ರಾಮನಿಂದಾಗಿಯೇ ಬಿಜೆಪಿ ನಂ.1 ಆಯ್ತಾ? – ಅಡ್ವಾಣಿ-ಮೋದಿ ಯಾರಿಗೆ ಕ್ರೆಡಿಟ್?

ರಾಮನಿಂದಾಗಿಯೇ ಬಿಜೆಪಿ ನಂ.1 ಆಯ್ತಾ? –  ಅಡ್ವಾಣಿ-ಮೋದಿ ಯಾರಿಗೆ ಕ್ರೆಡಿಟ್?

ರಾಮಮಂದಿರ ಅನ್ನೋದು ನಮ್ಮ ದೇಶದಲ್ಲಿ ಕೇವಲ ಧಾರ್ಮಿಕ ವಿಚಾರಕ್ಕಷ್ಟೇ ಸೀಮಿತವಾಗಿಲ್ಲ. ಈ ಒಂದು ಮಂದಿರ ಇಡೀ ದೇಶವನ್ನೇ ಅಕ್ಷರಶ: ಬದಲಾಯಿಸಿಬಿಟ್ಟಿದೆ. ರಾಷ್ಟ್ರ ರಾಜಕೀಯದ ದಿಕ್ಕನ್ನೇ ತಿರುಗಿಸಿದೆ. 500 ವರ್ಷಗಳಿಂದ ಧಾರ್ಮಿಕವಾಗಿ, ರಾಜಕೀಯವಾಗಿ ರಾಮಮಂದಿರ ವಿಚಾರದಲ್ಲಿ ದೇಶದಲ್ಲಾದ ಬೆಳವಣಿಗೆಗಳು ಒಂದೆರಡಲ್ಲ. ಇಂದು ಅಯೋಧ್ಯೆಯಲ್ಲಿ ರಾಮಮಂದಿರ ತಲೆ ಎತ್ತಿ ನಿಂತಿದೆ ಅಂದ್ರೆ ಅದಕ್ಕೆ ಧಾರ್ಮಿಕ ಮಾತ್ರವಲ್ಲ ರಾಜಕೀಯ ಕಾರಣಗಳೂ ಇವೆ. ಹಿಂದೂಗಳ ನಿರಂತರ ಹೋರಾಟ, ಕಾನೂನು ಸಮರ, ರಾಜಕೀಯ ನಿರ್ಧಾರಗಳು ಇವೆಲ್ಲದರ ಪರಿಣಾಮ ರಾಮಜನ್ಮಭೂಮಿಯಲ್ಲಿ ಮಂದಿರ ನಿರ್ಮಾಣವಾಗಿದೆ. ಇವತ್ತಿನ ಎಪಿಸೋಡ್​​ನಲ್ಲಿ ರಾಮಮಂದಿರ ಹೋರಾಟದ ದಿಕ್ಕೇ ಬದಲಾಯಿಸಿದ ರಾಜಕಾರಣಿಗಳು ಯಾರು? ಅಡ್ವಾಣಿ ರಥಯಾತ್ರೆ ಹೇಗಿತ್ತು? ರಾಮಮಂದಿರ ನಿರ್ಮಾಣದಲ್ಲಿ ಪ್ರಧಾನಿ ಮೋದಿಯ ಪಾತ್ರವೇನು ಏನು? ಮಂದಿರದ ಕ್ರೆಡಿಟ್ ಸಲ್ಲಿಬೇಕಿರೋದು ಯಾರಿಗೆ? ರಾಮಮಂದಿರ ಅನ್ನೋದು ರಾಷ್ಟ್ರ ರಾಜಕೀಯವನ್ನ ಶಾಶ್ವತವಾಗಿ ಬದಲಾಯಿಸಿದ್ದು ಹೇಗೆ? ಇವೆಲ್ಲದರ ಬಗ್ಗೆಯೂ ವಿವರವಾದ ಮಾಹಿತಿ ಇಲ್ಲಿದೆ.

ಇದನ್ನೂ ಓದಿ: ರಾಮಾಯಣದಲ್ಲಿ ಲೇಪಾಕ್ಷಿ ಮಹತ್ವದ ಸ್ಥಾನ ಪಡೆದುಕೊಂಡಿರೋದ್ಯಾಕೆ? – ಜಟಾಯು ಬಗ್ಗೆ ನಿಮಗೆಷ್ಟು ಗೊತ್ತು?

