ಗಣರಾಜ್ಯೋತ್ಸವ ಪರೇಡ್ ನಲ್ಲಿ ರಾಜ್ಯದ ಸ್ತಬ್ದಚಿತ್ರ ಇರಲ್ಲ – ಕೇಂದ್ರ ಅನುಮತಿ ನಿರಾಕರಿಸಿದ್ದೇಕೆ?

ಗಣರಾಜ್ಯೋತ್ಸವ ಪರೇಡ್ ನಲ್ಲಿ ರಾಜ್ಯದ ಸ್ತಬ್ದಚಿತ್ರ ಇರಲ್ಲ – ಕೇಂದ್ರ ಅನುಮತಿ ನಿರಾಕರಿಸಿದ್ದೇಕೆ?

ಬೆಂಗಳೂರು: ದೆಹಲಿಯಲ್ಲಿ ಜನವರಿ 26  ಗಣರಾಜ್ಯೋತ್ಸವದಂದು ನಡೆಯುವ ಪರೇಡ್ ನಲ್ಲಿ, ಕರ್ನಾಟಕ ಕಳೆದ 13 ವರ್ಷಗಳಿಂದ ನಿರಂತರವಾಗಿ  ಪ್ರತಿನಿಧಿಸುತ್ತಿದೆ. ಆದರೆ ಈ ವರ್ಷದ ಪರೇಡ್ ನಲ್ಲಿ ಭಾಗವಹಿಸುವ ಅವಕಾಶವನ್ನು ಕಳೆದುಕೊಳ್ಳುವ ಸಾಧ್ಯತೆ ಹೆಚ್ಚಾಗಿದೆ.

ಕಳೆದ ಬಾರಿ ಪರೇಡ್ ನಲ್ಲಿ ಕರ್ನಾಟಕದ ಸ್ತಬ್ಧ ಚಿತ್ರ ಎರಡನೇ ಸ್ಥಾನ ಪಡೆದುಕೊಂಡಿತ್ತು. ಈ ಬಾರಿಯೂ ಕರ್ನಾಟಕ ಸ್ತಬ್ಧಚಿತ್ರವನ್ನು ಮಹಿಳಾ ಸಬಲೀಕರಣ ವಿಷಯದ ಕುರಿತು ಸಿದ್ಧಪಡಿಸಲಾಗುತ್ತಿತ್ತು. ಆದರೆ ಅಂತಿಮ ಹಂತದಲ್ಲಿ ಕರ್ನಾಟಕದ ಸ್ತಬ್ಧಚಿತ್ರಕ್ಕೆ ಅನುಮತಿ ನೀಡಿಲ್ಲ.

ಇದನ್ನೂ ಓದಿ: ಭಾರತ್ ಜೋಡೋ ಯಾತ್ರೆ – ಕೊರೆಯುವ ಚಳಿ ಮಧ್ಯೆ ರಾಹುಲ್ ಗಾಂಧಿ ಹೆಜ್ಜೆ

ಮಹಿಳಾ ಸಬಲೀಕರಣವನ್ನು ಸಾರುವ ನಿಟ್ಟಿನಲ್ಲಿ ಕರ್ನಾಟಕ ನಾಲ್ಕು ವಿಷಯಗಳನ್ನು ಕೇಂದ್ರಕ್ಕೆ ಕಳುಹಿಸಿಕೊಟ್ಟಿತ್ತು. ಸಾಲು ಮರದ ತಿಮ್ಮಕ್ಕ, ಸೂಲಗಿತ್ತಿ ನರಸಮ್ಮ ಅವರ ಸ್ತಬ್ದಚಿತ್ರ ಅಂತಿಮವಾಗಿ ಮೆಚ್ಚುಗೆ ಗಳಿಸಿತ್ತು. ಆದರೆ ಕಡೇ ಹಂತದಲ್ಲಿ ನಿರಾಕರಿಸಿದೆ.

