ಧರ್ಮಸ್ಥಳದಲ್ಲಿ ನೂರಾರು ಶವ ಹೂತಿಟ್ಟ ಪ್ರಕರಣ – ಅನಾಮಿಕನ ವಶಕ್ಕೆ ಪಡೆಯಲು SIT ಚಿಂತನೆ!

ಧರ್ಮಸ್ಥಳದಲ್ಲಿ ನೂರಾರು ಶವ ಹೂತಿಟ್ಟ ಪ್ರಕರಣ – ಅನಾಮಿಕನ ವಶಕ್ಕೆ ಪಡೆಯಲು SIT ಚಿಂತನೆ!

ಧರ್ಮಸ್ಥಳದಲ್ಲಿ ಶವ ಹೂತ ಪ್ರಕರಣ ದಿನಕ್ಕೊಂದು ತಿರುವನ್ನು ಪಡೆಯುತ್ತಿದೆ. ಅನಾಮಿಕ ವ್ಯಕ್ತಿಯ ದೂರಿನ ಆಧಾರದ ಮೇಲೆ  ವಿಶೇಷ ತನಿಖಾ ದಳ ತನಿಖೆ ಆರಂಭಿಸಿತ್ತು. ಅನಾಮಿಕ ವ್ಯಕ್ತಿ ಗುರುತಿಸಿದ್ದ ಹದಿನೇಳು ಪಾಯಿಂಟ್ ನಲ್ಲಿ ಅಗೆಯಲಾಗಿದ್ದು ಯಾವುದೇ ಕುರುಹು ಪತ್ತೆಯಾಗಿಲ್ಲ. ಇದರ ಬೆನ್ನಲ್ಲೇ ಎಸ್​ಐಟಿ ಅನಾಮಿಕನನ್ನು ತೀವ್ರ ವಿಚಾರಣೆಗೆ ಒಳಪಡಿಸಿದೆ. ದೂರಿನ ಮೇಲೆಯೇ ಸದ್ಯ ಅನುಮಾನ ವ್ಯಕ್ತವಾದ ಕಾರಣ ಆತನನ್ನು ವಶಕ್ಕೆ ಪಡೆಯಲು ಎಸ್​ಐಟಿ ಚಿಂತನೆ ನಡೆಸಿದೆ ಎಂದು  ವರದಿಯಾಗಿದೆ.

ನೂರಾರು ಶವವನ್ನು ಹೂತಿದ್ದೇನೆ ಎಂದು ಅನಾಮಿಕ ದೂರು ಕೊಟ್ಟ ಹಿನ್ನಲೆಯಲ್ಲಿ, ಆರಂಭದಲ್ಲಿ ಸಾಕಷ್ಟು ಕುತೂಹಲಗಳು ಇದ್ದವು. ಯಾವಾಗ, ಈತನ ಹೇಳಿಕೆಯು ದಾರಿ ತಪ್ಪಿಸುವಂತಿತ್ತೋ, ಜನರ ಆಕ್ರೋಶವೂ ಹೆಚ್ಚಾಗುತ್ತಾ ಬಂದವು. ವಿರೋಧ ಪಕ್ಷದ ನಾಯಕರು ಕೂಡ ಈ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ್ರು. ಅನಾಮಿಕ ವ್ಯಕ್ತಿ ದಾರಿ ತಪ್ಪಿಸುವ ಕೆಲಸ ಮಾಡುತ್ತಿದ್ದಾನೆ. ಆತನನ್ನ ವಶಕ್ಕೆ ಪಡೆದು ವಿಚಾರಣೆ ನಡೆಸಬೇಕು ಎಂದು ಸದನದಲ್ಲಿ ಒತ್ತಾಯಿಸಿದ್ರು. ಈ ಬೆನ್ನಲ್ಲೇ ಉತ್ಖನನವನ್ನು ಸದ್ಯಕ್ಕೆ ಸ್ಥಗಿತಗೊಳಿಸಿರುವುದಾಗಿ ಗೃಹ ಸಚಿವ ಡಾ. ಜಿ ಪರಮೇಶ್ವರ ಸೋಮವಾರ ತಿಳಿಸಿದ್ದಾರೆ. ಇದೀಗ ದೂರಿನ ಮೇಲೆಯೇ ಸದ್ಯ ಅನುಮಾನ ವ್ಯಕ್ತವಾದ ಕಾರಣ ಆತನನ್ನು ವಶಕ್ಕೆ ಪಡೆಯಲು ಎಸ್​ಐಟಿ ಚಿಂತನೆ ನಡೆಸಿದೆ. ಆತನನ್ನು ಸುಪರ್ದಿಗೆ ಪಡೆದು ವಿಚಾರಣೆಗೆ ಒಳಪಡಿಸಿದರೆ ಹೆಚ್ಚಿನ ಮಾಹಿತಿ ದೊರೆಯುವ ಸಾಧ್ಯತೆ ಇರುವುದರಿಂದ ಈ ಕ್ರಮಕ್ಕೆ ಎಸ್​ಐಟಿ ಮುಂದಾಗಿದೆ ಎನ್ನಲಾಗಿದೆ. ಆದರೆ, ದೂರುದಾರ ಸಾಕ್ಷ್ಯವೂ ಆಗಿರುವುದರಿಂದ ಆತನನ್ನು ವಶಕ್ಕೆ ಪಡೆಯಲು ಕಾನೂನು ತೊಡಕು ಎದುರಾಗಿದೆ.

