ರಾಜ್ಯದಲ್ಲಿ ಹೆಚ್ಚಾಯ್ತು ಡೆಂಘೀ ಜ್ವರದ ಪ್ರಕರಣಗಳು – ಲಕ್ಷಣಗಳೇನು ಹಾಗೂ ತಡೆಗಟ್ಟುವ ಕ್ರಮದ ಬಗ್ಗೆ ಇಲ್ಲಿದೆ ಮಾಹಿತಿ  

ರಾಜ್ಯದಲ್ಲಿ ಹೆಚ್ಚಾಯ್ತು ಡೆಂಘೀ ಜ್ವರದ ಪ್ರಕರಣಗಳು – ಲಕ್ಷಣಗಳೇನು ಹಾಗೂ ತಡೆಗಟ್ಟುವ ಕ್ರಮದ ಬಗ್ಗೆ ಇಲ್ಲಿದೆ ಮಾಹಿತಿ  

ಕೊರೊನಾ ಬಳಿಕ ಜನ ಸ್ವಲ್ಪ ನಿಟ್ಟುಸಿರು ಬಿಟ್ಟಿದ್ದಾರೆ. ಆದರೆ ಇದೀಗ ಡೆಂಘೀ ಜ್ವರ ತಾರಕಕ್ಕೇರಿದ್ದು ಬೆಂಗಳೂರಿನಲ್ಲೂ ಪ್ರಕರಣಗಳು ಹೆಚ್ಚಾಗುತ್ತಿವೆ. ಸೊಳ್ಳೆಯಿಂದ ಹರಡುವ ಡೆಂಘೀ ಜ್ವರ ಭಯಾನಕ ರೋಗವಾಗಿದೆ. ಹವಾಮಾನ ಬದಲಾವಣೆ ಹಾಗೂ ಮಳೆಗಾಲದ ಸಮಯದಲ್ಲಿ ಸೊಳ್ಳೆಗಳಿಂದ ಡೆಂಘೀ ಜ್ವರ ಬರುತ್ತದೆ. ಹೀಗಾಗಿ ಬಹಳ ಜಾಗರೂಕತೆ ವಹಿಸಬೇಕಾಗುತ್ತದೆ. ಡೆಂಘೀ ಜ್ವರ ಬರದ ರೀತಿ ಮುಂಜಾಗ್ರತೆ ವಹಿಸುವುದು ಅಷ್ಟೆ ಮುಖ್ಯವಾಗುತ್ತದೆ. ಡೆಂಘೀ ಜ್ವರ ಬಂದರೆ ದೇಹದಲ್ಲಿ ಏನಾಗುತ್ತದೆ? ಅದರ ಪ್ರಮುಖ ಲಕ್ಷಣಗಳೇನು ಎಂಬುದು ತಿಳಿಯಲೇಬೇಕಾದ ಪ್ರಮುಖ ವಿಷಯವಾಗಿದೆ.

ಇದನ್ನೂ ಓದಿ : ಆನೆಗಳಿಗೂ ಇನ್ಶುರೆನ್ಸ್..! – ಗಂಡು ಆನೆಗಳಿಗೆ ತಲಾ 5 ಲಕ್ಷ ರೂ. ಹೆಣ್ಣು ಆನೆಗಳಿಗೆ 4.5 ಲಕ್ಷ ರೂ ವಿಮೆ!

