ಕನ್ನಡಿಗ KL ರಾಹುಲ್​ಗೆ ಅಗ್ನಿಪರೀಕ್ಷೆ – ನಾಯಕ, ಉಪನಾಯಕ ಕೈ ತಪ್ಪಿದ್ದೇಗೆ?
ವಿಕೆಟ್ ಕೀಪರ್ ಸ್ಥಾನಕ್ಕೂ ಕುತ್ತು?     

ಕನ್ನಡಿಗ KL ರಾಹುಲ್​ಗೆ ಅಗ್ನಿಪರೀಕ್ಷೆ – ನಾಯಕ, ಉಪನಾಯಕ ಕೈ ತಪ್ಪಿದ್ದೇಗೆ?ವಿಕೆಟ್ ಕೀಪರ್ ಸ್ಥಾನಕ್ಕೂ ಕುತ್ತು?     

ಶ್ರೀಲಂಕಾ ಸರಣಿಗೆ ಟೀಂ ಇಂಡಿಯಾ ಸ್ಕ್ವಾಡ್ ಅನೌನ್ಸ್ ಆಗುವ ಮೊದಲು ತುಂಬಾನೇ ಚರ್ಚೆಯಲ್ಲಿದ್ದ ಹೆಸ್ರು ಅಂದ್ರೆ ಅದು ಕನ್ನಡಿಗ ಕೆಎಲ್ ರಾಹುಲ್. ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ ವಿಶ್ರಾಂತಿಯಲ್ಲಿರೋ ಕಾರಣ ಲಂಕಾ ವಿರುದ್ಧದ ಏಕದಿನ ಸರಣಿಯನ್ನ ಕೆ.ಎಲ್ ರಾಹುಲ್​ರೇ ಮುನ್ನಡೆಸ್ತಾರೆ ಎನ್ನಲಾಗಿತ್ತು. ಆದ್ರೆ ಅಚ್ಚರಿ ಎನ್ನುವಂತೆ ಲಂಕಾ ವಿರುದ್ಧದ ಸರಣಿಗೆ ರೋಹಿತ್ ಕಮ್​ಬ್ಯಾಕ್ ಮಾಡಿದ್ರು. ಸಹಜವಾಗಿಯೇ ನಾಯಕತ್ವ ಅವರ ಪಾಲಾಯಿತು. ಇತ್ತ ಕೆಎಲ್ ರಾಹುಲ್​ಗೆ ಉಪನಾಯಕನ ಪಟ್ಟವೂ ಕೈತಪ್ಪಿತು. ಶ್ರೀಲಂಕಾ ವಿರುದ್ಧದ ಏಕದಿನ ಸರಣಿಗೆ ರೋಹಿತ್ ಶರ್ಮಾ ಅವರನ್ನು ನಾಯಕನಾಗಿ ಮುಂದುವರೆಸಿದರೆ, ಉಪನಾಯಕನ ಪಟ್ಟ ಶುಭ್​ಮನ್​ ಗಿಲ್​ಗೆ ನೀಡಲಾಯ್ತು. ಇಲ್ಲಿ ಕೆ.ಎಲ್ ರಾಹುಲ್​ಗೆ ಬರೀ ನಾಯಕ, ಉಪನಾಯಕನ ಪಟ್ಟ ಮಾತ್ರ ಕೈ ತಪ್ಪಿಲ್ಲ. ಮುಂದಿನ ದಿನಗಳಲ್ಲಿ ವಿಕೆಟ್ ಕೀಪರ್ ಬ್ಯಾಟರ್ ಅವಕಾಶವೂ ಕೈತಪ್ಪುತ್ತಾ ಅನ್ನೋ ಟೆನ್ಷನ್ ಶುರುವಾಗಿದೆ. ಅದಕ್ಕೆ ಕಾರಣವೂ ಇದೆ.

ಇದನ್ನೂ ಓದಿ: ಮಾಡಿದ್ದುಣ್ಣೋ ಮಹರಾಯ – ಪಾಂಡ್ಯ MIಗೆ ಬಂದಿದ್ದೇ ತಪ್ಪಾಯ್ತಾ?

ಟಿಂ ಇಂಡಿಯಾದಲ್ಲಿ ರಾಹುಲ್ ರೇಸ್!  