1949ರಲ್ಲಿ ಬಾಬ್ರಿ ಮಸೀದಿಯ ಒಳ ಭಾಗದಲ್ಲಿ ರಾಮಲಲ್ಲಾನ ಮೂರ್ತಿ ಕಾಣಿಸಿಕೊಳ್ತಿದ್ದಂತೆ, ರಾಷ್ಟ್ರ ರಾಜಕೀಯದಲ್ಲಿ ಹಲ್​​ಚಲ್ ಶುರುವಾಗಿ ಬಿಡುತ್ತೆ. ಇದಾದ ಕೆಲ ವರ್ಷಗಳಲ್ಲಿ ಹಿಂದೂ ಸಂಘಟನೆ ಮಂದಿರದ ಹೋರಾಟವನ್ನ ತೀವ್ರಗೊಳಿಸುತ್ತೆ. ರಾಮಮಂದಿರ ಅನ್ನೋದು ಪ್ರಮಖ ರಾಜಕೀಯ ವಿಚಾರವಾಗಿ ಬಿಡುತ್ತೆ.

1989ರಲ್ಲಿ ವಿಶ್ವ ಹಿಂದೂ ಪರಿಷತ್  ಬಾಬ್ರಿ ಮಸೀದಿಗೆ ಸಮೀಪದಲ್ಲಿದ್ದ ಖಾಲಿ ಜಾಗದಲ್ಲಿ ರಾಮಮಂದಿರಕ್ಕಾಗಿ ಅಡಿಗಲ್ಲು ಹಾಕಿ ಶಿಲಾನ್ಯಾಸವನ್ನ ನೆರವೇರಿಸುತ್ತೆ. 1990ರ ಸೆಪ್ಟೆಂಬರ್​ 25ರಂದು ಎಲ್.ಕೆ.ಅಡ್ವಾಣಿ ರಥಯಾತ್ರೆ ಶುರು ಮಾಡ್ತಾರೆ. ಮಂದಿರ್ ವಹೀ ಬನಾಯೇಂಗೆ ಅನ್ನುತ್ತಲೇ ಗುಜರಾತ್​ನ ಸೋಮನಾಥದಿಂದ ಅಯೋಧ್ಯೆಗೆ ರಥಯಾತ್ರೆ ಆರಂಭಿಸ್ತಾರೆ. ಅಡ್ವಾಣಿ ರಥಯಾತ್ರೆಯ ಮೂಲ ಉದ್ದೇಶವಾಗಿದ್ದಿದ್ದೇ ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣ. ಮಂದಿರಕ್ಕಾಗಿ ಜನ ಬೆಂಬಲ ಪಡೆಯೋದೆ ರಥೆಯಾತ್ರೆಯ ಪ್ರಮುಖ ಗುರಿಯಾಗಿತ್ತು. ಗುಜರಾತ್​​ನಲ್ಲಿ ರಥಯಾತ್ರೆ ಆರಂಭವಾದಾಗ ನರೇಂದ್ರ ಮೋದಿ ಕೂಡ ಅಡ್ವಾಣಿ ಜೊತೆಗೇ ಇದ್ರು. ಅಡ್ವಾಣಿ ರಥಯಾತ್ರೆಯುದ್ದಕ್ಕೂ ಮೋದಿ ಸಾಥ್ ಕೊಟ್ಟಿದ್ರು. ಗುಜರಾತ್​​ನಲ್ಲಿ ರಥಯಾತ್ರೆ ಸಾಗುವಾಗ ಇತ್ತ ಮೋದಿ ಜನರಿಂದ ಸಹಿ ಸಂಗ್ರಹದ ಕ್ಯಾಂಪೇನ್ ಕೂಡ ಮಾಡಿದ್ರು. ಹಿಂದುತ್ವದ ಪ್ರಯೋಗಾಲಯ ಅಂತಾನೆ ಕರೆಸಿಕೊಂಡಿದ್ದ ಗುಜರಾತ್​​ಲ್ಲಂತೂ ಅಡ್ವಾಣಿ ರಥಯಾತ್ರೆಗೆ ಅದ್ಧೂರಿ ಚಾಲನೆ ಸಿಗುವಂತೆ, ವ್ಯಾಪಕ ಬೆಂಬಲ ಸಿಗುವಂತೆ ನೋಡಿಕೊಂಡಿದ್ದು ನರೇಂದ್ರ ಮೋದಿಯೇ. ಅಸಲಿಗೆ ಅಡ್ವಾಣಿ ರಥಯಾತ್ರೆ ಆರಂಭಿಸೋ ಮುನ್ನವೇ ಮೋದಿ ರಾಮಜನ್ಮಭೂಮಿ ಹೋರಾಟದಲ್ಲಿ ತೊಡಗಿದ್ರು. ಅಯೋಧ್ಯೆಗೆ ಸಂಬಂಧಿಸಿ ವಿಶ್ವ ಹಿಂದೂ ಪರಿಷತ್​​ ಆಯೋಜಿಸ್ತಿದ್ದ ಕಾರ್ಯಕ್ರಮಗಳಲ್ಲಿ ಮೋದಿ ಭರ್ಜರಿ ಭಾಷಣಗಳನ್ನ ಮಾಡ್ತಿದ್ರು. ಹಾಗೆಯೇ ಅಡ್ವಾಣಿ ರಥಯಾತ್ರೆ ವೇಳೆಯೂ ಅಷ್ಟೇ, ಹೋದಲ್ಲೆಲ್ಲಾ ಮೋದಿ ಭಾಷಣಗಳನ್ನ ಮಾಡ್ತಿದ್ರು. ಅದ್ರಲ್ಲೂ ಗುಜರಾತ್​ನಲ್ಲಿನ ರಥಯಾತ್ರೆಯನ್ನ ಮೋದಿ ಸಂಪೂರ್ಣವಾಗಿ ಎನ್​​ಕ್ಯಾಶ್ ಮಾಡಿಕೊಂಡ್ರೂ ಅಂದ್ರೂ ತಪ್ಪಾಗೋದಿಲ್ಲ. ಗುಜರಾತ್​ನಲ್ಲಿ ಹಿಂದೂಗಳನ್ನ ಒಟ್ಟುಗೂಡಿಸೋಕೆ ರಥಯಾತ್ರೆಯನ್ನ ಮೋದಿ ಚೆನ್ನಾಗಿಯೇ ಬಳಸಿಕೊಂಡಿದ್ರು. ಅಡ್ವಾಣಿ ರಥಯಾತ್ರೆ ಗುಜರಾತ್​​ನಾದ್ಯಂತ 600 ಗ್ರಾಮಗಳನ್ನ ಹಾದು ಹೋಗಿತ್ತು. ಪ್ರತಿ ಗ್ರಾಮಗಳಲ್ಲೂ ಮೋದಿ ಭಾಷಣ ಮಾಡಿದ್ರು. ರಥಯಾತ್ರೆಯಿಂದಾಗಿ ಗುಜರಾತ್​​​ನಲ್ಲಿ ಮೋದಿ ಅಕ್ಷರಶ: ಬಿಜೆಪಿಯ ಮುಖವಾಣಿಯಾಗಿಬಿಟ್ಟಿದ್ರು. ನರೇಂದ್ರ ಮೋದಿ ಅಂದ್ರೆ ಯಾರು ಅನ್ನೋದು ಗುಜರಾತ್​ನ ಪ್ರತಿಯೊಬ್ಬರಿಗೂ ಪರಿಚಯವಾಗುತ್ತೆ. ಮೋದಿ ರಾಜಕೀಯದಲ್ಲಿ ಈ ಮಟ್ಟಕ್ಕೆ ಬೆಳೆಯೋಕೆ ರಥಯಾತ್ರೆ ಕೂಡ ಪ್ರಮುಖ ಕಾರಣ ಅನ್ನೋದ್ರಲ್ಲಿ ಎರಡು ಮಾತಿಲ್ಲ. ಅಂದು ಬಿಜೆಪಿ ಭೀಷ್ಮ ಎಲ್.ಕೆ. ಅಡ್ವಾಣಿ​​ ರಥಯಾತ್ರೆ ಪ್ಲ್ಯಾನ್ ಮಾಡಿದ್ದಿರಬಹುದು. ಅಡ್ವಾಣಿಯೇ ರಥಯಾತ್ರೆಯ ಫೇಸ್ ಆಗಿದ್ದಿರಬಹುದು. ಆದ್ರೆ ಇಡೀ ರಥಯಾತ್ರೆಯನ್ನ ಅತ್ಯಂತ ಯಶಸ್ವಿಯಾಗಿ ಆರಂಭಿಸಿ, ದೇಶದುದ್ದಕ್ಕೂ ಅತ್ಯಂತ ಪರಿಣಾಮಕಾರಿಯಾಗಿ ಸಾಗುವಲ್ಲಿ ಪ್ರಮುಖ ಪಾತ್ರವಹಿಸಿದ್ದೇ ನರೇಂದ್ರ ಮೋದಿ. ಅಡ್ವಾಣಿಯ ಪ್ಲ್ಯಾನ್​​ನನ್ನ ಎಫೆಕ್ಟಿವ್ ಆಗಿ ಎಕ್ಸಿಕ್ಯೂಟ್ ಮಾಡುವಲ್ಲಿ ಅಂದು ಮೋದಿ ಸಕ್ಸಸ್ ಆಗಿದ್ರು. ಅದ್ರ ಫಲವನ್ನ ಮೋದಿ ಈಗಲೂ ಕೂಡ ಪಡೀತಿದ್ದಾರೆ.