ವೈರಸ್​ ದೇಹ ಪ್ರವೇಶಿಸುತ್ತಿದ್ದಂತೆ ಬಿಳಿರಕ್ತಕಣಗಳು ಕಡಿಮೆಯಾಗುವುದರ ಜೊತೆಗೆ ಇನ್ನಿತರ ಲಕ್ಷಣಗಳು ಕಾಣಿಸಿಕೊಳ್ಳುತ್ತವೆ. ವಿಪರೀತ ತಲೆನೋವು ಶುರುವಾಗುತ್ತದೆ. ದೇಹದಲ್ಲಿ ವಿಪರೀತ ಭಾದೆ ಕಾಣಿಸಿಕೊಳ್ಳುತ್ತದೆ. ದೇಹದ ಎಲ್ಲಾ ಕೀಲುಗಳು ಹಾಗೂ ಸ್ನಾಯುಗಳಲ್ಲಿ ಹೆಚ್ಚಾಗಿ ನೋವು ಕಾಣಿಸಿಕೊಳ್ಳುತ್ತದೆ. ಡೆಂಘೀ ಕಾಣಿಸಿಕೊಂಡರೆ ದೇಹದ ತಾಪಮಾನ ಹೆಚ್ಚಾಗುತ್ತದೆ. ಜೊತೆಗೆ ಮೈ-ಕೈ ನೋವು ಭಾದಿಸುತ್ತದೆ. ಸುಸ್ತು, ಊಟ ಸೇರದಿರುವುದು, ತಲೆಭಾದೆ, ನಿಶ್ಯಕ್ತಿ, ನಡೆಯಲು ಸಾಧ್ಯವಾಗದಿರುವ ಸ್ಥಿತಿ ಉಂಟಾಗುತ್ತದೆ. ಹಾಗೂ ವಾಂತಿ, ಭೇದಿ ಕೂಡ ಆಗುತ್ತದೆ. ಹೊಟ್ಟೆ ನೋವು ಕಾಣಿಸಿಕೊಳ್ಳುತ್ತದೆ. ಡೆಂಘೀ ಬಂದರೆ ಬಾಯಿ ಒಣಗುತ್ತದೆ, ಮೂಗಿನಲ್ಲಿ ರಕ್ತಸ್ರಾವವಾಗುತ್ತದೆ. ಕೂಡಲೇ ವೈದ್ಯರ ಬಳಿ ಹೋಗಿ ಚಿಕಿತ್ಸೆ ಪಡೆಯುವುದು ಅಗತ್ಯವಾಗುತ್ತದೆ.

ವಿಶ್ವದಾದ್ಯಂತ ಲಕ್ಷಾಂತರ ಮಂದಿ ಪ್ರತಿ ವರ್ಷ ಡೆಂಘೀ ಜ್ವರದ ಸೋಂಕಿಗೆ ಗುರಿಯಾಗುತ್ತಿದ್ದಾರೆ. ವಿಶೇಷವಾಗಿ ದಕ್ಷಿಣ ಪೂರ್ವ ಏಷ್ಯಾ ಮತ್ತು ಪಾಶ್ಚಿಮಾತ್ಯ ಪೆಸಿಫಿಕ್ ಭೂ ಪ್ರದೇಶಗಳಲ್ಲಿ ಡೆಂಘೀ ಜ್ವರ ಅಟ್ಟಹಾಸ ಮರೆಯುತ್ತಿದೆ. ದೇಹದ ರೋಗ ನಿರೋಧಕ ವ್ಯವಸ್ಥೆ ಬಲವಾಗಿರುವವರು ಕೇವಲ ಒಂದು ಅಥವಾ ಎರಡು ವಾರಗಳಲ್ಲಿ ಈ ಸಮಸ್ಯೆಯಿಂದ ಪಾರಾಗುತ್ತಾರೆ. ಆದರೆ ಕೆಲವರಿಗೆ ಈ ಮೇಲ್ಕಂಡ ರೋಗ ಲಕ್ಷಣಗಳು ವಿಪರೀತವಾಗಿ ಅವರ ಜೀವಕ್ಕೆ ಮಾರಕವಾಗಿ ಪರಿಣಮಿಸುತ್ತವೆ.

ಹೆಚ್ಚಾಗಿ ಇಂತಹ ರೋಗಿಗಳಲ್ಲಿ ರಕ್ತ ನಾಳಗಳು ಒಡೆದುಕೊಂಡಂತಾಗಿ ರಕ್ತಸ್ರಾವವಾಗುತ್ತದೆ. ಇದಕ್ಕೆ ಕಾರಣ ಅವರ ದೇಹದಲ್ಲಿ ಪ್ಲೇಟ್ಲೆಟ್ ಗಳ ಸಂಖ್ಯೆ ಅದಾಗಲೇ ಕ್ಷೀಣಿಸಿರುತ್ತದೆ. ಇದನ್ನು ವೈದ್ಯರು ಹೆಮರ್ರ್ಹಗಿಕ್ ಫೀವರ್ ಅಥವಾ ಡೆಂಘೀ ಶಾಕ್ ಸಿಂಡ್ರೋಮ್ ಎಂದು ಕರೆಯುತ್ತಾರೆ.ವಇಂತಹ ಸಂದರ್ಭದಲ್ಲಿ ಎದುರಾಗುವ ಕೆಲವು ರೋಗ ಲಕ್ಷಣಗಳನ್ನು ಗಮನಿಸುವುದಾದರೆ,

