕೆ ಬಂದಿರುತ್ತದೆ.

ಕ್ಷೇತ್ರದ ಬಲವಾಂಡಿ -ಪಿಲಿಚಾಂಡಿ ದೈವದ ನರ್ತನದ ಬಳಿಕ ನಡೆಯುವ ನಡೆ-ನುಡಗಳ ಸಂದರ್ಭದಲ್ಲಿ ಕೆಲವೊಂದು ಯುವಕರುಗಳು ದೈವ-ದೇವರ, ಆಚಾರ-ವಿಚಾರದಲ್ಲಿ ಆಗುತ್ತಿರುವ ಅಪಪ್ರಚಾರ ವಿಚಾರದಲ್ಲಿ ದೈವದ ಸಮಕ್ಷಮ ನಿವೇದನೆ ಮಾಡಿ ಕೊಂಡಿರುತ್ತಾರೆ. ಈ ಬಗ್ಗೆ ದೈವವು ಸೂಕ್ತ ಅಭಯವನ್ನು ನೀಡಿರುತ್ತದೆ ವಿನಾ: ಯಾವುದೇ ಚಲನಚಿತ್ರ, ಅದರಲೂ ಮುಖ್ಯವಾಗಿ ಪ್ರಕೃತ ಪ್ರಚಾರದಲ್ಲಿರುವ ಕಾಂತರ-1 ಬಗ್ಗೆ ಯಾವುದೇ ಅಭಯ ನುಡಿಯನ್ನು ದೈವವು ನೀಡಿರುವುದಿಲ್ಲ. ಆದರೆ ದೈವವು ನಿವೇದನೆಗೆ ಸಂಬಂಧಿಸಿ ನೀಡಿದ ಅಭಯ-ನುಡಿಯನ್ನು ನಿವೇದಿಸಿಕೊಂಡ ಯುವಕರು ಮಾಧ್ಯಮಗಳಿಗೆ ಬಿಡುಗಡೆ ಮಾಡಿ, ದೃಶ್ಯ ಮಾಧ್ಯಮಗಳಲ್ಲಿ ಪ್ರಸಾರ ಮಾಡಿರುವುದಕ್ಕೆ ಶ್ರೀಕ್ಷೇತ್ರದ ಭಕ್ತರು ಗ್ರಾಮಸ್ಥರು, ಸಾರ್ವಜನಿಕರು ಬೇಸರ ವ್ಯಕ್ತಪಡಿಸುತ್ತಿರುವುದರಿಂದ ಈ ಸ್ಪಷ್ಟಿಕರಣವನ್ನು ಆಡಳಿತ ಮಂಡಳಿ ನೀಡುತ್ತಿದೆ.

ಮೇಲಿನಂತೆ ಶ್ರೀ ಕ್ಷೇತ್ರ ಪೆರಾರದದಲ್ಲಿ ನಡೆದ ಜಾತ್ರ ಸಂದರ್ಭದಲ್ಲಿನ ದೈವ ನಡೆ-ನುಡಿಯಲ್ಲಿ ಯಾವುದೇ ನಿರ್ದಿಷ್ಟ ವ್ಯಕ್ತಿಗಳು /ಚಲನಚಿತ್ರದ ಬಗ್ಗೆ ಯಾವುದೇ ಅಭಯ-ನುಡಿ ನೀಡುವ ಸಂದರ್ಭ ಬಂದಿರುವ ಕಾರಣ, ಪ್ರಕೃತ ಈ ವಿಚಾರದಲ್ಲಿನ ಗೊಂದಲ-ಭಿನ್ನಾಭಿಪ್ರಾಯಗಳಿಗೆ ಅಲ್ಲದೇ ಈ ಗೊಂದಲ ಶ್ರೀ ಕ್ಷೇತ್ರದ ದೈವ-ದೇವರು-ಆಡಳಿತ ಮಂಡಳಿಯು ಹೊಣೆಗಾರರಲ್ಲವೆಂದು ಈ ಮೂಲಕ ಸ್ಪಷ್ಟಪಡಿಸಲಾಗುತ್ತಿದೆ.

Shwetha M