ಇನ್ನು, ಅನಾಮಿಕ ದೂರುದಾರನನ್ನು ಸದ್ಯದ ಮಟ್ಟಿಗೆ ಪ್ರಕರಣದ ಸಾಕ್ಷಿಯನ್ನಾಗಿ ಪರಿಗಣಿಸಲಾಗಿದೆ. ಹೀಗಾಗಿ, ಸಾಕ್ಷ್ಯ ಸಂರಕ್ಷಣಾ ಕಾಯ್ದೆಯಡಿ ಆತ ರಕ್ಷಣೆಯಲ್ಲಿದ್ದಾನೆ. ಇದರಿಂದಾಗಿ ಆತನನ್ನು ವಶಕ್ಕೆ ಪಡೆಯುವುದು ಅಥವಾ ಬಂಧಿಸುವುದು ಸಾಧ್ಯವಿಲ್ಲ. ಆದಾಗ್ಯೂ, ಕೆಲವು ಪ್ರಬಲ ವಿಚಾರಗಳನ್ನು ಮುಂದಿಟ್ಟುಕೊಂಡು ಆತನನ್ನು ವಶಕ್ಕೆ ಪಡೆಯಲು ಎಸ್​ಐಟಿ ಉದ್ದೇಶಿಸಿದೆ ಎನ್ನಲಾಗಿದೆ. ಕೆಲ ಪ್ರಬಲ ಸಾಕ್ಷ್ಯಗಳ ಮೂಲಕ ಕೋರ್ಟ್​ಗೆ ಅರ್ಜಿ ಸಲ್ಲಿಸಲು ಎಸ್ಐಟಿ ಪ್ಲಾನ್ ಮಾಡಿಕೊಂಡಿದೆ ಎಂದು ಮೂಲಗಳು ತಿಳಿಸಿವೆ.

