ಅಮ್ಮನ ಫೋನ್ ಕಾಲ್ ನಿಂದಲೇ ಸಾವಿನ ನಿರ್ಧಾರ ಕೈಗೊಂಡಳಾ 10ನೇ ತರಗತಿ ವಿದ್ಯಾರ್ಥಿನಿ?

ಅಮ್ಮನ ಫೋನ್ ಕಾಲ್ ನಿಂದಲೇ ಸಾವಿನ ನಿರ್ಧಾರ ಕೈಗೊಂಡಳಾ 10ನೇ ತರಗತಿ ವಿದ್ಯಾರ್ಥಿನಿ?

ಬೆಂಗಳೂರಿನಲ್ಲಿ ನಡೆದಿದ್ದ 10ನೇ ತರಗತಿ ವಿದ್ಯಾರ್ಥಿನಿ ಆತ್ಮಹತ್ಯೆ ಪ್ರಕರಣಕ್ಕೆ ಟ್ವಿಸ್ಟ್ ಸಿಕ್ಕಿದೆ. ಒಂದು ಫೋನ್ ಕಾಲ್ ನಿಂದಲೇ ಆಕೆ ಸಾವಿನ ನಿರ್ಧಾರ ಕೈಗೊಂಡಳಾ ಅನ್ನುವ ಅನುಮಾನ ಮೂಡುತ್ತಿದೆ. ಶಾಲೆಗೆ ಹೋಗದೆ ವಾಪಸ್ ಆಗಿದ್ದ ವಿದ್ಯಾರ್ಥಿನಿ ಕೊನೆಗೆ ಅಪಾರ್ಟ್ ಮೆಂಟ್ ನ 12ನೇ ಮಹಡಿಯಿಂದ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.

ಬೆಂಗಳೂರಿನ ಬೆಳ್ಳಂದೂರಿನ ಕ್ಲಾಸಿಕ್ ಅಪಾರ್ಟ್‌ಮೆಂಟ್‌ನಲ್ಲಿ ಶಾಲೆಗೆಂದು ಹೋಗಿದ್ದ 10ನೇ ತರಗತಿ ವಿದ್ಯಾರ್ಥಿನಿ (SSLC Student) ಜೆಸಿಕಾ(15) ಶಾಲೆಗೆ ಹೋಗದೆ ಮನೆಗೆ ವಾಪಸ್ ಆಗಿ ಅಪಾರ್ಟ್‌ಮೆಂಟ್‌ನ 12ನೇ ಫ್ಲೋರ್​ನಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಳು. ಸದ್ಯ ಈ ಘಟನೆ ಪೋಷಕರನ್ನು ಕಣ್ಣೀರಿನಲ್ಲಿ ಕೈ ತೊಳೆಯುವಂತೆ ಮಾಡಿದ್ದು ಸಾವಿನ ಸುತ್ತ ಹಲವು ಅನುಮಾನಗಳು ಹುಟ್ಟಿಕೊಂಡಿವೆ. ಜೆಸಿಕಾ ಸಾವಿಗೆ ಆ ಒಂದು ಫೋನ್ ಕಾಲ್ ಕಾರಣವಾಯ್ತಾ? ಎಂಬ ಶಂಕೆ ವ್ಯಕ್ತವಾಗಿದ್ದು ಈ ಬಗ್ಗೆ ಪೊಲೀಸರ(Bellandur Police) ತನಿಖೆ ವೇಳೆ ಕೊನೆ ಕ್ಷಣದ ಮಾಹಿತಿ ರಿವಿಲ್ ಆಗಿದೆ.

ಇದನ್ನೂ ಓದಿ : ಮಾಜಿ ಸಿಎಂ ಹೆಚ್‌.ಡಿ ಕುಮಾರಸ್ವಾಮಿ ಅವರ ಆರೋಗ್ಯದಲ್ಲಿ ಏರುಪೇರು – ಆಸ್ಪತ್ರೆಗೆ ದಾಖಲು