ಅಡ್ವಾಣಿ ರಥಯಾತ್ರೆ ದಿನಕ್ಕೆ ಸುಮಾರು 300 ಕಿಲೋ ಮೀಟರ್​​ ದೂರ ಸಾಗ್ತಾ ಇತ್ತು. ನಿತ್ಯವೂ ಅಡ್ವಾಣಿ ಕನಿಷ್ಠ ಆರು ಸಾರ್ವಜನಿಕ ಱಲಿಗಳನ್ನ ಉದ್ದೇಶಿಸಿ ಮಾತನಾಡ್ತಿದ್ರು. ಭಾಷಣದುದ್ದಕ್ಕೂ ಅಡ್ವಾಣಿ ಅಯೋಧ್ಯೆ ಬಗ್ಗೆ ಮಾತನಾಡ್ತಾ ಇದ್ರು. ಅಯೋಧ್ಯೆ ವಿವಾದ ಅನ್ನೋದು ರಾಮ ಮತ್ತು ಬಾಬರ್​​ ನಡುವಿನ ಫೈಟ್ ಎಂಬಂತೆ ಬಿಂಬಿಸಿದ್ರು. ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣವಾಗದೆ ಯಾವೊಬ್ಬ ಹಿಂದೂ ಕೂಡ ಶಾಂತಿಯಿಂದ ಬದುಕೋಕೆ ಸಾಧ್ಯವಿಲ್ಲ ಅನ್ನೋ ಮಾತುಗಳನ್ನ ದೇಶದುದ್ದಕ್ಕೂ ಅಡ್ವಾಣಿ ಹೇಳಿದ್ರು. ರಥಯಾತ್ರೆ ಸಾಗೋ ವೇಳೆ ವಿಶ್ವಹಿಂದೂ ಪರಿಷತ್ ಮತ್ತು ಭಜರಂಗದಳದ ಕಾರ್ಯಕರ್ತರು ದಾರಿಯುದ್ದಕ್ಕೂ ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣದ ಪಾಂಪ್ಲೆಟ್​​ಗಳನ್ನ ಹಂಚಿದ್ರು. ಗುಜರಾತ್​ನ ಜೆತ್ಪುರ್ ಅನ್ನೋ ಗ್ರಾಮದಲ್ಲಿ ಹಿಂದೂ ಹೋರಾಟಗಾರರು ತಮ್ಮ ರಕ್ತವನ್ನೇ ದಾನವಾಗಿ ನೀಡಿದ್ರು. ಹಿಂದೂ ಸಂಘಟನೆಗಳ ಮಂದಿ ಅಡ್ವಾಣಿ ಕೈಗೆ ಬಿಲ್ಲು-ಬಾಣ, ತ್ರಿಶೂಲ, ಖಡ್ಗಗಳನ್ನ ಕೊಟ್ಟಿದ್ರು. ಬಿಜೆಪಿ ನಾಯಕರಾಗಿದ್ದ ಪ್ರಮೋದ್ ಮಹಾಜನ್ ಅಂತೂ, ಜನರು ನಮಗೆ ಕೊಟ್ಟಿರೋ ಅಸ್ತ್ರಗಳನ್ನ ಬಳಸಿದ್ರೆ ರಾಮಜನ್ಮಭೂಮಿಯನ್ನ ಒಂದೇ ದಿನದಲ್ಲಿ ಸ್ವತಂತ್ರಗೊಳಿಸ್ತೀವಿ ಎಂದಿದ್ರು.  ರಥಯಾತ್ರೆ ವೇಳೆ ಹಲವೆಡೆ ಗಲಭೆಗಳು ಕೂಡ ನಡೆದಿದ್ವು. ಗುಜರಾತ್, ಬಿಹಾರ, ಉತ್ತರಪ್ರದೇಶ, ಕರ್ನಾಟಕ, ಆಂಧ್ರಪ್ರದೇಶದಲ್ಲಿ ಹಿಂಸಾಚಾರ ಸಂಭವಿಸಿತ್ತು. ಅಡ್ವಾಣಿ ರಥಯಾತ್ರೆ ಉತ್ತರಪ್ರದೇಶವನ್ನ ತಲುಪುತ್ತಲೇ ದೇಶಾದ್ಯಂತ ಭಾರಿ ಕೋಮುಗಲಭೆಗಳಾಗಿದ್ವು. ಕರಸೇವಕರು