ಡೆಂಘೀ ಜ್ವರದ ಲಕ್ಷಣಗಳು

ವಿಪರೀತ ಹೊಟ್ಟೆ ನೋವು

ಬಿಟ್ಟೂ ಬಿಡದಂತೆ ಕಾಡುವ ವಾಕರಿಕೆ ಮತ್ತು ವಾಂತಿಯ ಸಮಸ್ಯೆ

ಹಲ್ಲಿನ ವಸಡುಗಳು ಮತ್ತು ಮೂಗಿನಲ್ಲಿ ರಕ್ತಸ್ರಾವ

ಮಲ, ಮೂತ್ರ ಅಥವಾ ವಾಂತಿಯಲ್ಲಿ ರಕ್ತ ಕಂಡುಬರುವುದು

ದೇಹದ ಚರ್ಮದ ಪದರದ ಕೆಳ ಭಾಗದಲ್ಲಿ ರಕ್ತಸ್ರಾವ

ಉಸಿರಾಟದ ತೊಂದರೆ

ಶೀತ ಮತ್ತು ಚಳಿಯಿಂದ ನಡುಗುವುದು

ಹೆಚ್ಚಿನ ಆಯಾಸ

ಮೈ ಕೈ ನೋವಿನಿಂದ ದೇಹದ ಕಿರಿಕಿರಿ

ವಿಜ್ಞಾನಿಗಳು ತಮ್ಮ ಸಂಶೋಧನೆಯಲ್ಲಿ ಕಂಡು ಹಿಡಿದಿರುವ ಹಾಗೆ ವಿಶ್ವದಲ್ಲಿ ನಾಲ್ಕು ಬಗೆಯ ಡೆಂಘೀ ವೈರಸ್ ಗಳಿವೆ ಎಂದು ತಿಳಿದುಬಂದಿದೆ. ಅವುಗಳಲ್ಲಿ ಒಂದು ವೈರಸ್ ಹೆಚ್ಚಾಗಿ ಮನುಷ್ಯರು ವಾಸಿಸುವ ಪ್ರದೇಶಗಳಲ್ಲಿ ಕಂಡು ಬಂದು ಇತರರಿಗೆ ಡೆಂಘೀ ಜ್ವರ ಹರಡುವಂತೆ ಮಾಡುತ್ತದೆ. ಒಬ್ಬ ಡೆಂಘೀ ಜ್ವರ ಸೋಂಕಿತ ವ್ಯಕ್ತಿಯನ್ನು ಒಂದು ಸೊಳ್ಳೆ ಕಚ್ಚಿದಾಗ, ಆ ಮನುಷ್ಯನಲ್ಲಿರುವ ವೈರಸ್ ಸೊಳ್ಳೆಯ ದೇಹದೊಳಗೆ ಸೇರಿ ಅದೇ ಸೊಳ್ಳೆ ಇನ್ನೊಬ್ಬ ಮನುಷ್ಯನನ್ನು ಕಚ್ಚಿದಾಗ, ಆ ವ್ಯಕ್ತಿಯ ರಕ್ತದ ಹರಿವಿನಲ್ಲಿ ವೈರಸ್ ತನ್ನ ಸಂತತಿ ಹೆಚ್ಚಿಸಿಕೊಳ್ಳುತ್ತದೆ. ಇನ್ನು ವೈರಸ್ ತಡೆಗಟ್ಟುವ ಕ್ರಮಗಳ ಬಗ್ಗೆಯೂ ತಿಳಿದುಕೊಳ್ಳಬೇಕಾಗುತ್ತದೆ.

