ನೆಹರು ಮಾಡಿದ ಪ್ರಮಾದದಿಂದಲೇ ಜಮ್ಮು ಕಾಶ್ಮೀರ ಸಮಸ್ಯೆ ಸೃಷ್ಟಿಯಾಯ್ತಾ – ಅಮಿತ್ ಶಾ ಕೊಟ್ಟ ಆ ಎರಡು ಕಾರಣಗಳೇನು..?

ನೆಹರು ಮಾಡಿದ ಪ್ರಮಾದದಿಂದಲೇ ಜಮ್ಮು ಕಾಶ್ಮೀರ ಸಮಸ್ಯೆ ಸೃಷ್ಟಿಯಾಯ್ತಾ – ಅಮಿತ್ ಶಾ ಕೊಟ್ಟ ಆ ಎರಡು ಕಾರಣಗಳೇನು..?

ಲೋಕಸಭೆಯಲ್ಲಿ ಜಮ್ಮು ಕಾಶ್ಮೀರದ ಬಗ್ಗೆ ಕೇಂದ್ರ ಸರ್ಕಾರ ಮಹತ್ವದ ನಿರ್ಣಯ ಕೈಗೊಂಡಿದ್ದು ಅಂಗೀಕಾರವೂ ಸಿಕ್ಕಿದೆ. ಮಸೂದೆ ಅಂಗೀಕಾರದ ಬಳಿಕ ಮಾತನಾಡಿದ ಅಮಿತ್ ಶಾ, ಪಿಒಕೆ ನಮ್ಮದು ಎಂದು ಘೋಷಿಸಿದ್ರು. ಇನ್ನು ಇದೇ ವೇಳೆ ಪಾಕಿಸ್ತಾನ ಆಕ್ರಮಿತ ಕಾಶ್ಮೀರದ  ಸಮಸ್ಯೆಗೆ ದೇಶದ ಮೊದಲ ಪ್ರಧಾನಿ ಜವಾಹರಲಾಲ್ ನೆಹರು ಕಾರಣ ಎಂದು ಆರೋಪಿಸಿದ್ರು. ನೆಹರು ಮಾಡಿದ ಎರಡು ಅತಿದೊಡ್ಡ ಪ್ರಮಾದಗಳಿಂದಲೇ ಇಂದು ಜಮ್ಮು ಕಾಶ್ಮೀರದ ಜನ ನರಳುತ್ತಿದ್ದಾರೆ ಎಂದು ಆಕ್ರೋಶ ಹೊರ ಹಾಕಿದ್ರು.

ಇದನ್ನೂ ಓದಿ : ದೇವೇಗೌಡರಿಗೆ ಶಾಕ್‌ ಕೊಟ್ಟ ಉಚ್ಛಾಟಿತ ನಾಯಕರು – ಜೆಡಿಎಸ್‌ ನ ನೂತನ ರಾಷ್ಟ್ರೀಯ ಅಧ್ಯಕ್ಷರಾಗಿ ಸಿ.ಕೆ.ನಾಣು ನೇಮಕ!

ಐದು ದಶಕಗಳಿಂದ ಕಾಶ್ಮೀರಿಗಳು ಅನುಭವಿಸಿದ ಸಂಕಷ್ಟಕ್ಕೆ ನೆಹರು ಅವರೇ ಕಾರಣ. ನೆಹರು ಅವರು ಎಸಗಿದ ಎರಡು ಪ್ರಮಾದಗಳಿಂದ ಜಮ್ಮು ಮತ್ತು ಕಾಶ್ಮೀರದ ಜನತೆ ಇಂದಿಗೂ ಕಷ್ಟ ಅನುಭವಿಸುತ್ತಿದ್ದಾರೆ. ನೆಹರು ಎಸಗಿದ ಮೊದಲ ತಪ್ಪೆಂದರೆ 1962ರ ಪಾಕಿಸ್ತಾನದ ವಿರುದ್ಧ ಯುದ್ಧದಲ್ಲಿ ಭಾರತ ಗೆಲುವಿನ ಹಂತದಲ್ಲಿದ್ದಾಗ ಮತ್ತು ಭಾರತೀಯ ಸೇನೆ ಹಾಲಿ ಪಾಕ್‌ನ ಭಾಗವಾಗಿರುವ ಪಂಜಾಬ್‌ ಪ್ರಾಂತ್ಯವನ್ನು ಪ್ರವೇಶಿಸಿದ್ದ ವೇಳೆ ನೆಹರು ಕದನ ವಿರಾಮ ಘೋಷಿಸಿದರು. ಈ ಮೂಲಕ ಪಾಕಿಸ್ತಾನ ಆಕ್ರಮಿತ ಕಾಶ್ಮೀರದ ಜನನಕ್ಕೆ ಕಾರಣವಾದರು. ಒಂದು ವೇಳೆ 3 ದಿನಗಳ ಬಳಿಕ ಕದನ ವಿರಾಮ ಘೋಷಿಸಿದ್ದರೆ ಪಾಕ್‌ ಆಕ್ರಮಿತ ಕಾಶ್ಮೀರ ಕೂಡಾ ಭಾರತದ ವಶದಲ್ಲೇ ಇರುತ್ತಿತ್ತು. ಇಡೀ ಕಾಶ್ಮೀರವನ್ನು ಗೆಲ್ಲುವ ಮೊದಲೇ ನೆಹರು ಕದನ ವಿರಾಮ ಘೋಷಿಸಿದರು. ಇದು ಬಹುದೊಡ್ಡ ಪ್ರಮಾದ. ಕದನ ವಿರಾಮ ಘೋಷಿಸಿದ್ದು ತಪ್ಪು ನಿರ್ಧಾರ ಎಂದು ಬಳಿಕ ಸ್ವತಃ ನೆಹರು ಒಪ್ಪಿಕೊಂಡಿದ್ದರು ಎಂದು ಅಮಿತ್ ಶಾ ಆರೋಪಿಸಿದ್ರು. ಹಾಗೂ ಕಾಶ್ಮೀರ ವಿಷಯವನ್ನು ಆತುರಾತುರವಾಗಿ ವಿಶ್ವಸಂಸ್ಥೆ ಬಳಿಗೆ ಕೊಂಡೊಯ್ದಿದ್ದು ಎರಡನೆಯ ಪ್ರಮಾದ ಎಂದು ಅಮಿತ್ ಶಾ ಹೇಳಿದ್ರು. ವಿಶ್ವಸಂಸ್ಥೆ ಚಾರ್ಟರ್ ಸಂವಿಧಾನ ವಿಧಿ 35 ರ ಬದಲಿಗೆ ಆರ್ಟಿಕಲ್ 51 ರ ಅಡಿಯಲ್ಲಿ ಕಾಶ್ಮೀರ ಸಮಸ್ಯೆಯನ್ನು ವಿಶ್ವಸಂಸ್ಥೆಗೆ ತೆಗೆದುಕೊಂಡು ಹೋಗಬಾರದಿತ್ತು ಎಂದರು.

