ಧೋನಿ ಬಾಯ್ಸ್ ಫಾರ್ಮ್ ಕಳ್ಕೊಂಡ್ರಾ.. CSK ಟೀಂ ಕಥೆ ಏನು?

ಧೋನಿ ಬಾಯ್ಸ್ ಫಾರ್ಮ್ ಕಳ್ಕೊಂಡ್ರಾ.. CSK ಟೀಂ ಕಥೆ ಏನು?

ಸನ್ ರೈಸರ್ಸ್ ಹೈದ್ರಾಬಾದ್ ವಿರುದ್ಧದ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಅಕ್ಷರಶಃ ಮಂಕಾಗಿತ್ತು. ಬ್ಯಾಟಿಂಗ್​ನಲ್ಲೂ ಅಬ್ಬರ ಕಾಣ್ತಿಲ್ಲ. ಬೌಲಿಂಗ್​ನಲ್ಲೂ ಕಮಾಲ್ ನಡೀಲಿಲ್ಲ. ಟಾರ್ಗೆಟ್ ಸೆಟ್ ಮಾಡುವಲ್ಲೇ ತಿಣುಕಾಡಿದ ಧೋನಿ ಬಾಯ್ಸ್ ಹೈದ್ರಾಬಾದ್ ಟೀಂ ವಿರುದ್ಧ ಸೋಲೊಪ್ಪಿಕೊಂಡ್ರು. ಅದ್ರಲ್ಲೂ ಎಂಎಸ್ ಧೋನಿಯೇ ಕ್ರೀಸ್​ಗೆ ಇಳಿದರೂ ಚೆನ್ನೈ ಸೂಪರ್ ಕಿಂಗ್ಸ್ ರನ್ ಕೊಳ್ಳೆ ಹೊಡೆಯಲು ಸಾಧ್ಯವಾಗ್ಲೇ ಇಲ್ಲ. ಅಷ್ಟಕ್ಕೂ ಎಸ್​ಆರ್​ಹೆಚ್​ ವಿರುದ್ಧ ರುತುರಾಜ್ ಟೀಂ ಎಡವಿದ್ದೆಲ್ಲಿ ಅನ್ನೋ ಮಾಹಿತಿ ಇಲ್ಲಿದೆ..

ಇದನ್ನೂ ಓದಿ:  RCB ಸೋಲಿಗೆ ಅಶ್ವಿನಿ ಕಾರಣನಾ? – ವಿವಾದದ ಕಿಡಿ ಹಚ್ಚಿದ್ಯಾರು?

ರಾಜೀವ್ ಗಾಂಧಿ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆದ ಐಪಿಎಲ್ ಪಂದ್ಯದಲ್ಲಿ ಸನ್‌ರೈಸರ್ಸ್ ಹೈದರಾಬಾದ್​ ಸಂಘಟಿತ ಬೌಲಿಂಗ್​ ದಾಳಿಗೆ ಚೆನ್ನೈ ಸೂಪರ್ ಕಿಂಗ್ಸ್ ಅಕ್ಷರಶಃ ಡಲ್ ಆಗಿತ್ತು. ನಿಗದಿತ 20 ಓವರ್​ಗಳಲ್ಲಿ 5 ವಿಕೆಟ್​ ಕಳೆದುಕೊಂಡ ಚೆನ್ನೈ 165 ರನ್​ ಗಳಿಸಿತು. ಬೆಟ್ಟದಷ್ಟು ನಿರೀಕ್ಷೆ ಇಟ್ಟುಕೊಂಡಿದ್ದ ಅಭಿಮಾನಿಗಳಿಗೆ ಚೆನ್ನೈ ಆಟಗಾರರ ನೀರಸ ಪ್ರದರ್ಶನ ಬೇಸರ ಮೂಡಿಸಿತು. ನಿರಾಸೆ ಮೂಡಿಸಿದರು. ಮಧ್ಯಮ ಕ್ರಮಾಂಕದಲ್ಲಿ ಆಲ್‌ರೌಂಡರ್ ಶಿವಂ ದುಬೆ ಅಬ್ಬರಿಸಿದ್ದು ಬಿಟ್ಟರೆ ಯಾವುದೇ ಆಟಗಾರನಿಂದಲೂ ಉತ್ತಮ ಪ್ರದರ್ಶನ ಮೂಡಿಬರಲಿಲ್ಲ. ಟಾಸ್ ಸೋತು ಮೊದಲು ಬ್ಯಾಟಿಂಗ್​ ಮಾಡಿದ ಚೆನ್ನೈ ಸೂಪರ್​ ಕಿಂಗ್ಸ್ ಉತ್ತಮ ಬ್ಯಾಟಿಂಗ್​ ಮಾಡುವಲ್ಲಿ ಎಡವಿತು. ಅದರಲ್ಲಿಯೂ ನಿಧಾನಗತಿಯ ಬ್ಯಾಟಿಂಗ್​ ತಂಡಕ್ಕೆ ಮುಳುವಾಯಿತು. ಟಾಸ್ ಗೆದ್ದ ಹೈದರಾಬಾದ್ ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತು. ಇತ್ತ ಬ್ಯಾಟಿಂಗ್​ಗೆ ಇಳಿದ ಚೆನ್ನೈ ಸೂಪರ್ ಕಿಂಗ್ಸ್ ಹೇಳಿಕೊಳ್ಳುವಂಥ ಆರಂಭ ಪಡೆಯಲಿಲ್ಲ. ರಚಿನ್ ರವೀಂದ್ರ ಸ್ಫೋಟಕ ಆರಂಭ ನೀಡುವ ಮೊದಲೇ ವಿಕೆಟ್ ಕೈಚೆಲ್ಲಿದರು. 12 ರನ್ ಸಿಡಿಸಿ ಭುವನೇಶ್ವರ್ ಕುಮಾರ್‌ಗೆ ವಿಕೆಟ್‌ಗೆ ಒಪ್ಪಿಸಿದರು. ನಾಯಕ ರುತುರಾಜ್ ಗಾಯಕ್ವಾಡ್ 26 ರನ್ ಸಿಡಿಸಿದ್ರೂ ಕೂಡ ಸ್ಟ್ರೈಕ್ ರೇಟ್ ನಿರೀಕ್ಷಿತ ಮಟ್ಟದಲ್ಲಿ ಇರಲಿಲ್ಲ. ಅಜಿಂಕ್ಯ ರಹಾನೆ ಕೂಡ ಟಿ20 ಸ್ಟ್ರೈಕ್ ರೇಟ್‌ನಲ್ಲಿ ಅಬ್ಬರಿಸುವಲ್ಲಿ ಫೇಲ್ ಆದ್ರು. ರಹಾನೆ 30 ರನ್ ಕಾಣಿಕೆ ನೀಡಲು 30 ಎಸೆತಗಳು ಬೇಕಾದ್ವು. ಸಿಎಸ್‌ಕೆ ಪರ ಕೊಂಚ ಅಬ್ಬರಿಸಿದ ಶಿವಂ ದುಬೆ ತಂಡಕ್ಕೆ ಚೇತರಿಕೆ ನೀಡಿದರು. ದುಬೆ 24 ಎಸೆತದಲ್ಲಿ 45 ರನ್ ಸಿಡಿಸಿದರು. ದುಬೆ ಹೋರಾಟದಿಂದ ಚೆನ್ನೈ ಸೂಪರ್ ಕಿಂಗ್ಸ್ ಸ್ಪರ್ಧಾತ್ಮಕ ಮೊತ್ತ ಪೇರಿಸಲು ಸಾಧ್ಯವಾಯಿತು. ಇನ್ನು ರವೀಂದ್ರ ಜಡೇಜಾ ಹೋರಾಟ ಚೆನ್ನೈ ತಂಡದ ಮೊತ್ತವನ್ನು 150ರ ಗಡಿ ದಾಟಿಸಿತು. ಇತ್ತ ಡೇರಿಲ್ ಮಿಚೆಲ್ ಸಾಥ್ ಉತ್ತಮ ಸಾಥ್ ನೀಡಿದರು. ಆದರೆ ಮಿಚೆಲ್ ಅಬ್ಬರ ಕೂಡ ನಡೀಲಿಲ್ಲ. ಮಿಚೆಲ್ 11 ಎಸೆತಗಳಲ್ಲಿ 13 ರನ್ ಸಿಡಿಸಿದರು. ರವೀಂದ್ರ ಜಡೇಜಾ 23 ಎಸೆತದಲ್ಲಿ ಅಜೇಯ 31 ರನ್ ಹೊಡೆದ್ರು. ಇತ್ತ ಲಾಸ್ಟ್ ಮೂಮೆಂಟ್​ನಲ್ಲಿ ಎಂಟ್ರಿ ಕೊಟ್ಟ ಧೋನಿ 2 ಎಸೆತಗಳಲ್ಲಿ 1 ರನ್ ಸಿಡಿಸಿದ್ರು. ಈ ಮೂಲಕ ಚೆನ್ನೈ ಸೂಪರ್ ಕಿಂಗ್ಸ್ 5 ವಿಕೆಟ್ ನಷ್ಟಕ್ಕೆ 165 ರನ್ ಸಿಡಿಸಿತು. ಪಂದ್ಯ ವೀಕ್ಷಿಸಲು ಧೋನಿ ಪತ್ನಿ ಸಾಕ್ಷಿ ಧೋನಿ ಬಂದಿದ್ರೂ ಕೂಡ ಸಿಎಸ್‌ಕೆ ಮಿಂಚಿನ ಪ್ರದರ್ಶನ ಕಾಣಿಸಲಿಲ್ಲ. ಹೈದರಾಬಾದ್ ಬೌಲಿಂಗ್ ದಾಳಿಗೆ ಮಂಕಾದ ಚೆನ್ನೈ ಸಾಧಾರಣ ಟಾರ್ಗೆಟ್ ನೀಡಿತ್ತಷ್ಟೇ.

ಚೆನ್ನೈ ಸೂಪರ್​ ಕಿಂಗ್ಸ್​ ನೀಡಿದ ಸುಲಭ ಟಾರ್ಗೆಟ್ ಬೆನ್ನಟ್ಟಿದ ಹೈದರಾಬಾದ್ ತಂಡಕ್ಕೆ ಆರಂಭಿಕರಾಗಿ ಕಣಕ್ಕಿಳಿದ ಟ್ರಾವಿಸ್ ಹೆಡ್​​ ಮತ್ತು ಅಭಿಷೇಕ್​ ಶರ್ಮಾ ಭರ್ಜರಿ ಓಪನಿಂಗ್​ ನೀಡಿದರು.  ಮೊದಲ ವಿಕೆಟ್​ ನಷ್ಟದ ವೇಳೆಗೆ 46 ರನ್​ಗಳ ಬಂದಿತ್ತು. ಸ್ಫೋಟಕ ಬ್ಯಾಟಿಂಗ್ ನಡೆಸಿದ ಅಭಿಷೇಕ್ ಶರ್ಮಾ 12 ಎಸೆತಗಳಲ್ಲಿ 4 ಸಿಕ್ಸರ್​, 3 ಬೌಂಡರಿ ಸಹಿತ 37 ರನ್ ಚಚ್ಚಿ ಔಟಾದರು. ಆರಂಭಿಕ ಆಘಾತದ ಬಳಿಕ ಆರ್ಭಟಿಸಿದ ಟ್ರಾವಿಸ್ ಹೆಡ್ ಮತ್ತು 3ನೇ ಕ್ರಮಾಂಕದಲ್ಲಿ ಕಣಕ್ಕಿಳಿದ ಏಡನ್ ಮಾರ್ಕ್ರಮ್​ ಎರಡನೇ ವಿಕೆಟ್​ಗೆ 60 ರನ್ ಪೇರಿಸಿದರು. ಅಲ್ಲದೆ, ಪವರ್​ ​ಪ್ಲೇನಲ್ಲೇ 78 ರನ್​​ಗಳು ಹರಿದು ಬಂದವು. ಆದರೆ ಮಾರ್ಕ್ರಮ್​ಗೆ ಸಾಥ್ ನೀಡುತ್ತಿದ್ದ ಹೆಡ್ 24 ಎಸೆತಗಳಲ್ಲಿ 3 ಬೌಂಡರಿ, 1 ಸಿಕ್ಸರ್​ನೊಂದಿಗೆ 31 ರನ್ ಗಳಿಸಿ ಮಹೀಶಾ ತೀಕ್ಷಣ ಬೌಲಿಂಗ್​​ನಲ್ಲಿ ಔಟಾದರು. ಮತ್ತೊಂದೆಡೆ ಅರ್ಧಶತಕ ಸಿಡಿಸಿದ ಮಾರ್ಕ್ರಮ್ ತಂಡಕ್ಕೆ ಆಧಾರವಾದರು. 36 ಎಸೆತಗಳಲ್ಲಿ 4 ಬೌಂಡರಿ, 1 ಸಿಕ್ಸರ್​​ನೊಂದಿಗೆ 50 ರನ್ ಕಲೆ ಹಾಕಿದರು. ಉತ್ತಮ ಪ್ರದರ್ಶನ ನೀಡಿ ಗೆಲುವನ್ನು ಸನಿಹಕ್ಕೆ ತಂದಿಟ್ಟು ವಿಕೆಟ್​​ ಒಪ್ಪಿಸಿದರು. ಹೈದ್ರಾಬಾದ್ ಪರ  4ನೇ ಕ್ರಮಾಂಕದಲ್ಲಿ ಬ್ಯಾಟ್ ಬೀಸಿದ ಶಹಬಾಜ್​ ಅಹ್ಮದ್, ನೀರಸ ಪ್ರದರ್ಶನ ನೀಡಿದರು. 19 ಎಸೆತಗಳಲ್ಲಿ 18 ರನ್ ಗಳಿಸಿದರು. ಆರಂಭದಲ್ಲಿ ಎರ್ರಾಬಿರ್ರಿ ಹೊಡೆಸಿಕೊಂಡ ಸಿಎಸ್​ಕೆ ಕೊನೆಯ ಹಂತದಲ್ಲಿ ಟೈಟ್ ಬೌಲಿಂಗ್ ನಡೆಸಿತು. ಆದರೆ ಕೊನೆಯಲ್ಲಿ ಕ್ರೀಸ್​ನಲ್ಲಿದ್ದ ಹೆನ್ರಿಚ್ ಕ್ಲಾಸೆನ್-ನಿತಿಶ್ ರೆಡ್ಡಿ ಗೆಲುವು ತಂದುಕೊಟ್ಟರು. ಮೊಯಿನ್ ಅಲಿ 2 ವಿಕೆಟ್, ದೀಪಕ್ ಚಹರ್, ಮಹೀಶಾ ತೀಕ್ಷಣ ತಲಾ ಒಂದು ವಿಕೆಟ್ ಪಡೆದರು. ಈ ಮೂಲಕ ಸನ್‌ರೈಸರ್ಸ್ ಹೈದರಾಬಾದ್ 18.1 ಓವರ್‌ಗಳಲ್ಲಿ 4 ವಿಕೆಟ್ ಕಳೆದುಕೊಂಡು ಗುರಿ ತಲುಪಿತು. ಅದ್ರಲ್ಲೂ ಹೈದ್ರಾಬಾದ್ ಪರ 7 ಆಟಗಾರರು ಬೌಲಿಂಗ್ ಮಾಡಿದ್ದು ವಿಶೇಷವಾಗಿತ್ತು.  ಶಹಬಾಜ್ ಅಹ್ಮದ್, ಪ್ಯಾಟ್ ಕಮಿನ್ಸ್, ಜಯದೇವ್ ಉನದ್ಕತ್, ಭುವನೇಶ್ವರ್ ಕುಮಾರ್ ಮತ್ತು ಟಿ.ನಟರಾಜನ್ ತಲಾ ಒಂದು ವಿಕೆಟ್​ ಪಡೆದು ಚೆನ್ನೈ ರನ್​ ವೇಗ ತಗ್ಗಿಸಿದರು. ಅಭಿಷೇಕ್ ಶರ್ಮಾ ಉತ್ತಮವಾಗಿ ಬೌಲಿಂಗ್​ ಪ್ರದರ್ಶನ ಮಾಡಿದರು.

