ಸುಮಲತಾಗೆ ಬಿಜೆಪಿ ಟಿಕೆಟ್ ಮಿಸ್ ಆಯ್ತಾ..? – ಸಂಸದೆಯ ಪಾಡು ಈಗ ಅತ್ತಲೂ ಇಲ್ಲ ಇತ್ತಲೂ ಇಲ್ಲ

ಸುಮಲತಾಗೆ ಬಿಜೆಪಿ ಟಿಕೆಟ್ ಮಿಸ್ ಆಯ್ತಾ..? – ಸಂಸದೆಯ ಪಾಡು ಈಗ ಅತ್ತಲೂ ಇಲ್ಲ ಇತ್ತಲೂ ಇಲ್ಲ

ವಿಧಾನಸಭಾ ಚುನಾವಣೆಯೇ ಆಗಲಿ.. ಎಂಪಿ ಎಲೆಕ್ಷನ್ನೇ ಇರಲಿ.. ಮಂಡ್ಯ ಜಿಲ್ಲೆ ಅಂದ್ರೆ ರಾಜಕೀಯದಲ್ಲಿ ಪ್ರತಿಷ್ಠೆಯ ಕಾದಾಟ ನಡೆಯುತ್ತೆ. ಅದ್ರಲ್ಲೂ ಕಾಂಗ್ರೆಸ್ ಹಾಗೂ ಜೆಡಿಎಸ್ ಪಕ್ಷಗಳ ನಡುವೆ ಜಿದ್ದಾಜಿದ್ದಿನ ಕದನ ಏರ್ಪಡುತ್ತೆ. ಕಮಲಕ್ಕೆ ನೆಲೆನೇ ಇಲ್ಲದ ಕಾರಣ ಇಲ್ಲಿ ಬಿಜೆಪಿ ಎಕ್ಸ್​ಟ್ರಾ ಪ್ಲೇಯರ್ ಆಗಿಯೇ ಬಂದಿದೆ. ಆದ್ರೀಗ ಲೆಕ್ಕಾಚಾರ ಬದಲಾಗಿದೆ. ಸುಮಲತಾ ಅಂಬರೀಶ್ ಸಂಸದೆಯಾಗಿ ಬಿಜೆಪಿ ಜಪ ಮಾಡ್ತಿದ್ದಾರೆ. ಸಕ್ಕರೆ ನಾಡಲ್ಲಿ ನಾನು ಕಮಲ ಅರಳಿಸಿಯೇ ಸಿದ್ಧ ಅಂತಾ ಶಪಥ ಮಾಡಿದ್ದಾರೆ. ಹೀಗೆ ಹೋದಲ್ಲಿ ಬಂದಲ್ಲೆಲ್ಲಾ ಬಿಜೆಪಿ ಬಿಜೆಪಿ ಅಂತಿದ್ದ ಸುಮಲತಾಗೇ ಅದೇ ಬಿಜೆಪಿ ದೊಡ್ಡ ಶಾಕ್ ಕೊಡೋಕೆ ಮುಂದಾಗಿದೆ. ಅತ್ತಲೂ ಇಲ್ಲ ಇತ್ತಲೂ ಇಲ್ಲ ಎನ್ನುವಂತಾಗಿದೆ ಸಂಸದೆಯ ಪಾಡು. ಹಾಗಾದ್ರೆ ಸುಮಲತಾಗೆ ಬಿಜೆಪಿ ಟಿಕೆಟ್ ಮಿಸ್ ಆಯ್ತಾ..? ಜೆಡಿಎಸ್​ ಅಭ್ಯರ್ಥಿ ಕಣಕ್ಕಿಳೀತಾರಾ..? ಯಾರು ಸ್ಪರ್ಧಿ..? ಸುಮಲತಾ ಕಥೆ ಏನು..? ಈ ಬಗೆಗಿನ ಎಕ್ಸ್​ಕ್ಲ್ಯೂಸಿವ್ ಮಾಹಿತಿ ಇಲ್ಲಿದೆ.

ಇದನ್ನೂ ಓದಿ: ರೆಬೆಲ್ ಲೇಡಿ ಸುಮಲತಾ ಕಾಂಗ್ರೆಸ್ಸಿಗರ ವಿರುದ್ಧ ಸಿಟ್ಟಾಗಿರೋದೇಕೆ..? ಸಚಿವ ಚಲುವರಾಯಸ್ವಾಮಿ ಕೊಟ್ಟ ತಿರುಗೇಟು ಏನು..?

