ಮತ್ತೊಂದು ಅಪಖ್ಯಾತಿ ಪಡೆದ ರಾಷ್ಟ್ರ ರಾಜಧಾನಿ! – ವಿಶ್ವದಲ್ಲೇ  ನಂ.1 ಮಲಿನ ನಗರ ದೆಹಲಿ!

ಮತ್ತೊಂದು ಅಪಖ್ಯಾತಿ ಪಡೆದ ರಾಷ್ಟ್ರ ರಾಜಧಾನಿ! – ವಿಶ್ವದಲ್ಲೇ  ನಂ.1 ಮಲಿನ ನಗರ ದೆಹಲಿ!

ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ದಿನೇ ದಿನೇ ವಾಯುಮಾಲಿನ್ಯ ಗುಣಮಟ್ಟ ಅಪಾಯಕಾರಿ ಮಟ್ಟಕ್ಕೆ ತಲುಪುತ್ತಿದೆ. ನಗರದ ನಿವಾಸಿಗಳಿಗೆ ಉಸಿರಾಡುವ ಗಾಳಿಯಿಂದಲೇ ಕಂಟಕ ಎದುರಾಗುತ್ತಿದೆ. ನೂರಾರು ಜನರು ಉಸಿರಾಟದ ತೊಂದರೆ ಅನುಭವಿಸುತ್ತಿದ್ದಾರೆ. ಈ ಬೆನ್ನಲ್ಲೇ ಮತ್ತೊಂದು ಆತಂಕಕಾರಿ ವರದಿಯೊಂದು ಹೊರಬಿದ್ದಿದೆ. ರಾಷ್ಟ್ರರಾಜಧಾನಿ ವಿಶ್ವದಲ್ಲೇ ಅತ್ಯಂತ ಹೆಚ್ಚು ಕಲುಷಿತ ವಾಯು ಮಾಲಿನ್ಯ ಹೊಂದಿರುವ ನಗರ ಎಂಬ ಕುಖ್ಯಾತಿಗೆ ಪಾತ್ರವಾಗಿದೆ.

ಸ್ವಿಸ್‌ ಗ್ರೂಪ್‌ನ ಐಕ್ಯೂ ಏರ್‌ ಬಿಡುಗಡೆ ಮಾಡಿರುವ ವಿಶ್ವದ ಟಾಪ್‌ 10 ಮಲಿನ ನಗರಗಳ ಪಟ್ಟಿಯಲ್ಲಿ ದೇಶದ ಮೂರು ನಗರಗಳು ಕ್ರಮವಾಗಿ ದೆಹಲಿ 1, ಕೋಲ್ಕತಾ 3, ಮತ್ತು ಮುಂಬೈ 6ನೇ ಸ್ಥಾನದಲ್ಲಿವೆ.

ಇದನ್ನೂ ಓದಿ: ಶಿವಮೊಗ್ಗದಲ್ಲಿ ಪತ್ತೆಯಾಗಿರುವುದು ಬಾಂಬ್‌ ಅಲ್ಲ! – ಆ ನಿಗೂಢ ವಸ್ತು ಯಾವುದು ಗೊತ್ತಾ?

ಭಾನುವಾರ ಮುಂಜಾನೆ 7.30ಕ್ಕೆ ದಾಖಲಾದ ನೈಜ ಸಮಯದ ವಾಯುಗುಣಮಟ್ಟ ಸೂಚ್ಯಂಕ (ಎಕ್ಯೂಐ) ಮಟ್ಟವು ದೆಹಲಿಯಲ್ಲಿ 483, ಕೋಲ್ಕತಾದಲ್ಲಿ 206 ಮತ್ತು ಮುಂಬೈನಲ್ಲಿ 162ರಷ್ಟು ದಾಖಲಾಗಿದೆ. ಉಳಿದಂತೆ ಪಟ್ಟಿಯಲ್ಲಿ ಪಾಕಿಸ್ತಾನದ ಲಾಹೋರ್‌ 2, ಬಾಂಗ್ಲಾದೇಶದ ಢಾಕಾ 3, ಪಾಕಿಸ್ತಾನದ ಕರಾಚಿ 5, ಚೀನಾದ ಶೆನ್ಯಾಂಗ್‌ 6, ಹಾಂಗ್‌ಝೌ 7, ಕುವೈತ್‌ 9 ಮತ್ತು ಚೀನಾದ ವುಹಾನ್‌ 10ನೇ ಸ್ಥಾನದಲ್ಲಿವೆ. ಇನ್ನು ದೆಹಲಿಯ ಕೆಲವು ಪ್ರದೇಶಗಳಲ್ಲಿ ಎಕ್ಯೂಐ ಮಟ್ಟವು ಬೆಳ್ಳಂಬೆಳಗ್ಗೆ 550ರಷ್ಟು ಏರಿಕೆಯಾಗಿದ್ದು ಭಾರಿ ಆತಂಕಕ್ಕೆ ಕಾರಣವಾಗಿದೆ.

