ಪ್ರೇಮಿಗಳ ದಿನದಂದು 16 ಯುವತಿಯರಿಗೆ ಕೇಕ್ ಕಳುಹಿಸಿದ ತರುಣ! – ಆಮೇಲೆ ಏನಾಯ್ತು ಗೊತ್ತಾ?

ಪ್ರೇಮಿಗಳ ದಿನದಂದು 16 ಯುವತಿಯರಿಗೆ ಕೇಕ್ ಕಳುಹಿಸಿದ ತರುಣ! – ಆಮೇಲೆ ಏನಾಯ್ತು ಗೊತ್ತಾ?

ವ್ಯಾಲಂಟೈನ್ಸ್‌ ಡೇ ಬಂದ್ರೆ ಸಾಕು ಪ್ರೇಮಿಗಳಿಗೆ ಹಬ್ಬ ಎಂದೇ ಹೇಳಬಹುದು. ಪ್ರೇಮಿಗಳ ದಿನದಂದು ತಮ್ಮ ಪ್ರೇಯಸಿಗೆ ಗುಲಾಬಿ ಹೂ, ಟೆಡ್ಡಿ ಬೇರ್, ಚಾಕೋಲೇಟ್, ಸಿಹಿ ತಿನಿಸು.. ನಾನಾ ಬಗೆಯ ಉಡುಗೊರೆಗಳ ಮಳೆಯನ್ನೇ ಪ್ರಿಯಕರ ಸುರಿಸುತ್ತಾನೆ. ಪ್ರವಾಸಿ ತಾಣಗಳಿಗೆ, ಪಬ್‌, ರೆಸ್ಟೋರೆಂಟ್‌ಗಳಿಗೆ ಹೋಗಿ ಈ ದಿನವನ್ನು ಖುಷಿಯಿಂದ ಸೆಲೆಬ್ರೇಟ್‌ ಮಾಡ್ತಾರೆ. ಇನ್ನೂ ಕೆಲವರು ಕೇಕ್‌ ಕಟ್‌ ಮಾಡಿ ಆಚರಿಸುತ್ತಾರೆ. ಆದ್ರೆ ಇಲ್ಲೊಬ್ಬ ವ್ಯಕ್ತಿ ಪ್ರೇಮಿಗಳ ದಿನದಂದು 16 ವಿಳಾಸಗಳಿಗೆ ಕೇಕ್‌ ಆರ್ಡರ್‌ ಮಾಡಿದ್ದಾನೆ.

ಹೌದು, ಅಚ್ಚರಿಯಾದ್ರೂ ಸತ್ಯ. ಸಾಮಾನ್ಯವಾಗಿ ಯುವಕರು ಪ್ರೇಮಿಗಳ ದಿನದಂದು ತನ್ನ ಪ್ರೇಯಸಿಯನ್ನು ಓಲೈಸಲು ಇನ್ನಿಲ್ಲದ ಕಸರತ್ತು ನಡೆಸುತ್ತಾನೆ. ಆದರೆ ದಿಲ್ಲಿಯ ವ್ಯಕ್ತಿಯೊಬ್ಬ ಪ್ರೇಮಿಗಳ ದಿನದಂದು 16 ವಿಳಾಸಗಳಿಗೆ ಕೇಕ್‌ ಕಳುಹಿಸಿದ್ದಾನೆ. ಆತನ ಸಾಹಸವನ್ನು ಫುಡ್ ಡೆಲಿವರಿ ಸಂಸ್ಥೆ ಝೊಮ್ಯಾಟೋ ಬಯಲು ಮಾಡಿದೆ!

ಇದನ್ನೂ ಓದಿ: ಟೀಮ್ ಇಂಡಿಯಾ ಪಾದಾರ್ಪಣೆ ಕನಸು ನನಸು- ಖುಷಿಯಲ್ಲಿ ಕಣ್ಣೀರಿಟ್ಟ ಸರ್ಫರಾಜ್ ಖಾನ್ ಕುಟುಂಬ

ಹೀಗೆ 16 ವಿಳಾಸಗಳಿಗೆ ಕೇಕ್‌ ಕಳುಹಿಸಿದ ತರುಣ ಹೊಸದಿಲ್ಲಿ ಮೂಲದ ತರುಣ್‌. ಈತ ಒಂದೇ ದಿನ ಬರೋಬ್ಬರಿ 16 ವಿಳಾಸಗಳಿಗೆ ಝೊಮ್ಯಾಟೋ ಮೂಲಕ ಕೇಕ್ ಕಳಿಸಿದ್ದನಂತೆ. ಎಲ್ಲ ಕೇಕ್‌ಗಳಲ್ಲೂ ಒಂದೇ ರೀತಿಯ ಸಂದೇಶ ಬರೆಸಿದ್ದನಂತೆ. ಎಲ್ಲಾ 16 ವಿಳಾಸಗಳಲ್ಲೂ ಬೇರೆ ಬೇರೆ ಯುವತಿಯರ ಹೆಸರಿಗೆ ತರುಣ್ ಕೇಕ್ ಕಳಿಸಿದ್ದನಂತೆ. ಪ್ರತಿಯೊಂದು ಕೇಕ್ ಮೇಲೆ ‘ತರುಣ್ ಕಡೆಯಿಂದ ವ್ಯಾಲಂಟೈನ್ಸ್‌ ಡೇ ಶುಭಾಯಶಗಳು’ ಎಂಬ ಸಂದೇಶ ಬರೆಸಿದ್ದನಂತೆ!

