ದೆಹಲಿ ಪಾಲಿಕೆಯಲ್ಲಿ ಇನ್ನು ಆಪ್ ದರ್ಬಾರ್
ಕಮಲ ಪಾಳಯಕ್ಕೆ ಭಾರಿ ಮುಖಭಂಗ
ನವದೆಹಲಿ: ದೆಹಲಿ ಮಹಾನಗರ ಪಾಲಿಕೆ(ಎಂಸಿಡಿ) ಚುನಾವಣೆಯಲ್ಲಿ ಅರವಿಂದ್ ಕೇಜ್ರಿವಾಲ್ ನೇತೃತ್ವದ ಆಮ್ ಆದ್ಮಿ ಪಕ್ಷ ಭರ್ಜರಿ ಗೆಲುವು ದಾಖಲಿಸಿದೆ. ಈ ಮೂಲಕ ಕಳೆದ 15 ವರ್ಷಗಳಿಂದ ಮಹಾನಗರ ಪಾಲಿಕೆಯ ಆಡಳಿತ ಚುಕ್ಕಾಣಿ ಹಿಡಿದಿದ್ದ ಬಿಜೆಪಿಗೆ ಭಾರಿ ಮುಖಭಂಗವಾಗಿದೆ.
250 ವಾರ್ಡ್ ಸದಸ್ಯ ಬಲದ ದೆಹಲಿ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಆಮ್ ಆದ್ಮಿ ಪಕ್ಷ 133 ವಾರ್ಡ್ ಗಳಲ್ಲಿ ಜಯಭೇರಿ ಬಾರಿಸುವ ಮೂಲಕ ಅಧಿಕಾರದ ಚುಕ್ಕಾಣಿ ಹಿಡಿದಿದೆ. ಬಿಜೆಪಿ 105 ವಾರ್ಡ್ ಗಳಲ್ಲಿ ಗೆಲುವು ಸಾಧಿಸಿದ್ದು, ಕಾಂಗ್ರೆಸ್ ಕೇವಲ 8 ವಾರ್ಡ್ ಗಳಲ್ಲಿ ಜಯಗಳಿಸಿದೆ.
ಇದನ್ನೂ ಓದಿ: ICMR ವೆಬ್ ಸೈಟ್ ಮೇಲೆ ಸೈಬರ್ ದಾಳಿ –ಚೀನಾ ಕೈವಾಡ?
250 ವಾರ್ಡ್ ಗಳ ಸದಸ್ಯ ಬಲದ ದೆಹಲಿ ಮಹಾನಗರ ಪಾಲಿಕೆಯ ಅಧಿಕಾರ ಪಡೆಯಲು 126 ಸದಸ್ಯರ ಬಹುಮತ ಬೇಕಾಗಿದೆ. ಆಮ್ ಆದ್ಮಿ ಪಕ್ಷ 250 ವಾರ್ಡ್ ಗಳ ಪೈಕಿ 133 ವಾರ್ಡ್ ಗಳಲ್ಲಿ ಜಯ ಸಾಧಿಸುವ ಮೂಲಕ ಅಧಿಕಾರದ ಚುಕ್ಕಾಣಿ ಹಿಡಿದಿದೆ.
ಇಂದು ಬೆಳಗ್ಗೆ 8ಗಂಟೆಗೆ ದೆಹಲಿ ಮಹಾನಗರ ಪಾಲಿಕೆ ಚುನಾವಣೆಯ ಮತಎಣಿಕೆ ಆರಂಭಗೊಂಡಿತ್ತು. ಆರಂಭಿಕ ಮತಎಣಿಕೆಯಲ್ಲಿ ಆಡಳಿತಾರೂಢ ಬಿಜೆಪಿ ಮುನ್ನಡೆ ಕಾಯ್ದುಕೊಂಡಿತ್ತು. ಆದರೆ ಕೆಲವೇ ಗಂಟೆಗಳಲ್ಲಿ ಆಮ್ ಆದ್ಮಿ ಪಕ್ಷ ಭಾರೀ ಮುನ್ನಡೆ ಪಡೆದುಕೊಂಡಿತ್ತು. ಚುನಾವಣೆ ಬಳಿಕ ನಡೆದ ಮತಗಟ್ಟೆ ಸಮೀಕ್ಷೆಯಲ್ಲಿ ಆಮ್ ಆದ್ಮಿ ಪಕ್ಷ ದೆಹಲಿ ಮಹಾನಗರ ಪಾಲಿಕೆಯಲ್ಲಿ ಅಧಿಕಾರದ ಗದ್ದುಗೆ ಏರಲಿದೆ ಎಂದು ತಿಳಿಸಿತ್ತು.
ಈ ವರ್ಷದ ಆರಂಭದಲ್ಲಿ ದೆಹಲಿ ಮಹಾನಗರ ಪಾಲಿಕೆಯನ್ನು ಪುನರ್ ರಚಿಸಿದ ಬಳಿಕ ನಡೆದ ಮೊದಲ ಚುನಾವಣೆ ಇದಾಗಿದೆ. 2017ರಲ್ಲಿ 270 ವಾರ್ಡ್ ಬಲದ ದೆಹಲಿ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಬಿಜೆಪಿ 181 ವಾರ್ಡ್ ಗಳಲ್ಲಿ ಆಮ್ ಆದ್ಮಿ ಪಕ್ಷ 48 ವಾರ್ಡ್ ಗಳಲ್ಲಿ ಹಾಗೂ ಕಾಂಗ್ರೆಸ್ 30 ವಾರ್ಡ್ ಗಳಲ್ಲಿ ಜಯ ಸಾಧಿಸಿತ್ತು.