ದೆಹಲಿ ಗಣರಾಜ್ಯೋತ್ಸವದ ಪರೇಡ್ ಗೆ ಮಳೆ ಭೀತಿ! – ಜ. 24 ರಿಂದ 27 ರವರೆಗೆ ಭಾರಿ ಮಳೆ ಸಾಧ್ಯತೆ
ನವದೆಹಲಿ: ದೆಹಲಿಯಲ್ಲಿ ನಡೆಯುವ ಗಣರಾಜ್ಯೋತ್ಸವದ ಪರೇಡ್ ಗೆ ಮಳೆಯ ಆತಂಕ ಎದುರಾಗಿದೆ. ಕಳೆದ 15 ದಿನಗಳಿಂದ ಕೋರೈಸುವ ಚಳಿಯ ಹೊಡೆತಕ್ಕೆ ನಲುಗಿದ್ದ ದೆಹಲಿಯಲ್ಲಿ ಈಗ ಮಳೆ ಮತ್ತಷ್ಟು ಅವಾಂತರ ಸೃಷ್ಟಿಸುವ ಸಾಧ್ಯತೆ ಕಂಡುಬರುತ್ತಿದೆ. ದೆಹಲಿ ಸೇರಿದಂತೆ ಉತ್ತರ ಭಾರತದಾದ್ಯಂತ ಜನವರಿ 24 ರಿಂದ 27 ರವರೆಗೆ ಭಾರಿ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮೂನ್ಸೂಚನೆ ನೀಡಿದೆ.
ಪಶ್ಚಿಮ ಹಿಮಾಲಯದಲ್ಲಿ ಮೋಡ ಕವಿದ ವಾತಾವರಣವಿದ್ದು, ಲಘು ಮಳೆಯಾಗಬಹುದು. ಜಮ್ಮು ಮತ್ತು ಕಾಶ್ಮೀರ, ಹಿಮಾಚಲಪ್ರದೇಶ ಮತ್ತು ಉತ್ತರಾಖಂಡದಲ್ಲಿ ಭಾರಿ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ಇದನ್ನೂ ಓದಿ: ಮೋದಿ ಕುರಿತ ವಿಮರ್ಶಾತ್ಮಕ ಸಾಕ್ಷ್ಯಚಿತ್ರ – ಟ್ವಿಟರ್, ಯೂಟ್ಯೂಬ್ ಪ್ರಸಾರಕ್ಕೆ ಕೇಂದ್ರ ನಿರ್ಬಂಧ!
ಮನಾಲಿಯಲ್ಲಿ 12 ಸೆಂ.ಮೀ, ಗೊಂಡ್ಲಾದಲ್ಲಿ 11 ಸೆಂ.ಮೀ, ಡಾಲ್ಹೌಸಿಯಲ್ಲಿ 8 ಸೆಂ.ಮೀ, ಕಲ್ಪಾದಲ್ಲಿ 7 ಸೆಂ.ಮೀ, ತಿಸ್ಸಾ, ಪೂಹ್ ಹಾಗೂ ಹಂಸಾದಲ್ಲಿ ತಲಾ ಐದು ಸೆಂ.ಮೀ ಹಿಮಪಾತವಾಗಿದೆ. ಹಿಮಾಚಲದಲ್ಲಿ ಹಿಮಪಾತದಿಂದಾಗಿ ಕನಿಷ್ಠ 328 ರಸ್ತೆಗಳನ್ನು ಮುಚ್ಚಲಾಗಿದ್ದು, ಲಾಹೌಲ್-ಸ್ಪಿತಿ ಜಿಲ್ಲೆಯಲ್ಲಿ 182, ಕಲುವಿನಲ್ಲಿ 55, ಶಿಮ್ಲಾದಲ್ಲಿ 32, ಕಿನ್ನೌರ್ನಲ್ಲಿ 29, ಮಂಡಿಯಲ್ಲಿ 17, ಚಂಬಾ ಮತ್ತು ಕಾಂಗ್ರಾ ಜಿಲ್ಲೆಗಳಲ್ಲಿ 11 ಸೇರಿದಂತೆ ಎರಡು ರಸ್ತೆಗಳನ್ನು ಒಳಗೊಂಡಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ದೆಹಲಿಯ ವಾಯು ಗುಣಮಟ್ಟ ಸೂಚ್ಯಂಕವು ಇನ್ನೂ ಕಳಪೆಯಾಗಿಯೇ ಉಳಿದಿದೆ. ಮುಂದಿನ ಕೆಲವು ದಿನಗಳವರೆಗೆ ರಾಷ್ಟ್ರ ರಾಜಧಾನಿಯಲ್ಲಿ ಮಂಜು ಕವಿದ ವಾತಾವರಣ ಇರಲಿದೆ. ಜ. 23 ರಂದು ಪಂಜಾಬ್, ಹರಿಯಾಣ ಮತ್ತು ಚಂಡೀಗಢ ಮತ್ತು ಉತ್ತರ ಪ್ರದೇಶದಲ್ಲಿ ಲಘುವಾಗಿ ಮಳೆಯಾಗುವ ಸಾಧ್ಯತೆಯಿದೆ. ಜ. 24 ರಿಂದ 27 ರವರೆಗೆ ದೆಹಲಿಯಲ್ಲಿ ಗುಡುಗು ಸಹಿತ ಭಾರಿ ಮಳೆಯಾಗಲಿದೆ. ಅಲ್ಲದೇ ಗರಿಷ್ಠ ಮತ್ತು ಕನಿಷ್ಠ ತಾಪಮಾನವು ಕ್ರಮವಾಗಿ 13 ಮತ್ತು 08 ಡಿಗ್ರಿ ಸೆಲ್ಸಿಯಸ್ ಇರಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. .