ಅನುದಾನ ಹಂಚಿಕೆ ವಿಚಾರವಾಗಿ ಕೇಂದ್ರದ ವಿರುದ್ಧ ರಾಜ್ಯ ಸರ್ಕಾರ ಪ್ರತಿಭಟನೆ – ಅರ್ಧ ಗಂಟೆ ಅವಕಾಶ ನೀಡಿದ ದಿಲ್ಲಿ ಪೊಲೀಸ್!
ಲೋಕಸಭಾ ಚುನಾವಣೆ ಹತ್ತಿರವಾಗುತ್ತಿದೆ. ಇದೀಗ ಅನುದಾನ ಹಂಚಿಕೆ ವಿಚಾರವಾಗಿ ಕೇಂದ್ರ ಸರ್ಕಾರ ಮತ್ತು ಕರ್ನಾಟಕದ ಸರ್ಕಾರದ ನಡುವಣ ಸಂಘರ್ಷ ತೀವ್ರ ಸ್ವರೂಪ ಪಡೆದುಕೊಂಡಿದೆ. ಇದೀಗ ಕೇಂದ್ರ ಸರ್ಕಾರದ ವಿರುದ್ಧ ಪ್ರತಿಭಟನೆಗೆ ಕರ್ನಾಟಕ ಸರ್ಕಾರ ಮುಂದಾಗಿದೆ. ಬುಧವಾರ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ರಾಜ್ಯ ಸರ್ಕಾರ ಪ್ರತಿಭಟನೆ ನಡೆಸುತ್ತಿದೆ.
ಇದನ್ನೂ ಓದಿ: ಹಾಲು ಕುಡಿಯದವರಿಗೆ ಕ್ಯಾಲ್ಸಿಯಂ ಎಲ್ಲಿ ಸಿಗುತ್ತೆ? – ಕ್ಯಾಲ್ಸಿಯಂ ಸರಿಯಾಗಿ ಸೇವಿಸಿಲ್ಲವೆಂದ್ರೆ ಏನಾಗುತ್ತೆ?
ಹೌದು, ತೆರಿಗೆ ಹಂಚಿಕೆಯಲ್ಲಿ ಕೇಂದ್ರ ಸರ್ಕಾರದಿಂದ ಕರ್ನಾಟಕಕ್ಕೆ ಅನ್ಯಾಯವಾಗುತ್ತಿದೆ ಎಂದು ಕಾಂಗ್ರೆಸ್ ಸರ್ಕಾರ ಆರೋಪ ಮಾಡಿದ್ದು, ನಮ್ಮ ತೆರಿಗೆ ನಮ್ಮ ಹಕ್ಕು ಎಂಬ ಉದ್ಘೋಷದೊಂದಿಗೆ ಮೋದಿ ಸರ್ಕಾರದ ವಿರುದ್ಧ ರಾಜ್ಯ ಕಾಂಗ್ರೆಸ್ ನಾಯಕರು ಪ್ರತಿಭಟನೆ ನಡೆಸುತ್ತಿದ್ದಾರೆ. ಈಗಾಗಲೇ ಕಾಂಗ್ರೆಸ್ ಶಾಸಕರು, ಸಚಿವರು ಸೇರಿದಂತೆ ಸಿಎಂ ಸಿದ್ದರಾಮಯ್ಯ ದೆಹಲಿಗೆ ಹಾರಿದ್ದಾರೆ. ಇನ್ನು ದೆಹಲಿಯ ಜಂತರ್ ಮಂತರ್ನಲ್ಲಿ ಕರ್ನಾಟಕ ಸರ್ಕಾರದ ಪ್ರತಿಭಟನೆಗೆ ದಿಲ್ಲಿ ಪೊಲೀಸ್ ಕೇವಲ ಅರ್ಧ ಗಂಟೆ ಅವಕಾಶ ನೀಡಿದೆ.