ಭಾರತ ಟಿ20 ತಂಡದ ಖಾಯಂ ಸದಸ್ಯರಾಗಿದ್ದ ಕೆಎಲ್​ ರಾಹುಲ್ ಈ ಬಾರಿಯ ಟಿ20 ವಿಶ್ವಕಪ್​ಗೂ ಮುನ್ನ ತಂಡದಿಂದ ಹೊರಬಿದ್ದಿದ್ದರು. ಪರಿಣಾಮ ರಾಹುಲ್ ಪಾಲಿಗೆ ವಿಶ್ವಕಪ್ ಎಂಬುದು ಕನಸಾಗಿಯೇ ಉಳಿಯಿತು. ಇನ್ನು ಏಕದಿನ ವಿಶ್ವಕಪ್​ನಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದ್ದರಿಂದ ಉಪನಾಯಕತ್ವದ ನಿರೀಕ್ಷೆಯಲ್ಲಿದ್ದರು. ಆದರೆ ಈ ನಿರೀಕ್ಷೆಗಳೂ ಹುಸಿಯಾದ್ವು. ಈಗ ಲಂಕಾ ವಿರುದ್ಧದ ಏಕದಿನ ಸರಣಿಗೆ ಕೇವಲ ಆಟಗಾರನಾಗಿ ಮಾತ್ರ ಆಯ್ಕೆಯಾಗಿದ್ದಾರೆ. ಅದು ಕೂಡ 2ನೇ ವಿಕೆಟ್ ಕೀಪರ್ ಆಗಿ ಎಂಬುದು ಇಲ್ಲಿ ಉಲ್ಲೇಖಾರ್ಹ. ಮುಂದಿನ ದಿನಗಳಲ್ಲಿ ಸಂಜು ಸ್ಯಾಮ್ಸನ್, ಇಶಾನ್ ಕಿಶನ್ ಅಥವಾ ರುತುರಾಜ್ ಗಾಯಕ್ವಾಡ್ ವಿಕೆಟ್ ಕೀಪರ್ ಆಗಿ ಎಂಟ್ರಿ ಕೊಟ್ಟರೆ ರಾಹುಲ್ ತಲೆದಂಡವಾಗುವುದು ನಿಶ್ಚಿತ. ಇದೇ ಕಾರಣಕ್ಕೆ ಅವರಿಗೆ ಉಪನಾಯಕತ್ವ ನೀಡಲಾಗಿಲ್ಲ ಎಂಬ ಮಾತುಗಳು ಕೇಳಿ ಬರುತ್ತಿದೆ. ಮತ್ತೊಂದೆಡೆ ಗಾಯದ ಸಮಸ್ಯೆ ಕೆಎಲ್ ರಾಹುಲ್ ಪಾಲಿಗೆ ಹಿನ್ನಡೆಯಾಗುತ್ತಿರುವುದು ಸುಳ್ಳಲ್ಲ. ಕಳೆದ 10 ವರ್ಷಗಳಲ್ಲಿ ಕೆಎಲ್ ರಾಹುಲ್​ ಟೀಮ್ ಇಂಡಿಯಾ ಪರ ಆಡಿರುವುದು 50 ಟೆಸ್ಟ್, 75 ಏಕದಿನ ಮತ್ತು 72 ಟಿ20 ಪಂದ್ಯಗಳನ್ನು ಮಾತ್ರ ಎಂದರೆ ನಂಬಲೇಬೇಕು. ಭಾರತ ತಂಡದ ಖಾಯಂ ಸದಸ್ಯರಾದ ಬಳಿಕವೂ ರಾಹುಲ್ ಸತತ ಸರಣಿಗಳನ್ನು ಆಡೋಕೆ ಸಾಧ್ಯವಾಗಿಲ್ಲ. ಒಂದು ಸರಣಿಯಿಂದ ಮತ್ತೊಂದು ಸರಣಿಗೆ ಹೋಗುವಷ್ಟರಲ್ಲಿ ಫಿಟ್​ನೆಸ್ ಸಮಸ್ಯೆಗೆ ಒಳಗಾಗಿರುತ್ತಾರೆ. ಇದುವೇ ಕೆಎಲ್ ರಾಹುಲ್ ಪಾಲಿಗೆ ಈಗ ಮುಳುವಾಗಿ ಪರಿಣಮಿಸಿದೆ. ಏಕೆಂದರೆ ಚಾಂಪಿಯನ್ಸ್ ಟ್ರೋಫಿ ಬಳಿಕ ಏಕದಿನ ತಂಡದ ನಾಯಕತ್ವದಿಂದ ರೋಹಿತ್ ಶರ್ಮಾ ಕೆಳಗಿಳಿಯುವುದು ಬಹುತೇಕ ಖಚಿತ. ಹೀಗಾಗಿಯೇ 32 ವರ್ಷದ ಅನುಭವಿ ಆಟಗಾರ ಕೆಎಲ್ ರಾಹುಲ್ ಪಾಲಿಗೆ ಮುಂದಿನ ವರ್ಷ ನಾಯಕತ್ವ ಒಲಿಯುವುದು ಖಚಿತ ಎನ್ನಲಾಗಿತ್ತು. ಆದ್ರೀಗ ಗಾಯದ ಸಮಸ್ಯೆಯನ್ನೇ ಮುಂದಿಟ್ಟು ಆಯ್ಕೆ ಸಮಿತಿ ರಾಹುಲ್​ಗೆ ಉಪನಾಯಕನ ಪಟ್ಟ ನೀಡಲು ಹಿಂದೇಟು ಹಾಕಿದೆ. ಭವಿಷ್ಯದ ದೃಷ್ಟಿಯಿಂದ ಶುಭ್​ಮನ್ ಗಿಲ್​ಗೆ ವೈಸ್ ಕ್ಯಾಪ್ಟನ್ ಜವಾಬ್ದಾರಿ ನೀಡಲಾಗಿದೆ.

