ಜುಲೈ 10 ರೊಳಗೆ ಅನ್ನಭಾಗ್ಯ ಹಣ ಖಾತೆಗೆ ಜಮೆ?
ಬೆಂಗಳೂರು: ಅನ್ನಭಾಗ್ಯ ಯೋಜನೆಯಡಿ ಎಲ್ಲಾ ಬಿಪಿಎಲ್ ಕಾರ್ಡುದಾರರಿಗೆ ಹಣ ಪಾವತಿಸಲಾಗುತ್ತದೆ ಎಂದು ಸರ್ಕಾರ ಘೋಷಿಸಿದೆ. ಅಕ್ಕಿ ಹಣವನ್ನು ಬಿಪಿಎಲ್ ಕಾರ್ಡುದಾರರಿಗೆ ನೀಡಲು ತಡವಾಗುತ್ತಿರುವ ಹಿನ್ನೆಲೆ ವಿರೋಧ ಪಕ್ಷಗಳು ಆದಷ್ಡು ಬೇಗ ಹಣ ನೀಡಬೇಕೆಂದು ಪಟ್ಟು ಹಿಡಿದಿದ್ದಾರೆ. ಇದೀಗ ಹಣಭಾಗ್ಯಕ್ಕೆ ಕೊನೆಗೂ ಮುಹೂರ್ತ ಕೂಡಿಬಂದಂತೆ ಕಾಣುತ್ತಿದೆ. ಇದೇ ಜುಲೈ 9, 10 ಕ್ಕೆ ಅಕೌಂಟ್ಗೆ ಹಣ ಹಾಕಲು ಸರ್ಕಾರ ಮುಂದಾಗಿದೆ ಎಂದು ಮೂಲಗಳು ತಿಳಿಸಿವೆ.
ಇದನ್ನೂ ಓದಿ: ಮಳೆ ಆರ್ಭಟ ಜೋರಾದ ಮೇಲೆ ರಸ್ತೆಯಲ್ಲಿ ಬ್ಯಾರಿಕೇಡ್ – ಕೊಡಗಿನಲ್ಲಿ ಹೆದ್ದಾರಿ ಕುಸಿಯದಂತೆ ತಡೆಯಲು ಇಷ್ಟು ಮಾಡಿದರೆ ಸಾಕಾ?
ಕಾಂಗ್ರೆಸ್ ಚುನಾವಣೆಗೂ ಮುನ್ನ ಐದು ಗ್ಯಾರಂಟಿಗಳನ್ನು ಘೋಷಿಸಿತ್ತು. ಈ ಗ್ಯಾರಂಟಿಗಳಲ್ಲಿ 10 ಕೆ.ಜಿ ಅಕ್ಕಿ ಕೂಡ ಒಂದು. ಬಿಪಿಎಲ್ ಕಾರ್ಡುದಾರರಿಗೆ 10 ಕೆಜಿ ಅಕ್ಕಿ ಕೊಡುವ ಭರವಸೆ ನೀಡಿದರು. ಆದರೆ ಕಾಲಕ್ರಮೇಣ ಕೇಂದ್ರ ಸರ್ಕಾರ ತಮ್ಮ ಪಾಲಿನ ಅಕ್ಕಿಯನ್ನಷ್ಟೇ ನೀಡುತ್ತೇವೆ ಎಂದು ಹೇಳಿ ಕೈತೊಳೆದುಕೊಂಡಿತ್ತು. ಈಗ 5 ಕೆ.ಜಿ ಅಕ್ಕಿ ಜೊತೆ 5 ಕೆ.ಜಿಗೆ ಹಣ ನೀಡುವ ಯೋಜನೆಯನ್ನು ಸರ್ಕಾರ ಜಾರಿಗೊಳಿಸಿದೆ. ಈ ನಡುವೆ ಅಕ್ಕಿ ಹಣ ನೀಡುವುದು ಮತ್ತಷ್ಟು ವಿಳಂಬ ಅನ್ನೋದನ್ನ ಸ್ಪಷ್ಟವಾಗಿ ಹೇಳುತ್ತಿದೆ. ಸರ್ಕಾರದಿಂದ ಈಗ ಅಕೌಂಟ್ಗೆ ಹಣ ಹಾಕಲು ಸೂಚನೆ ನೀಡಲಾಗಿದೆ. ಅಧಿಕಾರಿಗಳು ಜುಲೈ 15ರಂದು ಹಣಹಾಕುವ ಚಿಂತನೆಯಲ್ಲಿದ್ದರು. ಇದೀಗ ಜುಲೈ 10ರೊಳಗೆ ಹಣ ಹಾಕುವಂತೆ ಸರ್ಕಾರ ಸೂಚಿಸಿದ್ದು, ಜುಲೈ 9ರಂದೇ ಅಕೌಂಟ್ಗೆ ಹಣಹಾಕಲು ಆಹಾರ ಇಲಾಖೆಯಿಂದ ಚಿಂತನೆ ನಡೆಸಲಾಗುತ್ತಿದೆ ಎಂದು ಹೇಳಲಾಗುತ್ತಿದೆ. ವಿರೋಧ ಪಕ್ಷಗಳ ಪಟ್ಟು ಹಾಗೂ ಪ್ರತಿಭಟನೆ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಈ ನಿರ್ಧಾರಕ್ಕೆ ಬಂದಿದೆ ಎನ್ನಲಾಗುತ್ತಿದೆ.
ಜುಲೈ 9 ಅಥವಾ 10ರಂದೇ ಅಕೌಂಟ್ಗೆ ಹಣ ಹಾಕುವ ಸಾಧ್ಯತೆಗಳಿದ್ದು, ಜಿಲ್ಲಾವಾರು ಖಾತೆಗೆ ಹಣ ಹಾಕಲು ತಯಾರಿ ನಡೆಸಲಾಗುತ್ತಿದೆ. ಪ್ರತಿನಿತ್ಯ 2 ಜಿಲ್ಲೆ ಆಯ್ಕೆ ಮಾಡಿ ಹಣ ಹಾಕಲು ಚಿಂತನೆ ನಡೆಯುತ್ತಿದೆ. ಆರಂಭಿಕ ಹಂತದಲ್ಲಿ ಮೈಸೂರು, ಕೋಲಾರ ಜಿಲ್ಲೆಗಳಿಗೆ ಹಣ ಜಮೆ ಹಾಗೂ ಹಂತ ಹಂತವಾಗಿ ಎರೆಡೆರಡು ಜಿಲ್ಲೆಗಳಿಗೆ ಹಣ ಹಾಕಲು ನಿರ್ಧಾರ ಮಾಡಲಾಗುತ್ತದೆ. 3 ತಿಂಗಳು ಪಡಿತರ ಅಕ್ಕಿ ತೆಗೆದುಕೊಳ್ಳದೇ ಇರೋರಿಗೆ ಅಕ್ಕಿ ಹಣ ಅನುಮಾನವಿದೆ. ಏಪ್ರಿಲ್, ಮೇ, ಜೂನ್ನಲ್ಲಿ ಅಕ್ಕಿ ತೆಗೆದುಕೊಳ್ಳದಿದ್ದರೆ ಹಣ ನೀಡುವುದು ಅನುಮಾನ ಎನ್ನಲಾಗಿದೆ.