ಜೆಡಿಎಸ್ ನಾಯಕರು ಹೇಳಿದ್ರೂ ಅಷ್ಟೇ.. ಖುದ್ದು ಬಿಜೆಪಿಗರೇ ಸತ್ಯ ತಿಳಿಸಿದ್ರೂ ಅಷ್ಟೇ.. ಸುಮಲತಾ ಮಾತ್ರ ಬಿಜೆಪಿ ಮಂತ್ರ ಜಪಿಸೋದನ್ನ ಬಿಟ್ಟಿರಲಿಲ್ಲ. ವಿಧಾನಸಭಾ ಚುನಾವಣೆ ವೇಳೆ ಬಿಜೆಪಿಗೆ ಬೆಂಬಲ ಘೋಷಿಸಿ ಅಭ್ಯರ್ಥಿಗಳ ಪ್ರಚಾರವನ್ನೂ ನಡೆಸಿದ್ರು. ಇದೀಗ ಲೋಕಸಭೆಗೆ ನನಗೇ ಬಿಜೆಪಿ ಟಿಕೆಟ್ ಕೊಡ್ತಾರೆ.. ಮಂಡ್ಯದಲ್ಲಿ ನಾನೇ ಕಮಲ ಚಿಹ್ನೆಯ ಕ್ಯಾಂಡಿಡೇಟ್ ಅಂತೆಲ್ಲಾ ಹೇಳ್ಕೊಳ್ತಿದ್ರು. ದೆಹಲಿಗೆ ವಿಮಾನದಲ್ಲಿ ಮ್ಯಾರಥಾನ್ ನಡೆಸಿ ಖುದ್ದು ಮೋದಿ ಮತ್ತು ಅಮಿತ್ ಶಾರನ್ನು ಭೇಟಿಯಾಗಿ ಬಂದಿದ್ರು. ಅಷ್ಟೇ ಯಾಕೆ ಈ ಕ್ಷಣದವರೆಗೂ ನನಗೇ ಬಿಜೆಪಿ ಟಿಕೆಟ್ ಅನ್ನೋ ಭರವಸೆಯಲ್ಲೇ ಇದ್ದಾರೆ. ಆದ್ರೆ ಬಿಜೆಪಿ ನಾಯಕರು ಬೇರೆಯದ್ದೇ ಪ್ಲ್ಯಾನ್ ಮಾಡಿದ್ದಾರೆ. ಇದು ವಿಪಕ್ಷನಾಯಕ ಆರ್. ಅಶೋಕ್ ಅವ್ರ ಮಾತಿನಲ್ಲೇ ಸ್ಪಷ್ಟವಾಗ್ತಿದೆ.

ಸುಮಲತಾಗಿಲ್ಲ ಮಂಡ್ಯ ಟಿಕೆಟ್?

