ಕೊಲ್ಲೂರು ಮೂಕಾಂಬಿಕಾ ದೇವಿ ಭಕ್ತರೇ ಸೈಬರ್ ಕಳ್ಳರ ಟಾರ್ಗೆಟ್! – ದೇಗುಲದ ಹೆಸರಲ್ಲಿ ಮಹಾ ವಂಚನೆ!

ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಾಲಯ ರಾಜ್ಯದ ಪ್ರಸಿದ್ಧ ಹಾಗೂ ಶ್ರೀಮಂತ ದೇವಾಲಯಗಳಲ್ಲಿ ಒಂದು. ನಿತ್ಯಾ ಸಾವಿರಾರು ಭಕ್ತರು ದೇವಿ ದರ್ಶನ ಪಡೆಯಲು ದೇಗುಲಕ್ಕೆ ಆಗಮಿಸುತ್ತಾರೆ. ಇದೀಗ ದೇವಿ ಭಕ್ತರನ್ನೇ ಸೈಬರ್ ಕಳ್ಳಲು ಟಾರ್ಗೆಟ್ ಮಾಡಿದ್ದಾರೆ. ದೇವಸ್ಥಾನದ ಹೆಸರಿನಲ್ಲಿ ನಕಲಿ ವೆಬ್ಸೈಟ್ ತೆರೆದು ಸೈಬರ್ ಕಳ್ಳರು ಭಕ್ತರನ್ನು ವಂಚಿಸಿರುವ ಘಟನೆ ಬೆಳಕಿಗೆ ಬಂದಿದೆ.
ಇದನ್ನೂ ಓದಿ: ನಂದಿನಿ ತುಪ್ಪ 90 ರೂ. ಹೆಚ್ಚಳ – ಹಾಲು ಉತ್ಪಾದಕರಿಗೆ ಅನುಕೂಲವಾಗುತ್ತದೆ ಎಂದು ಡಿಸಿಎಂ ಡಿಕೆಶಿ!
ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಾಲಯದ ಹೆಸರಿನಲ್ಲಿ ನಕಲಿ ವೆಬ್ಸೈಟ್ ತೆರೆದಿರುವ ಕೃತ್ಯ ಬೆಳಕಿಗೆ ಬಂದಿದೆ. ಕರ್ನಾಟಕ ಟೆಂಪಲ್ ಅಕಮಡೇಶನ್ ಎಂಬ ಹೆಸರಿನಲ್ಲಿ ಸೈಬರ್ ಅಪರಾಧಿಗಳು ನಕಲಿ ವೆಬ್ಸೈಟ್ ನಿರ್ಮಿಸಿದ್ದು, ಮುಂಗಡ ಬುಕಿಂಗ್ ಹೆಸರಿನಲ್ಲಿ ಹಣ ಕಸಿಕೊಳ್ಳಲಾಗುತ್ತಿದೆ. ಅದರಲ್ಲಿ QR ಕೋಡ್ ಮತ್ತು ಫೋನ್ಪೇ ಪಾವತಿ ಆಯ್ಕೆಗಳು ಸೇರಿಸಲಾಗಿದೆ. ವಾಟ್ಸಾಪ್ ಮೂಲಕ ಭಕ್ತರಿಗೆ ಈ ಲಿಂಕ್ ಕಳುಹಿಸಿ, ಯುಪಿಐ ಪಾವತಿಗೆ ಪ್ರೇರೇಪಿಸಿ ನಕಲಿ ರಶೀದಿಗಳನ್ನು ನೀಡಲಾಗುತ್ತಿತ್ತು. ಆದರೆ ಭಕ್ತರು ಕೊಲ್ಲೂರಿಗೆ ಬಂದಾಗ ನೋಂದಣಿ ದಾಖಲೆ ಸಿಗದೆ ಸಂಕಷ್ಟಕ್ಕೀಡಾಗಿದ್ದರಿಂದ ವಂಚನೆ ಬಯಲಿಗೆ ಬಂದಿದೆ.
ಘಟನೆ ಕುರಿತು ದೇವಾಲಯದ ಆಡಳಿತಾಧಿಕಾರಿಗಳು ತಕ್ಷಣ ಕ್ರಮ ಕೈಗೊಂಡಿದ್ದು, ಕೊಲ್ಲೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ದೇವಾಲಯದ ಪಕ್ಕದಲ್ಲಿರುವ ಲಲಿತಾಂಬಿಕಾ ಅತಿಥಿ ಗೃಹದಲ್ಲಿ ಕೊಠಡಿ ಕಾಯ್ದಿರಿಸುವ ಹೆಸರಿನಲ್ಲಿ ಈ ದಂಧೆ ನಡೆದಿರುವ ಶಂಕೆ ವ್ಯಕ್ತವಾಗಿದೆ.
ಇದೀಗ ದೇವಾಲಯದ ಆಡಳಿತ ಮಂಡಳಿ ಭಕ್ತರಿಗೆ ಈ ಬಗ್ಗೆ ಮಹತ್ವದ ಮಾಹಿತಿ ಹಂಚಿಕೊಂಡಿದೆ. ರಾಜ್ಯದ ಎ-ಗ್ರೇಡ್ ದೇವಾಲಯಗಳಿಗೆ ಸರ್ಕಾರದಿಂದಲೇ ಅಧಿಕೃತ ವೆಬ್ಸೈಟ್ ಇದೆ. ಅದು ‘ಕರ್ನಾಟಕ ಟೆಂಪಲ್ಸ್ ಅಕಮಡೇಶನ್’ ಎಂಬ ಹೆಸರಿನಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಈ ಸೈಟ್ನಲ್ಲಿ ಯಾವುದೇ QR ಕೋಡ್ ಪಾವತಿ ವ್ಯವಸ್ಥೆ ಇಲ್ಲ. ಭಕ್ತರು ನಕಲಿ ಲಿಂಕ್ಗಳಿಗೆ ಹೋಗದೆ ಅಧಿಕೃತ ಸರ್ಕಾರಿ ಸೈಟ್ನಿಂದ ಮಾತ್ರ ಬುಕಿಂಗ್ ಮಾಡಬೇಕು ಎಂದು ತಿಳಿಸಿದೆ.
ಅಂದ್ಹಾಗೆ ಈ ರೀತಿಯ ವಂಚನೆ ನಡೆಯುತ್ತಿರುವುದು ಇದೇ ಮೊದಲೇನಲ್ಲ. 2024ರ ಫೆಬ್ರವರಿ ತಿಂಗಳಲ್ಲಿಯೂ ಇದೇ ರೀತಿಯ ವಂಚನೆ ನಡೆದಿತ್ತು. ಆಗ “Kollur Devotees Trust” ಎಂಬ ಹೆಸರಿನಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ನಕಲಿ ಲಿಂಕ್ ಹಂಚಲಾಗಿತ್ತು. ಈಗ ಮತ್ತೆ ಇದೇ ರೀತಿಯ ಘಟನೆ ಸಂಭವಿಸಿರುವುದರಿಂದ ದೇವಾಲಯದ ಆಡಳಿತ ಮಂಡಳಿ ಕೃತ್ಯ ನಡೆಸಿದವರ ವಿರುದ್ಧ ಕ್ರಮಕೈಕೊಳ್ಳುವಂತೆ ಒತ್ತಾಯಿಸಿದೆ.

ನೋಡಿರಿ