ಈ ಬಗ್ಗೆ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಆಯುಕ್ತ ಹರ್ಷ ಕುಮಾರ್ ಮಾಹಿತಿ ನೀಡಿದ್ದಾರೆ. ‘ಕಳೆದ ಬಾರಿ ಪರೇಡ್ ನಲ್ಲಿ ಕರ್ನಾಟಕದ ಸ್ತಬ್ಧ ಚಿತ್ರ ಎರಡನೇ ಸ್ಥಾನ ಪಡೆದುಕೊಂಡಿತ್ತು. ಈ ಬಾರಿ ಸ್ತಬ್ಧಚಿತ್ರವನ್ನು ಮಹಿಳಾ ಸಬಲೀಕರಣ ವಿಷಯದ ಕುರಿತು ಸಿದ್ಧಪಡಿಸಲಾಗುತ್ತಿತ್ತು. ಆದರೆ ಬೇರೆ ರಾಜ್ಯಗಳಿಗೆ ಅವಕಾಶ ಕಲ್ಪಿಸುವ ನಿಟ್ಟಿನಲ್ಲಿ ಈ ಬಾರಿ ಕರ್ನಾಟಕದ ಸ್ತಬ್ದ ಚಿತ್ರಕ್ಕೆ ಅವಕಾಶ ನಿರಾಕರಿಸಿದೆ’ ಎಂದು ಹೇಳಿದ್ದಾರೆ.

ಈ ವರ್ಷದ ಗಣರಾಜ್ಯೋತ್ಸವ ಪರೇಡ್ ನಲ್ಲಿ ಸ್ತಬ್ದಚಿತ್ರ ಪ್ರದರ್ಶನಕ್ಕೆ ಕೇರಳ, ತಮಿಳುನಾಡು ಸೇರಿದಂತೆ ಒಟ್ಟು 13 ರಾಜ್ಯಗಳನ್ನು ಕೇಂದ್ರ ಆಯ್ಕೆ ಮಾಡಿದೆ.

ಈ ಬಗ್ಗೆ ಕಾಂಗ್ರೆಸ್ ನ ಹಿರಿಯ ನಾಯಕ ವಿ.ಎಸ್.ಉಗ್ರಪ್ಪ ಕಿಡಿಕಾರಿದ್ದು, ಡಬಲ್ ಎಂಜಿನ್ ಸರ್ಕಾರ ರಾಜ್ಯದ ಜನತೆ ಅವಮಾನ ಮಾಡಿದೆ. ಕೇಂದ್ರದ ಮಲತಾಯಿ ಧೋರಣೆ ಮುಂದುವರಿದಿದ್ದು, ಮುಂದಿನ ದಿನಗಳಲ್ಲಿ ರಾಜ್ಯದ ಜನತೆ ಪಾಠ ಕಲಿಸಲಿದ್ದಾರೆ ಎಂದು ಆಕ್ರೋಶ ಹೊರ ಹಾಕಿದ್ದಾರೆ.

ಸ್ಥಬ್ಧಚಿತ್ರ ಅನ್ನೋದು ನಮ್ಮ ನಾಡು, ಸಂಸ್ಕೃತಿ, ಧಾರ್ಮಿಕ ವಿಷಯವನ್ನು ಒಳಗೊಂಡಿರುತ್ತದೆ. ಇದೆಲ್ಲವನ್ನು ಒಳಗೊಂಡಿರುವ ನಮ್ಮ ರಾಜ್ಯದ ಸ್ಥಬ್ಧಚಿತ್ರ ಅನುಮತಿ ನಿರಾಕರಿಸಿರುವುದು ಖಂಡನೀಯ. ಮಹದಾಯಿ, ಕಳಸಾ-ಬಂಡೂರಿ ಯೋಜನೆಗಳಲ್ಲಿಯೂ ಕೇಂದ್ರ ಸರ್ಕಾರ ರಾಜ್ಯಕ್ಕೆ ಮೋಸ ಮಾಡಿದೆ. ರಾಜ್ಯ ಬಿಜೆಪಿ ನಾಯಕರು ಗಣರಾಜ್ಯೋತ್ಸವದಲ್ಲಿ ನಮ್ಮ ಸ್ಥಬ್ಧಚಿತ್ರ ಪ್ರದರ್ಶನವಾಗುವಂತೆ ನೋಡಿಕೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.

suddiyaana