100 ಭೂಕಂಪಗಳಾದ್ರೂ ಈ ಕಟ್ಟಡಕ್ಕೆ ಏನೂ ಆಗಿಲ್ಲ! – ʼಶೇಕ್ ಟೇಬಲ್ʼ ಬಿಲ್ಡಿಂಗ್ ವಿಶೇಷವೇನು?
ಭೂಕಂಪವಾದಾಗ ಸಾಮಾನ್ಯವಾಗಿ ಮನೆಗಳು, ಬಹು ಮಹಡಿಯ ಕಟ್ಟಡಗಳು ಕುಸಿಯುತ್ತವೆ. ನೂರಾರು ಮರಗಳು ಧರೆಗೆ ಉರುಳುತ್ತವೆ. ಸಾಕಷ್ಟು ಸಾವು – ನೋವು ಸಂಭವಿಸುತ್ತವೆ. ಸಣ್ಣ ಮಟ್ಟದ ಭೂಕಂಪ ಸಂಭವಿಸಿದರೂ ಕೂಡ ದೊಡ್ಡ ಅವಾಂತರವೇ ಸೃಷ್ಟಿಯಾಗುತ್ತದೆ. ಆದರೆ ಇಲ್ಲೊಂದು 10 ಅಂತಸ್ತಿನ ಕಟ್ಟಡವಿದೆ. ಈ ಕಟ್ಟಡ ಮಾತ್ರ 100 ಭೂಕಂಪಗಳಾದರೂ ಒಂಚೂರು ಜಗ್ಗಿಲ್ಲ.
ಯಾವುದೇ ಪ್ರದೇಶದಲ್ಲೇ ಆಗಲಿ, ಸಣ್ಣ ಭೂಕಂಪ ಸಂಭವಿಸಿದರೂ ಮನೆಗಳು ಬಿರುಕು ಮೂಡುತ್ತವೆ. ವಸ್ತುಗಳು ಚೆಲ್ಲಾಪಿಲ್ಲಿಯಾಗುತ್ತದೆ. ಆದರೆ ಇಲ್ಲೊಂದು ಮರದ ಕಟ್ಟಡವಿದೆ. ಈ ಕಟ್ಟಡವನ್ನು ನಿರ್ಮಿಸಿದ ಬಳಿಕ ಎಂಜಿನಿಯರ್ಗಳು ಹಲವಾರು ಪರೀಕ್ಷೆಗಳನ್ನು ನಡೆಸಿದ್ದಾರೆ. ಕೃತಕ ಭೂಕಂಪ ಸೃಷ್ಟಿಸಿ ಪ್ರಯೋಗ ನಡೆಸಿದ್ದಾರೆ. ಕಂಪನದ ವೇಳೆ ಮರದ ಕಟ್ಟಡ ವಾಲಾಡುತ್ತದೆಯೇ ಹೊರತು ಬೀಳುವುದಿಲ್ಲ. ಹೀಗಾಗಿ ಎಷ್ಟೇ ತೀವ್ರತೆಯ ಭೂಕಂಪವಾದರೂ ಕಟ್ಟಡ ಮಾತ್ರ ಬೀಳದೆ ಭದ್ರವಾಗಿ ನಿಂತಿದೆ.
ಇದನ್ನೂ ಓದಿ: ಜುಲೈ 1 ರಿಂದ ಅಮರನಾಥ ಯಾತ್ರೆ ಆರಂಭ – ಹಲ್ವಾ, ದೋಸೆ, ಪೂರಿಗಿಲ್ಲ ಅವಕಾಶ!
ಈ ಕಟ್ಟಡ ಕ್ಯಾಲಿಫೋರ್ನಿಯಾದ ಸ್ಯಾನ್ ಡಿಯಾಗೋದಲ್ಲಿದೆ. ಕಳೆದ ತಿಂಗಳು ಮುಂಜಾನೆ ವೇಳೆ ಈಶಾನ್ಯ ಸ್ಯಾನ್ ಡಿಯಾಗೋದಲ್ಲಿ ಭೂಕಂಪ ಉಂಟಾಗಿದೆ. ಅದೇ ಪ್ರದೇಶದಲ್ಲಿ ಕೆಲವು ನಿಮಿಷಗಳ ನಂತರ ಮತ್ತೊಂದು ಕಂಪನ ಉಂಟಾಗಿದೆ. ಈ ವೇಳೆ ಸಾಕಷ್ಟು ಕಟ್ಟಡಗಳಿಗೆ ಹಾನಿಯಾಗಿದೆ. ಆದರೆ ಈ 10 ಅಂತಸ್ತಿನ ಮರದ ಕಟ್ಟಡ ಒಂಚೂರು ತೂಗಾಡಿತು, ಆದರೆ ಬೀಳಲಿಲ್ಲ. ಇದನ್ನು ಕಂಡು ಎಲ್ಲರೂ ಅಚ್ಚರಿ ವ್ಯಕ್ತಪಡಿಸಿದ್ದಾರೆ.
