ನಿವೃತ್ತಿ ಬಗ್ಗೆ ಗುಟ್ಟು ಬಿಟ್ಟುಕೊಡದ ಧೋನಿ – ಮಾತಿನಲ್ಲಿ ಅಚ್ಚರಿ ಮೂಡಿಸಿದ ಮಹಿ..!

ನಿವೃತ್ತಿ ಬಗ್ಗೆ ಗುಟ್ಟು ಬಿಟ್ಟುಕೊಡದ ಧೋನಿ – ಮಾತಿನಲ್ಲಿ ಅಚ್ಚರಿ ಮೂಡಿಸಿದ ಮಹಿ..!

ಚೆನ್ನೈ ಸೂಪರ್​ ಕಿಂಗ್ಸ್ ತಂಡದ ನಾಯಕ ಎಂ.ಎಸ್.ಧೋನಿ ನಿವೃತ್ತಿಯ ಪ್ರಶ್ನೆ ಗಿರಕಿ ಹೊಡೆಯುತ್ತಿದೆ. ಇದು ಧೋನಿಯ ಕೊನೆಯ ಐಪಿಎಲ್​​ ಟೂರ್ನಿ ಅಂತಾನೆ ಹೇಳಲಾಗುತ್ತಿದೆ. ಈ ಬಗ್ಗೆ ಧೋನಿಯನ್ನ ಪದೇ ಪದೆ ಪ್ರಶ್ನಿಸ್ತಿರೋದಕ್ಕೆ ಮಾಜಿ ಕ್ರಿಕೆಟಿಗರೊಬ್ಬರು ಗರಂ ಆಗಿದ್ದಾರೆ. ಅಷ್ಟೇ ಅಲ್ಲ, ನಿವೃತ್ತಿ ವದಂತಿ ಬಗ್ಗೆ ಇನ್ನೂ ಗುಟ್ಟು ಬಿಟ್ಟುಕೊಡದ ಎಂ.ಎಸ್.ಧೋನಿ ಮತ್ತೊಮ್ಮೆ ತಮ್ಮ ಹೇಳಿಕೆ ಮೂಲಕ ಅಭಿಮಾನಿಗಳಲ್ಲಿ ಕುತೂಹಲ ಹೆಚ್ಚಿಸಿದ್ದಾರೆ. ಬುಧವಾರ ಲಖನೌ ವಿರುದ್ಧದ ಪಂದ್ಯಕ್ಕೂ ಮುನ್ನ ಟಾಸ್ ವೇಳೆ ವೀಕ್ಷಕ ವಿವರಣೆಗಾರ ಡ್ಯಾನಿ ಮೊರಿಸ್ಸನ್ ‘ನಿಮ್ಮ ಕೊನೆ ಐಪಿಎಲ್ ಅನ್ನು ಹೇಗೆ ಎಂಜಾಯ್ ಮಾಡುತ್ತಿದ್ದೀರಿ ಎಂದು ಕೇಳಿದ ಪ್ರಶ್ನೆಗೆ, ‘ಇದು ನನ್ನ ಕೊನೆ ಐಪಿಎಲ್ ಎಂಬುದು ನೀವೇ ನಿರ್ಧರಿಸಿದ್ದೀರಿ’ ಎಂದು ಧೋನಿ ಉತ್ತರಿಸಿದರು.

ಇದನ್ನೂ ಓದಿ: ಐಪಿಎಲ್ ನೀತಿ ಸಂಹಿತೆಯನ್ನು ಮೂರು ಬಾರಿ ಉಲ್ಲಂಘಿಸಿದ ವಿರಾಟ್ ಕೊಹ್ಲಿ – ಆರ್‌ಸಿಬಿ ಕೆಲ ಆಟಗಾರರ ಸಂಭಾವನೆಗಿಂತಲೂ ಹೆಚ್ಚು ದಂಡ ಕಟ್ಟಿದ ಕ್ರಿಕೆಟಿಗ..!

ಇನ್ನು ಧೋನಿ ನಿವೃತ್ತಿ ಬಗ್ಗೆ ಪದೇ ಪದೇ ಪ್ರಶ್ನೆ ಮಾಡುತ್ತಿರುವ ಬಗ್ಗೆ ಮಾಜಿ ಕ್ರಿಕೆಟಿಗ ಸೆಹ್ವಾಗ್ ಅಸಮಾಧಾನಗೊಂಡಿದ್ದಾರೆ. ಇದು ಧೋನಿಯ ಕೊನೆಯ ಟೂರ್ನಿ ಆದರೂ, ಅಂಥಾ ಪ್ರಶ್ನೆಗೆ ಉತ್ತರ ನೀಡೋ ಅವಶ್ಯಕತೆ ಇಲ್ಲ. ಅವರು ನಿವೃತ್ತಿಯಾದಾಗ ಗೊತ್ತಾಗುತ್ತೆ ಅಂತಾ ವಿರೇಂದ್ರ ಸೆಹ್ವಾಗ್ ಹೇಳಿದ್ದಾರೆ.

