ರಾಜ್ಯದಲ್ಲಿ ದಿನೇ ದಿನೇ ಹೆಚ್ಚಾಗುತ್ತಿದೆ ಡೆಂಘೀ ಪ್ರಕರಣ – ಆರೋಗ್ಯ ಇಲಾಖೆಯಿಂದ ಗೈಡ್​​ಲೈನ್ಸ್ ಬಿಡುಗಡೆ

ರಾಜ್ಯದಲ್ಲಿ ದಿನೇ ದಿನೇ ಹೆಚ್ಚಾಗುತ್ತಿದೆ ಡೆಂಘೀ ಪ್ರಕರಣ – ಆರೋಗ್ಯ ಇಲಾಖೆಯಿಂದ ಗೈಡ್​​ಲೈನ್ಸ್ ಬಿಡುಗಡೆ

ಬೆಂಗಳೂರು: ರಾಜ್ಯದಲ್ಲಿ ದಿನದಿಂದ ದಿನಕ್ಕೆ ಡೆಂಘೀ ಜ್ವರ ಪ್ರಕರಣ ಏರಿಕೆಯಾಗುತ್ತಲೇ ಇದೆ. ಈ ಸಾಂಕ್ರಾಮಿಕ ತಡೆಗಟ್ಟಲು ರಾಜ್ಯ ಸರ್ಕಾರ ಕ್ರಮಕೈಗೊಳ್ಳುತ್ತಿದೆ. ಇದೀಗ ಆರೋಗ್ಯ ಇಲಾಖೆ ಹೊಸ ಮಾರ್ಗಸೂಚಿಯೊಂದನ್ನು ಬಿಡುಗಡೆ ಮಾಡಿದೆ.

ಬೆಂಗಳೂರಿನಲ್ಲಿ ಡೆಂಗ್ಯೂ ಪ್ರಕರಣಗಳು ಹೆಚ್ಚಾಗುತ್ತಿವೆ. ಈ ವರ್ಷ ಸೆಪ್ಟೆಂಬರ್ 15 ರವರೆಗೆ ಬೆಂಗಳೂರಿನಲ್ಲಿ 9,147 ಡೆಂಗ್ಯೂ ಪ್ರಕರಣಗಳು ಕಂಡುಬಂದಿವೆ. ಈ ಹಿನ್ನೆಲೆ ಕೇಂದ್ರದ ಮಾರ್ಗಸೂಚಿ ಅನ್ವಯ ಡೆಂಘೀ ನಿಯಂತ್ರಣಕ್ಕೆ ರಾಜ್ಯ ಆರೋಗ್ಯ ಇಲಾಖೆ ಗೈಡ್​​ಲೈನ್ಸ್​ ಬಿಡುಗಡೆ ಮಾಡಿದೆ.

ಇದನ್ನೂ ಓದಿ: ಬೆಂಗಳೂರಿನಲ್ಲಿ ದಿನೇ ದಿನೇ ಹೆಚ್ಚಾಗುತ್ತಿದೆ ಡೆಂಘೀ ಪ್ರಕರಣ – ಪ್ಲೇಟ್ ಲೆಟ್ಸ್ ಗಳಿಗಾಗಿ ಹೆಚ್ಚಿದ ಬೇಡಿಕೆ

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಪ್ರಕಾರ ಡೆಂಘೀ ಈಡಿಸ್ ಎಂಬ ಸೊಳ್ಳೆ ಕಚ್ಚುವುದರಿಂದ ಬರುತ್ತದೆ. ಮತ್ತು ವ್ಯಕ್ತಿಯಿಂದ ವ್ಯಕ್ತಿಗೆ ಸೋಂಕು ತಗುಲುತ್ತದೆ. ಸೊಳ್ಳೆ ಕಚ್ಚಿದ 5-7 ದಿನಗಳಲ್ಲಿ ರೋಗಲಕ್ಷಣಗಳು ಸಾಮಾನ್ಯವಾಗಿ ಕಾಣಿಸಿಕೊಳ್ಳುತ್ತವೆ. ಡೆಂಘೀಗೆ  ಔಷಧಿ ಇಲ್ಲವಾದರೂ  ರೋಗಲಕ್ಷಣಗಳನ್ನು ಗಮನಿಸಿ ರೋಗಿಗಳಿಗೆ ಚಿಕಿತ್ಸೆ ನೀಡಲಾಗುತ್ತದೆ.

ರೋಗ ಲಕ್ಷಣಗಳು ಹೀಗಿವೆ..