ಜೆಸಿಕಾ ತಂದೆ-ತಾಯಿ ಮೂಲತಃ ತಮಿಳುನಾಡಿನವರು. ತಂದೆ ಡಾಮಿನಿಕ್ ವೃತ್ತಿಯಲ್ಲಿ ಸಾಫ್ಟ್ ವೇರ್ ಉದ್ಯೋಗಿ, ತಾಯಿ ದೇವಿ ಖಾಸಗಿ ಶಾಲೆಯ ಶಿಕ್ಷಕಿ. ತಮ್ಮ ಇಬ್ಬರು ಮಕ್ಕಳನ್ನ ಚೆನ್ನಾಗಿ ಓದಿಸ್ಬೇಕು‌ ಅಂತ ತಮಿಳುನಾಡಿನಿಂದ ಬೆಂಗಳೂರಿಗೆ ಶಿಫ್ಟ್ ಆಗಿದ್ದರು. ಪ್ರತಿಷ್ಟಿತ ಶಾಲೆ‌, ಕಾಲೇಜಿಗೆ ಮಕ್ಕಳನ್ನು ಸೇರಿಸಿದ್ರು. ಎರಡನೇ ಮಗಳಾದ ಜೆಸಿಕಾ ಬೆಳ್ಳಂದೂರು ಪೊಲೀಸ್ ಠಾಣೆ ವ್ಯಾಪ್ತಿಯ ಏಷಿಯಾ ಫೆಸಿಫಿಕ್ ಶಾಲೆಯಲ್ಲಿ SSLC, CBSE ಸಿಲಬಸ್ ಓದುತ್ತಿದ್ದಳು. ಜೆಸಿಕಾ ಶಾಲೆಯಲ್ಲಿ ಫೈನಲ್ ಎಕ್ಸಾಂಗಾಗಿ ತಯಾರಿ ನಡೆಯುತ್ತಿದೆ. ಸದ್ಯ ಫೈನಲ್ ಎಕ್ಸಾಂ ಫೀಸ್ ಸಂಗ್ರಹಣೆ ವೇಳೆ ಜೆಸಿಕಾ ದಾಖಲಾತಿ ಪರಿಶೀಲನೆ ಮಾಡಲಾಗಿದೆ. ಈ ವೇಳೆ ಜೆಸಿಕಾ ಮೂರು ತಿಂಗಳಲ್ಲಿ 7 ದಿನ ಮಾತ್ರ ಶಾಲೆಗೆ ಹಾಜರಾಗಿರೋದು ಪತ್ತೆಯಾಗಿದೆ.

ನಿನ್ನೆ ಬೆಳಿಗ್ಗೆ ಶಾಲಾ ಆಡಳಿತ ಮಂಡಳಿಯಿಂದ ಜೆಸಿಕಾ ತಂದೆ ಡಾಮಿನಿಕ್ ಅವರಿಗೆ ಕಾಲ್ ಬಂದಿತ್ತು. ಕರೆ ಮಾಡಿ ಜೆಸಿಕಾ ಶಾಲೆಗೆ ಚಕ್ಕರ್ ಹಾಕುತ್ತಿರುವ ಬಗ್ಗೆ ಮಾಹಿತಿ ನೀಡಲಾಗಿತ್ತು. ಕೆಲಸದ ನಿಮಿತ್ತ ಹೊರಗಡೆ ತೆರಳಿದ್ದ ಜೆಸಿಕಾ ತಂದೆ ತಮ್ಮ ಹೆಂಡತಿಗೆ ಕಾಲ್ ಮಾಡಿ ಮಗಳನ್ನು ಶಾಲೆಗೆ ಕಳಿಸಲು ಹೇಳಿದ್ದಾರೆ. ಆಗ ವಿಚಾರ ತಿಳಿದ ದೇವಿ ಅವರು ಮಗಳು ಜೆಸಿಕಾಗೆ ಕರೆ ಮಾಡಿ ನಾನು ಶಾಲೆಗೆ ಬರುತಿದ್ದೇನೆ ನೀನು ಎಲ್ಲಿದ್ದೀಯಾ ಎಂದು ಕೇಳಿದ್ದಾರೆ. ಈ ಫೋನ್ ಸಂಭಾಷಣೆ ಮುಗಿದ ಕೇವಲ 20 ನಿಮಿಷದಲ್ಲಿ ಜೆಸಿಕಾ ತಾವು ವಾಸವಿದ್ದ ಅಪಾರ್ಟ್ಮೆಂಟ್​ನಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.

ಇನ್ನು ಜೆಸಿಕಾ ಆತ್ಮಹತ್ಯೆ ಬಳಿಕ ಮಗಳ ಆತ್ಮಹತ್ಯೆಯ ಅಸಲಿ ಕಾರಣ ತನಿಖೆ ಮಾಡುವಂತೆ ಜೆಸಿಕಾ ತಂದೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಜೆಸಿಕಾ ತಂದೆ ದೂರು ಹಿನ್ನಲೆ ಎಫ್​ಐಆರ್ ದಾಖಲಾಗಿದೆ. ಸದ್ಯ ಪೊಲೀಸರು ತನಿಖೆ ಶುರು ಮಾಡಿದ್ದು ಅನೇಕ ವಿಚಾರಗಳು ಬಯಲಾಗಿವೆ. ವೃತ್ತಿಯಲ್ಲಿ ಶಾಲಾ ಶಿಕ್ಷಕಿಯಾದ ಜೆಸಿಕಾ ತಾಯಿ ದೇವಿ ಅವರು ಕಳೆದ ವರ್ಷವಷ್ಟೇ ಶಾಲೆ ಬದಲಿಸಿದ್ದರು. ಈ ಹಿಂದೆ ಜೆಸಿಕಾ ಓದುತ್ತಿದ್ದ ಶಾಲೆಯಲ್ಲೇ ದೇವಿ ಶಿಕ್ಷಕಿಯಾಗಿದ್ದರು. ಮಗಳು ಓದುವ ಶಾಲೆಯಲ್ಲೇ ಶಿಕ್ಷಕಿಯಾಗಿರುವುದು ಬೇಡ ಎಂದು ಶಾಲೆ ಬದಲಾಯಿಸಿ ಬೇರೆ ಶಾಲೆಯಲ್ಲಿ ಶಿಕ್ಷಕಿಯಾಗಿದ್ದರು. ತಾಯಿ ಶಾಲೆ ಬದಲಾಯಿಸುತಿದ್ದಂತೆ ಮಗಳು ಜೆಸಿಕಾಳ ನಡುವಳಿಕೆ ಬದಲಾಗತೊಡಗಿತು. ನಿತ್ಯ ಶಾಲೆಗೆ ಹೋಗದೆ ಸಮಯ ಕಳೆಯಲು ಶುರು ಮಾಡಿದ್ದಳಂತೆ.