ಸಂಸದೆ ಸುಮಲತಾ ಅಂಬರೀಶ್​ಗೆ ಮಂಡ್ಯದ ಬಿಜೆಪಿ ಟಿಕೆಟ್ ನೀಡುವ ವಿಚಾರವಾಗಿ ವಿಪಕ್ಷನಾಯಕ ಆರ್.ಅಶೋಕ್ ಸ್ಪಷ್ಟನೆ ನೀಡಿದ್ದಾರೆ. ಸುಮಲತಾ ಸ್ಪರ್ಧೆ ಬಗ್ಗೆ ನಮ್ಮ ವರಿಷ್ಠರು ತೀರ್ಮಾನ ಮಾಡ್ತಾರೆ.  ಅವರು ಪಕ್ಷೇತರರಾಗಿ ಗೆದ್ದಿದ್ದು, ಬಿಜೆಪಿ ಸೇರೋದಿದ್ದರೆ ಗೆದ್ದ 6 ತಿಂಗಳ ಒಳಗೆ ಸೇರಬೇಕಿತ್ತು. ಈಗ ಬಿಜೆಪಿ ಸೇರಲು ಕಾನೂನಿನ ತೊಡಕಿದೆ. ಹೀಗಾಗಿ, ಅವರು ಬಿಜೆಪಿಗೆ ಬೆಂಬಲ ಸೂಚಿಸಿದ್ದಾರೆ ಎಂದಿದ್ದಾರೆ. ಮಂಡ್ಯದಲ್ಲಿ ಬಿಜೆಪಿಯಿಂದ 500 ಪರ್ಸೆಂಟ್ ನಾನೇ ಸ್ಪರ್ಧೆ ಬಗ್ಗೆ ಸುಮಲತಾ ಅಂಬರೀಶ್ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಅಶೋಕ್, ಸುಮಲತಾ ಬರೀ ಬೆಂಬಲ ಅಷ್ಟೇ ಕೊಟ್ಟಿದ್ದಾರೆ. ಹೀಗಾಗಿ ಅವರ ಬಗ್ಗೆ ವರಿಷ್ಠರು ತೀರ್ಮಾನ ಮಾಡ್ತಾರೆ. ಮಂಡ್ಯದಲ್ಲಿ ನಮಗೆ ಮತಗಳಿಕೆ ಜಾಸ್ತಿಯಾಗಿದೆ, ನಮ್ಮ ಹಾಗೂ ಜೆಡಿಎಸ್ ಇಬ್ಬರ ಶಕ್ತಿ ಸೇರಿದರೆ ಜಾಸ್ತಿ ಆಗಿದೆ. ಹೀಗಾಗಿ ಈ ಬಾರಿ ಮಂಡ್ಯದಲ್ಲಿ ನಮ್ಮ ಅಭ್ಯರ್ಥಿ ಗೆಲುವು ನಿಶ್ಚಿತ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಹಾಗೇ ಮಂಡ್ಯ ಕ್ಷೇತ್ರದ ಬಗ್ಗೆ ಮಾತಾಡಿದ ಅವರು ಮಂಡ್ಯದಲ್ಲಿ ಬಿಜೆಪಿಯ ವೋಟ್ ಬೇಸ್ ಹೆಚ್ಚಾಗಿದೆ. ಪ್ರತಿ ಚುನಾವಣೆಯಲ್ಲಿ ಪಕ್ಷದ ವೋಟ್ ಶೇರ್ ಹೆಚ್ಚುತ್ತಿದೆ, ಹಾಗಾಗಿ ಈ ಬಾರಿ ಜೆಡಿಎಸ್ ವೋಟು ಸಹ ಸೇರಿಕೊಂಡರೆ ಬಿಜೆಪಿ ಅಥವಾ ಎನ್ ಡಿಎ ಅಭ್ಯರ್ಥಿ ಸುಲಭ ಗೆಲುವು ಸಾಧಿಸಲಿದ್ದಾರೆ ಎಂದಿದ್ದಾರೆ. ಈ ಮೂಲಕ ಸುಮಲತಾಗೇ ಟಿಕೆಟ್ ಅನ್ನೋ ಪ್ರಶ್ನೆಗೆ ಅಡ್ಡಗೋಡೆ ಮೇಲೆ ದೀಪ ಇಟ್ಟಂತೆ ಉತ್ತರ ಕೊಟ್ಟಿದ್ದಾರೆ.

ಅಶೋಕ್ ಮಾತಿನಲ್ಲಿ ಸುಮಲತಾ ಅಂಬರೀಶ್​ಗೆ ಟಿಕೆಟ್ ಇಲ್ಲ ಅನ್ನೋದು ಸ್ಪಷ್ಟವಾಗ್ತಿದೆ. ಆದ್ರೆ ಸುಮಲತಾ ವಾಟ್ ನೆಕ್ಸ್​ಟ್ ಅನ್ನೋದೇ ಇಲ್ಲಿ ಮಿಲಿಯನ್ ಡಾಲರ್ ಪ್ರಶ್ನೆ. ಯಾಕಂದ್ರೆ ಸುಮಲತಾ ಮಂಡ್ಯದಿಂದ ಸ್ಪರ್ಧೆ ಮಾಡೋದು ಪಕ್ಕಾ ಅಂತಾ ಹೇಳ್ತಿದ್ದಾರೆ. ಬಿಜೆಪಿ ಟಿಕೆಟ್ ಸಿಗದೇ ಇದ್ರೆ ಏನ್ ಮಾಡ್ತೀರಾ ಅನ್ನೋದಕ್ಕೆ ಮಾತ್ರ ಮೌನವಾಗಿಯೇ ಇದ್ದಾರೆ. ಹೀಗಾಗಿ ಸುಮಲತಾಗೆ ಆಪ್ಶನ್ ಇರೋದೇ ಪಕ್ಷೇತರ ಸ್ಪರ್ಧೆ.

ಸುಮಲತಾಗೆ ಪಕ್ಷೇತರವೇ ದಾರಿ!   