ಆರೋಗ್ಯ ಇಲಾಖೆ ಡೆಂಘೀ ಜ್ವರ ಯಾವ ಲಕ್ಷಣಗಳೊಂದಿಗೆ ಕಾಣಿಸಿಕೊಳ್ಳುತ್ತದೆ ಎಂಬುವುದನ್ನು ಮಾರ್ಗಸೂಚಿಯಲ್ಲಿ ಬಿಡುಗಡೆ ಮಾಡಿದೆ. ಆರಂಭದಲ್ಲಿ  ವಿಪರೀತ ಜ್ವರ ಕಾಣಿಸಿಕೊಳ್ಳುತ್ತದೆ. ಕಣ್ಣು, ಕಿವಿ, ತಲೆ ನೋವು, ವಾಂತಿ ತೀವ್ರ ಹೊಟ್ಟೆ, ನೋವು ಬಾಯಿ, ಮೂಗು ಮತ್ತು ಒಸಡುಗಳಲ್ಲಿ ಕೆಂಪು ತೇಪೆಗಳು ಕಡಿಮೆ ರಕ್ತದೊತ್ತಡ ರೋಗಿಗಳಲ್ಲಿ ಕಂಡುಬರುತ್ತದೆ ಎಂದು ಮಾರ್ಗಸೂಚಿಯಲ್ಲಿ ತಿಳಿಸಿದೆ.

ಡೆಂಘೀ ತಡೆಗೆ ಏನು ಮಾಡಬೇಕು?

ಮೇಲ್ಛಾವಣಿಯ ಟ್ಯಾಂಕ್‌ಗಳು ಸೇರಿದಂತೆ ಎಲ್ಲಾ ನೀರಿನ ಪಾತ್ರೆಗಳನ್ನು ವಾರಕ್ಕೊಮ್ಮೆಯಾದರೂ ಖಾಲಿ ಮಾಡಬೇಕು ಮತ್ತು ಚನ್ನಾಗಿ  ತೊಳೆದು, ಒಣಗಿಸಿ ಬಳಸಬೇಕು. ಮನೆಗಳ ಸುತ್ತಮುತ್ತಲಿನ ತ್ಯಾಜ್ಯ ಟಿನ್‌ಗಳು, ಟೈರ್‌ಗಳು ಮತ್ತು ಬಾಟಲಿಗಳಲ್ಲಿ ಮಳೆ ನೀರು ಸಂಗ್ರಹವಾಗದಂತೆ ಎಚ್ಚರಿಕೆ ವಹಿಸಬೇಕು. ಏರ್ ಕೂಲರ್‌ಗಳಲ್ಲಿನ ನೀರನ್ನು ವಾರಕ್ಕೊಮ್ಮೆಯಾದರೂ ಬದಲಾಯಿಸಬೇಕು. ಕೈ ಮತ್ತು ಕಾಲುಗಳನ್ನು ಮುಚ್ಚುವ ಪೂರ್ಣ ಉಡುಪುಗಳನ್ನು ಧರಿಸಬೇಕು. ಹಗಲಿನಲ್ಲಿ ಮಲಗುವ / ವಿಶ್ರಾಂತಿ ಪಡೆಯುವ ಗರ್ಭಿಣಿಯರು, ಮಕ್ಕಳು ಮತ್ತು ವೃದ್ಧರು ಸೊಳ್ಳೆ ಪರದೆಯನ್ನು ಬಳಸಬೇಕು. ಡೆಂಗ್ಯೂ ಪೀಡಿತರು ತಪ್ಪದೇ ಸೊಳ್ಳೆ ಪರದೆ ಬಳಸಬೇಕು ಡೆಂಗ್ಯೂ ಇರುವವರು ಸಾಕಷ್ಟು ನೀರಿನ ಅಂಶವಿರುವ  ಪದಾರ್ಥಗಳನ್ನು ಸೇವಿಸಬೇಕು ಮತ್ತು ಗರಿಷ್ಠ ವಿಶ್ರಾಂತಿ ತೆಗೆದುಕೊಳ್ಳಬೇಕು. ಮನೆಯ ಕಿಟಕಿ ಬಾಗಿಲುಗಳಿಗೆ ಸೊಳ್ಳೆ ಪರದೆಗಳನ್ನು ಅಳವಡಿಸಬೇಕು.

ಏನನ್ನು ಮಾಡಬಾರದು?

ಡೆಂಘೀ ರೋಗಲಕ್ಷಣಗಳು ಕಂಡು ಬಂದರೆ  ಸ್ವಯಂ-ಔಷಧಿಗಳನ್ನು ತೆಗೆದುಕೊಳ್ಳುವ ಬದಲಿಗೆ ಆಸ್ಪತ್ರೆಗೆ ಭೇಟಿ ನೀಡಿ ವೈದ್ಯರ ಬಳಿ ಪರೀಕ್ಷಿಸಿಕೊಳ್ಳಬೇಕು. ಡೆಂಘೀ ಇರುವವರು ಯಾವುದೇ ಕಾರಣಕ್ಕೂ ಪೇನ್ ಕಿಲ್ಲರ್ ಮಾತ್ರಗಳನ್ನು ತೆಗೆದುಕೊಳ್ಳಬಾರದು ಎಂದು ಆರೋಗ್ಯ ಇಲಾಖೆ ಮಾರ್ಗಸೂಚಿಯಲ್ಲಿ ತಿಳಿಸಿದೆ.

Shwetha M