ಬಸ್ ಗೆ ಸಿಕ್ಕಿ ಸಾಯಿ.. 1.5 ಕೋಟಿ ರೂಪಾಯಿಯ ನನ್ನ ಕಾರೇ ಬೇಕಾಗಿತ್ತಾ – ಗಾಡಿನ ಸುಟ್ಟು ಹಾಕ್ರೋ ಎಂದು ಭವಾನಿ ರೇವಣ್ಣ ರಂಪಾಟ
ಅಧಿಕಾರ, ಹಣದ ದರ್ಪ ಯಾರನ್ನ ಯಾವ ಮಟ್ಟಕ್ಕೆ ಬೇಕಾದರೂ ಇಳಿಸುತ್ತೆ ಅನ್ನೋದಕ್ಕೆ ಭವಾನಿ ರೇವಣ್ಣರೇ ಬೆಸ್ಟ್ ಎಕ್ಸಾಂಪಲ್. ಮತ ಕೇಳುವಾಗ ಮನೆ ಬಾಗಿಲಿಗೆ ಬಂದು ತಲೆಬಾಗಿ ಕೈ ಮುಗಿಯೋ ಜನಪ್ರತಿನಿಧಿಗಳು ಚುನಾವಣೆ ಮುಗಿದ ಮೇಲೆ ಬಡವರನ್ನ ಕಂಡ್ರೆ ಮೈಮೇಲೆ ಚೇಳು ಬಿದ್ದಂತೆ ವರ್ತಿಸುತ್ತಾರೆ. ಇದೀಗ ಭವಾನಿ ರೇವಣ್ಣನ ವರ್ತನೆ ಕೂಡ ಜನಾಕ್ರೋಶಕ್ಕೆ ಕಾರಣವಾಗಿದೆ.
ಮಾಜಿ ಪ್ರಧಾನಿ ಹೆಚ್.ಡಿ ದೇವೇಗೌಡರ ಸೊಸೆ, ಮಾಜಿ ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿಯವರ ಅತ್ತಿಗೆ, ಮಾಜಿ ಸಚಿವ ಹೆಚ್.ಡಿ ರೇವಣ್ಣರ ಪತ್ನಿ, ಹಾಸನದ ಹಾಲಿ ಸಂಸದ ಪ್ರಜ್ವಲ್ ರೇವಣ್ಣ ಹಾಗೂ ಎಂಎಲ್ಸಿ ಸೂಜರ್ ರೇವಣ್ಣರ ತಾಯಿ ಭವಾನಿ ರೇವಣ್ಣ. ಅಷ್ಟೇ ಯಾಕೆ ಹಾಸನ ಜಿಲ್ಲಾ ಪಂಚಾಯ್ತಿಯ ಮಾಜಿ ಅಧ್ಯಕ್ಷೆ. ಇಂಥಾ ದೊಡ್ಡ ಜವಾಬ್ದಾರಿಯುವ ಸ್ಥಾನದಲ್ಲಿರೋ ಭವಾನಿ ರೇವಣ್ಣ ತಾವು ಪ್ರಯಾಣಿಸುತ್ತಿದ್ದ ಕಾರ್‌ಗೆ ಬೈಕ್ ಸವಾರನೊಬ್ಬ ಡಿಕ್ಕಿ ಹೊಡಿದಿದ್ದಾನೆ ಅಂತಾ ರಂಪ ರಾಮಾಯಣ ಮಾಡಿದ್ದಾರೆ. ಮೈಸೂರು ಜಿಲ್ಲೆಯ ಸಾಲಿಗ್ರಾಮದ ಬಳಿ ಘಟನೆ ನಡೆದಿದ್ದು, ತಮ್ಮ ಕಾರಿಗೆ ಡಿಕ್ಕಿ ಹೊಡೆದ ಬೈಕ್ ಸವಾರನ ಮೇಲೆ ಭವಾನಿ ರೇವಣ್ಣ ಗರಂ ಆಗಿದ್ದಾರೆ. ಅವಾಚ್ಯ ಶಬ್ದಗಳಿಂದ ನಿಂದಿಸಿ ರಂಪಾಟ ತೋರಿದ್ದಾರೆ.
ಇದನ್ನೂ ಓದಿ : ಮದುವೆಯಾಗದೇ ಸತ್ತರೆ ಕೋಪ ಬಂದು ಕೆಟ್ಟದ್ದೇ ಮಾಡುತ್ತಾರೆ – ಚೀನಾದಲ್ಲಿ ಸತ್ತವರ ಜೊತೆ ಮದುವೆಗೆ ಹೆಣ್ಣು ಮಕ್ಕಳ ಶವ ಮಾರಾಟ..!
ಭವಾನಿ ರೇವಣ್ಣ ಪ್ರಯಾಣಿಸುತ್ತಿದ್ದ KA-03-NK-5 ನಂಬರಿನ ಕಾರಿಗೆ ಸಾಲಿಗ್ರಾಮದ ಬಳಿ ಬೈಕ್ ಸವಾರನೊಬ್ಬ ಡಿಕ್ಕಿ ಹೊಡೆದಿದ್ದಾನೆ. ಈ ವೇಳೆ ಬೈಕ್ ಸವಾರನ ವಿರುದ್ಧ ಭವಾನಿ ರೇವಣ್ಣ ಗರಂ ಆಗಿದ್ದಾರೆ. ಅಲ್ಲದೇ ಬಾಯಿಗೆ ಬಂದಂತೆ ಬೈದಿದ್ದಾರೆ. ಬೋರ್ಡು ಗೀರ್ಡು ಎಲ್ಲಾ ಸಖತ್ ಡ್ಯಾಮೇಜ್ ಆಗಿದೆ. ಎಲ್ಲಿಗೆ ನುಗ್ಗುಸ್ತಿಯಾ ಮಧ್ಯದಲ್ಲಿ? ತೆಗೆದು ಸುಟ್ಟುಹಾಕ್ರೋ ಈ *** ***** *** ಗಾಡಿನಾ ಅಂತ ನಾಲಗೆ ಹರಿ ಬಿಟ್ಟಿದ್ದಾರೆ. ಎಷ್ಟು ಡ್ಯಾಮೇಜ್ ಆಗಿದೆ ಹೆಂಗೆ ರೆಡಿ ಮಾಡ್ಸೋದು, ಎಲ್ಲಾ ಹೋಗಿದೆ ಎಂದು ರೌದ್ರಾವತಾರ ತೋರಿದ್ದಾರೆ. ಅಕ್ಕ ಗಾಡಿ ತೆಗೀರಿ, ಹೋಗೋಣ ಅಂತ ಸ್ಥಳದಲ್ಲಿ ಇದ್ದವರು ಹೇಳಿದ್ದಕ್ಕೆ ಅವ್ರ ಮೇಲೂ ರೋಷಾವೇಶ ತೋರಿದ ಭವಾನಿ ಗಾಡಿ ತಗಂಡು ಏನ್ ಮಾಡೋಣ? ಕೊಡ್ತಿಯಾ ಐವತ್ತು ಲಕ್ಷ ರಿಪೇರಿ ಮಾಡ್ಸೋಕೆ ಅಂತ ಅವರನ್ನೇ ಪ್ರಶ್ನಿಸಿದ್ದಾರೆ. ನಿಂತಿದ್ದವರು ದುಡ್ಡು ಕೊಡುವ ಹಾಗಿದ್ದರೆ ನ್ಯಾಯ ಮಾತನಾಡಲು ಬನ್ನಿ ಸ್ಥಳೀಯರ ಮೇಲೂ ದೌಲತ್ತು ತೋರಿದ್ದಾರೆ.