ಜೆಸಿಕಾ ಸಾವಿನ ಬಗ್ಗೆ ಅಪಾರ್ಟ್ಮೆಂಟ್​ನ ಕೆಲ ನಿವಾಸಿಗಳಿಂದ ಪೊಲೀಸರು ಮಾಹಿತಿ ಸಂಗ್ರಹಿಸಿದ್ದಾರೆ. ಪ್ರತಿನಿತ್ಯ 7:30ಕ್ಕೆ ಶಾಲೆ ಬಟ್ಟೆ ಧರಿಸಿ ಹೊರಗೆ ಬರುತಿದ್ದ ಜೆಸಿಕಾ ಹೆಚ್ಚಾಗಿ ತನ್ನ ಅಪಾರ್ಟ್ಮೆಂಟ್ ನಲ್ಲಿನ ನಾಯಿ ಜೊತೆ ಕಾಲ ಕಳೆಯುತಿದ್ದಳು. ಯಾರ ಜೊತೆಯೂ ಹೆಚ್ಚು ಸೇರುತ್ತಿರಲಿಲ್ಲ. ಹೆಚ್ಚಿಗೆ ಮಾತನಾಡುತ್ತಿರಲಿಲ್ಲ. ನಾಯಿ ಹಾಗೂ ಮೊಬೈಲ್ ನಲ್ಲಿ ಹೆಚ್ಚಿನ ಸಮಯ ಕಳೆಯುತಿದ್ದಳು ಎಂದು ತನಿಖೆ ವೇಳೆ ತಿಳಿದು ಬಂದಿದೆ. ಇನ್ನು ಹಲವು ಬಾರಿ ಶಾಲೆ ರಜೆಯಿದ್ದರೂ ಜೆಸಿಕಾ ಯೂನಿಫಾರ್ಮ್ ಧರಿಸಿ ಹೊರ ಬರುತಿದ್ದಳು. ಈ ಬಗ್ಗೆ ಸ್ಥಳೀಯರು ಕೇಳುತಿದ್ದಂತೆ ರಜೆ ಎಂದು ಮನೆಗೆ ವಾಪಾಸ್ ಹೋಗುತ್ತಿದ್ದಳಂತೆ.

ಜೆಸಿಕಾ ತನ್ನ ಐ ಫೋನ್ ಸಮೇತ ಜಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದು ಹಲವು ಅನುಮಾನಗಳಿಗೆ ಕಾರಣವಾಗಿದೆ. ಹೀಗಾಗಿ ಬೆಳ್ಳಂದೂರು ಪೊಲೀಸರು ಜೆಸಿಕಾ ಬಳಸುತಿದ್ದ ಐಫೋನ್ ಪರಿಶೀಲನೆಗೆ ಮುಂದಾಗಿದ್ದಾರೆ. ಸದ್ಯ ಜೆಸಿಕಾ ಮೊಬೈಲ್ ಸಂಪೂರ್ಣ ಡ್ಯಾಮೆಜ್ ಆಗಿದೆ. ಹೀಗಾಗಿ ಆಕೆಯ ಕಾಲ್ ಡಿಟೈಲ್, ಚಾಟಿಂಗ್ ಸೇರಿದಂತೆ ಹಲವು ಮಾಹಿತಿಗಳ ಪರಿಶೀಲನೆಗೆ ಪೊಲೀಸರು ಮುಂದಾಗಿದ್ದಾರೆ. ಮೊಬೈಲ್ ಪರಿಶೀಲನೆ ನಂತರ ಜೆಸಿಕಾ ಸಾವಿನ ಅಸಲಿ ಸತ್ಯ ಬೆಳಕಿಗೆ ಬರಲಿದೆ. ಪೊಲೀಸರಿಂದ ತನಿಖೆ ಮುಂದುವರೆದಿದೆ.

suddiyaana