2020ರ ಆಗಸ್ಟ್  15ರಂದು ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಧೋನಿ ವಿದಾಯ ಘೋಷಿಸಿದ್ದರು. ಇದಾದ ಬಳಿಕ ಕೇವಲ ಐಪಿಎಲ್ ಟೂರ್ನಿಯಲ್ಲಿ ಮಾತ್ರ ಪಾಲ್ಗೊಳ್ಳುತ್ತಾ ಬಂದಿದ್ದಾರೆ. ಧೋನಿಯ ಕೆಲವು ಮಾತುಗಳು ಅವರ ನಿವೃತ್ತಿ ವದಂತಿಯನ್ನು ಪುಷ್ಠಿಗೊಳಿಸುತ್ತಿದ್ದರೆ, ಮತ್ತೆ ಕೆಲವು ಮಾತುಗಳು ಇನ್ನೂ ಧೋನಿ ಕ್ರಿಕೆಟ್‌ನಲ್ಲಿ ಮುಂದುವರೆಯಲಿದ್ದಾರೆ ಎನ್ನುವಂತಹ ಸೂಚನೆಗಳು ಸಿಗುತ್ತಿವೆ.

ಎಂ.ಎಸ್.ಧೋನಿ ಈ ಆವೃತ್ತಿ ಐಪಿಎಲ್ ಬಳಿಕ ನಿವೃತ್ತಿಯಾಗಲಿದ್ದಾರೆ ಎಂಬ ವದಂತಿಗಳನ್ನು ಸ್ವತಃ ಚೆನ್ನೈ ತಂಡದ ಕೋಚ್ ಸ್ಟಿಫನ್ ಫ್ಲೆಮಿಂಗ್ ಅಲ್ಲಗಳೆದಿದ್ದು, ಧೋನಿ ತಮ್ಮ ನಿವೃತ್ತಿ ಬಗ್ಗೆ ಯಾವುದೇ ಸೂಚನೆ ನೀಡಿಲ್ಲ ಎಂದಿದ್ದಾರೆ. ಭಾನುವಾರ ಕೋಲ್ಕತಾ ವಿರುದ್ಧದ ಪಂದ್ಯದ ಬಳಿಕ ಮತ್ತೊಮ್ಮೆ ವಿದಾಯದ ಸುಳಿವು ನೀಡಿದಂತೆ ಹೇಳಿಕೆ ನೀಡಿದ್ದಾರೆ. ಪಂದ್ಯ ವೀಕ್ಷಣೆಗೆ ಅಪಾರ ಪ್ರಮಾಣದಲ್ಲಿ ಚೆನ್ನೈ, ಧೋನಿ ಅಭಿಮಾನಿಗಳು ಕ್ರೀಡಾಂಗಣದಲ್ಲಿ ನೆರೆದಿದ್ದರು. ಈ ಬಗ್ಗೆ ಪಂದ್ಯದ ಬಳಿಕ ಪ್ರತಿಕ್ರಿಯಿಸಿದ ಧೋನಿ, ‘ದೊಡ್ಡ ಸಂಖ್ಯೆಯಲ್ಲಿ ಸೇರಿದ್ದ ಅಭಿಮಾನಿಗಳಿಗೆ ಧನ್ಯವಾದಗಳು. ಇವರು ಮುಂದಿನ ಬಾರಿ ಕೆಕೆಆರ್ ತಂಡದ ಜೆರ್ಸಿ ಧರಿಸಿ ಬರಲಿದ್ದಾರೆ. ಅವರು ಈ ಪಂದ್ಯದಲ್ಲಿ ನನಗೆ ಬೀಳ್ಕೊಡುಗೆ ನೀಡಲು ಪ್ರಯತ್ನಿಸಿದರು. ನೆರೆದ ಅಷ್ಟೂ ಪ್ರೇಕ್ಷಕರಿಗೆ ಮತ್ತೊಮ್ಮೆ ಧನ್ಯವಾದ’ ಎಂದು ಹೇಳಿದ್ದರು.

suddiyaana