ನೀನ್ ಫೋನ್ ತಗೋಬೇಡ, ನಡಿ ಆಚೆಗೆ ಯಾವನು, ಸೀಜ್ ಮಾಡಿ ಗಾಡಿನಾ. ಅವನಿಗೆ ಬೈಕ್ ಮುಟ್ಟಬೇಡ ಅಂತ ಹೇಳು. ಸಾಲಿಗ್ರಾಮ ಎಸ್‌ಐ ಬರಲು ಹೇಳು. ಒಂದೂವರೆ ಕೋಟಿ ರೂಪಾಯಿ ಗಾಡಿ ಅದು, ಅದನ್ನು ಡ್ಯಾಮೇಜ್ ಮಾಡಿ ಇಟ್ಟಿದ್ದಾನೆ. ಏನ್ ಅರ್ಜೆಂಟ್ ಇತ್ತು? ಏನ್ ದೇಶ ಮುಳುಗಿ ಹೋಗಿತ್ತಾ, ಯಾವನ್ ಅವನು? ಅಂತ ತಮ್ಮ ತಲೆಯಲ್ಲಿದ್ದ ಅಷ್ಟೂ ಬೈಗುಳಗಳನ್ನ ಹೊರ ಹಾಕಿದ್ದಾರೆ. ಬಳಿಕ ಅದ್ಯಾರಿಗೋ ಫೋನ್ ಮಾಡಿ ನನ್ನ ಗಾಡಿಗೆ ಯಾವನೋ ಬಂದು ಬೈಕ್ ಗುದ್ದಿದ್ದಾನೆ. ಎಲ್ಲಿಂದ ಬರುಬೇಕು ನೀವು, ಲೆಫ್ಟ್‌ನಿಂದ ಅಲ್ವಾ, ರೈಟ್‌ನಿಂದ ಯಾಕೆ ಬಂದ್ರಿ? ಅವನ್ಯಾವನೋ ಬಂದು ಕಾರಿಗೆ ಗುದ್ದಿ ನನ್ನ ಗಾಡಿ ಫುಲ್ ಡ್ಯಾಮೇಜ್ ಆಯ್ತು ಕಣ್ಣಣ್ಣಾ. ಪೊಲೀಸ್ ಬರಕೆ ಹೇಳಿ ಅಣ್ಣಾ ಅರ್ಜೆಂಟ್ ನಾನು ಪೊಲೀಸ್‌ಗೆ ಕಂಪ್ಲೆಂಟ್ ಮಾಡಿ ಹೋಗ್ಬೇಕು ಅಂತ ಭವಾನಿ ಫೋನ್‌ನಲ್ಲಿ ಬಡಬಡಾಯಿಸಿದ್ದಾರೆ.
ಇಷ್ಟಕ್ಕೇ ಸುಮ್ಮನಾಗದ ಭವಾನಿ ಕಂಪ್ಲೇಂಟ್ ಕೊಡ್ತೇನೆ. ತಗೊಂಡು ಹೋಗಿ ಒಳಗಡೆ ಹಾಕಲಿ ನನಗೇನು. ಒಂದೂವರೆ ಕೋಟಿ ರೂಪಾಯಿ ಗಾಡಿ, ಬೋರ್ಡ್ ಎಲ್ಲಾ ಏನು ಇಲ್ಲ. ಸಾಯಂಗಿದ್ರೆ ನೀನು ಸಾಯಬೇಕಿತ್ತು ಬಸ್‌ಗೆ ಸಿಗಾಕಂಡು. ನನ್ನ ಕಾರು ಡ್ಯಾಮೇಜ್ ಮಾಡಕೆ ನೀನ್ ಯಾವನು? ಒಂದೂವರೆ ಕೋಟಿ ರೂಪಾಯಿ ಡ್ಯಾಮೇಜ್ ಯಾವನ್ ಕಟ್ಟೋನು? ಅಂತ ರಸ್ತೆಯಲ್ಲೇ ಎಗರಾಡಿದ್ದಾರೆ. ಸದ್ಯ ಭವಾನಿ ರೇವಣ್ಣ ಕಾರ್‌ಗೆ ಡಿಕ್ಕಿ ಹೊಡೆದ ಬೈಕ್ ಸವಾರನ ವಿರುದ್ಧ ದೂರು ದಾಖಲಾಗಿದೆ. ಬೈಕ್ ಸವಾರ ಶಿವಣ್ಣ ಎಂಬಾತನ ಮೇಲೆ ಭವಾನಿ ಕಾರು ಚಾಲಕ ಮಂಜುನಾಥ್ ಸಾಲಿಗ್ರಾಮ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಕಂಪ್ಲೆಂಟ್ ಪಡೆದ ಪೊಲೀಸರು ಬೈಕ್ ಸವಾರನ ಮೇಲೆ ಸಿಆರ್‌ಪಿಸಿ ಸೆಕ್ಷನ್ 157 ರಂತೆ ವಿಚಾರಣೆ ಪ್ರಾರಂಭಿಸಿದ್ದಾರೆ.