ಬಿಜೆಪಿ ಟಿಕೆಟ್ ಸಿಗದೇ ಇದ್ದರೆ ಸುಮಲತಾ ಅಂಬರೀಶ್ ಪಕ್ಷೇತರವಾಗಿ ಸ್ಪರ್ಧಿಸುವುದಷ್ಟೇ ಆಯ್ಕೆ ಉಳಿದಿದೆ. ಯಾಕಂದ್ರೆ ಜೆಡಿಎಸ್ ಅಂತೂ ಸುಮಲತಾಗೆ ಟಿಕೆಟ್ ಕೊಡಲ್ಲ. ಆರಂಭದಲ್ಲೇ ಕಾಂಗ್ರೆಸ್​ಗೆ ಬೆಂಬಲ ಘೋಷಿಸಿದ್ರೆ ಬಹುಶಃ ಕಾಂಗ್ರೆಸ್ ಟಿಕೆಟ್ ಸಿಗುವ ಸಾಧ್ಯತೆ ಇತ್ತು. ಆದ್ರೆ ಬಹಿರಂಗವಾಗೇ ನನ್ನ ಸಪೋರ್ಟ್ ಬಿಜೆಪಿಗೆ ಅಂದಿದ್ದರಿಂದ ಕಾಂಗ್ರೆಸ್ ಕೂಡ ಸುಮಲತಾ ಮೇಲಿನ ನಿರೀಕ್ಷೆಯನ್ನ ಕಳೆದುಕೊಂಡಿತ್ತು. ಹೀಗಾಗಿ ಕ್ಷೇತ್ರದಲ್ಲಿ ಅಭ್ಯರ್ಥಿ ಹುಡುಕಾರ ನಡೆಸಿ ಕೊನೆಗೆ ಸ್ಟಾರ್ ಚಂದ್ರುರನ್ನ ಆಯ್ಕೆ ಮಾಡಿದೆ ಎನ್ನಲಾಗ್ತಿದೆ. ಈಗಾಗ್ಲೇ ಸ್ಟಾರ್ ಚಂದ್ರುಗೆ ಟಿಕೆಟ್ ನೀಡಿರೋದು ಫೈನಲ್ ಅಂತಿದ್ದಂತೆ ಕಾಂಗ್ರೆಸ್ ಮನೆಯಲ್ಲೇ ಭಿನ್ನಮತ ಸ್ಫೋಟಗೊಂಡಿದೆ. ಹೀಗಾಗಿ ಸುಮಲತಾಗೆ ಕಾಂಗ್ರೆಸ್ ಬಾಗಿಲು ಕೂಡ ಮುಚ್ಚಿದೆ. ಕೊನೆಗೆ ದಾರಿ ಇಲ್ಲದೆ ಪಕ್ಷೇತರ ಅಭ್ಯರ್ಥಿಯಾಗಿಯೇ ಸ್ಪರ್ಧಿಸಬೇಕಾದ ಅನಿವಾರ್ಯತೆ ಎದುರಾಗಿದೆ.

2019ರ ಲೋಸಕಭಾ ಚುನಾವಣೆ ವೇಳೆ ಮಂಡ್ಯದ ಸೊಸೆ, ಸ್ವಾಭಿಮಾನಿ ಅಂತೆಲ್ಲಾ ಹೇಳಿಕೊಂಡು ಗೆದ್ದಿದ್ದ ಸುಮಲತಾ ಗ್ರ್ಯಾಂಡ್ ಆಗಿಯೇ ರಾಜಕಾರಣಕ್ಕೆ ಎಂಟ್ರಿ ಕೊಟ್ಟಿದ್ರು. ಆದ್ರೆ ಅವ್ರು ಬರುವಾಗ ಇದ್ದ ಸ್ಪೀಡ್ ಸಂಸದೆಯಾದ ಬಳಿಕ ಉಳಿಯಲಿಲ್ಲ. ಜನರಿಗೆ ಹತ್ತಿರವಾಗಿಲ್ಲ, ಕಷ್ಟಕ್ಕೆ ಸ್ಪಂದಿಸಿಲ್ಲ ಅನ್ನೋ ಆರೋಪಗಳೂ ಕೇಳಿ ಬಂದ್ವು. ಜಿಲ್ಲೆಯಲ್ಲಿ ಲೈಟಾಗಿ ಸುಮಲತಾ ವಿರೋಧಿ ಅಲೆ ಇದೆ. ಹೀಗಾಗಿ ಸುಮಲತಾ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ರೂ ಗೆಲುವು ಸುಲಭವಾಗಿಲ್ಲ.

Sulekha