ವಿಮಾನ ರದ್ದಾದರೆ ಟೆನ್ಷನ್ ಬೇಡ – ಎಷ್ಟು ಹಣ ವಾಪಸ್ ಸಿಗುತ್ತೆ ಗೊತ್ತಾ?

ವಿಮಾನ ರದ್ದಾದರೆ ಟೆನ್ಷನ್ ಬೇಡ – ಎಷ್ಟು ಹಣ ವಾಪಸ್ ಸಿಗುತ್ತೆ ಗೊತ್ತಾ?

ನವದೆಹಲಿ: ವಿಮಾನ ಪ್ರಯಾಣಿಕರಿಗೆ ನಾಗರಿಕ ವಿಮಾನಯಾನ ನಿರ್ದೇಶನಾಲಯ ಸಿಹಿಸುದ್ದಿಯೊಂದನ್ನು ನೀಡಿದೆ. ಇನ್ನು ಮುಂದೆ ವಿವಿಧ ಕಾರಣಗಳಿಂದ ವಿಮಾನದ ಟಿಕೆಟ್ ರದ್ದಾದರೆ ಅಥವಾ ಕಾಯ್ದಿರಿಸಿದ ದರ್ಜೆಯಲ್ಲೇ ಪ್ರಯಾಣಿಸಲು ಅವಕಾಶ ದೊರೆಯದಿದ್ದರೆ ವಿಮಾನಯಾನ ಸಂಸ್ಥೆಗಳು ಪ್ರಯಾಣಿಕರಿಗೆ ಶೇ 75ರಷ್ಟು ಹಣ ವಾಪಸ್ ನೀಡಬೇಕೆಂದು ಡಿಜಿಸಿಎ ಸೂಚಿಸಿದೆ.

ಅಂತಾರಾಷ್ಟ್ರೀಯ ವಿಮಾನ ಪ್ರಯಾಣದ ಟಿಕೆಟ್ ದರ ರದ್ದಾದರೆ ಅಥವಾ ದರ್ಜೆ ಬದಲಾದರೆ ಶೇ 30ರಿಂದ 75ರ ವರೆಗೆ ರೀಫಂಡ್ ಆಗಲಿದೆ. ಆದರೆ, ಇದು ಟಿಕೆಟ್ ವೆಚ್ಚ, ತೆರಿಗೆ, ಪ್ರಯಾಣದ ದೂರ ಇತ್ಯಾದಿ ಅಂಶಗಳಿಗೆ ಅನುಗುಣವಾಗಿ ವ್ಯತ್ಯಾಸವಾಗಲಿದೆ. ಪರಿಷ್ಕೃತ ನಿಯಮ ಫೆಬ್ರವರಿ 15ರಿಂದ ಅಸ್ತಿತ್ವಕ್ಕೆ ಬರಲಿದೆ ಎಂದು ಡಿಜಿಸಿಎ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ: ಸುಪ್ರೀಂನಲ್ಲೂ ಕನ್ನಡದಲ್ಲಿ ತೀರ್ಪು ಲಭ್ಯ – ಸ್ಥಳೀಯ ಭಾಷೆಗಳಿಗೆ ಆದ್ಯತೆ

ಟಿಕೆಟ್ ಕಾಯ್ದಿರಿಸಿದ ದರ್ಜೆಯ ಪ್ರಯಾಣಕ್ಕೆ ಅವಕಾಶ ಸಿಗದೇ ಇರುವ ಬಗ್ಗೆ ಹಾಗೂ  ವಿಮಾನಯಾನ ಸಂಸ್ಥೆಗಳೇ ಟಿಕೆಟ್​ ಅನ್ನು ಡೌನ್​ಗ್ರೇಡ್ (ಕಾಯ್ದಿರಿಸಿದ ದರ್ಜೆಗಿಂತ ಕೆಳಗಿನ ದರ್ಜೆಯ ಪ್ರಯಾಣಕ್ಕೆ ಅವಕಾಶ ನೀಡುವುದು) ಮಾಡುತ್ತಿರುವ ಬಗ್ಗೆ ಪ್ರಯಾಣಿಕರಿಂದ ಅನೇಕ ದೂರುಗಳು ಕೇಳಿ ಬಂದಿದ್ದವು. ಈ ಹಿನ್ನೆಲೆ ನಿಯಮದಲ್ಲಿ ಪರಿಷ್ಕರಣೆ ಮಾಡಲಾಗಿದೆ ಎಂದು ಡಿಜಿಸಿಎ ಅಧಿಕಾರಿಗಳು ತಿಳಿಸಿದ್ದಾರೆ.

ಟಿಕೆಟ್​ ಡೌನ್​ಗ್ರೇಡ್ ಆದ ಸಂದರ್ಭಗಳಲ್ಲಿ ವಿಮಾನಯಾನ ಸಂಸ್ಥೆಗಳು ಪೂರ್ಣ ಪ್ರಮಾಣದಲ್ಲಿ ರೀಫಂಡ್ ಮಾಡುವ ಬಗ್ಗೆ ಡಿಜಿಸಿಎ 2022ರ ಡಿಸೆಂಬರ್​ನಲ್ಲಿ ಪ್ರಸ್ತಾಪಿಸಿತ್ತು. ಜತೆಗೆ, ಸಂತ್ರಸ್ತ ಪ್ರಯಾಣಿಕರಿಗೆ ಉಚಿತ ಪ್ರಯಾಣದ ಅವಕಾಶ ಕಲ್ಪಿಸುವಂತೆಯೂ ಪ್ರಸ್ತಾಪ ಮುಂದಿಟ್ಟಿತ್ತು. ನಂತರ ಆ ಪ್ರಸ್ತಾವಗಳಲ್ಲಿ ತಿದ್ದುಪಡಿ ಮಾಡಿ ಶೇ 75ರ ರೀಫಂಡ್ ಮತ್ತು ಅದೇ ಟಿಕೆಟ್​​ನಲ್ಲಿ ಪ್ರಯಾಣದ ಅವಕಾಶ ಕಲ್ಪಿಸಿ ನಿಯಮ ರೂಪಿಸಲಾಗಿದೆ ಎಂದು ಅಧಿಕಾರಿ ತಿಳಿಸಿದ್ದಾರೆ.

suddiyaana