ಅಮೆರಿಕ ಅಧ್ಯಕ್ಷ ಕುರುಡ ಅಥವಾ ಅಜ್ಞಾನಿ – ಭಾರತದ ಆರ್ಥಿಕತೆ ಸತ್ತಿದೆ ಎಂದ ಟ್ರಂಪ್ಗೆ H.D ದೇವೇಗೌಡರ ತಿರುಗೇಟು

ಭಾರತದ ಆರ್ಥಿಕತೆ ಸತ್ತಿದೆ ಅಂತ ಹೇಳಿದ ಅಮೆರಿಕ ಅಧ್ಯಕ್ಷ ಡೋನಾಲ್ಡ್ ಟ್ರಂಪ್ ಅವರ ಹೇಳಿಕೆಗೆ ಮಾಜಿ ಪ್ರಧಾನಮಂತ್ರಿ ಎಚ್.ಡಿ. ದೇವೇಗೌಡರು ಆಕ್ರೋಶ ಹೊರ ಹಾಕಿದ್ದಾರೆ.. ಬಹುಶಃ ಟ್ರಂಪ್ ಕುರುಡರಾಗಿರಬೇಕು ಅಥವಾ ಅಜ್ಞಾನಿ ಆಗಿರಬೇಕು ಎಂದು ಟ್ರಂಪ್ನ ದೇವೇಗೌಡ್ರು ಟೀಕಿಸಿದ್ದಾರೆ. ಭಾರತದಲ್ಲಿ ಒಬ್ಬ ಸಣ್ಣ ವ್ಯಾಪಾರಿ ಮತ್ತು ಬಡ ರೈತ ಕೂಡ ತನ್ನ ವ್ಯವಹಾರವನ್ನು ಬಹಳ ಘನತೆ, ಸಮಗ್ರತೆ ಮತ್ತು ಮಾನವೀಯತೆಯಿಂದ ನಡೆಸುತ್ತಿದ್ದಾನೆ. ಈ ಮೂಲಕ ಟ್ರಂಪ್ ಅವರಿಗೆ ಅನೇಕ ಪಾಠಗಳನ್ನು ಕಲಿಸಬಹುದು ಎಂದಿದ್ದಾರೆ.
ಇದನ್ನೂ ಓದಿ: ಮಜ್ಜಿಗೆ ಕುಡಿಯೋದ್ರಿಂದ ನಿಜಕ್ಕೂ ತೂಕ ಇಳಿಕೆಯಾಗುತ್ತಾ? – ತಜ್ಞರು ಹೇಳೋದೇನು?
ಎಲ್ಲರಂತೆ ನಾನು ಕೂಡ ಭಾರತದ ಆರ್ಥಿಕತೆಯ ಬಗ್ಗೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಆಧಾರ ರಹಿತ ಮತ್ತು ಕೋಪದ ಹೇಳಿಕೆಗಳಿಂದ ಆಶ್ಚರ್ಯಚಕಿತನಾಗಿದ್ದೇನೆ. ಆಧುನಿಕ ಇತಿಹಾಸದಲ್ಲಿ ಇಷ್ಟೊಂದು ಅಸ್ಥಿರ, ಅನಾಗರಿಕ ಮತ್ತು ಬೇಜವಾಬ್ದಾರಿಯುತ ರಾಷ್ಟ್ರಮುಖ್ಯಸ್ಥರನ್ನು ನಾನು ನೋಡಿಲ್ಲ ಅಂತ ದೇವೇಗೌಡ್ರು ಹೇಳಿದ್ದಾರೆ.