ಶುಕ್ರವಾರ ನಡೆದ ಪಂದ್ಯದಲ್ಲಿ ಸಂಘಟಿತ ಹೋರಾಟದ ನೆರವಿನಿಂದ ಚೆನ್ನೈ ಸೂಪರ್ ಕಿಂಗ್ಸ್​ ವಿರುದ್ಧ ಸನ್​ರೈಸರ್ಸ್ ಹೈದರಾಬಾದ್ ಭರ್ಜರಿ ಗೆಲುವು ಸಾಧಿಸಿದೆ. ಯಲ್ಲೋ ಆರ್ಮಿಯನ್ನು 6 ವಿಕೆಟ್​ಗಳಿಂದ ಆರೆಂಜ್ ಆರ್ಮಿ ಸೋಲಿಸಿದೆ. ಸಿಎಸ್​ಕೆ ತಂಡ ಐಪಿಎಲ್ ಟೂರ್ನಿಯಲ್ಲಿ 2ನೇ ಸೋಲು ಅನುಭವಿಸಿದ್ರೆ, ಎಸ್​ಆರ್​​ಹೆಚ್​ ಎರಡನೇ ಜಯದ ನಗೆ ಬೀರಿದೆ. ಪ್ರಸ್ತುತ ಅಂಕಪಟ್ಟಿಯಲ್ಲಿ ಋತುರಾಜ್​ ಗಾಯಕ್ವಾಡ್ ನೇತೃತ್ವದ ಸಿಎಸ್​ಕೆ ತಂಡ 3ನೇ ಸ್ಥಾನದಲ್ಲಿದೆ. ಕಮಿನ್ಸ್ ಪಡೆ 5ನೇ ಸ್ಥಾನದಲ್ಲಿದೆ. ಇಲ್ಲಿ ಹೈದ್ರಾಬಾದ್ ತಂಡದ ವಿಶೇಷತೆ ಏನಂದ್ರೆ ಐದು ಬಾರಿ ಚಾಂಪಿಯನ್​ ಆಗಿರುವ ಮುಂಬೈ ಮತ್ತು ಚೆನ್ನೈ ಎರಡೂ ತಂಡಗಳನ್ನು ಎಸ್​ಆರ್​​ಹೆಚ್​ ಸೋಲಿಸಿದೆ. ಅದ್ರಲ್ಲೂ ಮುಂಬೈ ವಿರುದ್ಧ ಐಪಿಎಲ್ ಇತಿಹಾಸದಲ್ಲೇ ಅತೀ ಹೆಚ್ಚು ರನ್ ಗಳಿಸುವ ಮೂಲಕ ದಾಖಲೆಯ ಜಯ ಗಳಿಸಿದೆ. ಈ ಮೂಲಕ ಈ ಆವೃತ್ತಿಯಲ್ಲೂ ಒಳ್ಳೆಯ ಪ್ರದರ್ಶನದ ನಿರೀಕ್ಷೆಯಲ್ಲಿದೆ.

Shwetha M