ಬಾಬ್ರಿ ಮಸೀದಿಯನ್ನ ಟಾರ್ಗೆಟ್ ಮಾಡ್ತಾರೆ ಅನ್ನೋ ಸುದ್ದಿ ದೇಶಾದ್ಯಂತ ಹಬ್ಬಿತ್ತು. ಇದ್ರಿಂದಾಗಿ ಹಲವು ರಾಜ್ಯಗಳಲ್ಲಿ, ಅದ್ರಲ್ಲೂ ಉತ್ತರ ಭಾರತದ ಹೆಚ್ಚಿನ ರಾಜ್ಯಗಳಲ್ಲಿ ಹಿಂಸಾಚಾರ ಭುಗಿಲೆದ್ದಿತ್ತು. 1992ರ ಸೆಪ್ಟೆಂಬರ್​ನಿಂದ ನವೆಂಬರ್​ ಅವಧಿಯಲ್ಲಿ ದೇಶಾದ್ಯಂತ ಒಟ್ಟು 166 ಕೋಮು ಗಲಭೆಗಳು ನಡೆದಿತ್ತು. 564 ಮಂದಿ ಮೃತಪಟ್ಟಿದ್ರು. ಈ ಪೈಕಿ ಉತ್ತರಪ್ರದೇಶದಲ್ಲೇ 224 ಮಂದಿ ಸಾವನ್ನಪ್ಪಿದ್ರು.  ರಥಯಾತ್ರೆಯುದ್ದಕ್ಕೂ ಬೇರೆ ಬೇರೆ ರಾಜ್ಯಗಳಲ್ಲಿ ಕರಸೇವಕರನ್ನ ಅರೆಸ್ಟ್ ಮಾಡಲಾಗಿತ್ತು. ಈ ನಡುವೆ ದೆಹಲಿಯಲ್ಲಿ ಅಡ್ವಾಣಿ ತಮ್ಮ ರಥಯಾತ್ರೆಯನ್ನ ತಾತ್ಕಾಲಿಕವಾಗಿ ಸ್ಥಗಿತಗೊಳಿಸಿ ತಾಕತ್ತಿದ್ರೆ ನನ್ನನ್ನ ಕೂಡ ಬಂಧಿಸುವಂತೆ ಕೇಂದ್ರ ಸರ್ಕಾರಕ್ಕೆ ಸವಾಲು ಹಾಕ್ತಾರೆ. ಆದ್ರೆ ದೆಹಲಿಯಲ್ಲಿರೋವಾಗ ಅಡ್ವಾಣಿಯನ್ನ ಅರೆಸ್ಟ್ ಮಾಡೋದಿಲ್ಲ. ರಥಯಾತ್ರೆ ಬಿಹಾರದತ್ತ ಸಾಗುತ್ತಲೇ ಆಗಿನ ಪ್ರಧಾನಿ ವಿಪಿ ಸಿಂಗ್ ಬಿಹಾರದ ಮುಖ್ಯಮಂತ್ರಿಯಾಗಿದ್ದ ಲಾಲೂ ಪ್ರಸಾದ್​ ಯಾದವ್​ಗೆ ಅಡ್ವಾಣಿಯನ್ನ ಅರೆಸ್ಟ್ ಮಾಡುವಂತೆ ಸೂಚಿಸ್ತಾರೆ. ಹಾಗೆಯೇ ಅಡ್ವಾಣಿಯವರನ್ನ ಉತ್ತರಪ್ರದೇಶಕ್ಕೆ ಪ್ರವೇಶಿಸುವ ಮುನ್ನವೇ ಬಂಧಿಸಲಾಗುತ್ತೆ. ಅತ್ತ ತಮ್ಮ ನಾಯಕನೇ ಅರೆಸ್ಟ್ ಆದ್ರೂ ಕೂಡ ಕರಸೇವಕರು ಮಾತ್ರ ಅಯೋಧ್ಯೆಯತ್ತ ರಥಯಾತ್ರೆ ಮುಂದುವರಿಸ್ತಾರೆ. ಕರಸೇವಕರ ದಂಡು ಅಯೋಧ್ಯೆಯನ್ನ ಪ್ರವೇಶಿಸುತ್ತಲೇ ಪೊಲೀಸರು ತಡೆಯೋಕೆ ಮುಂದಾಗಿದ್ರು. 1 ಲಕ್ಷದ 50 ಸಾವಿರಕ್ಕೂ ಅಧಿಕ ಕರಸೇವಕರನ್ನ ಆಗಿನ ಉತ್ತರಪ್ರದೇಶ ಸರ್ಕಾರ ಬಂಧಿಸಿತ್ತು. ಈ ವೇಳೆ ಪೊಲೀಸರು ಮತ್ತು ಕರಸೇವಕರ ಮಧ್ಯೆ ನಡೆದ ಕಿತ್ತಾಟದಲ್ಲಿ ಹಲವರು ಸಾವನ್ನಪ್ಪುತ್ತಾರೆ. 