ಬೆಂಗಳೂರಿನಲ್ಲಿ ದಿನೇ ದಿನೇ ಹೆಚ್ಚಾಗುತ್ತಿದೆ ಡೆಂಘೀ ಪ್ರಕರಣ – ಪ್ಲೇಟ್ ಲೆಟ್ಸ್ ಗಳಿಗಾಗಿ ಹೆಚ್ಚಿದ ಬೇಡಿಕೆ
ಬೆಂಗಳೂರಿನಲ್ಲಿ ಡೆಂಘೀ ಪ್ರಕರಣ ದಿನೇ ದಿನೇ ಹೆಚ್ಚಾಗುತ್ತಿದೆ. ಸಿಎಂ ಸಿದ್ದರಾಮಯ್ಯ ಕೂಡಾ ನಗರದಲ್ಲಿ ಡೆಂಘೀ ಪ್ರಕರಣ ಏರಿಕೆಯಾಗುತ್ತಿರುವುದಕ್ಕೆ ಆತಂಕ ವ್ಯಕ್ತಪಡಿಸಿದ್ದಾರೆ. ಇನ್ನು ಡೆಂಘೀ ಜ್ವರ ಪ್ರಕರಣ ಹೆಚ್ಚಳದಿಂದಾಗಿ. ಪ್ಲೇಟ್ ಲೆಟ್ಸ್ ಗಳಿಗಾಗಿ ಬೇಡಿಕೆ ಹೆಚ್ಚುತ್ತಿದೆ. ಸಿಲಿಕಾನ್ ಸಿಟಿಯಲ್ಲಿ ಬ್ಲಡ್ ಬ್ಯಾಂಕ್ ಗಳಲ್ಲಿ ಪ್ಲೇಟ್ ಲೆಟ್ಸ್ ಗೂ ಕೊರತೆ ಉಂಟಾಗಿದೆ.
ಸಿಎಂ ಸಿದ್ದರಾಮಯ್ಯ ಅವರು ಮಂಗಳವಾರ ನಡೆದ ಸಭೆಯಲ್ಲಿ ಡೆಂಘೀ ಪ್ರಕರಣ ಹೆಚ್ಚುತ್ತಿರುವ ಬಗ್ಗೆ ಮಾತನಾಡಿದ್ದಾರೆ. ಡೆಂಘಿ ಜ್ವರ ಜಾಸ್ತಿ ಆಗಿದೆ. ವಿಶೇಷವಾಗಿ ಬಿಬಿಎಂಪಿ ವ್ಯಾಪ್ತಿಯಲ್ಲಿ 4000ಕ್ಕೂ ಹೆಚ್ಚು ಪ್ರಕರಣಗಳು ಕಂಡು ಬಂದಿವೆ. ಈ ಸಾಂಕ್ರಾಮಿಕ ತಡೆಗಟ್ಟಲು ಒತ್ತು ನೀಡಬೇಕು ಎಂದಿದ್ದಾರೆ. ಡೆಂಘೀ ಪ್ರಕರಣದ ಬಗ್ಗೆ ಸಿಎಂ ಆತಂಕ ವ್ಯಕ್ತಪಡಿಸಿದರೆ, ಇತ್ತ ಪ್ಲೇಟ್ ಲೆಟ್ಸ್ ಗಳಿಗಾಗಿ ಬೇಡಿಕೆ ಹೆಚ್ಚುತ್ತಲೇ ಇದೆ. ಪ್ರತಿನಿತ್ಯ 15 ರಿಂದ 20 ಸಿಂಗಲ್ ಡೋನರ್ ಪ್ಲೇಟ್ ಲೆಟ್ಸ್ ಹಾಗೂ 150 ಯುನಿಟ್ ನಷ್ಟು ರ್ಯಾಂಡಮ್ ಡೋನರ್ ಪ್ಲೇಟ್ಲೆಟ್ಸ್ ಗಳಿಗೆ ಬೇಡಿಕೆ ಬರುತ್ತಿದೆ. ಒಂದೇ ಬಾರಿಗೆ ಇವೆರಡಕ್ಕೂ ಬೇಡಿಕೆ ಏಕಾಏಕಿ ಹೆಚ್ಚಾಗಿದೆ.
ಬೆಂಗಳೂರಿನಲ್ಲಿ ಸೆಪ್ಟೆಂಬರ್ 8 ರವರೆಗೂ 4,979 ಪ್ರಕರಣಗಳು ವರದಿಯಾಗಿವೆ. ವರ್ಷದಿಂದ ವರ್ಷಕ್ಕೆ ಬೆಂಗಳೂರಿನಲ್ಲಿ ಡೆಂಘೀ ಪ್ರಕರಣಗಳು ಹೆಚ್ಚಾಗುತ್ತಿದ್ದು, ಎಪ್ರಿಲ್ ನಿಂದ ಅಕ್ಟೋಬರ್ ತಿಂಗಳಲ್ಲಿ ಹೆಚ್ಚಾಗಿ ಹರಡುತ್ತದೆ. ಹೀಗಾಗಿ ಡೆಂಘೀ ಬಗ್ಗೆ ಎಚ್ಚರಿಕೆಯ ಕ್ರಮ ಕೈಗೊಳ್ಳಬೇಕು ಎಂದು ಆರೋಗ್ಯಾಧಿಕಾರಿಗಳು ಕೂಡಾ ತಿಳಿಸಿದ್ದಾರೆ.