ಆದಿ ಸುಬ್ರಹ್ಮಣ್ಯ ಕ್ಷೇತ್ರದ ಬಾಗಿಲ ತನಕ ನುಗ್ಗಿದ ನೀರು – ಕುಕ್ಕೆಯಲ್ಲಿ ಮಳೆಕಾಟಕ್ಕೆ ಭಕ್ತರ ಪರದಾಟ

ಆದಿ ಸುಬ್ರಹ್ಮಣ್ಯ ಕ್ಷೇತ್ರದ ಬಾಗಿಲ ತನಕ ನುಗ್ಗಿದ ನೀರು – ಕುಕ್ಕೆಯಲ್ಲಿ ಮಳೆಕಾಟಕ್ಕೆ ಭಕ್ತರ ಪರದಾಟ

ದಕ್ಷಿಣ ಕನ್ನಡ ಜಿಲ್ಲೆಯ ಪ್ರಸಿದ್ಧ ತೀರ್ಥ ಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯದ ಸುತ್ತಮುತ್ತ ಮಳೆಯ ಅಬ್ಬರ ಜೋರಾಗಿದೆ. ಇದರ ಪರಿಣಾಮ ದರ್ಪಣ ತೀರ್ಥ ಹೊಳೆ ಉಕ್ಕಿ ಹರಿಯುತ್ತಿದೆ. ಆದಿ ಸುಬ್ರಹ್ಮಣ್ಯ ಕ್ಷೇತ್ರದ ಬಾಗಿಲ ತನಕ ನೀರು ನುಗ್ಗಿದ್ದು, ದೇವರ ದರ್ಶನಕ್ಕೆ ಭಕ್ತರು ಪರದಾಡುವಂತಾಗಿದೆ.

ಇದನ್ನೂ ಓದಿ:ಟಾಕ್ಸಿಕ್ ರಿಲೀಸ್‌ಗೆ ಕ್ಷಣಗಣನೆ – ಧರ್ಮಸ್ಥಳದಲ್ಲಿ ವಿಶೇಷ ಪೂಜೆ ಸಲ್ಲಿಸಿದ ನಟ ಯಶ್

ಕುಕ್ಕೆ ಶ್ರೀ ಸುಬ್ರಹ್ಮಣ್ಯ ಕ್ಷೇತ್ರದ ಸುತ್ತಮುತ್ತ ಮಂಗಳವಾರ ಮಧ್ಯಾಹ್ನ ದಿಢೀರ್ ಅಂತ ಅಪ್ಪಳಿಸಿದ ಬಿರುಗಾಳಿ ಸಹಿತ ಭಾರೀ ಮಳೆಗೆಇಡೀ ದೇವಸ್ಥಾನದ ಆವರಣ ನೀರಿನಿಂದ ಸುತ್ತುವರೆದಿದೆ. ಸುಮಾರು ಒಂದು ಗಂಟೆಗೂ ಹೆಚ್ಚು ಕಾಲ ಬಿರುಸಾಗಿ ಸುರಿದ ಮಹಾಮಳೆಗೆ ದೇಗುಲದ ಪಕ್ಕದಲ್ಲೇ ಹರಿಯುವ ಪವಿತ್ರ ದರ್ಪಣ ತೀರ್ಥ ನದಿಯಲ್ಲಿ ನೀರಿನ ಮಟ್ಟ ದಿಢೀರ್ ಏರಿಕೆಯಾಯಿತು. ನದಿಯಿಂದ ಉಕ್ಕಿ ಹರಿದ ನೀರು ನೇರವಾಗಿ ಪ್ರಸಿದ್ಧ ಆದಿ ಸುಬ್ರಹ್ಮಣ್ಯ ದೇವಸ್ಥಾನದ ಮುಂಭಾಗಕ್ಕೆ ನುಗ್ಗಿದೆ. ದೇವಸ್ಥಾನದ ಒಳಾಂಗಣ ಮತ್ತು ಸುತ್ತಮುತ್ತಲಿನ ಪ್ರದೇಶದಲ್ಲಿ ನೀರು ಪ್ರವಾಹದಂತೆ ಹರಿದಿರುವುದು ಭಕ್ತರ ಪರದಾಟಕ್ಕೆ ಕಾರಣವಾಯಿತು.

ಈ ವರ್ಷದ ಮಳೆಗಾಲದ ಅವಧಿಯಲ್ಲಿ ದರ್ಪಣ ತೀರ್ಥ ನದಿಯಲ್ಲಿ ಈ ಮಟ್ಟದಲ್ಲಿ ಭಾರಿ ನೀರು ನುಗ್ಗಿ ಬಂದಿರುವುದು ಇದೇ ಮೊದಲ ಬಾರಿ. ಇನ್ನು ಮಳೆಯ ರಭಸಕ್ಕೆ ಕೇವಲ ದೇವಸ್ಥಾನ ಮಾತ್ರವಲ್ಲದೆ, ಕ್ಷೇತ್ರದ ಬೈಪಾಸ್ ಮುಖ್ಯರಸ್ತೆಯಲ್ಲೂ ಅಕ್ಷರಶಃ ನದಿಯಂತೆ ಅಪಾರ ಪ್ರಮಾಣದ ನೀರು ಆವರಿಸಿಕೊಂಡು ನಿಂತಿತ್ತು. ರಸ್ತೆಯ ಇಕ್ಕೆಲಗಳಲ್ಲಿ ಸೂಕ್ತ ಹಾಗೂ ವೈಜ್ಞಾನಿಕ ಚರಂಡಿ ವ್ಯವಸ್ಥೆ ಇಲ್ಲದಿರುವುದೇ ಮಳೆ ನೀರು ರಸ್ತೆಯಲ್ಲೇ ಕೆರೆಯಂತೆ ನಿಲ್ಲಲು ಪ್ರಮುಖ ಕಾರಣವಾಗಿದೆ. ಇದರಿಂದಾಗಿ ದರ್ಶನ ಮುಗಿಸಿ ತೆರಳುತ್ತಿದ್ದ ವಾಹನ ಸವಾರರು ಹಾಗೂ ದ್ವಿಚಕ್ರ ವಾಹನ ಸವಾರರು ತೀವ್ರ ಪರದಾಟ ನಡೆಸಬೇಕಾಯಿತು.

ಬುಧವಾರ ಕೂಡಾ ಪ್ರವಾಹ ಪರಿಸ್ಥಿತಿ ಇದ್ದರೂ ನೀರು ಸ್ವಲ್ಪ ಮಟ್ಟಿಗೆ ತಗ್ಗಿದೆ. ಇದೇ ಮೊದಲ ಬಾರಿಗೆ ದರ್ಪಣ ತೀರ್ಥ ಹೊಳೆ ಮೈದುಂಬಿ ಅಬ್ಬರಿಸಿ ಹರಿದಿದ್ದು, ಕುಕ್ಕೆ ಸುಬ್ರಹ್ಮಣ್ಯಕ್ಕೆ ಆಗಮಿಸಿದ ಭಕ್ತರು, ಹಾಗೂ ದೇವಸ್ಥಾನದ ಆಡಳಿತ ಮಂಡಳಿ ಅಚ್ಚರಿ ಪಟ್ಟಿದ್ದಾರೆ.

Sulekha

Leave a Reply

Your email address will not be published. Required fields are marked *