ಟಿ-20 ವಿಶ್ವಕಪ್ ಹಾಗೇ ಇತ್ತೀಚೆಗೆ ನಡೆದ ಜಿಂಬಾಬ್ವೆ ಸರಣಿಯಿಂದ ಹೊರಗೆ ಉಳಿದಿದ್ದ ಕೆ.ಎಲ್ ರಾಹುಲ್ ಈಗ ಲಂಕಾ ಸರಣಿಗೆ ಸೆಲೆಕ್ಟ್ ಆಗಿದ್ದಾರೆ ನಿಜ. ಆದ್ರೆ ಕೆಎಲ್ ರಾಹುಲ್ 2027ರ ಏಕದಿನ ವಿಶ್ವಕಪ್ ಆಡುವ ಬಗ್ಗೆ ಸ್ಪಷ್ಟತೆಯಿಲ್ಲ. ಹೀಗಾಗಿಯೇ ಯುವ ಆಟಗಾರ ಶುಭ್​ಮನ್ ಗಿಲ್​ ಅವರನ್ನು ವೈಸ್ ಕ್ಯಾಪ್ಟನ್ ಆಗಿ ಆಯ್ಕೆ ಮಾಡಲಾಗಿದೆ. ಅಲ್ಲದೆ ಗಿಲ್ ಅವರನ್ನು ರೋಹಿತ್ ಶರ್ಮಾ ಅವರ ಉತ್ತಾರಾಧಿಕಾರಿ ಎಂದು ಬಿಸಿಸಿಐ ಮಟ್ಟದಲ್ಲಿ ಬಿಂಬಿಸಲಾಗುತ್ತಿದೆ. ಇತ್ತ ಟಿ20 ತಂಡದಿಂದ ಹೊರ ಬಿದ್ದಿರುವ ಕೆಎಲ್ ರಾಹುಲ್ ತಂಡದಲ್ಲಿ ತಮ್ಮ ಸ್ಥಾನವನ್ನು ಉಳಿಸಿಕೊಳ್ಳಬೇಕಿದ್ದರೆ ಭರ್ಜರಿ ಪ್ರದರ್ಶನ ನೀಡಲೇಬೇಕು. ಅದರಲ್ಲೂ ರಿಷಭ್ ಪಂತ್ ಅವರನ್ನು ಹಿಂದಿಕ್ಕಿ ವಿಕೆಟ್ ಕೀಪರ್ ಬ್ಯಾಟರ್ ಆಗಿ ತಮ್ಮ ಸ್ಥಾನವನ್ನು ಭದ್ರಪಡಿಸಿಕೊಳ್ಳಬೇಕಾದ ಅನಿವಾರ್ಯತೆ ಇದೆ. ಇಲ್ಲದಿದ್ದರೆ, ಮುಂಬರುವ ಸರಣಿಗಳಲ್ಲಿ ಕೆಎಲ್​ಆರ್​ ಸ್ಥಾನ ಇಶಾನ್ ಕಿಶನ್, ರುತುರಾಜ್ ಗಾಯಕ್ವಾಡ್ ಅಥವಾ ಸಂಜು ಸ್ಯಾಮ್ಸನ್ ಪಾಲಾಗುವುದರಲ್ಲಿ ಅನುಮಾನವೇ ಇಲ್ಲ. ಸೋ ಲಂಕಾ ಸರಣಿಯಲ್ಲಿ ರಾಹುಲ್ ಹೇಗೆ ಪ್ರದರ್ಶನ ನೀಡಲಿದ್ದಾರೆ ಅನ್ನೋದು ಅವ್ರ ಭವಿಷ್ಯವನ್ನ ನಿರ್ಧರಿಸಲಿದೆ.

Shwetha M