IPL ಅಖಾಡಕ್ಕಿಳಿಯಲು ಧೋನಿ ರೆಡಿ – ICC 3 ಟ್ರೋಫಿ ಗೆದ್ದ ಏಕೈಕ ಕ್ಯಾಪ್ಟನ್
ಜಗಮೆಚ್ಚಿದ ಮಹಿ ಬರೆದ ದಾಖಲೆಗಳೆಷ್ಟು?

IPL ಅಖಾಡಕ್ಕಿಳಿಯಲು ಧೋನಿ ರೆಡಿ – ICC 3 ಟ್ರೋಫಿ ಗೆದ್ದ ಏಕೈಕ ಕ್ಯಾಪ್ಟನ್ಜಗಮೆಚ್ಚಿದ ಮಹಿ ಬರೆದ ದಾಖಲೆಗಳೆಷ್ಟು?

ಭಾರತ ತಂಡ ಕಂಡಂತಹ ಗ್ರೇಟೆಸ್ಟ್ ಕ್ಯಾಪ್ಟನ್ ಮಹೇಂದ್ರ ಸಿಂಗ್ ಧೋನಿ. ತಮ್ಮ ಕ್ರಿಕೆಟ್ ಕರಿಯರ್​ನಲ್ಲಿ  ಭಾರತಕ್ಕೆ ಹಲವು ಐಸಿಸಿ ಟ್ರೋಫಿಗಳನ್ನು ಗೆದ್ದುಕೊಟ್ಟಿದ್ದಾರೆ. ತಮ್ಮ 15 ವರ್ಷಗಳ ಕ್ರಿಕೆಟ್ ಕೆರಿಯರ್​ನಲ್ಲಿ ವಿಶ್ವದಾಖಲೆಗಳನ್ನು ಬರೆದಿದ್ದಾರೆ. ಅದ್ರಲ್ಲೂ ನಾಯಕನಾಗಿ ಇಡೀ ವಿಶ್ವದಲ್ಲೇ ಯಾರೂ ಮಾಡದ ಸಾಧನೆಗಳನ್ನು ಮಾಡಿದ್ದಾರೆ. ಐಪಿಎಲ್​ನಲ್ಲೂ ಕೂಡ ಸಾಧನೆಗಳ ಶಿಖರಕ್ಕೇರಿರೋ ಧೋನಿ ಯಂಗ್​ಸ್ಟರ್​ಗೂ ಸ್ಪೂರ್ತಿಯಾಗಿದ್ದಾರೆ. 43 ವರ್ಷದ ಮಾಹಿ ಈ ಬಾರಿಯೂ ಐಪಿಎಲ್​ನಲ್ಲಿ ಕಣಕ್ಕಿಳಿಯೋದು ಕನ್ಫರ್ಮ್ ಆಗಿದೆ. ಆದ್ರೆ ಅವ್ರ ಆಟವೇ ಪರ ವಿರೋಧಕ್ಕೆ ಕಾರಣ ಆಗಿದೆ. ಐಪಿಎಲ್​ನಲ್ಲಿ ಬ್ರ್ಯಾಂಡ್ ಕ್ರಿಯೇಟ್ ಮಾಡಿರೋ ಧೋನಿ  ಹೆಸರಿನಲ್ಲಿರೋ ದಾಖಲೆಗಳು ಏನು? ನಾಯಕನಾಗಿ ಮಾಡಿರುವ ಸಾಧನೆಗಳು ಎಂಥವು? ಧೋನಿಯನ್ನ ಯಾಕೆ ಲೆಜೆಂಡರಿ ಲೀಡರ್ ಅನ್ನೋದು? ಈ ಬಗ್ಗೆ ಮಾಹಿತಿ ಇಲ್ಲಿದೆ.

ಇದನ್ನೂ ಓದಿ: ದುಲೀಪ್ ಟ್ರೋಫಿ.. KLಗೆ ಅಗ್ನಿಪರೀಕ್ಷೆ – ರಾಹುಲ್ ಟೆಸ್ಟ್ ಭವಿಷ್ಯ ನಿರ್ಧರಿಸುತ್ತಾ?