ಈ ಪ್ರಕರಣದ ಸಂಬಂಧ ಸುಳ್ಳು ಮಾಹಿತಿ ನೀಡಿದ ಅನುಮಾನವಿದೆ ಎಂದು ಕೋರ್ಟ್​​ಗೆ ವರದಿ ನೀಡುವ ಸಾಧ್ಯತೆ. ಈ ಮೂಲಕ ನ್ಯಾಯಾಲಯದಿಂದ ಅನಾಮಿಕನ ಬಂಧನಕ್ಕೆ ಅನುಮತಿ ಪಡೆಯಬಹುದು. ಸುಳ್ಳು ದೂರು ಅಥವಾ ತನಿಖೆಗೆ ಅಡ್ಡಿ ಆರೋಪಿಸಿ ಬೇರೆ FIR ದಾಖಲಿಸಿ ಬಂಧಿಸಬಹುದು. ಅನಾಮಿಕ ನೀಡಿದ ಮಾಹಿತಿಯು ಸುಳ್ಳು ಎಂದು ಸಾಕ್ಷ್ಯಗಳ ಮೂಲಕ ಸಾಬೀತು ಪಡಿಸಬೇಕು. ಆಗ Witness Protection Act ಅಡಿಯಲ್ಲಿ ಅವನಿಗೆ ದೊರೆಯುವ ರಕ್ಷಣೆ ಹಿಂತೆಗೆತ ಸಾಧ್ಯತೆ. ಎಸ್ಐಟಿ ಬಳಿ ಅನಾಮಿಕನ ವಿರುದ್ಧ ಸುಳ್ಳು ಮಾಹಿತಿ, ತಪ್ಪು ದೂರು, ತನಿಖೆಗೆ ಅಡ್ಡಿ ಕೊಟ್ಟಿದ್ದಾನೆ ಎಂಬ ಸಾಕ್ಷ್ಯ ಇರಬೇಕು. ಎಸ್ಐಟಿ ಆತನ ವಿರುದ್ಧ ಹೊಸ FIR (BNS 209, 227, 229 ಇತ್ಯಾದಿ ಅಡಿಯಲ್ಲಿ) ದಾಖಲಿಸಬಹುದು ಅಥವಾ ಇದೇ ಸಾಕ್ಷ್ಯಗಳ ಆಧಾರದಲ್ಲಿ ಕೋರ್ಟ್‌ಗೆ ಅರ್ಜಿ ಸಲ್ಲಿಸಬಹುದು. ಅನಾಮಿಕ ಸಾಕ್ಷಿ ಸುಳ್ಳು ಮಾಹಿತಿ ನೀಡಿದ್ದಾನೆ, ತನಿಖೆಗೆ ಅಡ್ಡಿಪಡಿಸಿದ್ದಾನೆ ಎಂಬ ನಿಖರ ಕಾರಣ ನೀಡುವುದು. ಅವನ ಹೇಳಿಕೆ ಮತ್ತು ನಂತರ ಪತ್ತೆಯಾದ ವಾಸ್ತವಾಂಶಗಳ ನಡುವಿನ ವೈರುಧ್ಯವನ್ನು ಕೋರ್ಟ್​ಗೆ ಮನವರಿಕೆ ಮಾಡಿಕೊಡುವುದು. ಉತ್ಖನನದಲ್ಲಿ ಏನೂ ಸಿಗದಿರುವುದರ ಜೊತೆಗೆ ತಜ್ಞರ ಪ್ರಾಥಮಿಕ ವರದಿಗಳನ್ನು ಸಲ್ಲಿಸುವುದು.

ಅನಾಮಿಕನ ಬಗ್ಗೆ ಕೋರ್ಟ್​​ಗೆ ಮನವರಿಕೆ ಮಾಡಿಕೊಟ್ಟರೆ ಆಗ ಆತನನ್ನು ಸಾಕ್ಷಿಯಿಂದ ಆರೋಪಿಯಾಗಿ ಬದಲಾಯಿಸಲು ತಕ್ಕ ಆಧಾರ ಇದೆಯೇ ಎಂದು ಕೋರ್ಟ್ ನಿರ್ಧರಿಸುತ್ತದೆ. ಒಂದು ವೇಳೆ ಕೋರ್ಟ್​​, ಅನಾಮಿಕನನ್ನು ಆರೋಪಿಯನ್ನಾಗಿಸಲು ಅನುಮತಿ ನೀಡಿದರೆ ಆಗ ಎಸ್​ಐಟಿ ವಶಕ್ಕೆ ಪಡೆಯಬಹುದಾಗಿದೆ. ಹೀಗಾಗಿ ಹಲವು ಆಯಾಮಗಳಲ್ಲಿ ಸಾಕ್ಷ್ಯ ಸಂಗ್ರಹಿಸಿ ಕೋರ್ಟ್​ಗೆ ಸಲ್ಲಿಸಲು ಎಸ್ಐಟಿ ಸಿದ್ಧತೆ ಮಾಡಿಕೊಳ್ಳುತ್ತಿದೆ.

Shwetha M