ಡೆಂಘೀ ನಿಯಂತ್ರಣಕ್ಕೆ ಕೈಗೊಳ್ಳಬೇಕಾದ ಕ್ರಮಗಳು

ಡೆಂಘೀ ತಡೆಗಟ್ಟಲು ಸೊಳ್ಳೆಗಳನ್ನು ನಿಯಂತ್ರಿಸಬೇಕು

ಹಗಲಿನಲ್ಲಿ ಸೊಳ್ಳೆ ಕಚ್ಚದಂತೆ ಎಚ್ಚರವಹಿಸಿ

ಶುದ್ಧ ಹಾಗೂ ಕುದಿಸಿ ಆರಿಸಿದ ನೀರನ್ನು ಕುಡಿಯುವುದು ಉತ್ತಮ

ನೀರು ಶೇಖರಣಾ ತೊಟ್ಟಿ, ಟ್ಯಾಂಕ್‌ಗಳ ಮುಚ್ಚಳವನ್ನು ಭದ್ರವಾಗಿ ಮುಚ್ಚಿಡಿ

ಪಾತ್ರೆ ಹಾಗೂ ಬಿಂದಿಗೆಗಳಲ್ಲಿ ಹೆಚ್ಚು ದಿನ ನೀರು ಸಂಗ್ರಹಿಸಿಡಬೇಡಿ

ಮನೆಯ ಸುತ್ತಲು ಹಾಗೂ ತಾರಸಿಯ ಮೇಲೆ ನೀರು ನಿಲ್ಲದಂತೆ ಎಚ್ಚರವಹಿಸಿ

ತೆಂಗಿನ ಚಿಪ್ಪು, ಟಯರ್ ನಂತಹ ತ್ಯಾಜ್ಯವನ್ನು ಸಮರ್ಪಕವಾಗಿ ವಿಲೇವಾರಿ ಮಾಡಿ.

ತೊಟ್ಟಿ, ಬಿಂದಿಗೆ, ಡ್ರಮ್‌ಗಳಲ್ಲಿ 2-3 ದಿನಕ್ಕೊಮ್ಮೆ ನೀರು ಬದಲಿಸಿ ಸ್ವಚ್ಛಗೊಳಿಸಿ.

ಸೀನುವಾಗ, ಕೆಮ್ಮುವಾಗ ಕರವಸ್ತ್ರಗಳನ್ನು ಅಡ್ಡಲಾಗಿ ಇಟ್ಟುಕೊಳ್ಳಿ.

ಸೊಳ್ಳೆಗಳನ್ನು ತಡೆಯಲು ಕಿಟಕಿ ಬಾಗಿಲುಗಳಿಗೆ ಮೆಶ್ ಹಾಕಿ ಅಥವಾ ಸೊಳ್ಳೆ ನಾಶಕ ಔಷಧಗಳನ್ನು ಬಳಸಿ.

ಹಳ್ಳಿಗಳಲ್ಲಾದರೆ ಸೊಳ್ಳೆಗಳನ್ನು ನಿಯಂತ್ರಿಸಲು ಬೇವಿನ ಸೊಪ್ಪಿನ ಹೊಗೆ ಹಾಕುವುದು ಒಳಿತು.

ಡೆಂಘೀ ಜ್ವರದ ಸೋಂಕಿನಿಂದ ಪಾರಾಗಲು ಹೆಚ್ಚಾಗಿ ಗಾಳಿ ಮತ್ತು ಬೆಳಕಿನ ವಾತಾವರಣ ತುಂಬಿರುವ ಪ್ರದೇಶದಲ್ಲಿ ವಾಸ ಮಾಡಬೇಕಾದ ಅವಶ್ಯಕತೆ ಇರುತ್ತದೆ. ಇರುವ ವಾತಾವರಣವನ್ನು ಶುಚಿಯಾಗಿಟ್ಟುಕೊಳ್ಳುವುದರ ಮುಖಾಂತರ ಡೆಂಘೀ ಸೊಳ್ಳೆಗಳಿಗೆ ಕಡಿವಾಣ ಹಾಕಬಹುದು. ಹೆಚ್ಚಾಗಿ ರಾತ್ರಿಯ ಸಮಯದಲ್ಲಿ ಡೆಂಘೀ ಸೊಳ್ಳೆಗಳು ಕಚ್ಚುವುದರಿಂದ ಸೊಳ್ಳೆ ಪರದೆಗಳ ಬಳಕೆ ಇದ್ದರೆ ಒಳ್ಳೆಯದು. ಸಾಧ್ಯವಾದಷ್ಟು ಮೈತುಂಬ ಬಟ್ಟೆ ತೊಟ್ಟು ಮನೆಯಿಂದ ಹೊರಗಡೆ ಹೋಗತಕ್ಕದ್ದು. ಮನೆಯಲ್ಲಿರುವಾಗ ಮಸ್ಕಿಟೋ ರೆಪೆಲ್ಲೆಂಟ್ ಬಳಸುವುದು ಒಳ್ಳೆಯದು. ನಿಮ್ಮ ಬಟ್ಟೆಗಳಿಗೆ, ಬೂಟುಗಳಿಗೆ ಮತ್ತು ನೀವು ಬಳಸುವ ಇನ್ನಿತರ ವಸ್ತುಗಳಿಗೆ ಪೆರ್ಮೆಥ್ರಿನ್ ಸಿಂಪಡಿಸುವುದು ವಾಸಿ.

suddiyaana