‘ಶೇಕ್ ಟೇಬಲ್’ (ಅಲುಗಾಡುವ ಟೇಬಲ್) ಮಾದರಿಯ ರಚನೆಯಲ್ಲಿ ಈ ಕಟ್ಟಡ ನಿರ್ಮಿಸಲಾಗಿದೆ. ಇದನ್ನು ಮರದಿಂದ ನಿರ್ಮಿಸಲಾಗಿದೆ. ಕ್ಯಾಲಿಫೋರ್ನಿಯಾ ವಿಶ್ವವಿದ್ಯಾನಿಲಯದಲ್ಲಿ ಶೇಕ್ ಟೇಬಲ್ ಕಟ್ಟಡದ ಬಗ್ಗೆ ಪ್ರಯೋಗ ನಡೆಸಲಾಗಿತ್ತು. ಆ ಪ್ರಾಜೆಕ್ಟ್ನ ಭಾಗವಾಗಿಯೇ ಈ ಕಟ್ಟಡ ನಿರ್ಮಿಸಲಾಗಿದೆ. ಬಹು ಅಂತಸ್ತಿನ ಕಟ್ಟಡವನ್ನು ಮರದಿಂದ ನಿರ್ಮಿಸಲಾಗಿದೆ.
112 ಅಡಿ ಎತ್ತರದ ಕಟ್ಟಡದ ಮೊದಲ ಮೂರು ಮಹಡಿಗಳು ಬೆಳ್ಳಿ ಮತ್ತು ಕಿತ್ತಳೆ ಬಣ್ಣದ ಫಲಕಗಳಿಂದ ಮುಚ್ಚಲ್ಪಟ್ಟಿವೆ. ಗಾಜನ್ನು ಬಳಸಿ ಕಿಟಕಿಗಳನ್ನು ಮಾಡಲಾಗಿದೆ. ಕಟ್ಟಡದ ಉಳಿದ ಭಾಗಗಳು ಗಾಳಿಗೆ ತೆರೆದುಕೊಂಡಿವೆ. ಪ್ರತಿ ಮಹಡಿಯು ನಾಲ್ಕು ‘ರಾಕಿಂಗ್ ಗೋಡೆ’ಗಳನ್ನು ಹೊಂದಿದ್ದು, ಭೂಕಂಪಗಳಿಂದಾಗಬಹುದಾದ ಹಾನಿಯನ್ನು ತಪ್ಪಿಸುವಂತೆ ವಿನ್ಯಾಸಗೊಳಿಸಲಾಗಿದೆ.
1994 ರಲ್ಲಿ ಲಾಸ್ ಏಂಜಲೀಸ್ನಲ್ಲಿ 6.7 ತೀವ್ರತೆಯ ಭೂಕಂಪವಾಗಿತ್ತು. ಆಗ ಅನೇಕ ಕಟ್ಟಡಗಳು ನೆಲಸಮವಾಗಿ, 60 ಜನರು ಮೃತಪಟ್ಟಿದ್ದರು. 40 ಶತಕೋಟಿ ಡಾಲರ್ನಷ್ಟು ನಷ್ಟವಾಗಿತ್ತು. 1999 ರಲ್ಲಿ ತೈವಾನ್ನಲ್ಲಿ 7.7 ತೀವ್ರತೆಯ ಭೂಕಂಪ ಸಂಭವಿಸಿದ ಎರಡನೇ ದುರಂತದಲ್ಲಿ 2,400 ಕ್ಕೂ ಹೆಚ್ಚು ಜನರು ತಮ್ಮ ಪ್ರಾಣ ಕಳೆದುಕೊಂಡರು. ಕಾಂಕ್ರಿಟ್ ಮತ್ತು ಉಕ್ಕಿನ ಎತ್ತರದ ಕಟ್ಟಡಗಳು ನೆಲಕ್ಕುರುಳಿದ್ದವು. ಅದೇ ತೀವ್ರತೆಗಳಲ್ಲಿ ಸಂಶೋಧಕರು ಕೃತಕ ಭೂಕಂಪ ಸೃಷ್ಟಿಸಿ ಈ ಕಟ್ಟಡದ ಮೇಲೆ ಪ್ರಯೋಗ ನಡೆಸಿದ್ದಾರೆ. ಆದರೆ ಕಟ್ಟಡ ಮಾತ್ರ ಬಿದ್ದಿಲ್ಲ.