ಟೀಂ ಇಂಡಿಯಾದ ಮಾಜಿ ಕೂಲ್ ಕ್ಯಾಪ್ಟನ್ ಮಹೇಂದ್ರ ಸಿಂಗ್ ಧೋನಿ 2025ರ ಐಪಿಎಲ್​ನಲ್ಲೂ ಆಡೋದು ಕನ್ಪರ್ಮ್. ಚೆನ್ನೈ ಸೂಪರ್ ಕಿಂಗ್ಸ್​ನ ಮಾಜಿ ಆಟಗಾರ ಸುರೇಶ್ ರೈನಾ ಅವ್ರೇ ಸ್ಪಷ್ಟಪಡಿಸಿದ್ದಾರೆ. 2004 ರಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್ ಕೆರಿಯರ್ ಆರಂಭಿಸಿದ್ದ ಧೋನಿ ಈಗಲೂ ಕ್ರಿಕೆಟ್ ಅಂಗಳದಲ್ಲಿ ಬ್ಯಾಟ್ ಬೀಸ್ತಿದ್ದಾರೆ. ಅಂತಾರಾಷ್ಟ್ರೀಯ ಕ್ರಿಕೆಟ್​ಗೆ ವಿದಾಯ ಹೇಳಿದ್ರೂ ಕುಡ 43 ವರ್ಷದ ಧೋನಿ ಐಪಿಎಲ್​ನಲ್ಲಿ ಮಾತ್ರ ಸ್ಟಾರ್ ಪ್ಲೇಯರ್ ಆಗಿ ಅಭಿಮಾನಿಗಳ ಜೋಶ್ ಹೆಚ್ಚಿಸ್ತಿದ್ದಾರೆ. ಪ್ರತೀ ಐಪಿಎಲ್​ನಲ್ಲೂ ನ್ಯೂ ಲುಕ್​ನಲ್ಲಿ ಕ್ರೀಡಾಂಗಣಕ್ಕೆ ಎಂಟ್ರಿ ಕೊಡೋ ಮಾಹಿಯನ್ನ ನೋಡೋಕಂತ್ಲೇ ಕೋಟಿ ಕೋಟಿ ಅಭಿಮಾನಿಗಳು ಕಾಯ್ತಿರ್ತಾರೆ. ಧೋನಿ ಎಂಥಾ ಚಾಣಾಕ್ಷ ನಾಯಕರಾಗಿದ್ರೂ ಅಷ್ಟೇ ಸಾಮರ್ಥ್ಯವುಳ್ಳ ಆಟಗಾರ ಕೂಡ ಆಗಿದ್ದಾರೆ. ಟೀಂ ಇಂಡಿಯಾ ಪರ ಹಾಗೇ ಐಪಿಎಲ್​ನಲ್ಲಿ ಮಾಹಿ ಮಾಡಿರೋ ಕೆಲ ಸಾಧನೆಗಳನ್ನ ನೋಡಿದ್ರೆ ನಿಜಕ್ಕೂ ಅವ್ರು ಎಂಥಾ ಪ್ಲೇಯರ್ ಅನ್ನೋದು ಗೊತ್ತಾಗುತ್ತೆ.

ಐಸಿಸಿಯ ಮೂರು ಟ್ರೋಫಿಗಳನ್ನು ಗೆದ್ದ ಏಕೈಕ ನಾಯಕ!

ಮಹೇಂದ್ರ ಸಿಂಗ್ ಧೋನಿ ಕ್ಯಾಪ್ಟನ್ ಆಗಿ ಕ್ರಿಕೆಟ್ ಜಗತ್ತಿನಲ್ಲಿ ಅಸಮಾನ್ಯ ಸಾಧನೆಗಳನ್ನೇ ಮಾಡಿದ್ದಾರೆ. ಅಂತರಾಷ್ಟ್ರೀಯ ಕ್ರಿಕೆಟ್​ನಲ್ಲಿ ಐಸಿಸಿಯ ಮೂರು ಟ್ರೋಫಿಗಳನ್ನು ಗೆದ್ದ ಏಕೈಕ ನಾಯಕನೆಂಬ ವಿಶ್ವ ದಾಖಲೆ  ಮಹೇಂದ್ರ ಸಿಂಗ್ ಧೋನಿ ಹೆಸರಿನಲ್ಲಿದೆ. 2007ರಲ್ಲಿ ಭಾರತಕ್ಕೆ ಮೊದಲ ಟಿ20 ವಿಶ್ವಕಪ್ , 2011ರಲ್ಲಿ  ಎರಡನೇ ಏಕದಿನ ವಿಶ್ವಕಪ್ ಹಾಗೇ 2013ರಲ್ಲಿ ಚಾಂಪಿಯನ್ಸ್ ಟ್ರೋಫಿ ಗೆದ್ದುಕೊಡುವ ಮೂಲಕ ಧೋನಿ ಈ ಅಮೋಘ ಸಾಧನೆ ಮಾಡಿದ್ದಾರೆ.

ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ ಅತೀ ಹೆಚ್ಚು ಬಾರಿ ಕ್ಯಾಪ್ಟನ್!

ಕ್ಯಾಪ್ಟನ್ ಕೂಲ್ ಮಾಹಿ 200 ಏಕದಿನ, 70 ಟೆಸ್ಟ್‌ಗಳು ಮತ್ತು 72 ಟಿ20 ಪಂದ್ಯಗಳು ಸೇರಿದಂತೆ ಒಟ್ಟು 332 ಮ್ಯಾಚ್​ಗಳಲ್ಲಿ ಟೀಮ್ ಇಂಡಿಯಾವನ್ನು ಮುನ್ನಡೆಸಿದ್ದಾರೆ. ಈ ಮೂಲಕ ಅಂತಾರಾಷ್ಟ್ರೀಯ ಕ್ರಿಕೆಟ್​ನಲ್ಲಿ ಅತೀ ಹೆಚ್ಚು ಪಂದ್ಯಗಳಲ್ಲಿ ನಾಯಕನಾಗಿ ಕಾಣಿಸಿಕೊಂಡ ಆಟಗಾರ ಎಂಬ ವಿಶ್ವ ದಾಖಲೆ ನಿರ್ಮಿಸಿದ್ದಾರೆ.

7ನೇ ಕ್ರಮಾಂಕದಲ್ಲಿ ಬ್ಯಾಟಿಂಗ್.. 2 ಬಾರಿ ಸೆಂಚುರಿ!

ಟೀಮ್ ಇಂಡಿಯಾ ಪರ ಮಹೇಂದ್ರ ಸಿಂಗ್ ಧೋನಿ 7ನೇ ಕ್ರಮಾಂಕದಲ್ಲಿ ಕಣಕ್ಕಿಳಿದು ಎರಡು ಶತಕಗಳನ್ನು ಬಾರಿಸಿದ್ದಾರೆ. ವಿಶ್ವದ ಯಾವುದೇ ಬ್ಯಾಟರ್ 7ನೇ ಕ್ರಮಾಂಕದಲ್ಲಿ ಕಣಕ್ಕಿಳಿದು ಒಂದಕ್ಕಿಂತ ಹೆಚ್ಚು ಸೆಂಚುರಿ ಸಿಡಿಸಲು ಸಾಧ್ಯವಾಗಿಲ್ಲ. ಹೀಗಾಗಿ ಈ ದಾಖಲೆಯನ್ನು ಅಭೂತಪೂರ್ವ ಸಾಧನೆ ಎಂದೇ ಹೇಳಲಾಗಿದೆ. ಹಾಗೇ ವಿಶ್ವದ ಬೆಸ್ಟ್ ಫಿನಿಶರ್ ಎನಿಸಿಕೊಂಡಿರುವ ಮಹೇಂದ್ರ ಸಿಂಗ್ ಧೋನಿ ಏಕದಿನ ಪಂದ್ಯಗಳಲ್ಲಿ 84 ಬಾರಿ ನಾಟೌಟ್ ಆಗಿ ಹಿಂತಿರುಗಿದ್ದರು. ಇದು ಕೂಡ ವಿಶ್ವ ದಾಖಲೆ ಎಂಬುದು ವಿಶೇಷ.

