ಹೆತ್ತವರ ಜೊತೆ ರಾಂಚಿ ಟೆಸ್ಟ್ ಹೀರೋ ಧ್ರುವ್ ಜುರೆಲ್ – ತಂದೆ ತಾಯಿಗೆ ಪ್ರಶಸ್ತಿ ಅರ್ಪಣೆ

ಹೆತ್ತವರ ಜೊತೆ ರಾಂಚಿ ಟೆಸ್ಟ್ ಹೀರೋ ಧ್ರುವ್ ಜುರೆಲ್ – ತಂದೆ ತಾಯಿಗೆ ಪ್ರಶಸ್ತಿ ಅರ್ಪಣೆ

ಚೊಚ್ಚಲ ಪಂದ್ಯದಲ್ಲೇ ಸ್ಟಾರ್ ಆದ ಕ್ರಿಕೆಟಿಗ ಧ್ರುವ ಜುರೆಲ್. ಭಾರತ ಟೆಸ್ಟ್ ತಂಡದ ಯುವ ವಿಕೆಟ್ ಕೀಪರ್-ಬ್ಯಾಟರ್ ಧ್ರುವ್ ಜುರೆಲ್ ಅವರು ಇಂಗ್ಲೆಂಡ್ ವಿರುದ್ಧದ ರಾಂಚಿ ಟೆಸ್ಟ್‌ನಲ್ಲಿ ಮಿಂಚು ಹರಿಸಿದ್ದರು. ಈ ಟೆಸ್ಟ್ ನಲ್ಲಿ ಪಂದ್ಯಶ್ರೇಷ್ಠ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದ್ದರು. ಇದೀಗ ಧ್ರುವ ಜುರೆಲ್ ತನಗೆ ಸಿಕ್ಕ ಪ್ರಶಸ್ತಿಯನ್ನು ಪೋಷಕರಿಗೆ ಅರ್ಪಿಸಿದ್ದಾರೆ.

ಇದನ್ನೂ ಓದಿ: ಫಿಟ್ ಬಾಡಿ.. ಹಳೇ ಹೇರ್‌ಸ್ಟೈಲ್ – ಉದ್ದ ಕೂದಲಿನಲ್ಲಿ ಧೋನಿ ಸ್ಟೈಲಿಶ್ ಲುಕ್, ಮಹಿ ಫಿಟ್‌ನೆಸ್‌ಗೆ ಫ್ಯಾನ್ಸ್ ಫಿದಾ

ಭಾರತ ಮತ್ತು ಇಂಗ್ಲೆಂಡ್ ನಡುವಿನ ಟೆಸ್ಟ್ ಸರಣಿಯಲ್ಲಿ ಗಮನ ಸೆಳೆದಿರುವುದು ಧ್ರುವ ಜುರೆಲ್. 22 ವರ್ಷದ ಭಾರತೀಯ ವಿಕೆಟ್ ಕೀಪರ್ ಮತ್ತು ಬ್ಯಾಟ್ಸ್ಮನ್ ಧ್ರುವ ಜುರೆಲ್ ಅಂತರರಾಷ್ಟ್ರೀಯ ಟೆಸ್ಟ್ ಕ್ರಿಕೆಟ್ ಗೆ ಪಾದಾರ್ಪಣೆ ಮಾಡಿ ಚೊಚ್ಚಲ ಪಂದ್ಯದಲ್ಲಿಯೇ ಅಮೋಘ ಪ್ರದರ್ಶನ ನೀಡಿದ್ದರು. ರಾಂಚಿಯಲ್ಲಿ ನಡೆದ ಸರಣಿಯ ನಾಲ್ಕನೇ ಟೆಸ್ಟ್‌ನಲ್ಲಿ ಧ್ರುವ್ ಜುರೆಲ್ ಎರಡೂ ಇನ್ನಿಂಗ್ಸ್‌ಗಳಲ್ಲೂ ಚೆನ್ನಾಗಿಯೇ ಆಡಿದ್ದರು. ಒಟ್ಟು 129 ರನ್ ಗಳಿಸಿ ಟೀಮ್ ಇಂಡಿಯಾವನ್ನು ಪಂದ್ಯದ ಜೊತೆಗೆ ಸರಣಿಯನ್ನು ಗೆಲ್ಲುವಂತೆ ಮಾಡುವಲ್ಲಿಯೂ ಇವರ ಪಾತ್ರ ದೊಡ್ಡದು. 5ನೇ ಟೆಸ್ಟ್ ಪಂದ್ಯಕ್ಕೂ ಮುನ್ನ ವಿರಾಮದ ಕಾರಣ, ಧ್ರುವ್ ಜುರೆಲ್ ನೇರವಾಗಿ ಆಗ್ರಾದ ತಮ್ಮ ಮನೆಗೆ ತೆರಳಿದ್ದಾರೆ. ಟೀಮ್ ಇಂಡಿಯಾಗೆ ಕಾಲಿಟ್ಟ ಮೇಲೆ ಮೊದಲ ಬಾರಿಗೆ ಪೋಷಕರನ್ನು ಭೇಟಿಯಾಗಿದ್ದಾರೆ. ಈ ವೇಳೆ ಹೆತ್ತವರಿಗೆ ತನಗೆ ಸಿಕ್ಕ ಪುರಸ್ಕಾರವನ್ನು ಅರ್ಪಿಸಿದ್ದಾರೆ.