ಜಮ್ಮು-ಕಾಶ್ಮೀರ ವಿಚಾರವಾಗಿ ಕೇಂದ್ರ ಸರ್ಕಾರ ಹಲವು ನಿರ್ಣಯಗಳನ್ನು ಕೈಗೊಂಡಿದೆ. ಸಂವಿಧಾನದ ಅನುಚ್ಛೇದ 370ರ ಅನ್ವಯ ನೀಡಲಾಗಿದ್ದ ವಿಶೇಷ ಸ್ಥಾನಮಾನವನ್ನು 2019ರಲ್ಲಿ ಹಿಂಪಡೆಯುವ ಮೂಲಕ ಕೇಂದ್ರ ಸರ್ಕಾರ ದಿಟ್ಟ ನಿರ್ಧಾರ ಕೈಗೊಂಡಿತ್ತು. 2019ರ ಬಳಿಕ ಜಮ್ಮು ಕಾಶ್ಮೀರದ ಸ್ಥಿತಿಯಲ್ಲಿ ಸಾಕಷ್ಟು ಬದಲಾವಣೆ ಆಗಿದೆ. ಭಯೋತ್ಪಾದಕ ಕೃತ್ಯಗಳಿಗೆ ಕಡಿವಾಣ ಬಿದ್ದಿದ್ದು, ಪ್ರತ್ಯೇಕತಾವಾದಿಗಳ ಉಪಟಳ ಬಹುತೇಕ ಕೊನೆಗೊಂಡಿದೆ. 2023ರಲ್ಲಿ ಕಲ್ಲುತೂರಾಟದ ಒಂದೇಒಂದು ಘಟನೆಯೂ ನಡೆದಿಲ್ಲ. ಮುಖ್ಯವಾಗಿ, ಪ್ರವಾಸೋದ್ಯಮ ಮತ್ತೆ ಚಿಗುರೊಡೆಯುತ್ತಿದ್ದು, ಆರ್ಥಿಕ ಚಟುವಟಿಕೆಗಳು ಗರಿಗೆದರಿವೆ. ವಾಸ್ತವದಲ್ಲಿ ಈ ಸುಧಾರಣೆಯ ಕ್ರಮಗಳು ಬಹಳ ಹಿಂದೆಯೇ ನಡೆಯಬೇಕಿತ್ತು. ಆದ್ರೆ ವಿಶೇಷ ಸ್ಥಾನಮಾನದ ಹೆಸರಿನಲ್ಲಿ ಪ್ರತ್ಯೇಕ ಧ್ವಜ, ಪ್ರತ್ಯೇಕ ನಿಯಮಗಳನ್ನ ರೂಪಿಸಿ ಸಮಸ್ಯೆಯನ್ನ ಮತ್ತಷ್ಟು ಜಟಿಲ ಮಾಡಲಾಗಿತ್ತು. ಒಂದು ಸಮುದಾಯಕ್ಕೆ ಹೆಚ್ಚಿನ ಪ್ರಾಶಸ್ತ್ಯ ನೀಡಿದ್ದರ ಪರಿಣಾಮ ಕಾಶ್ಮೀರಿ ಪಂಡಿತರು ತಮ್ಮ ದೇಶದಲ್ಲೇ ನಿರಾಶ್ರಿತರಾಗಿ ಬದುಕಬೇಕಾದಂಥ ಸ್ಥಿತಿ ಉಂಟಾಯಿತು. ಹೀಗಾಗಿ ಇಂಥ ಸೂಕ್ಷ್ಮ ಮತ್ತು ಮಹತ್ವದ ವಿಷಯಗಳನ್ನು ಪ್ರತಿಪಕ್ಷಗಳು ರಾಜಕೀಯದ ದೃಷ್ಟಿಕೋನದಿಂದ ನೋಡದೆ, ರಾಷ್ಟ್ರದ ಐಕ್ಯತೆಯ ರೂಪದಲ್ಲಿ ಕಾಣಬೇಕು. ಆಗ ಮಾತ್ರ ನಿಜವಾದ ಸುಧಾರಣೆ ಸಾಕಾರಗೊಳ್ಳಲು ಸಾಧ್ಯ.

Shantha Kumari