20 ಸಾವಿರ ಮಂದಿ ಪೊಲೀಸರನ್ನ ಅಯೋಧ್ಯೆಯಲ್ಲಿ ನಿಯೋಜಿಸಲಾಗಿತ್ತಾದ್ರೂ ಬರೋಬ್ಬರಿ 75 ಸಾವಿರಕ್ಕೂ ಅಧಿಕ ಕರಸೇವಕರು ಅಂದು ಅಯೋಧ್ಯೆಗೆ ಒಟ್ಟಾಗಿ ದಾಪುಗಾಲಿಟ್ಟಿದ್ರು. ಹೀಗಾಗಿ ಸುನಾಮಿಯಂತೆ ಬಂದಿದ್ದ ಕರಸೇವೆಕರನ್ನ ಪೊಲೀಸರಿಗೆ ತಡೆಯೋಕೆ ಸಾಧ್ಯವೇ ಆಗೋದಿಲ್ಲ. 1992ರ ಡಿಸೆಂಬರ್ 6ರಂದು ವಿಶ್ವಹಿಂದೂ ಪರಿಷತ್, ಬಿಜೆಪಿ ಸೇರಿದಂತೆ ಹಿಂದೂ ಸಂಘಟನೆಗಳು ಅಯೋಧ್ಯೆಯಲ್ಲಿದ್ದ ಬಾಬ್ರಿ ಮಸೀದಿ ಆವರಣದ ಹೊರ ಭಾಗದಲ್ಲಿ ಸಮಾವೇಶವೊಂದನ್ನ ಹಮ್ಮಿಕೊಳ್ಳುತ್ತೆ. 1,50,000ಕ್ಕೂ ಅಧಿಕ ಕರಸೇವಕರು ಆ ಱಲಿಯಲ್ಲಿ ಭಾಗಿಯಾಗಿದ್ರು. ಎಲ್​.ಕೆ. ಅಡ್ವಾಣಿ, ಮುರಳಿ ಮನೋಹರ್ ಜೋಶಿ ಮತ್ತು ಉಮಾ ಭಾರತಿ ಸಮಾವೇಶವನ್ನುದ್ದೇಶಿಸಿ ಮಾತನಾಡಿದ್ರು. ಅಷ್ಟೊತ್ತಿಗಾಗಲೇ ಬಾಬ್ರಿ ಮಸೀದಿ ಮೇಲೆ ದಾಳಿ ನಡೆಯೋಕೆ ತಯಾರಿ ನಡೀತಿದೆ ಅನ್ನೋ ಬಗ್ಗೆ ಪೊಲೀಸರಿಗೂ ಹಿಂಟ್ ಸಿಕ್ಕಿತ್ತು. ಹೀಗಾಗಿ ಬಾಬ್ರಿ ಮಸೀದಿ ಸುತ್ತಲೂ ಬಿಗಿ ಭದ್ರತಾ ವ್ಯವಸ್ಥೆ ಮಾಡಲಾಗುತ್ತೆ. ಸಮಾವೇಶ ಅಂತ್ಯವಾಗುತ್ತಲೇ ಕರಸೇವಕರು ಬಾಬ್ರಿ ಮಸೀದಿಯತ್ತ ನುಗ್ಗುತ್ತಾರೆ. ಈ ವೇಳೆ ಕರಸೇವಕರನ್ನ ತಡೆಯೋಕೆ ಅಂತಾ ನಿಯೋಜನೆಗೊಂಡಿದ್ದ ಅದೆಷ್ಟೋ ಪೊಲೀಸ್ ಸಿಬ್ಬಂದಿಯೇ ಕರಸೇವಕರನ್ನ ಬಾಬ್ರಿ ಮಸೀದಿಯೊಳಕ್ಕೆ ಬಿಡ್ತಾರೆ. ಕರಸೇವಕರಿಗೆ ಪೊಲೀಸರೇ ಸಹಕಾರ ಕೊಡ್ತಾರೆ. ಬಾಬ್ರಿ ಮಸೀದಿ ಮಾತ್ರವಲ್ಲ ಅಂದು ಅಯೋಧ್ಯೆಯಲ್ಲಿದ್ದ ಇನ್ನೂ ಹಲವು ಮಸೀದಿಗಳನ್ನ ಕೂಡ ಧ್ವಂಸ ಮಾಡಲಾಗಿತ್ತಂತೆ. ಮಸೀದಿ ನೆಲಸಮವಾದ ಬಳಿಕ ದೇಶಾದ್ಯಂತ ಭಯಾನಕ ಗಲಭೆ ನಡೆದಿತ್ತು. 2000ಕ್ಕೂ ಅಧಿಕ ಮಂದಿ ಮೃತಪಟ್ಟಿದ್ರು.

