ಕೈ ಸಂಸದನೇ ತಲೆಬುರುಡೆ ಕೊಟ್ರಾ? ದ.ಕನ್ನಡ DC ಆಗಿದ್ದ ಸಂಸದ ಸೆಂಥಿಲ್ ಯಾರು?
ಅನನ್ಯ ಭಟ್ ಪಾತ್ರವನ್ನ ಸೃಷ್ಟಿಸಿದ್ರಾ?

ಸಾಕಷ್ಟು ದಿನಗಳಿಂದ ತಮಿಳುನಾಡಿನ ಒಬ್ಬ ರಾಜಕಾರಣಿ ಇದ್ದಾನೆ ಅನ್ನೋ ಆರೋಪ ಕೇಳಿ ಬಂದಿತ್ತು. ಆದ್ರೆ ಈಗ ಧರ್ಮಸ್ಥಳದ ವಿರುದ್ಧ ನಡೆಯುತ್ತಿರುವ ಷಡ್ಯಂತ್ರದ ಹಿಂದೆ ತಮಿಳುನಾಡಿನ ಸಂಸದ ಸಸಿಕಾಂತ್ ಸೆಂಥಿಲ್ ಇದ್ದಾರೆ ಎಂದು ಗಾಲಿ ಜನಾರ್ದನ್ ರೆಡ್ಡಿ ಆರೋಪಿಸಿದ್ದಾರೆ. ಜನಾರ್ದನ ರೆಡ್ಡಿ ಅವರ ಪ್ರಕಾರ, ದಕ್ಷಿಣ ಕನ್ನಡದ ಇಬ್ಬರು ವ್ಯಕ್ತಿಗಳೊಂದಿಗೆ ಸಸಿಕಾಂತ್ ಸೆಂಥಿಲ್ ಸೇರಿ ಧರ್ಮಸ್ಥಳಕ್ಕೆ ಕೆಟ್ಟ ಹೆಸರು ತರುವ ಉದ್ದೇಶದಿಂದ ಕಾರ್ಯಸೂಚಿಗಳನ್ನು ಸಿದ್ಧಪಡಿಸಿದ್ದಾರೆ. ಮುಖ್ಯಮಂತ್ರಿ ಮತ್ತು ಉಪಮುಖ್ಯಮಂತ್ರಿಗಳಿಗೆ ಈ ಪ್ರಕರಣದಲ್ಲಿ ಆಸಕ್ತಿ ಇರಲಿಲ್ಲವಾದರೂ, ಹೈಕಮಾಂಡ್‌ನ ಒತ್ತಡ ತಂದು ಎಸ್‌ಐಟಿ ತನಿಖೆ ಮಾಡಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ. ಹಾಗೇ ಮುಸುಕುಧಾರಿಯೂ ಕೂಡ ತಮಿಳುನಾಡು ಮೂಲದವನು. ಮುಸುಕುಧಾರಿ ಇಷ್ಟು ವರ್ಷ ತಮಿಳುನಾಡಿನಲ್ಲಿಯೇ ವಾಸಿಸುತ್ತಿದ್ದನು. ತಮಿಳುನಾಡಿನ ಆ ವ್ಯಕ್ತಿಗೂ, ಸಸಿಕಾಂತ್ ಸೆಂಥಿಲ್ಗೂ ನಂಟಿದೆ. ಬರುಡೆ ಕೊಟ್ಟು ಕಳುಹಿಸಿದ್ದೇ ಸಸಿಕಾಂತ್ ಅನ್ನೋ ಆರೋಪ ಮಾಡಿದ್ದಾರೆ.
ಯಾರು ಸಸಿಕಾಂತ್ ಸೆಂಥಿಲ್
ಸಸಿಕಾಂತ್ ಸೆಂಥಿಲ್ ತಮಿಳುನಾಡಿದ ತಿರುವಲ್ಲೂರು ಕ್ಷೇತ್ರದ ಕಾಂಗ್ರೆಸ್ ಸಂಸದರಾಗಿದ್ದಾರೆ. ಇದ್ದಕ್ಕೂ ಮುಂಚೆ ಇವರು ದಕ್ಷಿಣ ಕನ್ನಡ ಜಿಲ್ಲೆಯ ಡಿಸಿಯಾಗಿದ್ರು. 2009ರಿಂದ 2019ರವರೆಗೆ ರಾಜ್ಯ ಸರ್ಕಾರದಲ್ಲಿ ಐಎಎಸ್ ಅಧಿಕಾರಿಯಾಗಿ ವಿವಿಧ ಹುದ್ದೆ ನಿಭಾಯಿಸಿದ್ದರು ಸೆಂಥಿಲ್.. ಈ ನಡುವೆ 2017ರಿಂದ ಅವರು ದಕ್ಷಿಣ ಕನ್ನಡದ ಜಿಲ್ಲಾಧಿಕಾರಿಯಾಗಿದ್ದರು. 2019 ರಲ್ಲಿ ಡಿಸಿ ಹುದ್ದೆಗೆ ರಾಜೀನಾಮೆ ನೀಡಿದ ಇವರು 2020ರಲ್ಲಿ ಅವರು ಕಾಂಗ್ರೆಸ್ ಸೇರ್ತಾರೆ.. 2024 ರಲ್ಲಿ ತಮಳಿನಾಡಿನ ತಿರುವಲ್ಲೂರು ಲೋಕಸಭಾ ಕ್ಷೇತ್ರದಿಂದ ಎಲೆಕ್ಷನ್ ನಿಲ್ಲುವ ಸಸಿಕಾಂತ್ ಬಿಜೆಪಿ ವಿರುದ್ಧ ಗೆಲುವು ಪಡೆದು ಸಂಸದರಾಗುತ್ತಾರೆ. ಇವರೇ ಧರ್ಮಸ್ಥಳಕ್ಕೆ ಕಪ್ಪು ಚುಕ್ಕೆ ತರುವುದ್ದಕ್ಕೆ ಪ್ರಯತ್ನ ಪಟ್ಟಿದ್ದಾರೆ ಅನ್ನೋ ಆರೋಪವನ್ನ ರೆಡ್ಡಿ ಮಾಡಿದ್ದಾರೆ.