ಟ್ರಂಪ್ ಭಾರತದ ಜೊತೆ ಮಾತ್ರ ಅಲ್ಲ ಜಗತ್ತಿನಾದ್ಯಂತ ಪ್ರತೀ ದೇಶದೊಂದಿಗೆ ಕೆಟ್ಟದಾಗಿ ವರ್ತಿಸಿದ್ದಾರೆ. ಅವರು ತಮ್ಮ ದೀರ್ಘಕಾಲದ ಮಿತ್ರರಾಷ್ಟ್ರಗಳನ್ನು ಸಹ ಬಿಟ್ಟಿಲ್ಲ. ಅವರಲ್ಲಿ ಮೂಲಭೂತವಾಗಿ ಏನೋ ಸಮಸ್ಯೆ ಇದೆ. ರಾಜತಾಂತ್ರಿಕತೆ ಅಥವಾ ರಾಜಕೀಯದ ಮೂಲಕ ಅದನ್ನು ಪತ್ತೆ ಹಚ್ಚಲು ಅಥವಾ ಪರಿಹರಿಸಲು ಸಾಧ್ಯವಿಲ್ಲ. ಭಾರತದ ಸಣ್ಣ ವ್ಯಾಪಾರಿ ಮತ್ತು ಬಡರೈತ ಕೂಡ ತಮ್ಮ ವ್ಯವಹಾರವನ್ನು ಬಹಳ ಘನತೆ, ಸಮಗ್ರತೆ ಮತ್ತು ಮಾನವೀಯತೆಯಿಂದ ನಡೆಸುತ್ತಾ ಟ್ರಂಪ್ಗೆ ಅನೇಕ ಪಾಠಗಳನ್ನು ಕಲಿಸಬಹುದು ಎಂದು ನಾನು ಬಲವಾಗಿ ನಂಬಿದ್ದೇನೆ ಎಂದು ಹೆಚ್ಡಿಡಿ ಹೇಳಿದ್ದಾರೆ.
ಭಾರತವು ವೈವಿಧ್ಯಮಯ ಮತ್ತು ಪ್ರಜಾಪ್ರಭುತ್ವವಾದಿ ಸಾರ್ವಭೌಮ ರಾಷ್ಟ್ರ. ಸ್ವಾತಂತ್ರ್ಯದ ನಂತರ ಅದು ಯಾವಾಗಲೂ ಅತ್ಯುನ್ನತ ರಾಷ್ಟ್ರೀಯ ಹಿತಾಸಕ್ತಿಗಾಗಿ ಕಾರ್ಯನಿರ್ವಹಿಸುತ್ತಾ ಬಂದಿದೆ. ಭಾರತವು ತನ್ನ ದಾರಿಗೆ ಎದುರಾಗುವ ಎಲ್ಲಾ ತೊಂದರೆಗಳನ್ನು ಮಾತುಕತೆ ಮೂಲಕವೇ ಪರಿಹರಿಸಿಕೊಂಡು ಬಲಿಷ್ಠ ರಾಷ್ಟ್ರವಾಗಿ ಹೊರಹೊಮ್ಮಲು ದೇವರು ಕರುಣಿಸಿರುವ ಸಾಮರ್ಥ್ಯ ಮತ್ತು ಶಕ್ತಿಯನ್ನು ಹೊಂದಿದೆ ಎಂಬುದು ನನ್ನ ಭಾವನೆ.ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ಭಾರತವು ನಮ್ಮ ರಾಷ್ಟ್ರೀಯ ಹಿತಾಸಕ್ತಿಯನ್ನು ರಾಜಿ ಮಾಡಿಕೊಂಡಿಲ್ಲ ಎಂಬ ಬಗ್ಗೆ ನನಗೆ ಅತೀವ ಸಂತೋಷ ಮತ್ತು ಹೆಮ್ಮೆ ಇದೆ. ಟ್ರಂಪ್ ಅವರ ಬೆದರಿಕೆಗೆ ಭಾರತ ಹೆದರುವುದಿಲ್ಲ ಮತ್ತು ಅಂಥ ಬೆದರಿಕೆಗಳಿಂದ ಭಾರತ ಎಂದಿಗೂ ಇನ್ನೊಬ್ಬರ ತಾಳಕ್ಕೆ ತಕ್ಕಂತೆ ನಡೆಯುವುದಿಲ್ಲ ಎಂದು ಈಗಾಗಲೇ ತೋರಿಸಿಕೊಟ್ಟಿದೆ ಎಂದು ದೇವೇಗೌಡ್ರು ಟ್ರಂಪ್ ವಿರುದ್ದ ಆಕ್ರೋಶ ಹೊರ ಹಾಕಿದ್ದಾರೆ.

ನೋಡಿರಿ