ಅಯೋಧ್ಯೆಯಲ್ಲಿ ಬಾಬ್ರಿ ಮಸೀದಿ ಧ್ವಂಸವಾದ ಬಳಿಕ ರಾಷ್ಟ್ರ ರಾಜಕೀಯದ ಚಿತ್ರಣವೇ ಬದಲಾಗಿ ಬಿಡುತ್ತೆ. ಅಡ್ವಾಣಿಯ ರಾಮ ರಥಯಾತ್ರೆಯಿಂದಾಗಿ ಬಿಜೆಪಿಗೆ ದೇಶಾದ್ಯಂತೆ ಬೆಂಬಲ ಸಿಗೋಕೆ ಶುರುವಾಗುತ್ತೆ. ಅದ್ರಲ್ಲೂ ಹಳ್ಳಿಗಳಲ್ಲಿ ಬಿಜೆಪಿ ಪ್ರಭಾವಿ ಪಕ್ಷವಾಗಿ ಬೆಳೆಯುತ್ತೆ. ಬಿಜೆಪಿ ತನ್ನ ಬೆಂಬಲವನ್ನ ಹಿಂಪಡೆದಿದ್ರಿಂದ ಕೇಂದ್ರದಲ್ಲಿ ವಿಪಿ ಸಿಂಗ್ ಸರ್ಕಾರ ಕೂಡ ಪತನಗೊಳ್ಳುತ್ತೆ. ದೇಶಾದ್ಯಂತ ಬಿಜೆಪಿ ಬಂದ ವೋಟ್​ ಪರ್ಸೆಂಟೇಜ್ ಹೆಚ್ಚಾಗುತ್ತೆ. ಕರ್ನಾಟಕ, ಆಂಧ್ರಪ್ರದೇಶ ಸೇರಿದಂತೆ ದಕ್ಷಿಣದ ರಾಜ್ಯಗಳಲ್ಲೂ ಬಿಜೆಪಿ ಬಲಗೊಳ್ಳುತ್ತೆ. ಕಾಂಗ್ರೆಸ್​ ಬಳಿಕ ದೇಶದ 2ನೇ ಅತೀ ದೊಡ್ಡ ರಾಷ್ಟ್ರೀಯ ಪಕ್ಷವಾಗಿ ಗುರುತಿಸಿಕೊಳ್ಳುತ್ತೆ. 1990ರ ರಥಯಾತ್ರೆ ಬಳಿಕ ಹಿಂದೂಗಳ ಮತ ಬಿಜೆಪಿಯತ್ತ ಹರಿದುಬಂದಿದ್ರಿಂದ, ಬದಲಾದ ರಾಜಕೀಯ ಪರಿಸ್ಥಿತಿಯಲ್ಲಿ ಬಿಜೆಪಿ ಇಂದು ದೇಶದ ನಂಬರ್ 1 ಪಕ್ಷವಾಗಿದೆ.

ಇಲ್ಲಿ ಇನ್ನೊಂದು ವಿಚಾರವನ್ನ ಕೂಡ ಹೇಳಲೇಬೇಕು. ಅಯೋಧ್ಯೆಗೆ ರಥಯಾತ್ರೆ ಮಾಡಿದ ಬಿಜೆಪಿ ಇಂದು ಈ ಮಟ್ಟಕ್ಕೆ ಬೆಳೆದಿರೋದಲ್ಲ. ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣ ಮಾಡಲೇಬೇಕು ಅನ್ನೋದು ಕೇಸರಿ ಕಲಿಗಳು ಗುರಿಯಾಗಿತ್ತು. ಪ್ರತಿ ಬಾರಿಯೂ ಲೋಕಸಭೆ ಚುನಾವಣೆ ವೇಳೆ ಬಿಜೆಪಿ ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣವನ್ನ ತನ್ನ ಪ್ರಣಾಳಿಕೆಯಲ್ಲಿ ಉಲ್ಲೇಖಿಸ್ತಾನೆ ಇತ್ತು. ರಾಮಮಂದಿರ ನಿರ್ಮಾಣ ಅನ್ನೋದು ಕೂಡ ಬಿಜೆಪಿ ಪಾಲಿಗೆ ದೊಡ್ಡ ವೋಟ್​​ಬ್ಯಾಂಕ್ ಆಗಿತ್ತು. ಅಧಿಕಾರಕ್ಕೆ ಬಂದ್ರೆ ಮಂದಿರ ನಿರ್ಮಾಣ ಮಾಡೋದಾಗಿ ಬಿಜೆಪಿ ನಾಯಕರು ಭಾಷಣಗಳನ್ನ ಮಾಡ್ತಾನೆ ಇದ್ರು. 