ಅನನ್ಯ ಭಟ್ ಸುಳ್ಳು ಫೋಟೋ ಕೊಟ್ರಾ?
ಇದೆಲ್ಲಾದರ ನಡುವೆ ಧರ್ಮಸ್ಥಳದಲ್ಲಿ ಪುತ್ರಿ ಅನನ್ಯಾ ಭಟ್ ನಾಪತ್ತೆಯಾಗಿದ್ದಾಳೆ ಎಂದು ದೂರು ನೀಡಿದ್ದ ಸುಜಾತ ಭಟ್ ಸಾಕ್ಷ್ಯಕ್ಕಾಗಿ ಸುಳ್ಳು ಫೋಟೋ ಬಿಡುಗಡೆ ಮಾಡಿರುವ ವಿಚಾರ ಬೆಳಕಿಗೆ ಬಂದಿದೆ. ಹೌದು, ಅನನ್ಯಾ ಭಟ್ ನಾಪತ್ತೆ ಪ್ರಕರಣಕ್ಕೆ ಸಂಬಂಧಿಸಿಂತೆ ಯಾವುದೇ ದಾಖಲೆಯನ್ನು ಸುಜಾತಾ ಭಟ್ ಬಿಡುಗಡೆ ಮಾಡಿರಲಿಲ್ಲ. ಕೊನೆಗೆ ಯಾವುದಾದರೂ ಫೋಟೋ ಬಿಡುಗಡೆ ಮಾಡುವಂತೆ ಒತ್ತಡ ಹೆಚ್ಚಾದ ಬೆನ್ನಲ್ಲೇ ಸುಜಾತ ಭಟ್ ಫೋಟೋ ಬಿಡುಗಡೆ ಮಾಡಿದ್ದರು. ಆದರೆ ಈಗ ಬಿಡುಗಡೆಯಾದ ಫೋಟೋ ಮೃತಪಟ್ಟ ವ್ಯಕ್ತಿಯ ಫೋಟೋ ಎನ್ನುವುದು ಈಗ ಗೊತ್ತಾಗಿದೆ. ಪ್ರಭಾಕರ್ ಬಾಳಿಗ ಅನ್ನುವವರ ಜತೆ ಶಿವಮೊಗ್ಗದ ರಿಪ್ಪನ್‌ಪೇಟೆಯಲ್ಲಿದ್ದ ಸುಜಾತ ನಂತರ ಬೆಂಗಳೂರಿಗೆ ಬಂದ ಬಳಿಕ ರಂಗಪ್ರಸಾದ್ ಎಂಬುವವರ ಜತೆ ಲಿವಿಂಗ್ ಇನ್ ರಿಲೇಶನ್‌ಷಿಪ್‌ನಲ್ಲಿ ಇದ್ದರಂತೆ. ಈ ವೇಳೆ ರಂಗ ಪ್ರಸಾದ್ ಅವರ ಪುತ್ರ ಶ್ರೀವತ್ಸ ವಾಸಂತಿ ಅವರನ್ನು ಮದುವೆಯಾಗಿದ್ದರು. ವಾಸಂತಿ 2007ರಲ್ಲಿಯೇ ಮೃತಪಟ್ಟಿದ್ದರೆ, ಶ್ರೀವತ್ಸ 2015ರಲ್ಲಿ ಮೃತಪಟ್ಟಿದ್ದರು. ರಂಗಪ್ರಸಾದ್ ಈ ವರ್ಷದ ಜನವರಿಯಲ್ಲಿ ಮೃತಪಟ್ಟಿದ್ದರು. ರಂಗಪ್ರಸಾದ್ ಮನೆಯಲ್ಲಿದ್ದಾಗ ಹೇಗೋ ವಾಸಂತಿ ಫೋಟೋವನ್ನು ಸಂಗ್ರಹಿಸಿದ್ದ ಸುಜತಾ ಭಟ್ ಈಗ ಅದೇ ಫೋಟೋವನ್ನು ತೋರಿಸಿ ಈಕೆಯ ಅನನ್ಯಾ ಭಟ್ ಎಂದು ಹೇಳಿದ್ದಾರೆ. ಅಲ್ಲದೇ ಆ ಫೋಟೋಕ್ಕೆ ಇವರೇ ಪೆನ್ನಿನ ಮೂಲಕ ನಾಮ ಹಾಕಲಾಗಿದೆ ಅನ್ನೋ ಮಾತು ಕೂಡ ಕೇಳಿ ಬರ್ತಿದೆ. ಈ ನಿಟ್ಟಿಲ್ಲೂ ಎಸ್‌ಐಟಿ ಹಾಗೂ ಪೊಲೀಸರು ತನಿಖೆ ಮಾಡಲಿದ್ದಾರೆ.
