‘ನಾನು ಧನ್ಯವಾದ ಹೇಳಲು ಬಯಸುತ್ತೇನೆ’ – ವಿದಾಯದ ವಿಡೀಯೋ ಹಂಚಿಕೊಂಡಿದ್ದೇಕೆ ದಿನೇಶ್ ಕಾರ್ತಿಕ್ ?
ನಿವೃತ್ತಿಯ ಮುನ್ಸೂಚನೆ ನೀಡಿದ್ರಾ ದಿನೇಶ್ ಕಾರ್ತಿಕ್ ?
ಟೀಮ್ ಇಂಡಿಯಾದಲ್ಲಿ ಸುಮಾರು 20 ವರ್ಷಗಳ ಸುದೀರ್ಘ ಪ್ರಯಾಣದಲ್ಲಿರುವ ವಿಕೆಟ್ ಕೀಪರ್ ಮತ್ತು ಬ್ಯಾಟ್ಸ್‌ಮನ್ ದಿನೇಶ್ ಕಾರ್ತಿಕ್ ನಿವೃತ್ತಿ ಘೋಷಣೆ ಮಾಡಲಿದ್ದಾರಾ ಅನ್ನೋ ಅನುಮಾನ ಶುರುವಾಗಿದೆ. ಐಪಿಎಲ್ನಲ್ಲಿ ಅಬ್ಬರಿಸುವ ಮೂಲಕ ದಿನೇಶ್ ಕಾರ್ತಿಕ್ ಇತ್ತೀಚಿನ ದಿನಗಳಲ್ಲಿ ಟೀಮ್ ಇಂಡಿಯಾದಲ್ಲಿ ತನ್ನ ಸ್ಥಾನವನ್ನು ಮತ್ತೆ ಭದ್ರ ಮಾಡಿಕೊಂಡಿದ್ದರು. ಹೀಗಾಗಿ ಕಾರ್ತಿಕ್ ಅವರನ್ನು ಟಿ20 ವಿಶ್ವಕಪ್ಗೆ ಗೇಮ್ ಫಿನಿಶರ್ ಆಗಿ ಆಯ್ಕೆ ಮಾಡಲಾಗಿತ್ತು. ಆದರೆ ಈ ಮಿನಿ ಸಮರದಲ್ಲಿ ಕಾರ್ತಿಕ್ ಪ್ರದರ್ಶನ ಹೇಳಿಕೊಳ್ಳುವಂತಿರಲಿಲ್ಲ. ವಿಶ್ವಕಪ್‌ಗೂ ಮುನ್ನವೇ ಕಾರ್ತಿಕ್‌ಗೆ ಇದು ಕೊನೆಯ ವಿಶ್ವಕಪ್ ಆಗಿರಬಹುದು ಎಂದು ಹೇಳಲಾಗುತ್ತಿತ್ತು. ಇದೀಗ ಟಿ20 ವಿಶ್ವಕಪ್ನಿಂದ ಬರಿಗೈಯಲ್ಲಿ ವಾಪಸ್ಸಾಗಿರುವ ಕಾರ್ತಿಕ್ ಬುಧವಾರ ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ವೀಡಿಯೊವನ್ನು ಹಂಚಿಕೊಳ್ಳುವ ಮೂಲಕ ತಾವು ನಿವೃತ್ತಿಯಾಗುವ ಮುನ್ಸೂಚನೆ ನೀಡಿದ್ದಾರೆ ಎನ್ನಲಾಗುತ್ತಿದೆ.
ಇದನ್ನೂ ಓದಿ: ಕುಕ್ಕೆ ಸುಬ್ರಹ್ಮಣ್ಯನ ಸನ್ನಿಧಿಯಲ್ಲಿ ಟೀಮ್ ಇಂಡಿಯಾದ ಉಪನಾಯಕ ಕೆಎಲ್ ರಾಹುಲ್
ದಿನೇಶ್ ಕಾರ್ತಿಕ್, ತಮ್ಮ ತಂಡದ ಆಟಗಾರರೊಂದಿಗೆ, ಕುಟುಂಬದೊಂದಿಗೆ ಮತ್ತು ಮೈದಾನದಲ್ಲಿ ಆಡುತ್ತಿರುವ ಫೋಟೋಗಳನ್ನು ಒಳಗೊಂಡಿರುವ ವೀಡಿಯೊವನ್ನು ಹಂಚಿಕೊಂಡಿದ್ದಾರೆ. ಅಲ್ಲದೆ ಇನ್‌ಸ್ಟಾಗ್ರಾಮ್ ಪೋಸ್ಟ್‌ನಲ್ಲಿ, ವಿಶ್ವಕಪ್‌ನಲ್ಲಿ ಭಾರತ ತಂಡದ ಭಾಗವಾಗಿದ್ದು ಹೆಮ್ಮೆಯ ಸಂಗತಿ. ನಾವು ಪಂದ್ಯಾವಳಿಯನ್ನು ಗೆದ್ದಿಲ್ಲದಿರಬಹುದು. ಆದರೆ ನೆನಪುಗಳು ಯಾವಾಗಲೂ ನನ್ನನ್ನು ಸಂತೋಷಪಡಿಸುತ್ತವೆ. ನನ್ನನ್ನು ಸದಾ ಬೆಂಬಲಿಸುತ್ತಿರುವ ನನ್ನ ಸಹ ಆಟಗಾರರು, ತರಬೇತುದಾರರು, ಸ್ನೇಹಿತರು ಮತ್ತು ಅಭಿಮಾನಿಗಳಿಗೆ ನಾನು ಧನ್ಯವಾದ ಹೇಳಲು ಬಯಸುತ್ತೇನೆ ಎಂದು ಬರೆದುಕೊಂಡಿದ್ದಾರೆ.
ಕಾರ್ತಿಕ್‌ಗೆ ಈಗ 37 ವರ್ಷ ವಯಸ್ಸಾಗಿರುವುದರಿಂದ ಮುಂದಿನ ವಿಶ್ವಕಪ್‌ನಲ್ಲಿ ಆಡುತ್ತಾರೆ ಎಂಬ ಭರವಸೆ ಈಗ ಕಡಿಮೆಯಾಗಿದೆ. ಹೀಗಾಗಿ ಕಾರ್ತಿಕ್ ತಮ್ಮ ಪೋಸ್ಟ್‌ನಲ್ಲಿ ನಿವೃತ್ತಿ ಸೂಚನೆ ನೀಡಿದ್ದಾರೆ ಎನ್ನಲಾಗುತ್ತಿದೆ. ಕಾರ್ತಿಕ್ ಈಗ ಇಬ್ಬರು ಪುತ್ರರ ತಂದೆಯಾಗಿದ್ದು, ಕುಟುಂಬದೊಂದಿಗೆ ಸಮಯ ಕಳೆಯಲು ಬಯಸಿದ್ದಾರೆ. ಹೀಗಿರುವಾಗ ಸದ್ಯದಲ್ಲೇ ಅಧಿಕೃತವಾಗಿ ನಿವೃತ್ತಿ ಘೋಷಿಸುವ ಸಾಧ್ಯತೆ ಇದೆ ಎಂದು ಹೇಳಲಾಗ್ತಿದೆ.
View this post on Instagram