ನಮ್ಮ ಮೆಟ್ರೊದ ಈ ಮಾರ್ಗದಲ್ಲಿ ಹಳಿತಪ್ಪಿದ ರೀ ರೈಲ್ – ಸಂಚಾರದಲ್ಲಿ ಭಾರಿ ವ್ಯತ್ಯಯ
ಬೆಂಗಳೂರು: ನಮ್ಮ ಮೆಟ್ರೋ ಹಸಿರು ಮಾರ್ಗ ಸಂಚಾರದಲ್ಲಿ ಭಾರಿ ವ್ಯತ್ಯಯವಾಗಿದೆ. ಹಸಿರು ಮಾರ್ಗದಲ್ಲಿ ಸಂಚರಿಸಿದ ರೀ ರೈಲ್ ವಾಹನ ಆಯತಪ್ಪಿದ ಹಿನ್ನಲೆಯಲ್ಲಿ ಹಸಿರು ಮಾರ್ಗದ ಸಂಚಾರದಲ್ಲಿ ಭಾರೀ ವ್ಯತ್ಯಯ ಉಂಟಾಗಿದೆ. ಇದರ ಪರಿಣಾಮ ಪ್ರಯಾಣಿಕರಿಗೆ ಭಾರೀ ಸಮಸ್ಯೆಯಾಗುತ್ತಿದ್ದು, ಬೆಳಿಗ್ಗೆಯೇ ಕೆಲಸಕ್ಕೆ ತೆರಳುವವರು ಪರದಾಡುವಂತಹ ಪರಿಸ್ಥಿತಿ ಎದುರಾಗಿದೆ.
ಮೆಟ್ರೋ ರೈಲುಗಳಲ್ಲಿ ತಾಂತ್ರಿಕ ತೊಂದರೆಯಾದಾಗ ಸರಿಪಡಿಸಲು ಬಳಸುವ ರೀ ರೈಲ್ ರಾಜಾಜಿನಗರ ನಿಲ್ದಾಣದ ತಿರುವಿನಲ್ಲಿ ಹಳಿ ತಪ್ಪಿದ್ದು, ಹೀಗಾಗಿ ಪರಿಣಾಮ ಈ ಸಮಸ್ಯೆ ಎದುರಾಗಿದೆ. ಇದರಿಂದಾಗಿ ನಾಗಸಂದ್ರದಿಂದ ರೇಷ್ಮೆ ಸಂಸ್ಥೆವರೆಗಿನ ಹಳಿಯಲ್ಲಿ ಸಂಚಾರಕ್ಕೆ ತೊಂದರೆಯಾಗಿದೆ. ಯಶವಂತಪುರದಿಂದ ಮಂತ್ರಿ ಸ್ಕ್ವೇರ್‌ವರೆಗೆ ರೈಲುಗಳು ಏಕಮುಖವಾಗಿ ಮಾತ್ರ ಸಂಚರಿಸುತ್ತಿವೆ. ಸದ್ಯ ಈಗ ಹಸಿರು ಮಾರ್ಗದಲ್ಲಿ ಅರ್ಧಗಂಟೆಗೊಂದು ರೈಲು ಸಂಚರಿಸುತ್ತಿದೆ.
ಇದನ್ನೂ ಓದಿ: ಬೆಂಗಳೂರು ಕಂಬಳದಲ್ಲಿ ಭಾಗವಹಿಸಲಿವೆ 125ಕ್ಕೂ ಅಧಿಕ ಜತೆ ಕೋಣಗಳು – ಮಂಗಳೂರಿಂದಲೇ ಬರುತ್ತೆ ಕೋಣಗಳಿಗೆ ಕುಡಿಯುವ ನೀರು!
ಈ ಸಂಬಂಧ ಪ್ರತಿಕ್ರಿಯೆ ನೀಡಿರುವ ನಮ್ಮ ಮೆಟ್ರೋ, ನಮ್ಮ ಮೆಟ್ರೋ ಪ್ರಯಾಣಿಕರು ದಯವಿಟ್ಟು ಗಮನಿಸಿ, ರಾಜಾಜಿನಗರ ಮೆಟ್ರೊ ನಿಲ್ದಾಣದಲ್ಲಿ ತಾಂತ್ರಿಕ ಅಡಚಣೆಯಿಂದಾಗಿ ನಾಗಸಂದ್ರದಿಂದ ಯಶವಂತಪುರ ಮತ್ತು ಮಂತ್ರಿ ಸ್ಕ್ವೇರ್ ಸಂಪಿಗೆ ರಸ್ತೆಯಿಂದ ರೇಷ್ಮೆ ಸಂಸ್ಥೆ ಮೆಟ್ರೊ ನಿಲ್ದಾಣದ ನಡುವೆ ಮಾತ್ರ ಹಸಿರು ಮಾರ್ಗದಲ್ಲಿ ರೈಲು ಸೇವೆಗಳು ಲಭ್ಯವಿರುತ್ತವೆ. ಅಡಚಣೆಗಾಗಿ ವಿಷಾದಿಸುತ್ತೇವೆಂದು ಹೇಳಿದೆ.
ಇದೀಗ ರೀ ರೈಲ್ ವಾಹನವನ್ನು ಹಳಿಗೆ ತರಲು ಮೆಟ್ರೋ ಸಿಬ್ಬಂದಿ ಹರಸಾಹಸ ಪಡುತ್ತಿದ್ದು, ಇಂದು ಮಧ್ಯಾಹ್ನದವರೆಗೂ ಪ್ರಯಾಣಿಕರಿಗೆ ಸಮಸ್ಯೆಗಳಾಗುವ ಸಾಧ್ಯತೆಗಳಿವೆ. ರೀ ರೈಲ್ ತೆರವು ಆಗುವವರೆಗೆ ಏಕಮುಖ ಸಂಚಾರ ಇರಲಿದೆ ಎಂದು ಬಿಎಂಆರ್‌ಸಿಎಲ್ ಹೇಳಿದೆ.