ಧ್ರುವ್ ಜುರೆಲ್ ಮನೆಗೆ ಬಂದು ಪೋಷಕರಿಗೆ ವಿಶೇಷ ಉಡುಗೊರೆಯನ್ನೂ ನೀಡಿದ್ದಾರೆ. ಈ ಉಡುಗೊರೆಗಳು ರಾಂಚಿ ಟೆಸ್ಟ್‌ನಲ್ಲಿ ಪಡೆದ ಪ್ರಶಸ್ತಿಗಳಾಗಿವೆ. ನಾಲ್ಕನೇ ಟೆಸ್ಟ್ನಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದ್ದಕ್ಕಾಗಿ ಧ್ರುವ್ ಪ್ರಶಸ್ತಿ ಪಡೆದುಕೊಂಡಿದ್ದರು. ಇದರಲ್ಲಿ ಅವರು ತಮ್ಮ ತಾಯಿಗೆ ಪ್ಲೇಯರ್ ಆಫ್ ದಿ ಮ್ಯಾಚ್ ಟ್ರೋಫಿಯನ್ನು ನೀಡಿದ್ದಾರೆ. ಹಾಗೆಯೆ ತಂದೆಗೆ ಸ್ಮಾರ್ಟ್ ಸೇವರ್ ಆಫ್ ದಿ ಮ್ಯಾಚ್ ಪ್ರಶಸ್ತಿಯನ್ನು ಕೊಟ್ಟಿದ್ದಾರೆ.

ಧ್ರುವ್ ಅವರ ಆಟಕ್ಕೆ ಅಭಿಮಾನಿಗಳು ಮತ್ತು ಮಾಜಿ ಕ್ರಿಕೆಟ್ ದಿಗ್ಗಜರು ಮನಸೋತಿದ್ದಾರೆ. ಈ ಯುವ ಆಟಗಾರನನ್ನು ಮಾಜಿ ಭಾರತ ನಾಯಕ ಎಂಎಸ್ ಧೋನಿಯೊಂದಿಗೆ ಹೋಲಿಸಿದ್ದಾರೆ. ಭಾರತ ಮತ್ತು ಇಂಗ್ಲೆಂಡ್ ನಡುವಿನ ಐದನೇ ಟೆಸ್ಟ್ ಮಾರ್ಚ್ 7 ರಂದು ಆರಂಭವಾಗಲಿದೆ. ಈ ಪಂದ್ಯದಲ್ಲಿ ಧ್ರುವ್ ಜುರೆಲ್ ಮೇಲೆ ಎಲ್ಲರ ಚಿತ್ತ ನೆಟ್ಟಿದೆ.

Sulekha