1999ರಲ್ಲಿ ವಾಜಪೇಯಿ ನೇತೃತ್ವದ ಬಿಜೆಪಿ ಸರ್ಕಾರ ಅಧಿಕಾರಕ್ಕೇರಿದ ಬಳಿಕ ಅಯೋಧ್ಯೆ ಭೂ ವಿವಾದಕ್ಕೆ ಸಂಬಂಧಿಸಿ ಕಾನೂನು ಪ್ರಕ್ರಿಯೆ ಇನ್ನಷ್ಟು ಚುರುಕು ಪಡೆದುಕೊಂಡಿತ್ತು. 2014ರಲ್ಲಿ ಮೋದಿ ಸರ್ಕಾರ ಬರುತ್ತೆ..2019ರಲ್ಲಿ ಅಯೋಧ್ಯೆ ವಿವಾದಕ್ಕೆ ಸಂಬಂಧಿಸಿ ಸುಪ್ರೀಂಕೋರ್ಟ್​ನಿಂದ ಫೈನಲ್​ ಜಡ್ಜ್​​ಮೆಂಟ್ ಕೂಡ ಬರುತ್ತೆ. ಕೋರ್ಟ್ ನಿರ್ಣಯದಲ್ಲಿ ಸರ್ಕಾರದ ಪಾತ್ರ ಏನೂ ಇಲ್ಲ ಅನ್ನೋದೇನೊ ನಿಜ. ಆದ್ರೆ, ಅಯೋಧ್ಯೆ ವಿವಾದಕ್ಕೆ ಆದಷ್ಟು ಬೇಗ ಇತಿಶ್ರೀ ಹಾಡಲೇಬೇಕು ಅನ್ನೋ ಉದ್ದೇಶ ಕೋರ್ಟ್​​ ಜೊತೆಗೆ ಸರ್ಕಾರಕ್ಕೂ ಇತ್ತು ಅನ್ನೋದನ್ನ ನಾವಿಲ್ಲಿ ಅಲ್ಲಗೆಳೆಯುವಂತೆಯೇ ಇಲ್ಲ.

ಇನ್ನು ಬಿಜೆಪಿ ಭೀಷ್ಮ ಎಲ್.ಕೆ. ಅಡ್ವಾಣಿ ಈಗ ರಾಮಮಂದಿರ ನಿರ್ಮಾಣವಾಗಿರೋ ವಿಚಾರದಲ್ಲಿ ಒಂದು ಮಹತ್ವದ ಹೇಳಿಕೆಯನ್ನ ಕೊಟ್ಟಿದ್ದಾರೆ. 1990ರಲ್ಲಿ ನಾನು ರಾಮರಥಯಾತ್ರೆಯ ಸಾರಥಿಯಷ್ಟೇ ಆಗಿದ್ದೆ. ಆದ್ರೆ ಅಯೋಧ್ಯೆಯಲ್ಲಿ ರಾಮಮಂದಿರವನ್ನ ನಿರ್ಮಾಣ ಮಾಡೋಕೆ ಭಗವಾನ್ ಶ್ರೀರಾಮಚಂದ್ರ ಪ್ರಧಾನಿ ಮೋದಿಯನ್ನೇ ಆಯ್ಕೆ ಮಾಡಿಕೊಂಡಿದ್ದ. ಹೀಗಾಗಿ ಮೋದಿಯೇ ಈಗ ರಾಮಲಲ್ಲಾನ ಪ್ರಾಣಪ್ರತಿಷ್ಠಾಪನೆ ಮಾಡ್ತಾ ಇದ್ದಾರೆ. ವಿಧಿ ಅನ್ನೋದು ಇವೆಲ್ಲವನ್ನೂ ಮೊದಲೇ ನಿರ್ಧರಿಸಿರುತ್ತೆ ಅನ್ನೋದಾಗಿ ಅಡ್ವಾಣಿ ಹೇಳಿದ್ದಾರೆ. ಇಲ್ಲಿ ಒಂದಂತೂ ಸ್ಪಷ್ಟ. ರಾಮಮಂದಿರದ ಹೋರಾಟದಲ್ಲಿ ಅಡ್ವಾಣಿಯಷ್ಟೇ ಶಿಷ್ಯ ನರೇಂದ್ರ ಮೋದಿಯ ಕೊಡುಗೆ ಕೂಡ ಇದೆ. ಈಗ ಲೋಕಸಭೆ ಚುನಾವಣೆಗೂ ಮುನ್ನ ಮಂದಿರವನ್ನ ಲೋಕಾರ್ಪಣೆಗೊಳಿಸ್ತಾ ಇದ್ದಾರೆ. ಹೀಗಾಗಿ ಚುನಾವಣಾ ಪ್ರಚಾರದ ವೇಳೆ ಈ ಬಾರಿಯೂ ರಾಮಮಂದಿರ ವಿಚಾರವನ್ನ ಬಿಜೆಪಿ ನಾಯಕರು ಪ್ರಸ್ತಾಪಿಸೋದ್ರಲ್ಲಿ ಯಾವುದೇ ಡೌಟ್ ಇಲ್ಲ. 2024ರ ಚುನಾವಣೆಯಲ್ಲಿ ಕೊನೆಯ ಬಾರಿಗೆ ಮಂದಿರ ಪಾಲಿಟಿಕ್ಸ್​ ನಡೆಯೋದಂತೂ ಖಚಿತ.

Sulekha