ಕೇಂದ್ರದ ವಿರುದ್ಧ ಅನುದಾನ ತಾರತಮ್ಯ ಸಮರಕ್ಕೆ ಸಜ್ಜಾಗಿದ್ದಾರೆ. ಮಂಗಳವಾರ (ಫೆ.05) ರಂದು ಸುದ್ದಿಗೋಷ್ಠಿ ನಡೆಸಿ ಅಂಕಿ ಅಂಶಗಳ ಸಮೇತ ಗುಡುಗಿದ್ದ ಸಿಎಂ, ಇವತ್ತು ಮತ್ತೊಂದು ಅಸ್ತ್ರ ಹೂಡಿದ್ದಾರೆ. ದೆಹಲಿಯ ಚಲೋ ಪಕ್ಷದ ಪ್ರತಿಭಟನೆಯಲ್ಲ. ಸರ್ಕಾರದ ಪ್ರತಿಭಟನೆ, ರಾಜ್ಯಕ್ಕೆ ಆಗುತ್ತಿರುವ ಅನ್ಯಾಯ ಸರಿಪಡಿಸಲು ಬಿಜೆಪಿ ಮತ್ತು ಜೆಡಿಎಸ್ ಸಂಸದರು ಪ್ರತಿಭಟನೆಗೆ ಬರಬೇಕು ಅಂತ ಪತ್ರ ಬರೆದಿದ್ದಾರೆ. ದೇವೇಗೌಡರಿಗೂ ಪ್ರತಿಭಟನೆಗೆ ಆಹ್ವಾನಿಸಿದ್ದಾರೆ.
ಇನ್ನೂ ಇಂದಿನ ಪ್ರತಿಭಟನೆಗೆ ಕನ್ನಡ ಟಚ್ ಕೊಡುವ ಸಲುವಾಗಿ, ಸಚಿವ ಪ್ರಿಯಾಂಕ್ ಖರ್ಗೆ ಕನ್ನಡ ಬಾವುಟಗಳನ್ನ ದೆಹಲಿಗೆ ತೆಗೆದುಕೊಂಡು ಹೋಗಿದ್ದಾರೆ. ಕನ್ನಡಿಗರ ಅಸ್ಮಿತೆ, ಕನ್ನಡಿಗರಿಗೆ ಅನ್ಯಾಯವಾಗುತ್ತಿದೆ ಎಂಬ ಅಸ್ತ್ರ ಹೂಡಿದ್ದಾರೆ.
ವಿಪಕ್ಷ ನಾಯಕರಿಗೆ ಪತ್ರ ಬರೆದ ಸಿಎಂ ಸಿದ್ದರಾಮಯ್ಯ
ಇನ್ನು ಹೋರಾಟದಲ್ಲಿ ಪಾಲ್ಗೊಳ್ಳುವಂತೆ ವಿಪಕ್ಷದ ಜನಪ್ರತಿನಿಧಿಗಳಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ರಾಜ್ಯಸಭಾ ಸದಸ್ಯ ಮಾಜಿ ಪ್ರಧಾನಿ ಹೆಚ್ಡಿ ದೇವೇಗೌಡ ಸೇರಿದಂತೆ ಎಲ್ಲ ಬಿಜೆಪಿ ಮತ್ತು ಜೆಡಿಎಸ್ ಸಂಸದರು, ಸಚಿವರು, ಶಾಸಕರಿಗೆ ಪತ್ರ ಬರೆದಿದ್ದಾರೆ. ಕನ್ನಡಿಗರ ಹಕ್ಕು, ಸ್ವಾಭಿಮಾನಕ್ಕೆ ನಿರಂತರವಾಗಿ ಅನ್ಯಾಯವಾಗುತ್ತಿದೆ. ರಾಜ್ಯದ ತೆರಿಗೆಯಲ್ಲಿ ಆಗುತ್ತಿರುವ ವಂಚನೆ ವಿರೋಧಿಸಿ ಪ್ರತಿಭಟನೆ ನಡೆಸುತ್ತಿದ್ದೇವೆ ಇದಕ್ಕೆ ಬೆಂಬಲಿಸುವಂತೆ ಕೋರಿದ್ದಾರೆ.
ರಾಜ್ಯಗಳಿಂದ ತೆರಿಗೆ ರೂಪದಲ್ಲಿ ಕೇಂದ್ರ ಸರ್ಕಾರಕ್ಕೆ ಹಣ ಹೋಗುತ್ತದೆ. ಹಣಕಾಸು ಆಯೋಗ ನಿರ್ಧರಿಸಿದಂತೆ ರಾಜ್ಯಗಳಿಗೆ ಅನುದಾನ ನೀಡಬೇಕು. 14ನೇ ಹಣಕಾಸು ಆಯೋಗದಂತೆ ರಾಜ್ಯಕ್ಕೆ ಶೇ.42ರಷ್ಟು ಹಣ ನೀಡಬೇಕು. 15ನೇ ಹಣಕಾಸು ಆಯೋಗದಂತೆ ರಾಜ್ಯಕ್ಕೆ ಶೇ.41ರಷ್ಟು ಹಣ ನೀಡಬೇಕು ಎಂದು ಕೇಂದ್ರ ಸರ್ಕಾರಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಒತ್ತಾಯಿಸಿದೆ.