ದೆಹಲಿ ಮಾಲಿನ್ಯ ಪ್ರಮಾಣವು ಸತತ 6ನೇ ದಿನವೂ ಏರಿದ್ದು, ಭಾನುವಾರ ಮುಂಜಾನೆಯ ಹೊತ್ತಿಗೆ ವಾಯುಗುಣಮಟ್ಚ ಸೂಚ್ಯಂಕ 450 ಅಂಕಕ್ಕೆ ಕುಸಿಯುವುದಿದೆ. ಇದರೊಂದಿಗೆ ತೀರಾ ವಿಷಮಕ್ಕೆ ಸೂಚ್ಯಂಕ ಕಾಲಿಟ್ಟಿದ್ದು, ಮಾಲಿನ್ಯ ನಿಯಂತ್ರಣ ಯೋಜನೆಯ ಪ್ರಕಾರ ಕಠಿಣ ಕ್ರಮಗಳನ್ನು ಜಾರಿಗೊಳಿಸಲು ಕ್ಷಣಗಣನೆ ಆರಂಭವಾಗಿದೆ.

ಮಾಲಿನ್ಯ ಮಟ್ಟ 450 ಮೀರಿದರೆ ನಗರದಲ್ಲಿ ಹಲವು ಕಟ್ಟುಪಾಡು ಜಾರಿಗೆ ಬರಲಿದ್ದು, ಪ್ರಮುಖವಾಗಿ, ವಾಣಿಜ್ಯ ನಾಲ್ಕು ಚಕ್ರ ಹಾಗೂ ಟ್ರಕ್‌ಗಳಿಗೆ ನಿರ್ಬಂಧ ಮತ್ತು ಇಂಗಾಲ ಹೊರಸುಸುವಿಕೆಗೆ, ಕಟ್ಟಡ ನಿರ್ಮಾಣ ಕಾಮಗಾರಿಗಳಿಗೆ ನಿರ್ಬಂಧ ಹೇರುವ ಸಾಧ್ಯತೆ ದಟ್ಟವಾಗಿದೆ. ಈಗಾಗಲೇ ದೆಹಲಿ ಸರ್ಕಾರ ಜನರಿಗೆ ಮುಂಜಾನೆ ಮನೆಯ ಹೊರಗೆ ವ್ಯಾಯಾಮ, ವಾಯುವಿಹಾರ, ಕೆಲವು ಕ್ರೀಡಾ ಚಟುವಟಿಕೆ ಮಾಡದಂತೆ ಮನವಿ ಮಾಡಿದೆ.

ಅಲ್ಲದೆ 5ನೇ ತರಗತಿವರೆಗಿನ ಶಾಲೆಗಳ ಮುಚ್ಚುವಿಕೆಯನ್ನು ನ.10ರವರೆಗೂ ವಿಸ್ತರಿಸಲಾಗಿದ್ದು, 6-12ನೇ ತರಗತಿವರೆಗಿನ ಶಾಲೆಗಳು ಆನ್‌ಲೈನ್‌ ವಿಧಾನದ ಮೂಲಕ ತರಗತಿ ನಡೆಸುವಂತೆ ಆದೇಶಿಸಿದೆ.ಜೀವಿತಾವಧಿ 12 ವರ್ಷ ಕುಸಿತ!

12 ವರ್ಷದಷ್ಟು ಜೀವಿತಾವಧಿ ಪ್ರಮಾಣ ಇಳಿಕೆ!

ಈ ನಡುವೆ ಚಿಕಾಗೋ ವಿಶ್ವವಿದ್ಯಾನಿಲಯದ ವರದಿಯೊಂದು ಮಾಲಿನ್ಯದಿಂದಾಗಿ ದೆಹಲಿಗರ ಸರಾಸರಿ ಜೀವಿತಾವಧಿ ಪ್ರಮಾಣ 12 ವರ್ಷಗಳಷ್ಟು ಇಳಿಕೆಯಾಗಿದೆ ಎಂದು ವರದಿ ಮಾಡಿದೆ. ಈ ನಡುವೆ ದೆಹಲಿಯ ಬಹಳಷ್ಟು ಮಕ್ಕಳು ಉಸಿರಾಟ ತೊಂದರೆಯಿಂದ ಬಳಲುತ್ತಿರುವುದು ವರದಿಯಾಗಿದೆ.

Shwetha M