1 ಮತದಿಂದ ವಿಧಾನಸೌಧ ಪ್ರವೇಶಿಸಿದ್ದ ನಾಯಕ – ಧ್ರುವನಾರಾಯಣ್ ರಾಜಕೀಯ ಹಾದಿಯೇ ರೋಚಕ!

1 ಮತದಿಂದ ವಿಧಾನಸೌಧ ಪ್ರವೇಶಿಸಿದ್ದ ನಾಯಕ – ಧ್ರುವನಾರಾಯಣ್ ರಾಜಕೀಯ ಹಾದಿಯೇ ರೋಚಕ!

ರಾಜ್ಯ ರಾಜಕೀಯದಲ್ಲಿ ಪ್ರಭಾವಿ ನಾಯಕನಾಗಿ ಬೆಳೆದಿದ್ದ ಆರ್.ಧ್ರುವನಾರಾಯಣ್ ಕಾಲನ ಮುಂದೆ ಮಂಡಿಯೂರಿದ್ದಾರೆ. ಹೃದಯಾಘಾತ ಅನ್ನೋದು ಹೃದಯವಂತನ ಉಸಿರನ್ನೇ ನಿಲ್ಲಿಸಿದೆ. ದಿಢೀರ್ ಆಘಾತದಿಂದ ಸಾವಿನ ಮನೆ ಸೇರಿರುವ ಆರ್.ಧ್ರುವನಾರಾಯಣ್ ರಾಜಕೀಯ ಹಾದಿಯೇ ರೋಚಕವಾಗಿದೆ..

1961ರ ಜುಲೈ 31ರಂದು ಚಾಮರಾಜನಗರದ ಹೆಗ್ಗವಾಡಿ ಗ್ರಾಮದಲ್ಲಿ ಜನಿಸಿದ್ದ ಧ್ರುವನಾರಾಯಣ್ ಬೆಂಗಳೂರು ಕೃಷಿ ವಿಶ್ವವಿದ್ಯಾಲಯದಿಂದ ಕೃಷಿ ಪದವಿ ಪಡೆದಿದ್ದರು.. 1983ರಲ್ಲಿ ಕಾಂಗ್ರೆಸ್ ಪಕ್ಷ ಸೇರುವ ಮೂಲಕ ರಾಜಕೀಯ ಪ್ರವೇಶ ಮಾಡಿದ್ದ ಅವರು 1986ರಲ್ಲಿ NSUI ಬೆಂಗಳೂರು​ ಘಟಕದ ಅಧ್ಯಕ್ಷರಾಗಿದ್ದರು.

ಇದನ್ನೂ ಓದಿ : ರಕ್ತವಾಂತಿಯೇ ಧ್ರುವನಾರಾಯಣ್ ಸಾವಿಗೆ ಕಾರಣವಾಯ್ತಾ..?- ವೈದ್ಯರು ಹೇಳಿದ ಸತ್ಯವೇನು..?

1999ರಲ್ಲಿ ಸಂತೇಮರನಹಳ್ಳಿ ವಿಧಾನಸಭಾ ಕ್ಷೇತ್ರದಿಂದ ಚುನಾವಣೆಗೆ ಸ್ಪರ್ಧಿಸಿ ಜನತಾದಳ ಅಭ್ಯರ್ಥಿ ಎ.ಆರ್ ಕೃಷ್ಣಮೂರ್ತಿ ಎದುರು ಸೋಲು ಅನುಭವಿಸಿದ್ದರು.. ಆದ್ರೆ 2004ರಲ್ಲಿ ಸಂತೇಮರನಹಳ್ಳಿ ಕ್ಷೇತ್ರದಿಂದ ಅದೇ ಕೃಷ್ಣಮೂರ್ತಿ ಎದುರು 1 ಮತದ ಅಂತರದಲ್ಲಿ ಗೆಲುವು ಸಾಧಿಸಿದ್ದರು.. ಈ ಗೆಲುವು ರಾಷ್ಟ್ರಾದ್ಯಂತ ಭಾರೀ ಸದ್ದು ಮಾಡಿತ್ತು.. ಹಾಗೇ 2008ರಲ್ಲಿ ಕೊಳ್ಳೇಗಾಲದಿಂದ ಶಾಸಕರಾಗಿ ಆಯ್ಕೆಯಾಗಿದ್ರು..

2009 ಹಾಗೂ 2014ರಲ್ಲಿ ಚಾಮರಾಜನಗರ ಲೋಕಸಭಾ ಕ್ಷೇತ್ರದಿಂದ 2 ಬಾರಿ ಸಂಸದರಾಗಿ ಆಯ್ಕೆಯಾಗಿದ್ರು.. ಆದ್ರೆ 2019ರಲ್ಲಿ ನಡೆದ ಲೋಕಸಭಾ ಚುನಾವಣೆಯಲ್ಲಿ ಶ್ರೀನಿವಾಸ್ ಪ್ರಸಾದ್ ಎದುರು ಸೋಲು ಅನುಭವಿಸಿದ್ದರು.. ವಿಧಾನಸಭೆ ಹಾಗೂ ಲೋಕಸಭೆ ಚುನಾವಣೆಯಲ್ಲಿ ಒಟ್ಟಾರೆ 6 ಬಾರಿ ಸ್ಪರ್ಧಿಸಿದ್ದು 2 ಬಾರಿ ಸೋಲುಂಡಿದ್ದು 4 ಸಲ ಜಯಭೇರಿ ಬಾರಿಸಿದ್ದರು.. ಈ ಸಲ ನಂಜನಗೂಡು ವಿಧಾನಸಭಾ ಕ್ಷೇತ್ರದಿಂದ ಚುನಾವಣಾ ಅಖಾಡಕ್ಕಿಳಿಯಲು ಸಿದ್ಧತೆ ನಡೆದಿದ್ದ ಧ್ರುವನಾರಾಯಣ್ ಟಿಕೆಟ್​ಗಾಗಿ ಅರ್ಜಿಯನ್ನೂ ಕೂಡ ಹಾಕಿದ್ದರು.. ಆದ್ರೆ ಕಾಂಗ್ರೆಸ್ ಅಭ್ಯರ್ಥಿಗಳ ಪಟ್ಟಿ ಬಿಡುಗಡೆಗೂ ಮುನ್ನವೇ ಬಾರದ ಲೋಕ ಸೇರಿದ್ದಾರೆ.

suddiyaana