ಸಾಮಾನ್ಯವಾಗಿ ಫುಡ್ ಡೆಲಿವರಿ ಸಂಸ್ಥೆಗಳು ತಮ್ಮ ಗ್ರಾಹಕರ ವಿವರ ಬಿಟ್ಟು ಕೊಡೋದಿಲ್ಲ. ಆದರೆ, ಪ್ರೇಮಿಗಳ ದಿನದಂದು 16 ವಿಭಿನ್ನ ವಿಳಾಸಗಳಿಗೆ ಕೇಕ್ ಕಳಿಸಿದ ಈ ಖತರ್ನಾಕ್ ಪ್ರೇಮಿಯ ಹೆಸರನ್ನು ಬಯಲು ಮಾಡಿರುವ ಝೊಮ್ಯಾಟೋ, ತರುಣನ ಸಾಹಸವನ್ನು ಬಯಲು ಮಾಡಿದೆ! ಈ ಕುರಿತಾಗಿ ಸಾಮಾಜಿಕ ಜಾಲತಾಣ ಟ್ವಿಟ್ಟರ್ (ಎಕ್ಸ್‌) ಸಂದೇಶ ಪ್ರಕಟಿಸಿದ್ದು, ತನ್ನ ಪರಿಶೀಲಿಸಿದ ಖಾತೆಯಲ್ಲಿ ಈ ಕುರಿತಾದ ಮಾಹಿತಿ ಹಂಚಿಕೊಂಡಿದೆ.

ಝೊಮ್ಯಾಟೋ ಸಂಸ್ಥೆಯ ಈ ಟ್ವೀಟ್‌ಗೆ ನೆಟ್ಟಿಗರು ಭರ್ಜರಿ ಪ್ರತಿಕ್ರಿಯೆ ನೀಡಿದ್ಧಾರೆ. ಝೊಮ್ಯಾಟೋ ಸೇವೆಯನ್ನು ಬಳಸಿಕೊಂಡು ಯುವಕ ತನ್ನ ‘ಪ್ರೇಮ ಸಾಧ್ಯತೆ’ಗಳನ್ನು ಹೆಚ್ಚು ಮಾಡಿಕೊಂಡಿದ್ದಾನೆ ಎಂದು ಕೆಲವರು ವಿಶ್ಲೇಷಿಸಿದ್ಧಾರೆ. ಇನ್ನೂ ಕೆಲವರು ತಮ್ಮ ಸ್ನೇಹಿತರ ಬಳಗದಲ್ಲಿ ಇರುವ ತರುಣ್ ಎಂಬ ಹೆಸರಿನ ವ್ಯಕ್ತಿಗೆ ಟ್ಯಾಗ್ ಮಾಡಿ ಈ ದುಸ್ಸಾಹಸ ಮಾಡಿದ್ದು ನೀನಾ ಎಂದು ಪ್ರಶ್ನೆ ಮಾಡುತ್ತಿದ್ದಾರೆ! ಕೆಲವರಂತೂ ಬಡಪಾಯಿ ತರುಣ್‌ನ ಬಣ್ಣ ಬಯಲಾಯ್ತು ಎಂದು ಕಾಲೆಳೆಯುತ್ತಿದ್ದಾರೆ. ಕೆಲವರು ಗಂಭೀರವಾದ ಸಂದೇಶವನ್ನೂ ಪ್ರಕಟಿಸಿದ್ದಾರೆ. ಝೊಮ್ಯಾಟೋ ಈ ರೀತಿ ತನ್ನ ಗ್ರಾಹಕರ ಹೆಸರನ್ನು ಪ್ರಕಟಿಸಬಾರದು ಎಂದು ಕೆಲವರು ತಾಕೀತು ಮಾಡಿದ್ದಾರೆ. ಈ ರೀತಿ ಹೆಸರು ಪ್ರಕಟ ಮಾಡುವ ಮೂಲಕ ಝೊಮ್ಯಾಟೋ ಸಂಸ್ಥೆಯು ನಮ್ಮ ಕಾಲೋನಿಯ ಆಂಟಿಯರ ರೀತಿ ವರ್ತನೆ ಮಾಡ್ತಿದೆ ಎಂದೂ ಕೆಲವರು ಕಾಲೆಳೆದಿದ್ದಾರೆ!

Shwetha M