ದುಡ್ಡು ಕೊಟ್ಟು ಆಸ್ಕರ್ ಸಮಾರಂಭದ ಟಿಕೆಟ್ ಪಡೆದ್ರಾ ‘ಆರ್‌ಆರ್‌ಆರ್’ ತಂಡ? – ರಾಜಮೌಳಿ ಮಗ ಹೇಳಿದ್ದೇನು?
‘ಆರ್‌ಆರ್‌ಆರ್’ ಸಿನಿಮಾ ತಂಡ ಆಸ್ಕರ್ ಪುರಸ್ಕಾರದ ಗುಂಗಿನಲ್ಲಿದೆ. ಭಾರತಕ್ಕೆ ಆಸ್ಕರ್ ತಂದುಕೊಟ್ಟ ನಾಟು ನಾಟು ಸಾಂಗ್ ಬಗ್ಗೆ ಎಲ್ಲರಿಗೂ ಮೆಚ್ಚುಗೆ ಇದೆ. ಆಸ್ಕರ್ ಸಮಾರಂಭ ಮುಗಿದು ಕೆಲ ದಿನಗಳು ಕಳೆದರೂ ಇದರ ಸುತ್ತ ಅನೇಕ ಚರ್ಚೆಗಳು ಇನ್ನೂ ನಡೆಯುತ್ತಲೇ ಇದೆ. ಇದರ ಮಧ್ಯೆ, ಆಸ್ಕರ್ (Oscar Awards) ಪಡೆಯಲು ‘ಆರ್‌ಆರ್‌ಆರ್’ ತಂಡದವರು 80 ಕೋಟಿ ರೂಪಾಯಿ ಖರ್ಚು ಮಾಡಿದ್ದರು ಅನ್ನೋ ಆರೋಪ ಕೇಳಿಬಂದಿತ್ತು. ಆದರೆ, ಇದೆಲ್ಲೂ ಸತ್ಯಕ್ಕೆ ದೂರವಾದದ್ದು ಅಂತಾ ಚಿತ್ರತಂಡ ಆರೋಪ ತಳ್ಳಿಹಾಕಿತ್ತು. ಇದೀಗ ದುಡ್ಡು ಖರ್ಚು ಮಾಡಿದ್ದು ನಿಜ. ಆದರೆ, ಆರೋಪಗಳು ಕೇಳಿಬಂದ ರೀತಿಯಲ್ಲ. ಅಲ್ಲಿ ದುಡ್ಡು ಖರ್ಚು ಮಾಡಿದ್ದು ಆಸ್ಕರ್ ಸಮಾರಂಭದ ಟಿಕೆಟ್ ಪಡೆಯಲು ಅನ್ನೋ ವಿಚಾರ ಗೊತ್ತಾಗಿದೆ.
ಇದನ್ನೂ ಓದಿ: `ನಾಟು ನಾಟು’ ಗೆ ಆಸ್ಕರ್ ಬರಲು ನಾನೇ ಕಾರಣ! – ಅಜಯ್ ದೇವಗನ್ ಹೀಗ್ಯಾಕೆ ಹೇಳಿದ್ದು?
ರಾಜಮೌಳಿ ಅವರ ಪುತ್ರ ಎಸ್ಎಸ್ ಕಾರ್ತಿಕೇಯ ಈ ವಿಚಾರದ ಬಗ್ಗೆ ಮೌನ ಮುರಿದಿದ್ದಾರೆ. ಆಸ್ಕರ್‌ನ ಹಲವು ವಿಭಾಗಗಳಲ್ಲಿ ನಾಮಿನೇಟ್ ಆಗಬೇಕು ಎಂಬುದು ‘ಆರ್‌ಆರ್‌ಆರ್’ ತಂಡದ ಉದ್ದೇಶ ಆಗಿತ್ತು. ಆದರೆ ಅದು ಸಾಧ್ಯವಾಗಲಿಲ್ಲ. ಅಂತಿಮವಾಗಿ ‘ನಾಟು ನಾಟು..’ ಹಾಡು ಮಾತ್ರ ನಾಮಿನೇಟ್ ಆಯಿತು. ಹಾಗಾಗಿ ಸಂಗೀತ ನಿರ್ದೇಶಕ ಎಂಎಂ ಕೀರವಾಣಿ ಮತ್ತು ಗೀತರಚನಕಾರ ಚಂದ್ರಬೋಸ್ ಹಾಗೂ ಅವರ ಪತ್ನಿಯರಿಗೆ ಮಾತ್ರ ಉಚಿತ ಪಾಸ್ ನೀಡಲಾಯಿತು. ಇನ್ನುಳಿದವರು ಸ್ವಂತ ಹಣ ಖರ್ಚು ಮಾಡಿ ಪಾಸ್ ಪಡೆದಿದ್ದು ನಿಜ ಎಂದು ಕಾರ್ತಿಕೇಯ ಹೇಳಿದ್ದಾರೆ. ಆದರೆ 60 ಲಕ್ಷ ಖರ್ಚು ಮಾಡಿಲ್ಲ ಎಂದು ಅವರು ಸ್ಪಷ್ಟನೆ ನೀಡಿದ್ದಾರೆ. ರಾಜಮೌಳಿ, ಜೂನಿಯರ್ ಎನ್ಟಿಆರ್, ರಾಮ್ ಚರಣ್ ಹಾಗೂ ಅವರ ಕುಟುಂಬದವರಿಗೆ ಉಚಿತ ಪಾಸ್ ಸಿಗಲಿಲ್ಲ. ಹಾಗಾಗಿ ತಲಾ 1.2 ಲಕ್ಷ ರೂಪಾಯಿ ಹಣ ನೀಡಿ ಪಾಸ್ ಪಡೆಯಲಾಯಿತು. ಅದಕ್ಕಾಗಿ 60 ಲಕ್ಷ ರೂಪಾಯಿ ಖರ್ಚು ಮಾಡಿದ್ದು ನಿಜವಲ್ಲ ಎಂದು ಕಾರ್ತಿಕೇಯ ಹೇಳಿರುವುದಾಗಿ ಮಾಧ್ಯಮವೊಂದು ವರದಿ ಮಾಡಿದೆ. 80 ಕೋಟಿ ರೂಪಾಯಿ ಸುರಿದು ಪ್ರಚಾರ ಮಾಡುವ ಮೂಲಕ ಆಸ್ಕರ್ ಪಡೆಯಲು ರಾಜಮೌಳಿ ಪ್ರಯತ್ನಿಸಿದ್ದಾರೆ ಎಂದು ತೆಲುಗಿನ ನಿರ್ಮಾಪಕ ತಮ್ಮಾರೆಡ್ಡಿ ಭಾರದ್ವಜ ಅವರು ಈ ಹಿಂದೆ ಆರೋಪಿಸಿದ್ದರು. ಆದರೆ ಅವರ ಮಾತನ್ನು ಹಿರಿಯ ನಿರ್ದೇಶಕ ಕೆ. ರಾಘವೇಂದ್ರ ರಾವ್ ಅವರು ತಳ್ಳಿಹಾಕಿದ್ದರು.