ಧರ್ಮಸ್ಥಳದಲ್ಲಿ ಶವ ಹೂತಿಟ್ಟ ಕೇಸ್‌ – ಚಿನ್ನಯ್ಯನಿಗೆ ಲಕ್ಷ ಲಕ್ಷ ಹಣ ಕೊಟ್ಟವರಿಗೆ ಸಂಕಷ್ಟ!

ಧರ್ಮಸ್ಥಳದಲ್ಲಿ ಶವ ಹೂತಿಟ್ಟ ಕೇಸ್‌ – ಚಿನ್ನಯ್ಯನಿಗೆ ಲಕ್ಷ ಲಕ್ಷ ಹಣ ಕೊಟ್ಟವರಿಗೆ ಸಂಕಷ್ಟ!

ಧರ್ಮಸ್ಥಳದಲ್ಲಿ ಶವ ಹೂತಿಟ್ಟ ಕೇಸ್‌ ದಿನಕ್ಕೊಂದು ತಿರುವು ಪಡೆದುಕೊಳ್ತಿದೆ. ಇದೀಗ ಎಸ್‌ಐಟಿ ಪ್ರಕರಣದ ತನಿಖೆ ತೀವ್ರಗೊಳಿಸಿದೆ. ಪ್ರಕರಣದ ಪ್ರಮುಖ ಆರೋಪಿಗಳಾದ ಚಿನ್ನಯ್ಯ ಹಾಗೂ ಆತನ ಪತ್ನಿಯ ಬ್ಯಾಂಕ್ ಖಾತೆಗೆ ಹಣ ವರ್ಗಾವಣೆ ಮಾಡಿದ ಹಲವರಿಗೆ ಎಸ್‌ಐಟಿ ಪೊಲೀಸರು ನೋಟೀಸ್ ಜಾರಿ ಮಾಡಿದ್ದು, ವಿಚಾರಣೆಗೆ ಹಾಜರಾಗುವಂತೆ ಸೂಚಿಸಿದ್ದಾರೆ.

ಇದನ್ನೂ ಓದಿ: ಮುಷ್ತಾಕ್ ಮುಸ್ಲಿಂ ಆಗಿರಬಹುದು, ಆದರೆ ಅವರು ಮನುಷ್ಯರು – ದಸರಾ ಉದ್ಘಾಟಿಸಿ ಸಿಟ್ಟಿನಲ್ಲೇ ಸಿದ್ದು ಮಾತು

ಧರ್ಮಸ್ಥಳದಲ್ಲಿ ನೂರಾರು ಶವಗಳನ್ನ ಹೂತಿಟ್ಟಿದ್ದೇನೆ ಎಂದು ಮಾಸ್ಕ್‌ಮ್ಯಾನ್‌ ಚಿನ್ನಯ್ಯ ಎಲ್ಲರ ಎದುರು ಪ್ರತ್ಯಕ್ಷನಾಗಿದ್ದ. ಆತನ ಹೇಳಿಕೆಯಂತೆ ಎಸ್‌ಐಟಿ ತನಿಖೆ ನಡೆಸಿತ್ತು. ಆತ ತೋರಿಸಿದ ಜಾಗದಲ್ಲೇ ಉತ್ಖನನ ಮಾಡಲಾಗಿತ್ತು. ಇದೀಗ ಚಿನ್ನಯ್ಯನ ಬ್ಯಾಂಕ್ ಖಾತೆಯ ವಿವರಗಳನ್ನು ಈಗಾಗಲೇ ಪಡೆದಿರುವ ಎಸ್ಐಟಿ, ಸುಮಾರು 3 ಲಕ್ಷ ರೂಪಾಯಿಗೂ ಅಧಿಕ ಹಣ ಗೂಗಲ್ ಪೇ ಮತ್ತು ಫೋನ್ ಪೇ ಮೂಲಕ ಜಮೆಯಾಗಿರುವುದನ್ನು ಪತ್ತೆ ಹಚ್ಚಿದೆ. ಈ ಹಣ ವರ್ಗಾವಣೆಗಳ ಆಧಾರದ ಮೇಲೆ, ಹಣ ಕಳುಹಿಸಿದವರ ಸಂಪೂರ್ಣ ವಿವರಗಳನ್ನು ಸಂಗ್ರಹಿಸಲಾಗಿದೆ.

ಇನ್ನು ಚಿನ್ನಯ್ಯನಿಗೆ ಹಣ ವರ್ಗಾವಣೆ ಮಾಡಿದ ವ್ಯಕ್ತಿಗಳನ್ನ ವಿಚಾರಣೆಗೆ ಕರೆಯಲಾಗಿದೆ. ಹಣ ಕಳುಹಿಸಿದವರಿಗೆ ಈಗಾಗಲೇ ನೋಟೀಸ್ ನೀಡಲಾಗಿದ್ದು, ವಿಚಾರಣೆಗೆ ಹಾಜರಾಗುವಂತೆ ಸೂಚನೆ ನೀಡಲಾಗಿದೆ. ಹಣ ವರ್ಗಾವಣೆ ಮಾಡಿರುವ ಉದ್ದೇಶದ, ಈ ಹಣಕಾಸು ವ್ಯವಹಾರಗಳ ಹಿಂದಿನ ಕಾರಣಗಳನ್ನು ತಿಳಿದುಕೊಳ್ಳುವ ಮೂಲಕ ಪ್ರಕರಣದ ವ್ಯಾಪ್ತಿ ಮತ್ತು ಸಂಬಂಧಿಕರ ಬಗ್ಗೆ ಮತ್ತಷ್ಟು ಮಾಹಿತಿ ಸಂಗ್ರಹಿಸಲು ಎಸ್ಐಟಿ ಮುಂದಾಗಿದೆ.

ಈ ನೋಟಿಸ್‌ಗಳಿಂದಾಗಿ ಪ್ರಕರಣದ ತನಿಖೆ ಹೊಸ ಆಯಾಮ ಪಡೆದುಕೊಂಡಿದ್ದು, ಚಿನ್ನಯ್ಯನ ಜಾಲದ ಬಗ್ಗೆ ಇನ್ನಷ್ಟು ಸ್ಫೋಟಕ ಮಾಹಿತಿ ಹೊರಬರುವ ಸಾಧ್ಯತೆ ಇದೆ. ಸದ್ಯ, ಎಸ್ಐಟಿ ಅಧಿಕಾರಿಗಳು ಬೆಂಗಳೂರಿನ ಎಸ್ಐಟಿ ಪೊಲೀಸ್ ಠಾಣೆಯಲ್ಲಿ ತನಿಖೆಯನ್ನು ಮುಂದುವರಿಸಿದ್ದಾರೆ. ಈ ವಿಚಾರಣೆಯ ನಂತರ, ಪ್ರಕರಣಕ್ಕೆ ಸಂಬಂಧಿಸಿದಂತೆ ಮತ್ತಷ್ಟು ಮಾಹಿತಿಗಳು ಬಹಿರಂಗವಾಗುವ ನಿರೀಕ್ಷೆಯಿದೆ.

Shwetha M