ದೆಹಲಿ ಮೇಯಲ್ ಚುನಾವಣೆ – ಸದನದಲ್ಲೇ ಬಡಿದಾಡಿಕೊಂಡ ಆಪ್, ಬಿಜೆಪಿ ಕೌನ್ಸಿಲರ್ ಗಳು

ದೆಹಲಿ ಮೇಯಲ್ ಚುನಾವಣೆ – ಸದನದಲ್ಲೇ ಬಡಿದಾಡಿಕೊಂಡ ಆಪ್, ಬಿಜೆಪಿ ಕೌನ್ಸಿಲರ್ ಗಳು

ನವದೆಹಲಿ: ದೆಹಲಿ ಮಹಾನಗರ ಪಾಲಿಕೆಯಲ್ಲಿ ಆಮ್ ಆದ್ಮಿ ಪಕ್ಷ ಹಾಗೂ ಬಿಜೆಪಿಯ ನೂತನ ಕೌನ್ಸಿಲರ್‌ಗಳ ನಡುವೆ ಬಡಿದಾಟ ನಡೆದಿದೆ. ಮೇಯರ್‌ –ಉಪಮೇಯರ್‌ ಚುನಾವಣೆಯ ವೇಳೆ ಎರಡೂ ಪಕ್ಷಗಳ ಸದಸ್ಯರು ಕೈಕೈ ಮಿಲಾಯಿಸುವ ಹಂತದವರೆಗೆ ಗಲಾಟೆ ನಡೆದಿದ್ದು, ಚುನಾವಣೆಯನ್ನು ಮುಂದೂಡಲಾಗಿದೆ.

ಇದನ್ನೂ ಓದಿ: ಅಮೆರಿಕ ಕನಸಿಗೆ ಕತ್ತರಿ ಹಾಕುತ್ತಾ ಬೈಡನ್ ಸರ್ಕಾರ? – ಹೆಚ್ – 1 ಬಿ ವೀಸಾ ಶುಲ್ಕ ದಿಢೀರ್ ಏರಿಕೆ

ಇಂದು ದೆಹಲಿ ಮೇಯರ್  ಚುನಾವಣೆ ನಿಗದಿಯಾಗಿದ್ದರಿಂದ ಹೊಸದಾಗಿ ಆಯ್ಕೆಯಾದ ಕೌನ್ಸಿಲರ್‌ಗಳು ಸಭೆಗೆ ಬಂದಿದ್ದರು. ಇಂದು ಚುನಾವಣೆಗೂ ಮೊದಲು, ಬಿಜೆಪಿಯ ಕೌನ್ಸಿಲರ್‌,  ಸತ್ಯ ಶರ್ಮಾ ಕೌನ್ಸಿಲ್‌ ಸಭೆಯ ಅಧ್ಯಕ್ಷತೆ ವಹಿಸಿ, ಲೆಫ್ಟಿನೆಂಟ್‌ ಗವರ್ನರ್‌ ಅವರಿಂದ ನಾಮನಿರ್ದೇಶಿತರಾಗಿದ್ದ 10 ಮಂದಿ ಆಲ್ಡರ್‌ಮನ್ ಕಾರ್ಪೊರೇಟರ್‌ಗಳಿಗೆ ಪ್ರಮಾಣವಚನ ಬೋಧಿಸಲು ಮುಂದಾಗಿದ್ದರು. ಇದರಲ್ಲಿ ಹೊಸ ಆಲ್ಡರ್‌ಮನ್‌  ಮನೋಜ್ ಕುಮಾರ್ ಅವರನ್ನು ಪ್ರಮಾಣ ವಚನ ಸ್ವೀಕರಿಸಲು ಆಹ್ವಾನಿಸುತ್ತಿದ್ದಂತೆ, ಆಪ್ ಶಾಸಕರು ಮತ್ತು ಕೌನ್ಸಿಲರ್‌ಗಳು ಘೋಷಣೆಗಳನ್ನು ಕೂಗುತ್ತಾ ಸದನದ ಮಧ್ಯಭಾಗಕ್ಕೆ ಧಾವಿಸಿದ್ದಾರೆ.