ಮೊದಲ ಪ್ರತಿಕ್ರಿಯೆ ನೀಡಿದ ವೀರೇಂದ್ರ ಹೆಗ್ಗಡೆ
ಧರ್ಮಸ್ಥಳದಲ್ಲಿ ಸಾಮೂಹಿಕವಾಗಿ ಮೃತದೇಹಗಳು ಹೂತು ಹಾಕಿರುವ ಕುರಿತ ಆರೋಪಗಳ ಬಗ್ಗೆ ಇದೇ ಮೊದಲ ಬಾರಿಗೆ ಧರ್ಮಸ್ಥಳದ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ಪ್ರತಿಕ್ರಿಯೆ ನೀಡಿದ್ದಾರೆ. ಭಕ್ತರನ್ನು ದಾರಿ ತಪ್ಪಿಸಲು ಸಾಮಾಜಿಕ ಮಾಧ್ಯಮಗಳಲ್ಲಿ ಈ ಆರೋಪಗಳನ್ನು ಮಾಡಲಾಗಿದೆ. ಇದರಿಂದ ತೀವ್ರ ನೋವುಂಟಾಗಿದೆ. ಎಸ್‌ಐಟಿ ರಚನೆ ಮಾಡಿದ್ದು ಒಳ್ಳೆಯದ್ದು, ಸತ್ಯ ಗೊತ್ತಾಗಲಿದೆ ಅಂತ ಈ ಕೇಸ್ ಬಗ್ಗೆ ಮೊದಲ ಬಾರಿಗೆ ಪ್ರತಿಕ್ರಿಯೆ ನೀಡಿದ್ದಾರೆ.
ದೂರುದಾರನ ತನಿಖೆ ನಡೆಸುತ್ತಿರುವ ಎಸ್‌ಐಟಿ ತಂಡ
ಇವೆಲ್ಲ ವಾದ-ವಿವಾದಗಳ ಪರಿಣಾಮವಾಗಿ ಎಸ್‌ಐಟಿ ತಂಡವು ಧರ್ಮಸ್ಥಳದಲ್ಲಿ ನೆಲ ಅಗೆದು ಶವ ಶೋಧ ಮಾಡುವ ಕೆಲಸಕ್ಕೆ ಬ್ರೇಕ್ ನೀಡಿದೆ. ಈಗ ಅಗೆದಿರುವ ಮಣ್ಣನ್ನ ಹಾಗೂ ಸಿಕ್ಕಿರುವ ಮೂಳೆಗಳ ತನಿಖೆಯನ್ನು ನಡೆಸುತ್ತಿದೆ. 17 ಸ್ಥಳಗಳ ಉತ್ಖನನದ ವಿಡಿಯೋಗಳನ್ನು ತೋರಿಸಿ ದೂರುದಾರನನ್ನು ಪ್ರಶ್ನಿಸಲು ಆರಂಭಿಸಿದೆ. ಆರಂಭದಲ್ಲಿ ತಲೆಬುರುಡೆ ಕೊಟ್ಟಿದ್ದನ್ನು ಅಧಿಕಾರಿಗಳು ಪ್ರಶ್ನೆ ಮಾಡಿದ್ದು, ಆತ ಅಸ್ಪಷ್ಟ ಉತ್ತರ ಕೊಟ್ಟಿರುವುದಾಗಿ ಹಾಗೂ 2014 ರ ಬಳಿಕ ತಮಿಳುನಾಡಿನಲ್ಲಿ ನೆಲೆಸಿದ್ದಾಗಿ ಆತ ಮಾಹಿತಿ ಕೊಟ್ಟಿದ್ದಾನೆ ಅನ್ನೋ ಮಾಹಿತಿ ಕೂಡ ಬಂದಿದೆ.

ನೋಡಿರಿ

