ಮಂಗಳೂರಿನಲ್ಲಿ ಹೆಚ್ಚಾಗುತ್ತಿದೆ ಡೆಂಘೀ ಜ್ವರ ಪ್ರಕರಣ – ಮನೆ ಮನೆಗೂ ತೆರಳಿ ಜನರಿಗೆ ಜಾಗೃತಿ

ಮಂಗಳೂರಿನಲ್ಲಿ ಹೆಚ್ಚಾಗುತ್ತಿದೆ ಡೆಂಘೀ ಜ್ವರ ಪ್ರಕರಣ – ಮನೆ ಮನೆಗೂ ತೆರಳಿ ಜನರಿಗೆ ಜಾಗೃತಿ

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಳೆದ ಒಂದು ತಿಂಗಳಿಂದ ಬಿಟ್ಟು ಬಿಡದೆ ಮಳೆ ಸುರಿಯುತ್ತಿದೆ. ಇದರ ಬೆನ್ನಲ್ಲೇ ಜಿಲ್ಲೆಯಾದ್ಯಂತ ಡೆಂಘೀ ಜ್ವರದ ಭೀತಿ ಎದುರಾಗಿದೆ. ಅದು ಕೂಡಾ ಮಂಗಳೂರು ನಗರದಲ್ಲೇ ಡೆಂಘೀ ಪ್ರಕರಣಗಳು ವಿಪರೀತ ಹೆಚ್ಚಾಗಿರುವುದು ಆತಂಕಕ್ಕೆ ಕಾರಣವಾಗಿದೆ.

ಇದನ್ನೂ ಓದಿ: ಚಳಿಗಾಲಕ್ಕೂ ಮುನ್ನವೇ ರಾಜ್ಯದಲ್ಲಿ  `ಮದ್ರಾಸ್ ಐ’ಕಂಟಕ – ಮಕ್ಕಳೇ ಇದರ ಟಾರ್ಗೆಟ್‌!

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಜನವರಿಯಿಂದ ಜುಲೈ ಮೊದಲ ವಾರದವರೆಗೆ 72 ಡೆಂಘೀ ಪ್ರಕರಣಗಳು ದಾಖಲಾಗಿದ್ದವು. ಜೂನ್‌ನಿಂದ ಜುಲೈ ಮೊದಲ ವಾರದವರೆಗೆ 24 ಪ್ರಕರಣಗಳು ವರದಿಯಾಗಿವೆ. ಮಂಗಳೂರು ನಗರವೊಂದರಲ್ಲೇ ಒಟ್ಟು 51 ಡೆಂಘೀ ಜ್ವರ ಪ್ರಕರಣಗಳು ವರದಿಯಾಗಿವೆ. ಮಳೆಯ ಪ್ರಮಾಣ ಹೆಚ್ಚಾಗಿರುವುದರಿಂದ ಸೊಳ್ಳೆಗಳ ಉತ್ಪತ್ತಿ ಹೆಚ್ಚಾಗುತ್ತಿದ್ದು, ಡೆಂಘೀ ಪ್ರಕರಣಗಳು ಹೆಚ್ಚಾಗುತ್ತಿವೆ. ಹೆಚ್ಚಿನ ಮನೆಗಳ ಸುತ್ತಮುತ್ತಲ ವಾತಾವರಣ ಕೂಡ ಸೊಳ್ಳೆಗಳ ಉತ್ಪತ್ತಿ ತಾಣವಾಗಿ ಮಾರ್ಪಟ್ಟಿರುವುದನ್ನು ಆರೋಗ್ಯ ಕಾರ್ಯಕರ್ತರು ಗಮನಿಸಿದ್ದಾರೆ. ಮಳೆಯ ಪ್ರಮಾಣ ಹೆಚ್ಚಾಗಿರುವುದರಿಂದ ಜನರು ಹೆಚ್ಚು ಜಾಗರೂಕರಾಗಿರಬೇಕು. ಡೆಂಘೀ ಪ್ರಕರಣಗಳು ಹೆಚ್ಚಳವಾಗಿವೆ ಎಂದು ಜಿಲ್ಲಾ ಸಾಂಕ್ರಾಮಿಕ ರೋಗ ನಿಯಂತ್ರಣಾಧಿಕಾರಿ ಡಾ. ನವೀನಚಂದ್ರ ಕುಲಾಲ್ ತಿಳಿಸಿದ್ದಾರೆ. ಈಗಾಗಲೇ 5000 ಮನೆಗಳಿಗೆ ಭೇಟಿ ನೀಡಿ ಜಾಗೃತಿ ಮೂಡಿಸಲಾಗಿದೆ. ಆರೋಗ್ಯ ಇಲಾಖೆಯ 30 ಸಿಬ್ಬಂದಿ, 80 ಆಶಾ ಕಾರ್ಯಕರ್ತೆಯರು, 60 ಎಂಪಿಡಬ್ಲ್ಯುಗಳು ಮನೆಮನೆಗಳಲ್ಲಿ ಡೆಂಘೀ ಬಗ್ಗೆ ಜಾಗೃತಿ ಮೂಡಿಸುತ್ತಿದ್ದಾರೆ. ಹೂದಾನಿಗಳು, ಟೈರುಗಳು, ಟೈಲ್ಸ್ ಮತ್ತು ಹಳೆಯ ಸಾಮಗ್ರಿಗಳಲ್ಲಿ ಮಳೆ ನೀರು ಸಂಗ್ರಹವಾಗುವುದನ್ನು ತಪ್ಪಿಸುವಂತೆ ಜಾಗೃತಿ ಮೂಡಿಸುತ್ತಿದ್ದಾರೆ. ಗ್ರಾಮೀಣ ಪ್ರದೇಶದಲ್ಲಿ ಸುಮಾರು 1,300 ಆಶಾ ಕಾರ್ಯಕರ್ತೆಯರು ಇದೇ ರೀತಿಯ ಚಟುವಟಿಕೆಯಲ್ಲಿ ನಿರತರಾಗಿದ್ದಾರೆ ಎಂದು ನವೀನಚಂದ್ರ ಕುಲಾಲ್ ತಿಳಿಸಿದ್ದಾರೆ. ಹವಾಮಾನ ವೈಪರೀತ್ಯದಿಂದ ವೈರಸ್ ಸೋಂಕು ಪ್ರಕರಣಗಳ ಸಂಖ್ಯೆಯೂ ಹೆಚ್ಚುತ್ತಿದೆ. ಜಿಲ್ಲೆಯಲ್ಲಿ 48 ಮಲೇರಿಯಾ ಪ್ರಕರಣಗಳು ದಾಖಲಾಗಿದ್ದು, ಈ ಪೈಕಿ 21 ಮಂದಿ ಇತರ ಜಿಲ್ಲೆಗಳು ಮತ್ತು ಇತರ ರಾಜ್ಯಗಳಿಂದ ಬಂದವರು ಎಂದು ಅವರು ಮಾಹಿತಿ ನೀಡಿದ್ದಾರೆ.

suddiyaana