ರಾಷ್ಟ್ರ ರಾಜಧಾನಿಯಲ್ಲಿ ಮಳೆಯ ಅಬ್ಬರ – ದೆಹಲಿಯಲ್ಲಿ ಅಪಾಯ ಮಟ್ಟ ಮೀರಿದ ಯಮುನಾ ನದಿ.. ಸಚಿವಾಲಯಕ್ಕೂ ನುಗ್ಗಿದ ನೀರು!

ದೇಶದ ಹಲವು ಭಾಗಗಳಲ್ಲಿ ನಿರಂತರ ಮಳೆಯಾಗುತ್ತಿದೆ. ತಗ್ಗು ಪ್ರದೇಶಗಳು ಜಲಾವೃತವಾಗಿದ್ದು, ಹಲವು ಕಡೆಗಳಲ್ಲಿ ಅವಾಂತರ ಸೃಷ್ಟಿಯಾಗಿದೆ. ಇದೀಗ ಮಳೆ ಎಫೆಕ್ಟ್‌ಗೆ ರಾಷ್ಟ್ರ ರಾಜಧಾನಿ ದೆಹಲಿಗೂ ತಟ್ಟಿದೆ. ಯಮುನಾ ನದಿ ನೀರು ಅಪಾಯ ಮಟ್ಟದಲ್ಲಿ ಹರಿಯುತ್ತಿದ್ದು, ಅಲ್ಲಲ್ಲಿ ಪ್ರವಾಹ ಪರಿಸ್ಥಿತಿ ಎದುರಾಗಿದೆ.
ಇದನ್ನೂ ಓದಿ: ಅಮೆರಿಕದೊಂದಿಗೆ ಮಾತುಕತೆಗಳು ನಡೆಯುತ್ತಿದೆ – ಯಾರೂ ಭಯಪಡುವ ಅಗತ್ಯವಿಲ್ಲ – ಪಿಯೂಷ್ ಗೋಯಲ್
ದೆಹಲಿಯಲ್ಲಿ ಕಳೆದ 24 ಗಂಟೆಗಳಲ್ಲಿ ಭಾರಿ ಮಳೆಯಾಗುತ್ತಿದೆ. ಉಕ್ಕಿ ಹರಿಯುತ್ತಿರುವ ಯಮುನಾ ನದಿಯಿಂದ ಬರುವ ಪ್ರವಾಹದ ನೀರು ಹತ್ತಿರದ ಪ್ರದೇಶಗಳಿಗೆ ನುಗ್ಗಿದೆ. ಇದೀಗ ನದಿ ಪ್ರವಾಹದ ನೀರು ದೆಹಲಿ ಸಚಿವಾಲಯಕ್ಕೂ ನುಗ್ಗಿದೆ. ಇನ್ನು ಕಾಶ್ಮೀರಿ ಗೇಟ್ ಬಳಿಯ ಶ್ರೀ ಮಾರ್ಗಟ್ ವಾಲೆ ಹನುಮಾನ್ ಬಾಬಾ ಮಂದಿರಕ್ಕೂ ಪ್ರವಾಹ ನೀರು ಆವರಿಸಿದೆ. ಕಂದಾಯ ಇಲಾಖೆಯ ಪ್ರಕಾರ, 8,018 ಜನರನ್ನ ಡೇರೆಗಳಿಗೆ ಸ್ಥಳಾಂತರಿಸಲಾಗಿದ್ದು, 2,030 ಜನರನ್ನು 13 ಶಾಶ್ವತ ಆಶ್ರಯಗಳಿಗೆ ಸ್ಥಳಾಂತರಿಸಲಾಗಿದೆ. ಪರಿಸ್ಥಿತಿಯ ಬಗ್ಗೆ ದೆಹಲಿ ಸರ್ಕಾರ 24/7 ನಿಗಾ ಇಡುತ್ತಿದೆ.
ಇನ್ನು ರಾಜಸ್ಥಾನದ ಹಲವಾರು ಭಾಗಗಳಲ್ಲಿ ಭಾರೀ ಮಳೆಯಾಗಿದ್ದು, ದೌಸಾ ಜಿಲ್ಲೆಯ ಸಿಕ್ರಿಯಲ್ಲಿ ಕಳೆದ 24 ಗಂಟೆಗಳಲ್ಲಿ ದಾಖಲೆಯ 104 ಮಿ.ಮೀ ಮಳೆಯಾಗಿದೆ. ಅಲ್ಲದೇ ಮುಂದಿನ 4-5 ದಿನಗಳ ಕಾಲ ಭಾರೀ ಮಳೆಯ ಎಚ್ಚರಿಕೆ ನೀಡಲಾಗಿದೆ.
ರಾಜಸ್ಥಾನ, ಒಡಿಶಾ, ಗುಜರಾತ್ ಸೇರಿದಂತೆ ವಿವಿಧ ರಾಜ್ಯಗಳಲ್ಲಿಂದು ಭಾರೀ ಮಳೆಯಾಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಈಗಾಗಲೇ ಗುಜರಾತ್‌ಗೆ ರೆಡ್ ಅಲರ್ಟ್ ಘೋಷಣೆ ಮಾಡಲಾಗಿದೆ. ಸೌರಾಷ್ಟ್ರ ಮತ್ತು ಕಚ್ ಪ್ರದೇಶದಲ್ಲಿ ಸೆಪ್ಟೆಂಬರ್ 6 ಮತ್ತು 7ರ ವರೆಗೆ ಭಾರೀ ಮಳೆಯಾಗುವ ಸಾಧ್ಯತೆಯಿದೆ.

ನೋಡಿರಿ