ಈ ವೇಳೆ ಪ್ರಧಾನಿ ನರೇಂದ್ರ ಮೋದಿ ಹಾಗೂ ಅರವಿಂದ್ ಕೇಜ್ರಿವಾಲ್ ಅವರನ್ನು ಗುರಿಯಾಗಿಸಿಕೊಂಡು ಆಪ್‌ ಮತ್ತು ಬಿಜೆಪಿ ಸದಸ್ಯರು ಘೋಷಣೆಗಳನ್ನು ಕೂಗುತ್ತಾ ದೈಹಿಕವಾಗಿ ಘರ್ಷಣೆ ಮತ್ತು ತಳ್ಳಾಟದಲ್ಲಿ ಕೌನ್ಸಿಲರ್‌ಗಳು ತೊಡಗಿರುವುದು ಕಂಡುಬಂದಿದೆ.

ಚುನಾಯಿತ ಕೌನ್ಸಿಲರ್‌ಗಳು ಹಾಗೂ ನಾಮನಿರ್ದೇಶಿತ ಸದಸ್ಯರು ಮೊದಲು ಪ್ರಮಾಣ ವಚನ ಸ್ವೀಕರಿಸಬೇಕಿತ್ತು ಎಂಬುದು ಎಎಪಿ ಸದಸ್ಯರ ವಾದವಾಗಿತ್ತು. ದೆಹಲಿಯಲ್ಲಿ ತನ್ನ ಸರ್ಕಾರವನ್ನು ಸಂಪರ್ಕಿಸದೆ ಲೆಫ್ಟಿನೆಂಟ್ ಗವರ್ನರ್ 10 ನಾಮನಿರ್ದೇಶಿತ ಸದಸ್ಯರನ್ನು ಹೆಸರಿಸಿರುವುದನ್ನು ಆಪ್ ಈ ಹಿಂದೆಯೂ ಆಕ್ಷೇಪಿಸಿತ್ತು.

ಚುನಾಯಿತ ಆಪ್ ಕೌನ್ಸಿಲರ್‌ಗಳನ್ನು ಮುಗಿಸಲು ಬಿಜೆಪಿ ಬಯಸುತ್ತಿದೆ ಮತ್ತು ಮನೆಯಲ್ಲಿ ರಕ್ತದ ಆಟ ಆಡುತ್ತಿದೆ ಎಂದು ಆಪ್ ಸಂಸದ ಸಂಜಯ್ ಸಿಂಗ್ ಹೇಳಿದ್ದಾರೆ. ಬಿಜೆಪಿಯವರು ಕೌನ್ಸಿಲ್‌ ಸಭೆಯಲ್ಲಿ ಹಗಲು ಗೂಂಡಾಗಿರಿ ಮಾಡುತ್ತಿದ್ದಾರೆ ಎಂದು ಆಪ್ ನಾಯಕರು ಕಿಡಿ ಕಾರಿದ್ದಾರೆ.

ಆಪ್ ನಾಯಕರಿಂದಲೇ ಎಲ್ಲಾ ಗಲಾಟೆ ಶುರುವಾಗಿತ್ತು. ಅವರಿಗೆ ನಿಯಮಗಳ ಅರಿವಿಲ್ಲದಿರುವುದೇ ಇದಕ್ಕೆ ಕಾರಣ. ಅವರು ಬಹುಮತದಲ್ಲಿರುವಾಗ, ಅವರು ಏಕೆ ಭಯಪಡುತ್ತಿದ್ದಾರೆ? ಆಪ್ ಸಂಸದರು ರಾಜ್ಯಸಭೆಯಲ್ಲೂ ಅದನ್ನೇ ಮಾಡುತ್ತಾರೆ. ಅವರು ಮತದಾನಕ್ಕೆ ಅವಕಾಶ ನೀಡಬೇಕು ಎಂದು ದೆಹಲಿ ಬಿಜೆಪಿ ಸಂಸದೆ ಹಾಗೂ ಕೇಂದ್ರ ಸಚಿವೆ ಮೀನಾಕ್ಷಿ ಲೇಖಿ ತಿರುಗೇಟು ಕೊಟ್ಟಿದ್ದಾರೆ.

suddiyaana