ಐಪಿಎಲ್ ನಲ್ಲಿ ಹಾಫ್ ಸೆಂಚುರಿಗಳ ಕಮಾಲ್

ಇಂಡಿಯನ್ ಪ್ರೀಮಿಯರ್ ಲೀಗ್​ನಲ್ಲೂ ಸ್ಟಾರ್ ಪ್ಲೇಯರ್ ಆಗಿರುದ ಧೋನಿ ಚೆನ್ನೈ ಸೂಪರ್ ಕಿಂಗ್ಸ್ ನಾಯಕನಾಗಿ ಹಲವು ದಾಖಲೆಗಳನ್ನ ಬರೆದಿದ್ದಾರೆ. ಅದ್ರಲ್ಲೂ 5 ವಿಭಿನ್ನ ಬ್ಯಾಟಿಂಗ್ ಕ್ರಮಾಂಕದಲ್ಲಿ ಅರ್ಧಶತಕ ಗಳಿಸಿದ ಏಕೈಕ ಆಟಗಾರ ಧೋನಿ. ಮೂರು, ನಾಲ್ಕು, ಐದು, ಆರು ಮತ್ತು ಏಳನೇ ಕ್ರಮಾಂಕದಲ್ಲಿ ಬ್ಯಾಟ್ ಬೀಸಿ ಧೋನಿ ಹಾಫ್ ಸೆಂಚುರಿ ಬಾರಿಸಿ ಈ ದಾಖಲೆ ನಿರ್ಮಿಸಿದ್ದಾರೆ.

ಬೆಸ್ಟ್ ಫಿನಿಶರ್ & ಬೆಸ್ಟ್ ವಿಕೆಟ್ ಕೀಪರ್ ಧೋನಿ

ಐಪಿಎಲ್‌ನಲ್ಲಿ 229 ಇನಿಂಗ್ಸ್​ ಆಡಿರುವ ಧೋನಿ ಕೊನೆಯ ಓವರ್‌ನಲ್ಲಿ ಅತೀ ಹೆಚ್ಚು ರನ್ ಗಳಿಸಿದ ಆಟಗಾರನಾಗಿದ್ದಾರೆ. ಒಟ್ಟಾರೆ ಪಂದ್ಯಗಳ ಕೊನೆಯ ಓವರ್​ಗಳಿಂದ ಸಿಎಸ್​ಕೆ ನಾಯಕ ಕಲೆಹಾಕಿದ್ದು ಬರೋಬ್ಬರಿ 667 ರನ್​ಗಳು. ಹಾಗೇ ಐಪಿಎಲ್​ನ ಯಶಸ್ವಿ ವಿಕೆಟ್ ಕೀಪರ್ ದಾಖಲೆ ಕೂಡ ಧೋನಿ ಹೆಸರಿನಲ್ಲಿದೆ. ಸಿಎಸ್​ಕೆ ನಾಯಕ 148 ಕ್ಯಾಚ್ ಔಟ್ ಮತ್ತು 42 ಸ್ಟಂಪಿಂಗ್ ಮೂಲಕ ಧೋನಿ 190 ಆಟಗಾರರಿಗೆ ಪೆವಿಲಿಯನ್ ಹಾದಿ ತೋರಿಸಿದ್ದಾರೆ.

15 ವರ್ಷಗಳ ಕಾಲ ಟೀಂ ಇಂಡಿಯಾ ಪರ ಆಟಗಾರನಾಗಿ, ಕ್ಯಾಪ್ಟನ್ ಆಗಿ, ವಿಕೆಟ್ ಕೀಪರ್ ಆಗಿ ಧೋನಿ ಅಭೂತಪೂರ್ವ ಸಾಧನೆಗಳನ್ನ ಮಾಡಿದ್ದಾರೆ. ಐಪಿಎಲ್​ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಕ್ಯಾಪ್ಟನ್ ಆಗಿ ತಂಡವನ್ನ ಯಶಸ್ವಿಯಾಗಿ ಮುನ್ನಡೆಸಿದ್ದಾರೆ. 17 ಸೀಸನ್​ಗಳ ಪೈಕಿ 5 ಬಾರಿ ತಂಡವನ್ನ ಚಾಂಪಿಯನ್ ಪಟ್ಟಕ್ಕೇರಿಸಿದ್ದಾರೆ. 2025ರ ಐಪಿಎಲ್​ನಲ್ಲೂ ಚೆನ್ನೈ ತಂಡದ ಪರ ಮತ್ತೆ ಮಾಹಿ ಕಣಕ್ಕಿಳಿಯೋದು ಫಿಕ್ಸ್ ಆಗಿದೆ. ಸೋ ಧೋನಿಯನ್ನ ಮತ್ತೊಮ್ಮೆ ಕ್ರೀಸ್​ನಲ್ಲಿ ನೋಡೋಕೆ ಕೋಟಿ ಕೋಟಿ ಫ್ಯಾನ್ಸ್ ಕಾಯ್ತಿದ್ದಾರೆ.

Shwetha M